ಟ್ರೆಂಡ್ ಫಾಲೋ ಮಾಡ್ತಾರಾ ಯಶ್? ಮುಂದಿನ ಸಿನಿಮಾ ಜಾನರ್, ಪಾತ್ರ ಅದೇನಾ?
KGF- 2 ರಿಲೀಸ್ ಆಗಿ ವರ್ಷ ಕಳೆದ್ರು ಯಶ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಸಿಕ್ಕಿಲ್ಲ. ಆದರೆ ಶೀಘ್ರದಲ್ಲೇ ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಸಿಗಲಿದೆ. ತೆರೆಮರೆಯಲ್ಲಿ ರಾಕಿಂಗ್ ಸ್ಟಾರ್ ಮುಂದಿನ ಚಿತ್ರಕ್ಕಾಗಿ ಪ್ಲ್ಯಾನ್ ಮಾಡ್ತಿದ್ದಾರೆ. ಯಶ್19 ಸಿನಿಮಾ ನಿರ್ದೇಶಕರು ಯಾರು ಎನ್ನುವ ಪ್ರಶ್ನೆಗೆ ನರ್ತನ್ ಇಂದ ಹಿಡಿದು ಸಂಜಯ್ ಲೀಲಾ ಬನ್ಸಾಲಿವರೆಗೂ ಹಲವರ ಹೆಸರುಗಳು ಹೇಳಿಬಂತು.
ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾ ಬಗ್ಗೆ ನಾನೇ ಅಪ್‌ಡೇಟ್ ಕೊಡ್ತೀನಿ. ಅಲ್ಲಿಯವರೆಗೂ ಯಾವುದನ್ನು ನಂಬಲು ಹೋಗಬೇಡಿ ಅಂತ ಈ ಹಿಂದೆಯೇ ಹೇಳಿದ್ದಾರೆ. ರಾಕಿ ಭಾಯ್ ಮುಂದಿನ ಚಿತ್ರಕ್ಕೆ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಕಳೆದ 15 ದಿನಗಳಿಂದ ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದು ಬಹುತೇಕ ಖಚಿತ ಎನ್ನಲಾಗ್ತಿದೆ. ಮಲಯಾಳಂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಗೀತು ಮೋಹನ್ ದಾಸ್ 2 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಗೀತು ಮೋಹನ್ ದಾಸ್ ಕಟ್ಟಿಕೊಟ್ಟ 'ಲೇರ್ಸ್ ಡಿಸ್' ಹಾಗೂ 'ಮೂಥಾನ್' ಸಿನಿಮಾಗಳು ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಯಶ್19 ಸಿನಿಮಾ ನಿರ್ಮಾಣವಾಗುತ್ತೆ ಎನ್ನಲಾಗ್ತಿದೆ. ಈಗಾಗಲೇ ಗೀತು ಮೋಹನ್ ದಾಸ್ ಹೇಳಿದ ಕಥೆಗೆ ಯಶ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಕಥೆಯನ್ನು ತಿದ್ದಿ ತೀಡುವ ಕೆಲಸಗಳು ನಡೀತಿದೆ. ಇನ್ನು ಸಿನಿಮಾ ಜಾನರ್ ಯಾವ್ದು ಎನ್ನುವ ಬಗ್ಗೆಯೂ ಈಗ ಗುಸುಗುಸು ಶುರುವಾಗಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯಶ್ ಸೈನ್ಸ್‌ಫಿಕ್ಷನ್ ಅಥವಾ ಆಕ್ಷನ್ ಕಥೆಯನ್ನು ತಮ್ಮ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದರು.
