'ಚಕ್ರವರ್ತಿ' ಸಾಮ್ರಾಜ್ಯದ ಮಹಾದ್ರೋಹಿ ಮಂತ್ರಿ 'ಮಲ್ಲಿ' ಎಲ್ಲಿದ್ದಾನೆ ಗೊತ್ತಾ..?
ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಗೊತ್ತಲ್ಲವಾ..? ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಒಂದ್ಕಾಲದಲ್ಲಿ ನೆರಳಿನಂತೆ ಹಿಂಬಾಲಿಸುತ್ತಿದ್ದ ವ್ಯಕ್ತಿ. ದರ್ಶನ್ ಅವರ ಕಾಲ್ ಶೀಟ್.. ಸಂಭಾವನೆ.. ಎಲ್ಲವನ್ನೂ ಮ್ಯಾನೇಜರ್ ಎಂಬ ಹುದ್ದೆಯನ್ನ ಅಲಂಕರಿಸಿ, ಮ್ಯಾನೇಜ್ ಮಾಡುತ್ತಿದ್ದ ಈ ಮಹಾನುಭಾವನ ಕೈಯಲ್ಲಿ ದರ್ಶನ್, ತಮ್ಮ ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ಕೀಲಿ ಕೈಯನ್ನೇ ಕೊಟ್ಟು ಕುಂತಿದ್ದರು. ಯಾಕೆಂದರೆ ದರ್ಶನ್ ಇರುವುದೇ ಹಾಗೇ. ನಂಬಿದರೆ ಸರ್ವಸ್ವವನ್ನೂ ಧಾರೆಯೆರೆದು ಬಿಡುವ ಯಜಮಾನ.
ಆದರೆ ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ್ದ ಪ್ರೇಮ ಬರಹ ಬಿಡುಗಡೆಯಾಗಿದ್ದೇ ಕೊನೆ. ಮಲ್ಲಿಯ ಮುಖವಾಡದ ಬದುಕು ಕಳಚಿ ಬಿದ್ದಿತ್ತು. ಮಲ್ಲಿ ಅವ್ಯವಹಾರದ ಕಥೆ ಬಯಲಿಗೆ ಬಂದಿತ್ತು. ತೀರಾ ನಂಬಿದವರೇ ಹೀಗೆಲ್ಲಾ ಮಾಡಿದ ಮೇಲೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಅನ್ನೋ ಗೊಂದಲ ಕೂಡ ಆಗ ದರ್ಶನ್ ಅವರದ್ದಾಗಿತ್ತು

ದರ್ಶನ್ ಅವರಿಗಷ್ಟೇ ಅಲ್ಲದೇ ದರ್ಶನ್ ಅವರ ಹೆಸರಿನಲ್ಲಿ ಅರ್ಜುನ್ ಸರ್ಜಾ ಸೇರಿ ಅನೇಕರಿಗೆ ಉಂಡೆನಾಮ ತೀಡಿ, ನಂಬಿಕೆ ದ್ರೋಹವನ್ನ ಮಾಡಿದ ಮಲ್ಲಿಕಾರ್ಜುನ ಯಾನೆ ಮಲ್ಲಿ ಕಾಣೆಯಾಗಿ ಹತ್ ಹತ್ರ ಏಳು ವರ್ಷಗಳಾಗಿವೆ. ಈ ಏಳು ವರ್ಷದಲ್ಲಿ ಮಲ್ಲಿಕಾರ್ಜುನ ಎಲ್ಲಿ ಹೋದ ..? ಏನಾದ.. ? ಅನ್ನುವುದು ಯಾರೆಂದರೆ ಯಾರಿಗೂ ಗೊತ್ತಾಗಲೇ ಇಲ್ಲ.ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮಲ್ಲಿ ರಚಿಸಿದ್ದ ಚಕ್ರವ್ಯೂಹ ಭೇದಿಸಲು ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ.
ಇತ್ತ ಮಲ್ಲಿಕಾರ್ಜುನ್‌ನ ನಂಬಿ ಕೆಟ್ಟಿರುವ ಅರ್ಜುನ್ ಸರ್ಜಾ ಅವರ ಕಷ್ಟ ಒಂದೆರಡಲ್ಲ. ಆದರೂ ತಾಳ್ಮೆಯಿಂದ ಅರ್ಜುನ್ ಸರ್ಜಾ, ಮಲ್ಲಿಕಾರ್ಜುನ್‌ಗಾಗಿ ಕಾಯುತ್ತಾನೇ ಇದ್ದರು. ಆದ್ರೆ ಈಗ ಸಹನೆಯ ಕಟ್ಟೆ ಒಡೆದಿದೆ. ಹೀಗಾಗಿಯೇ ನ್ಯಾಯಾಲಯದ ಮೆಟ್ಟಿಲನ್ನೇರಿರುವ ಅರ್ಜುನ್ ಸರ್ಜಾ ಸದ್ಯಕ್ಕೆ ಪವಾಡ ನಡೆಯುವ ಭರವಸೆಯಲ್ಲಿದ್ದಾರೆ.
2010ರಲ್ಲಿಯೇ ಮೊದಲ ಸಲ ಟೋಪಿ ಹಾಕಿದ್ದ ಮಲ್ಲಿ..!
ಮಲ್ಲಿ ಬೆಸಿಕಲಿ ಉತ್ತರ ಕರ್ನಾಟಕ ಸೀಮೆಯ ಗದಗ ಜಿಲ್ಲೆಯವನು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೊದಲ ಸಲ ಚಿತ್ರದ ಆರಂಭದಲ್ಲಿ ಸಹ ನಿರ್ಮಾಪಕನಾಗಿದ್ದ ಈತ. ಆದರೆ ಸಿನಿಮಾ ಆರಂಭವಾದ ನಂತರ ಎಲ್ಲದರಲ್ಲಿಯೂ ಕಡ್ಡಿ ಅಲ್ಲಾಡಸಿಲು ಶುರುಮಾಡಿದ್ದ. ಚಿತ್ರದ ಪ್ರಮುಖ ನಿರ್ಮಾಪಕ ಯೋಗೇಶ್ ನಾರಾಯಣ್ ಅವ್ರನ್ನೇ ಓವರ್ ಟೇಕ್ ಮಾಡಲು ಮುಂದಾಗಿದ್ದ. ಎಷ್ಟರ ಮಟ್ಟಿಗೆ ಅಂದರೆ ಎಲ್ಲೆಲ್ಲಿಂದಲೋ ದುಡ್ಡು ತಗೆದುಕೊಂಡು ಬಂದು ಕಷ್ಟಪಟ್ಟು ಆ ಕಾಲದಲ್ಲಿ ಅತ್ಯಂತ ಪ್ರೀತಿಯಿಂದ ಚಿತ್ರ ನಿರ್ಮಾಣ ಮಾಡುತ್ತಿದ್ದ ಯೋಗೇಶ್ ನಾರಾಯಣ್ ಮಲ್ಲಿಯ ಉಪಟಳಕ್ಕೆ ಬೇಸತ್ತು ಹೋಗಿದ್ದರು. ಕೊನೆಗೆ ನೋವನ್ನ ತಡೆಯಲಾಗದೇ ಪತ್ರಿಕಾಗೋಷ್ಠಿಯನ್ನೂ ನಡೆಸಿ ಮಲ್ಲಿ ವಿರುದ್ಧ ಕೆಂಡ ಕಾರಿದ್ದರು. ಆದರೆ ದುರ್ದೈವ ಯೋಗೇಶ್ ನಾರಾಯಣ್ ಬೆಂಬಲಕ್ಕೆ ಅವತ್ತು ನಿಲ್ಲಬೇಕಿದ್ದ ಯಶ್, ಮಲ್ಲಿಕಾರ್ಜುನ ಎಂಬ 420 ಪರ ವಕಾಲತ್ತನ್ನ ವಹಿಸಿಕೊಂಡಿದ್ದರು. ಯೋಗೇಶ್ ನಾರಾಯಣ್ ಅವರನ್ನ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದ್ದರು. ಮಲ್ಲಿಕಾರ್ಜುನ್ ನ ನಂಬಿ ಹಣ ಕಳೆದುಕೊಂಡ ಸಂತ್ರಸ್ಥರಲ್ಲಿ ಒಬ್ಬರಾಗಿರುವ ಯೋಗೇಶ್ ನಾರಾಯಣ್ ಅವರಿಗೆ ಇವತ್ತು ಕೂಡ ಒಂದೂವರೆ ಕೋಟಿ ಹಣ ವಾಪಸ್ಸು ಬರಬೇಕು.

