ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಮುಹೂರ್ತ, ಕಲ್ಯಾಣ ಮಂಟಪ ಫಿಕ್ಸ್?
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಅವರಿಬ್ಬರು ಹೇಳ್ತಾ ಬರ್ತಿದ್ದಾರೆ. ಇತ್ತೀಚೆಗೆ ಇಬ್ಬರ ಎಂಗೇಜ್‌ಮೆಂಟ್ ನಡೆದಿದೆ ಎಂದು ಗುಲ್ಲಾಗಿತ್ತು. ಇದೀಗ ಮದುವೆ ದಿನಾಂಕದ ಬಗ್ಗೆ ಚರ್ಚೆ ಶುರುವಾಗಿದೆ.
ಟಾಲಿವುಡ್ ಜೋಡಿ ಮುಂದಿನ ವರ್ಷ ಹಸೆಮಣೆ ಏರಲು ನಿರ್ಧರಿಸಿದ್ದು ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. 'ಗೀತಾಗೋವಿಂದಂ' ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಬಳಿಕ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಜೋಡಿ ಜೊತೆಯಾಗಿತ್ತು.

ಸಾಕಷ್ಟು ಸಂದರ್ಭಗಳಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ವಿಜಯ್ ಮನೆಯ ಹಬ್ಬ ಹರಿದಿನಗಳಲ್ಲಿ ರಶ್ಮಿಕಾ ಭಾಗಿ ಆಗುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಇಬ್ಬರೂ ಆತ್ಮೀಯ ಸ್ನೇಹಿತರು ಎನ್ನುವುದು ಗೊತ್ತೇಯಿದೆ. ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ವಿದೇಶ ಪ್ರವಾಸ ಕೈಗೊಂಡಿದ್ದರು ಎಂದು ಗುಲ್ಲಾಗಿತ್ತು.
ವಿಜಯ್ ಸ್ನೇಹಿತರ ಜೊತೆ ರಶ್ಮಿಕಾ ಕೂಡ ಪ್ರವಾಸಗಳಿಗೆ ಹೋಗುತ್ತಿರುತ್ತಾರೆ. ಸದ್ಯ ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಬಿಡುಗಡೆಯಾಗಿದೆ. ಕನ್ನಡ ನಟ ದೀಕ್ಷಿತ್ ಶೆಟ್ಟಿ ಜೊತೆ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಮುಂದಿನ ವರ್ಷ ಫೆಬ್ರವರಿ 26ರಂದು ರಾಜಸ್ತಾನದ ಉದಯಪುರದಲ್ಲಿರುವ ಪ್ಯಾಲೇಸ್ ಹೋಟೆಲ್‌ನಲ್ಲಿ ವಿಜಯ್ ಹಾಗೂ ರಶ್ಮಿಕಾ ಮದುವೆ ನಡೆಯಲಿದೆ. ಕೆಲವೇ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣ ಕೊಡುತ್ತಾರೆ. ಈಗಾಗಲೇ ಮದುವೆ ಸಿದ್ಧತೆ ನಡೀತಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಇಬ್ಬರೂ ಈ ಬಗ್ಗೆ ಮಾತನಾಡಬೇಕಿದೆ. ಈ ಹಿಂದೆ ಕನ್ನಡ ನಟ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಎಂಗೇಜ್‌ಮೆಂಟ್ ನಡೆದಿತ್ತು. ಬಳಿಕ ಅದು ಮುರಿದುಬಿದ್ದಿತ್ತು.
2016ರಲ್ಲಿ ಬಂದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಚಿತ್ರರಂಗ ಪ್ರವೇಶಿಸಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಕೊಡಗಿನ ಕುವರಿ ಗೆದ್ದಿದ್ದರು. ಅದೇ ಸಮಯದಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಲು ಆರಂಭಿಸಿದ್ದರು. ಬಹಳ ಬೇಗನೆ ಎಂಗೇಜ್‌ಮೆಂಟ್ ಕೂಡ ನಡೀತು. 'ಚಲೋ' ತೆಲುಗು ಚಿತ್ರದ ಮೂಲಕ ರಶ್ಮಿಕಾ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು.
'ಗೀತಾಗೋವಿಂದಂ' ಸಿನಿಮಾ ಬಳಿಕ ರಕ್ಷಿತ್-ರಶ್ಮಿಕಾ ಎಂಗೇಜ್‌ಮೆಂಟ್ ಮುರಿದು ಬಿತ್ತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕೊಡಗಿನ ಚೆಲುವೆ ಬ್ಯುಸಿಯಾಗಿಬಿಟ್ಟರು. ಬಾಲಿವುಡ್ ಅಂಗಳಕ್ಕೂ ಹೋಗಿ ಸಕ್ಸಸ್ ಕಂಡರು. ಬಳಿಕ ಕನ್ನಡ ಸಿನಿಮಾಗಳಲ್ಲಿ ಆಕೆ ನಟಿಸಲಿಲ್ಲ. ತಮ್ಮ ಹೇಳಿಕೆಗಳಿಂದ ಕನ್ನಡ ಸಿನಿರಸಿಕರ ಆಕ್ರೋಶಕ್ಕೂ ರಶ್ಮಿಕಾ ಗುರಿಯಾಗಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟಿಸಿದ ಸಿನಿಮಾಗಳೆಲ್ಲಾ ಗೆಲ್ಲುತ್ತಿದೆ. ಅದೃಷ್ಟ ಆಕೆಯ ಜೊತೆಗಿದ್ದು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. 'ಪುಷ್ಪ'-2, 'ಛಾವ', 'ಥಮ್ಮ' ಚಿತ್ರಗಳು ಇತ್ತೀಚೆಗೆ ಸಕ್ಸಸ್ ಕಂಡಿದ್ದವು. ಸಲ್ಮಾನ್ ಖಾನ್ ಜೊತೆ ನಟಿಸಿದ 'ಸಿಕಂದರ್' ಸಿನಿಮಾ ಮಾತ್ರ ಸೋತಿತ್ತು.
ಬಾಲಿವುಡ್ ನಟಿಯರನ್ನೂ ಹಿಂದಿಕ್ಕಿ ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸದ್ಯ 'ಕಾಕ್‌ಟೇಲ್'-2 ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಮೈಸಾ' ಎಂಬ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಆಕೆಯ ಕೈಯಲ್ಲಿದೆ. ಈ ವಾರ ಬಿಡುಗಡೆ ಆಗಿರುವ 'ದಿ ಗರ್ಲ್‌ಫ್ರೆಂಡ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜೋಡಿ ತಮ್ಮ ಮದುವೆ ವಿಚಾರವನ್ನು ಸ್ಪಷ್ಟಪಡಿಸುತ್ತಾರಾ? ಅಥವಾ ವದಂತಿಗಳಿಗೆ ತೆರೆ ಎಳೆಯುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











