ಒಂದೇ ಫ್ರೇಮ್‌ನಲ್ಲಿ ಸೂರಿ, ವಿಜಿ, ಜಯಣ್ಣ, ಕಾರ್ತಿಕ್, ಯೋಗಿ; ಏನ್ ಸಮಾಚಾರ?
ನಿರ್ಮಾಪಕ ಜಯಣ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'ಎಕ್ಕ' ಚಿತ್ರತಂಡ ಸ್ಪೆಷಲ್ ವೀಡಿಯೋ ಮೂಲಕ ನಿರ್ಮಾಪಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಇನ್ನು ನಿರ್ಮಾಪಕ ಜಯಣ್ಣ, ನಟ ದುನಿಯಾ ವಿಜಯ್, ನಿರ್ದೇಶಕ ದುನಿಯಾ ಸೂರಿ ಹಾಗೂ ಕೆಆರ್‌ಜಿ ಕಾರ್ತಿಕ್, ಯೋಗಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊವೊಂದು ವೈರಲ್ ಆಗುತ್ತಿದೆ.
ಕೆಆರ್‌ಜಿ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಿಗೆ ಸೇರಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈಗಾಗಲೇ 'ಎಕ್ಕ' ಚಿತ್ರವನ್ನು ಜೊತೆಯಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ದುನಿಯಾ ಸೂರಿ ನಿರ್ದೇಶನದ 'ಕಾಗೆ ಬಂಗಾರ' ಚಿತ್ರವನ್ನು ಕೂಡ ಈ ಎರಡೂ ಸಂಸ್ಥೆಗಳು ಸೇರಿ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ದುನಿಯಾ ವಿಜಯ್ ಕೂಡ ಒಟ್ಟಿಗೆ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

ಈ ಹಿಂದೆ ಸೂರಿ ನಿರ್ದೇಶನದ ಚಿತ್ರದಲ್ಲಿ ವಿರಾಟ್ ಹೀರೊ ಆಗಿ ನಟಿಸುತ್ತಾರೆ. ಆ ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ಮುಖ್ಯವಾದ ಪಾತ್ರ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅದನ್ನು ಕೈ ಬಿಟ್ಟು ಸೂರಿ 'ಕಾಗೆ ಬಂಗಾರ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಬಂದಿತ್ತು. ವಿರಾಟ್ ಬದಲು ಯುವ ರಾಜ್‌ಕುಮಾರ್ ಚಿತ್ರದ ಹೀರೊ ಆಗುವ ಬಗ್ಗೆಯೂ ಮಾಹಿತಿ ಸಿಕ್ಕಿತ್ತು. ದುನಿಯಾ ವಿಜಯ್ ಮಗಳು ರಿತನ್ಯಾ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಚರ್ಚಿಸಲು ಎಲ್ಲರೂ ಒಟ್ಟಿಗೆ ಸೇರಿರಬಹುದು ಎನ್ನಲಾಗ್ತಿದೆ.
ಡಾ. ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕಾಗೆ ಬಂಗಾರ' ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ. ಏಪ್ರಿಲ್ 24ರಂದು ಅಣ್ಣಾವ್ರ ಹುಟ್ಟುಹಬ್ಬ. ಅದಕ್ಕಿಂತ ಒಂದು ದಿನ ಮುನ್ನ ಯುವ ರಾಜ್‌ಕುಮಾರ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ 'ಕಾಗೆ ಬಂಗಾರ' ಸಿನಿಮಾ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಗುವ ಸಾಧ್ಯತೆಯಿದೆ. ಚಿತ್ರ ನಿರ್ಮಾಣಕ್ಕೆ ದುನಿಯಾ ವಿಜಯ್ ಕೈ ಜೋಡಿಸಿದರೂ ಅಚ್ಚರಿ ಪಡಬೇಕಿಲ್ಲ.

ಇನ್ನುಳಿದಂತೆ ನಟ, ನಿರ್ದೇಶಕ ದುನಿಯಾ ವಿಜಯ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ನಟಿಸುತ್ತಿರುವ 'ಸಿಟಿಲೈಟ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಲ್ಯಾಂಡ್‌ಲಾರ್ಡ್' ಸಿನಿಮಾ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಜಡೇಶ್ ಹಂಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಳಿಕ ಕೆ. ಪಿ ಶ್ರೀಕಾಂತ್ ನಿರ್ಮಾಣದ ಚಿತ್ರದಲ್ಲಿ ನಟಿಸೋ ಬಗ್ಗೆ ಮಾತುಕತೆ ನಡೀತಿದೆ.
ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಕೂಡ ಬೇರೆ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಜೂನ್ 6ಕ್ಕೆ 'ಎಕ್ಕ' ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಇನ್ನು ಯುವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಎಕ್ಕ' ಚಿತ್ರದ ಸಣ್ಣ ಟೀಸರ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ರೋಹಿತ್ ಪದಕಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸಾಂಗ್ ಇತ್ತೀಚೆಗೆ ಬಿಡುಗಡೆ ಆಗಿ ಧೂಳೆಬ್ಬಿಸಿತ್ತು.
'ಕಾಗೆ ಬಂಗಾರ' ದುನಿಯಾ ಸೂರಿ ಕನಸಿನ ಸಿನಿಮಾ. ಬಹಳ ಹಿಂದೆ ಬಂದಿದ್ದ 'ಕೆಂಡಸಂಪಿಗೆ' ಕಥೆಯ ಜೊತೆಗೆ ಥಳುಕು ಹಾಕಿಕೊಂಡಿರುವ ಕಥೆ ಇದು. ಸೂರಿ ನಿರ್ದೇಶನದ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ಹಾಗಾಗಿ 'ಕಾಗೆ ಬಂಗಾರ' ಸಿನಿಮಾ ಮೂಲಕ ಕಂಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಟೈಟಲ್‌ನಿಂದಲೇ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇನ್ನು ಯುವ ಹಾಗೂ ರಿತನ್ಯಾ ಜೊತೆಯಾಗುವುದು ಮತ್ತಷ್ಟು ಕುತೂಹಲ ಮೂಡಿಸಿರುವುದು ಸುಳ್ಳಲ್ಲ.


Click it and Unblock the Notifications











