ಚಂದನವನದ ಚೆಲ್ವಿ ಪ್ರೇಮಾ ಜೊತೆ ಇರುವ ಈ ವ್ಯಕ್ತಿ ಯಾರು ? ಮಹಾನಟಿಯ ಸುತ್ತ ಹೀಗೊಂದು ಸುದ್ದಿ..?
ಪ್ರೇಮಾ .. ಕನ್ನಡ ಚಿತ್ರರಂಗದ ಚೆಲ್ವಿ. ಅಖಂಡ ಒಂದು ದಶಕ ಕನ್ನಡ ಮಾತ್ರ ಅಲ್ಲ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿಯೂ ತನ್ನ ಛಾಪು ಮೂಡಿಸಿದ ಚಂದ್ರಮುಖಿ .. ಪ್ರಾಣಸಖಿಯ ಈ ಸಹನಾ ವ್ಯೆಯಕ್ತಿಕ ಬದುಕಿನಲ್ಲಿ ಉಂಡ ನೋವು ಅಷ್ಟಿಷ್ಟಲ್ಲ. ಖ್ಯಾತಿಯ ತುತ್ತ ತುದಿಯಲ್ಲಿದ್ದಾಗಲೇ, ಜೀವನ್ ಅಪ್ಪಚ್ಚು ಜೊತೆ ಜೀವನವಿಡೀ ಕಾಲ ಕಳೆಯುವ ನಿರ್ಧಾರವನ್ನ ಮಾಡಿ ಚಿತ್ರರಂಗದಿಂದ ದೂರವಾದ ಪ್ರೇಮಾಗೆ ಸಿಕ್ಕಿದ್ದು ನಿರಾಸೆ ಮಾತ್ರ. ಹೀಗಾಗಿಯೇ 2006 ರ ಆಚೀಚೆ ಜೀವನ್ ಅಪ್ಪಚ್ಚು ಗೆ ಸೋಡಾ ಚೀಟಿಯನ್ನ ನೀಡಿದ ಪ್ರೇಮಾ ಆ ನಂತರ ಅನಾರೋಗ್ಯಕ್ಕೀಡಾದರು. ಗುರುತು ಹಿಡಿಯಲಾಗದಷ್ಟು ಬದಲಾದರು.
ಆದರೂ.. ಕುಗ್ಗದ.. ಜಗ್ಗದ.. ಹೆದರದ..ಬೆದರದ ಪ್ರೇಮಾ, ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಪ್ರಯತ್ನವನ್ನ ಮಾಡಿದರು. ಆದರೆ.. ಇದೇ ಸಮಯದಲ್ಲಿ ಪ್ರೇಮಾ ಹೆಸರು ಆರ್.ಜೆ. ರಾಜೇಶ್ ಜೊತೆ ತಳುಕು ಹಾಕಿಕೊಂಡಿತ್ತು. ಇನ್ನೇನು.. ಇಬ್ರೂ ಮದುವೆಯಾಗಲಿದ್ದಾರೆ, ಎಂದು ಸಮಾಜ ಮಾತನಾಡಿಕೊಳ್ಳುವಷ್ಟರಲ್ಲಿಯೇ, ಮೌನ ಮುರಿದಿದ್ದ ಪ್ರೇಮಾ ಹಾಗೂ ಆರ್.ಜೆ.ರಾಜೇಶ್ ನಮ್ಮ ಇಬ್ಬರದ್ದೂ ಅಕ್ಕ-ತಮ್ಮನ ಸಂಬಂಧ ಎಂದಿದ್ದರು. ಹರಿದಾಡುತ್ತಿದ್ದ ಸುದ್ದಿಗಳಿಗೆ ಪೂರ್ಣ ವಿರಾಮವನ್ನ ಹಾಕಿದರು.

