'ರಾವಣ'ನಾಗಲು 'ರಾಕಿ' ಪಡೆದ 'ಸಂಭಾವನೆ' ಎಷ್ಟು ? 'ರಜಿನಿಕಾಂತ್' ಅವರನ್ನೂ ಹಿಂದಿಕ್ಕಿದರು 'ನ್ಯಾಷನಲ್ ಸ್ಟಾರ್'..?
ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಅವರ ಟಾಕ್ಸಿಕ್ ಮೇಲೆ ಎಲ್ಲರ ಕಣ್ಣಿದೆ. ಜಗತ್ತು ಯಶ್ ಬಗ್ಗೆ ಮಾತನಾಡುತ್ತಿದೆ.
ಇನ್ನೂ ಟಾಕ್ಸಿಕ್ ಹೊರತು ಪಡಿಸಿದರೆ, ಯಶ್ ಬಾಲಿವುಡ್ ನಲ್ಲಿ ನಿರ್ಮಾಣವಾಗಲಿರುವ 'ರಾಮಾಯಣ' ಚಿತ್ರದಲ್ಲಿ 'ರಾವಣ'ನ ಪಾತ್ರವನ್ನ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಾನೇ ಇದೆ.

ನಿಜಾ.. ಯಶ್ ಅಧಿಕೃತವಾಗಿ ಈ ಸುದ್ದಿಯನ್ನ ಒಪ್ಪಿಕೊಂಡಿಲ್ಲ. ಹಾಗಂಥ ಸುದ್ದಿ ಸುಳ್ಳು ಅಂತ ಕೂಡ ಹೇಳಿಲ್ಲ. 'ರಾಮಾಯಣ'ದ ವಿಚಾರದಲ್ಲಿ 'ಅಡ್ಡ ಗೋಡೆಯ ಮೇಲೆ ದೀಪ' ಇಟ್ಟವರು ಯಶ್. ಈ ಕಾರಣಕ್ಕೆ ನಿತೇಶ್ ತಿವಾರಿ ನಿರ್ದೇಶನದಲ್ಲಿ ಬರಲಿರುವ 'ರಾಮಾಯಣ' ಚಿತ್ರದಲ್ಲಿ 'ಯಶ್' 'ರಾವಣ'ನ ರೂಪದಲ್ಲಿ ಅಬ್ಬರಿಸುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ. ಇದಕ್ಕೆ ಪೂರಕವಾಗಿ ಇದೀಗ ಲಂಕಾಸುರನಾಗಲು ಯಶ್ ಪಡೆದಿರಬಹುದಾದ ಸಂಭಾವನೆಯ ಬಗ್ಗೆ ಚರ್ಚೆ ಆಗ್ತಿದೆ.
ಸದ್ಯಕ್ಕೆ ಮುಂಬೈ ಮಂದಿ ಮಾತನಾಡಿಕೊಳ್ಳುತ್ತಿರುವ ಪ್ರಕಾರ, ಯಶ್ ರಾವಣನಾಗಲು 150 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ಹೊಚ್ಚ ಹೊಸ ಚರಿತ್ರೆಯನ್ನೂ ಸೃಷ್ಟಿಸಿದ್ದಾರೆ. ರಜಿನಿಕಾಂತ್, ವಿಜಯ್ ಹಾಗೂ ಪ್ರಭಾಸ್ ಹೊರತು ಪಡಿಸಿದರೆ, ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆದ ದಕ್ಷಿಣದ ಮತ್ತೊಬ್ಬ ನಟ ಎಂಬ ಹೆಗ್ಗಳಿಕೆಗೂ ಯಶ್ ಈ ಮೂಲಕ ಪಾತ್ರರಾಗಿದ್ದಾರೆ. ಈ ಸುದ್ದಿ ನಿಜಾನಾ..? ಖುದ್ದು ಯಶ್ ಇದಕ್ಕೆ ಉತ್ತರ ನೀಡಬೇಕಾದರೂ ಈ ಸುದ್ದಿ ನಿಧಾನಕ್ಕೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಸಾಮಾಜಿಕ ಜಾಲತಾಣವನ್ನೂ ಆವರಿಸಿಕೊಳ್ಳುತ್ತಿದೆ.
ಏಪ್ರಿಲ್ 17ಕ್ಕೆ ಅಧಿಕೃತ ಘೋಷಣೆ..?
ಇನ್ನೂ ಏಪ್ರಿಲ್ 17ಕ್ಕೆ ರಾಮ ನವಮಿ ಇದೆ. ಅವತ್ತೇ ನಿತೇಶ್ ತಿವಾರಿ ತಮ್ಮ ಕನಸಿನ ರಾಮಾಯಣ ಚಿತ್ರಕ್ಕೆ ಚಾಲನೆಯನ್ನ ಕೊಡಲಿದ್ದಾರೆ ಅನ್ನುವ ಸುದ್ದಿಯೂ ಇದೆ. ರಾಮನಾಗಿ ರಣ್ಭೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ಈ ಚಿತ್ರದಲ್ಲಿ ಇರ್ತಾರಾ, ಇಲ್ಲವಾ ಎಂಬ ಪ್ರಶ್ನೆಗಳಿಗೆ ಅವತ್ತು ಅಂದರೆ ಏಪ್ರಿಲ್ 17ರಂದೇ ಉತ್ತರವನ್ನ ಕೊಡಲಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.


Click it and Unblock the Notifications