ಇಂಥ ಮಲ್ಲಿಕಾರ್ಜುನ ದರ್ಶನ್ ಹಾಗೂ ಅವರ ಸುತ್ತಮುತ್ತ ಇದ್ದ ವ್ಯಕ್ತಿಗಳಿಗೆ ಪಂಗನಾಮ ಹಾಕುವ ಮೊದಲು ಪಕ್ಕಾ ಪ್ಲಾನು ಮಾಡಿಕೊಂಡು, ಬೆಂಗಳೂರಿನಲ್ಲಿದ್ದ ಮನೆಯನ್ನು ಖಾಲಿ ಮಾಡಿ ಹೆಂಡತಿ ಮಕ್ಕಳನ್ನೆಲ್ಲಾ ತನ್ನ ಹುಟ್ಟೂರಿಗೆ ಬಿಟ್ಟು ಬಂದಿದ್ದ. ಒಮ್ಮೆಲೇ ಗಾಯಬ್ ಆಗಿದ್ದ.
ಕೆನಡಾದಲ್ಲಿ ಇದ್ದಾನಾ ಮಲ್ಲಿ..?
ಏಕಾಏಕಿ ಯಾವ ಸೂಚನೆಯನ್ನೂ ನೀಡದೆ ಊರುಬಿಟ್ಟು ಎಸ್ಕೇಪ್ ಆದ ಮಲ್ಲಿ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರವನ್ನ ಹುಡುಕುವ ಪ್ರಯತ್ನ ಹಿಂದೆ ಅನೇಕ ಬಾರಿಯಾಗಿದೆ. ಆದರೆ ಯಾರ ಬಳಿಯೂ ನಿಖರವಾದ ಉತ್ತರ ಇಲ್ಲ. ಆದರೆ ಈ ಹಿಂದೆ ಒಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮಲ್ಲಿ ಆ ದೇಶದಲ್ಲಿ ಇದ್ದಾನಾ ಅನ್ನುವ ಅನುಮಾನ ಮೂಡಿತ್ತು. ಅದರ ಪ್ರಕಾರ ಹೇಳೋದಾದರೆ ಮಲ್ಲಿ ಈಗ ಕೆನಡಾದಲ್ಲಿ ಸೆಟಲ್ ಆಗಿ ಅಲ್ಲೊಂದು ಫ್ಲಾಟು ಖರೀದಿಸಿ ಕೂಲಾಗಿ ಜೀವನ ನಡೆಸುತ್ತಿದ್ದಾನಂತೆ.
ಅವತ್ತು ಹಾಗೂ ಇವತ್ತು ಕೇಳಿ ಬರುತ್ತಿರುವ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಅನ್ನೋದು ಆಧಾರ ಸಮೇತ ಮಲ್ಲಿಕಾರ್ಜುನ ಉರ್ಫ್ ಮಲ್ಲಿ ಸಿಕ್ಕ ನಂತರವಷ್ಟೇ ಪಕ್ಕಾ ಆಗಲಿದೆಯಾದರೂ ವರ್ಷಾನುವರ್ಷಗಳಿಂದ ಗಾಂಧಿನಗರವನ್ನ ಅತೀ ಹತ್ತಿರದಿಂದ ಕಂಡವರಲ್ಲಿ ಇಂಥಹದ್ದೊಂದು ಗುಮಾನಿ ಇದ್ದೇ ಇದೆ. ಇಷ್ಟಕ್ಕೂ ಮಲ್ಲಿ ಯಾಮಾರಿಸಿ ತೆಗೆದುಕೊಂಡು ಹೋದ ಹಣವನ್ನು ಏನು ಮಾಡಿದ್ದಾನೆ? ನಂಬಿದವರನ್ನು ವಂಚಿಸುವ ದರ್ದಾದರೂ ಈತನಿಗೇನಿತ್ತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಮಲ್ಲಿಕಾರ್ಜುನ ಪ್ರತ್ಯಕ್ಷವಾದಾಗಲೇ ಗೊತ್ತಾಗಲಿದೆ.


Click it and Unblock the Notifications











