The Kashmir Files: 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕನ ಮುಂದಿನ ಸಿನಿಮಾಗೆ ಕಂಗನಾ ಎಂಟ್ರಿ?
'ದಿ ಕಾಶ್ಮೀರ್ ಫೈಲ್ಸ್' ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಇತ್ತೀಚಿನ ಬಿಡುಗಡೆಯಾದ ಸಿನಿಮಾ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ರಿಲೀಸ್ ಆದ ದಿನದಿಂದಲೂ ಕಲೆಕ್ಷನ್ ವಿಚಾರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಈ ಚಿತ್ರ, ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ಚಿತ್ರಿಸಲಾಗಿದೆ. ಈ ಸಿನಿಮಾಗೆ ಸಾಕಷ್ಟು ಪರ ವಿರೋಧ ಕಮೆಂಟ್‌ಗಳು ಒಂದರೂ, ಇನ್ನೂ ಈ ಸಿನಿಮಾದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಬಗ್ಗೆ ಉತ್ತಮ ಪ್ರಶಂಸೆ ಸಿಗುತ್ತಿರುವ ಬೆನ್ನಲ್ಲೇ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಈ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಗುಸು ಗುಸು ಕೇಳಿ ಬರುತ್ತಿದ್ದು, ಈ ಬಗ್ಗೆ ಬಾಲಿವುಡ್‌ನ ನ್ಯೂಸ್ ಪೋರ್ಟಲ್ ಒಂದು ವರದಿ ಮಾಡಿದೆ. ಈ ವರದಿಯ ಪ್ರಕಾರ, ಈಗಾಗಲೇ ವಿವೇಕ್ ಮತ್ತು ಕಂಗನಾ ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆಯನ್ನು ಮುಗಿಸಿದ್ದಾರಂತೆ.
ವಿವೇಕ್ ಅಗ್ನಿಹೋತ್ರಿ ಹಾಗೂ ಕಂಗನಾ ಭೇಟಿಯ ಗುಟ್ಟೇನು?
ಕೆಲ ದಿನಗಳ ಹಿಂದೆಯೇ ಖಾಸಗಿ ಹೊಟೇಲ್ ಒಂದರಲ್ಲಿ ಕಂಗನಾ ಮತ್ತು ವಿವೇಕ್ ಭೇಟಿ ಆಗಿ ಹೊಸ ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಂಗನಾ ಕೂಡ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ. ಆದಷ್ಟು ಬೇಗ ಕಥೆಯನ್ನು ಸಿದ್ಧ ಪಡಿಸಿ, 'ದಿ ಕಾಶ್ಮೀರ್ ಫೈಲ್ಸ್' ಮಾದರಿಯ ಪರಿಣಾಮಕಾರಿ ಸಬ್ಜೆಕ್ಟ್‌ನಲ್ಲಿ ಈ ಇಬ್ಬರು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ, ವಿವೇಕ್ ಮತ್ತು ಕಂಗನಾರ ಈ ಸಿನಿಮಾ ತುಂಬ ಸ್ಪೆಷಲ್ ಆಗಿ ಇರಲಿದೆಯಂತೆ.

ವಿವೇಕ್ ಅಗ್ನಿಹೋತ್ರಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಿದವರಿಗೆ ವಿವೇಕ್ ಆಯ್ಕೆ ಮಾಡಿಕೊಳ್ಳುವ ವಿಷಯ ಹೇಗಿರುತ್ತೆ ಅನ್ನುವ ಅರಿವು ಮೂಡಿದೆ. ಹೀಗಾಗಿ ಮುಂದಿನ ಸಿನಿಮಾದಲ್ಲೂ ಇಂತಹದ್ದೇ , ಜನರ ಮನಸ್ಸಿಗೆ ನಾಟುವಂತಹ ವಿಷಯವನ್ನು ಹೊತ್ತು ಬರಲಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ನಟಿ ಕಂಗನಾ ರನೌತ್ ಹಿಂದೆಂದೂ ಕಾಣಿಸಿಕೊಂಡಿರದ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಪಾತ್ರವನ್ನು ಖಂಡಿತಾ ಜನರು ಇಷ್ಟ ಪಡುತ್ತಾರೆ ಎಂಬ ವಿಶ್ವಾಸ ಚಿತ್ರತಂಡದ್ದು. ಇನ್ನು ಈ ರೀತಿಯ ಪಾತ್ರ ಇರುವುದರಿಂದಲೇ ಕಂಗನಾ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

1990ರ ಸಮಯದಲ್ಲಿ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಪ್ರೇಕ್ಷಕರನ್ನು ಸೆಳೆದಿದೆ. ಇದೇ ಕಾರಣಕ್ಕೆ ದೇಶಾದ್ಯಂತ ಜನರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸುತ್ತಿದ್ದಾರೆ. ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶ್, ಪ್ರಕಾಶ್ ಬೆಳವಾಡಿ ಮೊದಲಾದವರು ನಟಿಸಿರುವ ಈ ಚಿತ್ರ ಇದುವರೆಗೆ ಸುಮಾರು 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.


Click it and Unblock the Notifications