ಗ್ಯಾಂಗ್‌ಸ್ಟರ್ ಜಾನರ್‌ನ 'KGF' ಚಿತ್ರದಲ್ಲಿ ನಟಿಸಿ ಗೆದ್ದ ಯಶ್ ಮತ್ತೆ ಅದೇ ಜಾನರ್‌ಗೆ ಜೈ ಎಂದಿದ್ದಾರಂತೆ. ಸದ್ಯ ಆಕ್ಷನ್ ಸಿನಿಮಾಗಳ ಟ್ರೆಂಡ್ ನಡೀಯಿದೆ. ಅದಕ್ಕೆ ತಕ್ಕಂತೆ ಮತ್ತೊಂದು ಆಕ್ಷನ್ ಸಿನಿಮಾ ಪ್ಲ್ಯಾನ್ ಮಾಡಲಾಗುತ್ತಿಯಂತೆ. ಯಶ್ ಕೂಡ ಹಾಲಿವುಡ್ ರೇಂಜ್ ಆಕ್ಷನ್ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಈ ಹಿಂದೆ ವಿದೇಶಕ್ಕೆ ಹೋಗಿ ಹಾಲಿವುಡ್ ತಂತ್ರಜ್ಞರನ್ನು ಭೇಟಿ ಮಾಡಿ ಬಂದಿದ್ದರು. ಹಾಗಾಗಿ ಯಶ್ ಮುಂದಿನ ಸಿನಿಮಾ ಕೂಡ ಗ್ಯಾಂಗ್‌ಸ್ಟರ್ ಸಿನಿಮಾ ಎನ್ನಲಾಗ್ತಿದೆ.
ಈಗಾಗಲೇ ಗ್ಯಾಂಗ್‌ಸ್ಟರ್ ರಾಕಿ ಭಾಯ್ ಆಗಿ ಯಶ್ ಅಬ್ಬರಿಸಿ ಗೆದ್ದಿದ್ದಾರೆ. ಈ ಬಾರಿ ಮತ್ತೆ ಅಂಥದ್ಧೇ ಪವರ್‌ಫುಲ್ ಪಾತ್ರಕ್ಕೆ ಸಿದ್ಧರಾಗುತ್ತಿದ್ದಾರೆ ಎನ್ನಲಾಗ್ತಿದೆ. ಯಶ್19 ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶಕಿ ಎನ್ನುತ್ತಿದ್ದಂತೆ ಯಶ್ ಅಭಿಮಾನಿಗಳು ಹಿನ್ನೆಲೆ ಹುಡುಕಾಡುತ್ತಿದ್ದಾರೆ. 'ಮೂಥಾನ್' ಚಿತ್ರದಲ್ಲಿ ನಿವಿನ್ ಪೊಲಿನ ಜಬರ್ದಸ್ತ್ ರೋಲ್‌ನಲ್ಲಿ ತೋರಿಸಿ ಗೆದ್ದಿದ್ದರು. ಹಾಗಾಗಿ ಯಶ್‌ಗೂ ಒಂದು ಆಕ್ಷನ್ ಓರಿಯಂಟೆಡ್ ಸಬ್ಜೆಕ್ಟ್ ಸಿದ್ಧಪಡಿಸ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ರಾಕಿಂಗ್ ಸ್ಟಾರ್ ಅಭಿಮಾನಿಗಂತೂ ಯಶ್19 ಅಪ್‌ಡೇಟ್‌ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಈ ವರ್ಷ ಯಶ್ ಹುಟ್ಟುಹಬ್ಬಕ್ಕೆ ಸಿನಿಮಾ ಘೋಷಣೆ ಆಗುವ ನಿರೀಕ್ಷೆ ಇತ್ತು. ಆದರೆ ಅಭಿಮಾನಿಗಳಿಗೆ ನಟ ಯಶ್ ಬಹಿರಂಗ ಪತ್ರ ಬರೆದು ಮತ್ತಷ್ಟು ಸಮಯ ಬೇಕು ಎಂದು ಕೇಳಿದ್ದರು. ಮತ್ತೆ 4 ತಿಂಗಳು ಕಳೆದರೂ ಆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಲೇಟ್ ಆದ್ರು ದೊಡ್ಡದಾಗಿ ಏನೋ ಮಾಡುತ್ತಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಮಾಹಿತಿ ಸಿಗುವ ನಿರೀಕ್ಷೆಯಿದೆ.


Click it and Unblock the Notifications