ಇದೆಲ್ಲವೂ ಆಗಿ ಈಗ ಹೆಚ್ಚು ಕಡಿಮೆ 09 ವರ್ಷಗಳಾಗ್ತಾ ಬಂದಿವೆ. ಈ 09 ವರ್ಷದಲ್ಲಿ ಇಬ್ಬರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಉಪೇಂದ್ರ ಮತ್ತೆ ಬಾ ಚಿತ್ರದ ಮೂಲಕ, ಚಿತ್ರರಂಗಕ್ಕೆ ಮರಳಿ ಬರುವ ಪ್ರಯತ್ನವನ್ನ ಮಾಡಿದ್ದ ಪ್ರೇಮಾ ಸದ್ಯಕ್ಕೆ ಕಿರುತೆರೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪ್ರೇಮಾ ಅವರ ಖಾಸಗಿ ಬದುಕಿನ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ.
ಹೌದು, ಸಿನಿಬಜ್ ವೆಬ್ ಸೈಟ್, ಪ್ರೇಮಾ ಅವರ ಕುರಿತ ಸುದ್ದಿಯೊಂದನ್ನ ಫೋಟೋ ಸಮೇತ ಪ್ರಕಟಿಸಿದೆ. ಪ್ರಕಟವಾದ ಈ ವರದಿಯ ಪ್ರಕಾರ, ಪ್ರೇಮಾ ಮತ್ತು ಕಿರುತೆರೆ ಇಂಡಸ್ಟ್ರಿಯಲ್ಲಿ ಕಾರ್ಯನಿರ್ವಾಹಕರಾಗಿ ಹೆಸರು ಮಾಡಿರುವ, ಅರವಿಂದ್ ಅವರ ನಡುವೆ ಆತ್ಮೀಯ ಸಂಬಂಧ ಇತ್ತು. ಪ್ರೇಮಾ ಇದ್ದ ಕಡೆ ಅರವಿಂದ್ ಅವರ ಉಪಸ್ಥಿತಿ ಇದ್ದೇ ಇರುತ್ತಿತ್ತು.

ಇನ್ನೂ.. ಇತ್ತೀಚೆಗೆ ಪ್ರೇಮಾ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದಾಗ, ಅರವಿಂದ್ ಅವರ ಜೊತೆ ಪ್ರೇಮಾ ಸಪ್ತಪದಿ ತುಳಿಯಲಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿತ್ತು. ಆದರೆ ಈಗ ಆ ಮಾತು.. ಮಾತಾಗಿಯೇ ಉಳಿದಿದೆ, ಸಂಬಂಧ ಹಳಸಿದೆ ಎನ್ನುವುದು ಸಿನಿಬಜ್ ವೆಬ್ ಸೈಟ್ ನಲ್ಲಿ ಪ್ರಕಟವಾದ ವರದಿಯ ಸಾರ.
ಇದು ನಿಜವಾ ಗೊತ್ತಿಲ್ಲ. ಆದರೆ.. ಸದ್ಯಕ್ಕೆ ಪ್ರೇಮಾ ಹಾಗೂ ಅರವಿಂದ್ ಅವರ ಕುರಿತು ಪ್ರಕಟವಾಗಿರುವ ಈ ವರದಿಯ ಬಗ್ಗೆ, ಗಾಂಧಿನಗರದಲ್ಲಿ ಅಷ್ಟೇ ಅಲ್ಲ.. ಕಿರುತೆರೆಯ ವಲಯದಲ್ಲಿಯೂ ಕೂಡ ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ಸತ್ಯಾಸತ್ಯತೆಯ ಹುಡುಕಾಟವೂ ನಡೆಯುತ್ತಿದೆ. ಇನ್ನೂ.. ಪ್ರೇಮಾ ಆಗಲಿ.. ಅರವಿಂದ್ ಅವರಾಗಲಿ.. ಈ ವಿಚಾರದ ಬಗ್ಗೆ ಇನ್ನೂ ಮೌನ ಮುರಿದಿಲ್ಲ. ಈ ಕಾರಣಕ್ಕೆ ಅನೇಕರಲ್ಲಿರುವ ಅನುಮಾನ ಈಗ ಇನ್ನೂ ಹೆಚ್ಚಾಗುತ್ತಿದೆ.

ಒಟ್ನಲ್ಲಿ ಸದ್ಯಕ್ಕೆ ಕ್ಯಾಮರಾ ಕಣ್ಣಿನಲ್ಲಿ ಪ್ರೇಮಾ ಮತ್ತು ಅರವಿಂದ್ ಜೊತೆಯಲ್ಲಿ ತೆಗೆಸಿಕೊಂಡ ಫೋಟೋಗಳು ಎಲ್ಲರ ಕಣ್ಣರಳಿಸುತ್ತಿವೆ. ಅನೇಕ ಪ್ರಶ್ನೆಗಳನ್ನೂ ಕೂಡ ಈ ಫೋಟೋಗಳು ಹಾಗೂ ಪ್ರಕಟವಾದ ವರದಿ ಹುಟ್ಟು ಹಾಕಿವೆ. ಪ್ರೇಮಾ ಮತ್ತು ಅರವಿಂದ್ ಈ ವಿಚಾರದಲ್ಲಿ ಸ್ಪಷ್ಟೀಕರಣವನ್ನ ನೀಡ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications










