ವೀಕೆಂಡ್ ವಿತ್ ರಮೇಶ್-4 ಮೊದಲ ಅತಿಥಿಯ ಹೆಸರು ಬಹಿರಂಗ.!
ಕಿರುತೆರೆಯ ಸೂಪರ್ ಹಿಟ್ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಮತ್ತೆ ಬರ್ತಿದೆ. ಮೂರು ಯಶಸ್ವಿ ಆವೃತ್ತಿ ಮುಗಿಸಿ ಈಗ ನಾಲ್ಕನೇ ಆವೃತ್ತಿಯೊಂದಿಗೆ ರಮೇಶ್ ಅರವಿಂದ್ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾ ಕಲಾವಿದರು, ಸಮಾಜ ಸೇವಕರು, ಅಸಾಮಾನ್ಯ ಸಾಧಕರನ್ನ ಗುರುತಿಸಿ ಅವರ ಸ್ಫೂರ್ತಿದಾಯಕ ಜೀವನದ ಪರಿಚಯ ಮಾಡಲಾಗಿದೆ.
ಈಗ ಮತ್ತಷ್ಟು ಸಾಧಕರನ್ನ ಸಾಧಕರ ಸೀಟ್ ನಲ್ಲಿ ಕೂರಿಸುವ ಸಮಯ. ಕಳೆದ ಮೂರು ಆವೃತ್ತಿಯಲ್ಲೂ ಕಾಣಿಸಿಕೊಳ್ಳದ ಅನೇಕ ಸಾಧಕರನ್ನ ಕರೆದುಕೊಂಡು ಬನ್ನಿ ಎಂಬ ಕೂಗು ಕೇಳಿ ಬರುತ್ತಲೇ ಇದೆ. ಆದ್ರೆ, ನಾನಾ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ.
ಇದೀಗ, ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ಮೊದಲ ಸಂಚಿಕೆಯಲ್ಲೇ ವಿಶೇಷ ವ್ಯಕ್ತಿಯನ್ನ ಅತಿಥಿಯಾಗಿ ಕರೆತಂದಿದ್ದಾರೆ. ಇವರನ್ನ ವೀಕೆಂಡ್ ವಿತ್ ರಮೇಶ್ ಶೋಗೆ ಆಹ್ವಾನಿಸಿ ಎಂದು ಸ್ವತಃ ಪ್ರೇಕ್ಷಕರು ಕೂಡ ಒತ್ತಾಯಿಸಿದ್ದರು. ಈ ಮೂಲಕ ಪ್ರೇಕ್ಷಕರ ಬೇಡಿಕೆಯೂ ಈಡೇರುತ್ತಿದೆ. ಅಷ್ಟಕ್ಕೂ ಯಾರು ಆ ವ್ಯಕ್ತಿ?

ಮೊದಲ ಅತಿಥಿ ಇವರೇ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ವೀರೇಂದ್ರ ಹೆಗ್ಗಡೆ ಅವರ ಸಂಚಿಕೆ ಶೂಟಿಂಗ್ ಮುಗಿದಿದ್ದು, ಪ್ರಸಾರಕ್ಕೆ ಸಜ್ಜಾಗಿದೆಯಂತೆ ಎಂದು ವೀಕೆಂಡ್ ವಿತ್ ರಮೇಶ್ ಶೋನ ಆಪ್ತ ಮೂಲಗಳು ತಿಳಿಸಿವೆ.

ಜನರ ಕೂಗು ಆಗಿತ್ತು
ವೀರೇಂದ್ರ ಹೆಗ್ಗಡೆ ಅಂತಹ ವ್ಯಕ್ತಿಯನ್ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅವರ ಬಗ್ಗೆ ತಿಳಿಸಿಕೊಡಬೇಕು. ಇಂದಿನ ಪೀಳಿಗೆಯವರು ಅವರ ಆದರ್ಶ, ತತ್ವಗಳನ್ನ ಕಲಿಯುವಂತಾಗಬೇಕು ಎಂದು ಕಳೆದ ಮೂರು ಆವೃತ್ತಿಯಿಂದಲೂ ಟಿವಿ ಪ್ರೇಕ್ಷಕರು ಜೀ ಕನ್ನಡ ವಾಹಿನಿಯ ಮುಂದೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಜನರ ಆಸೆ ಈಡೇರುತ್ತಿದೆ.

ಯಾವಾಗ ಆರಂಭ?
ಸದ್ಯಕ್ಕೆ ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿಯ ಎಲ್ಲಾ ತಯಾರಿ ನಡೆಯುತ್ತಿದೆ. ಎಪಿಸೋಡ್ ಗಳ ಶೂಟಿಂಗ್ ಕೂಡ ಆಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ, ಪ್ರಸಾರದ ದಿನಾಂಕ ಮತ್ತು ಸಮಯವನ್ನ ಸದ್ಯಕ್ಕೆ ಪ್ರಕಟಿಸಿಲ್ಲ. ಆದ್ರೆ, ಆದಷ್ಟೂ ಬೇಗ ಬರ್ತೀವಿ ಎಂಬ ಪ್ರೋಮೋ ರಿಲೀಸ್ ಮಾಡಿದ್ದಾರೆ.

ದೊಡ್ಡ ಪಟ್ಟಿಯೇ ಇದೆ
ಅಂದ್ಹಾಗೆ, ವೀರೇಂದ್ರ ಹೆಗ್ಗಡೆ ಅವರನ್ನ ವೀಕೆಂಡ್ ಸೀಟ್ ನಲ್ಲಿ ನೋಡಬೇಕು ಎಂಬ ಆಸೆ ಅನೇಕರಿಗಿತ್ತು. ಅದೇ ರೀತಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಾಲು ಮರದ ತಿಮ್ಮಕ್ಕ, ಹಂಸಲೇಖ, ಮಾಲಾಶ್ರೀ, ಇನ್ಫೋಸಿಸ್ ನಾರಾಯಣ ಮೂರ್ತಿ ಸೇರಿದಂತೆ ಹಲವರನ್ನ ನೋಡುವ ಬಯಕೆಯಲ್ಲಿದ್ದಾರೆ ಟಿವಿ ಪ್ರೇಕ್ಷಕರು. ಈ ಆವೃತ್ತಿಯಲ್ಲಾದರೂ ಇದು ಸಾಧ್ಯವಾಗುತ್ತಾ? ಕಾದು ನೋಡೋಣ.

ಜೀ ಕನ್ನಡ ಪ್ರಶಸ್ತಿ
ಇತ್ತೀಚಿಗಷ್ಟೆ ಲೋಕೋಪಕಾರಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಈ ವರ್ಷದ ‘ಹೆಮ್ಮೆಯ ಜೀವಮಾನ ಸಾಧಕ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


Click it and Unblock the Notifications











