ಮತ್ತೆ ಆಲಿಯಾ ಭಟ್ ಗರ್ಭಿಣಿ ಆಗಿದ್ದಾರಾ? ವೈರಲ್ ಆಯ್ತು ಇನ್‌ಸ್ಟಾಗ್ರಾಂ ಪೋಸ್ಟ್!
ಬಾಲಿವುಡ್ ಹಾಟ್ ಕಪಲ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ನವೆಂಬರ್‌ನಲ್ಲಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದರು. ಮದುವೆ ಆದ 7 ತಿಂಗಳಿಗೆ ಆಲಿಯಾ ಭಟ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೆ ಆಲಿಯಾ ಗರ್ಭಿಣಿ ಆಗಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ.
'ಬ್ರಹ್ಮಾಸ್ತ್ರ' ಸಿನಿಮಾ ಚಿತ್ರೀಕರಣ ಸಮಯದಲ್ಲಿ ರಣ್‌ಬೀರ್ ಹಾಗೂ ಆಲಿಯಾ ಹತ್ತಿರವಾಗಿದ್ದರು. ಎರಡ್ಮೂರು ವರ್ಷ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಕಳೆದ ವರ್ಷ ಏಪ್ರಿಲ್ 14ರಂದು ಕೆಲವೇ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾದ ಮೂರೇ ತಿಂಗಳಿಗೆ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದರು. ಕೆಲವರು ಇದೇ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದರು. ಮದುವೆಯಾದ ಎರಡೂವರೆ ತಿಂಗಳಿಗೆ ಗರ್ಭಿಣಿನಾ? ಅಥವಾ ಮದುವೆಗೂ ಮೊದ್ಲೆ ಗರ್ಭಿಣಿ ಆಗಿದ್ರಾ? ಎಂದು ಮೂದಲಿಸಿದ್ದರು. ಆದರೆ ಇದ್ಯಾವುದಕ್ಕೂ ದಂಪತಿ ತಲೆ ಕೆಡಿಸಿಕೊಳ್ಳಲಿಲ್ಲ. ನವೆಂಬರ್ 6ರಂದು ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ರಾಹಾ ಕಪೂರ್ ಎಂದು ನಾಮಕರಣ ಮಾಡಿದ್ದಾರೆ.
ಮೊದಲ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ನಟಿ ಆಲಿಯಾ ಭಟ್ ಮತ್ತೆ ಗರ್ಭಿಣಿ ಆಗಿದ್ದಾರೆ ಎನ್ನುವ ವದಂತಿ ಹಬ್ಬಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಕೆಲವರು ಇದೆಲ್ಲಾ ಸುಳ್ಳು ಎಂದು ಹೇಳುತ್ತಿದ್ದಾರೆ. ಇಂತಾದೊಂದು ಸುದ್ದಿ ಹುಟ್ಟಿಕೊಳ್ಳಲು ಕಾರಣ ಏನಿರಬಹುದು ಎನ್ನುವ ಪ್ರಶ್ನೆ ಎದ್ದಿದೆ.

ಈ ವದಂತಿ ಶುರುವಾಗಿದ್ದೇಗೆ?
ಇತ್ತೀಚೆಗೆ ನಟಿ ಆಲಿಯಾ ಭಟ್ ಕಾಸ್ಟ್ಯೂಮ್ ಬ್ರ್ಯಾಂಡಿಗೆ ಜಾಹೀರಾತು ನೀಡಿದ್ದಾರೆ. ಅದರಲ್ಲಿ ಹೊಸ ಮೆಟರ್ನಿಟಿ ಕಲೆಕ್ಷನ್ಸ್ ಲಾಂಚ್ ಮಾಡಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಸಂಬಂಧಿಸಿದ ಕೆಲ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ಕೆಲವರು ಆಲಿಯಾ ಭಟ್ ಮತ್ತೆ ಗರ್ಭಿಣಿ ಆಗಿದ್ದಾರೆ ಎನ್ನುವ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ. ಮತ್ತೆ ಗರ್ಭಿಣಿ ಆಗಿರುವ ಬಗ್ಗೆ ಆಲಿಯಾ ಆಗಲಿ ಕುಟುಂಬ ಸದಸ್ಯರಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಅವರು ಈ ವದಂತಿ ಬಗ್ಗೆ ಮಾತನಾಡದೇ ಮೌನವಾಗಿರಲು ನಿರ್ಧರಿಸಿದಂತೆ ಕಾಣ್ತಿದೆ.

ಮನಸ್ಸಿನ ಮಾತು ಕೇಳುತ್ತೇನೆ
ಇನ್ನು ಕರಿಯರ್ ಪೀಕ್‌ನಲ್ಲಿ ಇದ್ದಾಗಲೇ ಆಲಿಯಾ ಭಟ್ ಮದುವೆ, ಮಗು ಮಾಡಿಕೊಂಡಿದ್ದು ಸರಿಯಲ್ಲ ಎಂದು ಕೆಲವರು ಹೇಳಿದ್ದರು. ಇದಕ್ಕೆ ಸಂದರ್ಶನವೊಂದರಲ್ಲಿ ಆಲಿಯಾ ಉತ್ತರಿಸಿದ್ದರು. "ಜೀವನದಲ್ಲಿ ಸರಿ ತಪ್ಪು ಎನ್ನುವುದು ಇಲ್ಲ. ನನಗೆ ಅನ್ವಯ ಆಗುವುದು ಮತ್ತೊಬ್ಬರಿಗೆ ಅನ್ವಯ ಆಗಬೇಕು ಅಂತೇನಿಲ್ಲ. ಸದಾ ಮನಸ್ಸಿನ ಮಾತು ಕೇಳುವ ಹುಡುಗಿ ನಾನು. ಹೀಗಾಗಿ ಜೀವನದಲ್ಲಿ ನಾವು ಏನೂ ಪ್ಲ್ಯಾನ್ ಮಾಡಲು ಆಗುವುದಿಲ್ಲ. ವಿಧಿಯೇ ಎಲ್ಲವೂ ಪ್ಲ್ಯಾನ್ ಮಾಡುತ್ತದೆ ನಾವು ಅದನ್ನು ಸುಮ್ಮನೆ ಫಾಲೋ ಮಾಡಬೇಕು ಅಷ್ಟೆ. ಹೌದು ನನ್ನ ವೃತ್ತಿ ಜೀವನ ಪೀಕ್‌ನಲ್ಲಿದ್ದಾಗ ನಾನು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆ. ಅಲ್ಲದೆ ಮಗು ಮಾಡಿಕೊಂಡಿದ್ದೇನೆ"

ನನ್ನ ಜೀವನದ ಒಳ್ಳೆ ನಿರ್ಧಾರಗಳು
"ಯಾರು ಹೇಳಿದ್ದು ಮದುವೆ ಮತ್ತು ಮಗು ನಂತರ ಹೆಣ್ಣುಮಕ್ಕಳ ಕರಿಯರ್ ಬದಲಾಗುತ್ತೆ ಎಂದು? ಒಂದು ವೇಳೆ ಬದಲಾದರೆ ಆಗಲಿ ಬಿಡಿ ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪ್ರಕಾರ ಜೀವನ ಅಂದ್ರೆ ಇದೇ. ಮಗು ಮಾಡಿಕೊಂಡ ವಿಚಾರದ ಬಗ್ಗೆ ನನಗೆ ಯಾವುದೇ ರೀತಿ ಬೇಸರ ಇಲ್ಲ. ಇದೆಲ್ಲವೂ ಸರ್ವೇ ಸಾಧಾರಣ ಆಲೋಚನೆಗಳು ಅಷ್ಟೇ. ನನ್ನ ಪ್ರಕಾರ ಇವೆರಡು ನನ್ನ ಜೀವನದಲ್ಲಿ ನಾನು ತೆಗೆದುಕೊಂಡಿರುವ ಒಳ್ಳೆಯ ನಿರ್ಧಾರಗಳು. ಈಗ ಖುಷಿಯಾಗಿರುವಷ್ಟು ಮೊದಲು ಆಗಿರಲಿಲ್ಲ" ಎಂದು ಹೇಳಿದ್ದರು.

ಸದ್ಯಕ್ಕೆ ಸಿನಿಮಾ ಶೂಟಿಂಗ್ ಇಲ್ಲ
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ಆಲಿಯಾ ಭಟ್ ಗರ್ಭಿಣಿ ಆಗಿದ್ದಾಗಲೇ ಆರ್ಟ್ ಆಫ್ ಸ್ಟೋನ್ ಎನ್ನುವ ಹಾಲಿವುಡ್ ಪ್ರಾಜೆಕ್ಟ್ ಮುಗಿಸಿದ್ದರು. ರಣ್‌ವೀರ್ ಸಿಂಗ್ ಜೋಡಿಯಾಗಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಆಲಿಯಾ ಈ ಸಿನಿಮಾ ಶೂಟಿಂಗ್‌ಗೆ ಹೋಗಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಮತ್ತೆ ಕ್ಯಾಮರಾ ಮುಂದೆ ನಿಲ್ಲಲಿದ್ದಾರೆ. ಇನ್ನು ರಣ್‌ಬೀರ್ ಕಪೂರ್ 'ಅನಿಮಲ್' ಚಿತ್ರದಲ್ಲಿ ನಟಿಸ್ತಿದ್ದಾರೆ.


Click it and Unblock the Notifications











