ಈ ವರ್ಷ ನೋಡಬೇಕಾದ ಹತ್ತು ಹಾಲಿವುಡ್ ಸಿನಿಮಾಗಳು
ಕೊರೊನಾ ಕಾರಣದಿಂದ ಕಳೆದ ವರ್ಷ ವಿಶ್ವದೆಲ್ಲೆಡೆ ಮನೊರಂಜನಾ ಕ್ಷೇತ್ರ ತೀವ್ರ ಇಕ್ಕಟ್ಟಿಗೆ ಸಿಲುಕಿತ್ತು. ದೊಡ್ಡ-ದೊಡ್ಡ ಸಿನಿಮಾಗಳೇ ಬಿಡುಗಡೆ ಆಗದೆ ಬಾಕ್ಸ್‌ನಲ್ಲಿಯೇ ದಿನಗಳು ಕಳೆಯಬೇಕಾಯಿತು. ಆದರೆ 2021 ರಲ್ಲಿ ಸಿನಿಮಾಗಳು ತೆರೆಗೆ ಬರಲು ಒಂದರ ಹಿಂದೊಂದು ಸಾಲುಗಟ್ಟಿ ನಿಂತಿವೆ.
ವಿಶ್ವದ ಅತಿ ಶ್ರೀಮಂತ ಸಿನಿಮಾ ಉದ್ಯಮವಾದ ಹಾಲಿವುಡ್ ಸಹ ಕೊರೊನಾದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಸಾವಿರಾರು ಕೋಟಿ ಬಜೆಟ್‌ನ ಸಿನಿಮಾಗಳು ಸಹ ಕೊರೊನಾಕ್ಕೆ ಹೆದರಿ ಚಿತ್ರಮಂದಿರದಿಂದ ದೂರ ಉಳಿದವು. ಆದರೆ ಈ ವರ್ಷ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಹಾಲಿವುಡ್‌ನ ಹಲವು ಪ್ರಮುಖ ಸಿನಿಮಾಗಳು 2021 ರಲ್ಲಿ ಚಿತ್ರಮಂದಿರಕ್ಕೆ ಬರಲು ತಯಾರಾಗಿವೆ. ಇವುಗಳ ಪೈಕಿ ಮಾರ್ಚ್ ತಿಂಗಳಿನಿಂದಾಚೆಗೆ ಬಿಡುಗಡೆ ಆಗಲಿರುವ ಹತ್ತು ಪ್ರಮುಖ ಹಾಲಿವುಡ್ ಸಿನಿಮಾಗಳ ಪಟ್ಟಿಯಲ್ಲಿ ಇಲ್ಲಿ ನೀಡಲಾಗಿದೆ.

'ಜಾಕ್ ಸ್ನೈಡರ್ಸ್ ಜಸ್ಟಿಸ್ ಲೀಗ್'
ಸೂಪರ್ ಮ್ಯಾನ್, ಬ್ಯಾಟ್‌ಮ್ಯಾನ್, ವಂಡರ್ ವುಮನ್, ಆಕ್ವಾಮ್ಯಾನ್, ಫ್ಲಾಷ್ ಇನ್ನೂ ಕೆಲವು ಸೂಪರ್ ಹೀರೋಗಳು ಸೇರಿಕೊಂಡು ಅನ್ಯಗ್ರಹದ ದುಷ್ಟಜೀವಿಗಳ ವಿರುದ್ಧ ಹೋರಾಡಿ ಭೂಮಿಯನ್ನು ರಕ್ಷಿಸುವ ಕತೆಯುಳ್ಳ 'ಜಾಕ್ ಸ್ನೈಡರ್ಸ್ ಜಸ್ಟಿಸ್ ಲೀಗ್' ಸಿನಿಮಾವು ಮಾರ್ಚ್ 18 ರಂದು ಬಿಡುಗಡೆ ಆಗಲಿದೆ. ಕೆಲವು ದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಹಾಗೂ ಎಚ್‌ಬಿಓ ಮ್ಯಾಕ್ಸ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಕಾಂಗ್ v/s ಗಾಡ್ಜಿಲ್ಲ
ಕಿಂಗ್ ಕಾಂಗ್ ಮತ್ತು ಗಾಡ್ಜಿಲ್ಲಾಗಳ ಪರಸ್ಪರ ಕಾದಾಟದ ಭಾರಿ ಬಜೆಟ್‌ನ ಸಿನಿಮಾ 'ಕಾಂಗ್ v/s ಗಾಡ್ಜಿಲ್ಲಾ' ಮಾರ್ಚ್ 24 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈ ಹಿಂದೆ ಕಿಂಗ್ ಕಾಂಗ್ ಹಾಗೂ ಗಾಡ್ಜಿಲ್ಲಾ ಗಳ ಕುರಿತಾಗಿ ಪ್ರತ್ಯೇಕವಾಗಿ ಸಿನಿಮಾಗಳು ಬಂದಿದ್ದವು. ಇದೇ ಮೊದಲ ಬಾರಿಗೆ ಎರಡೂ ಒಂದೇ ಸಿನಿಮಾದಲ್ಲಿ ನೋಡಲು ಸಿಗಲಿವೆ. ಕಾಂಗ್ ಮತ್ತು ಗಾಡ್ಜಿಲ್ಲಾ ನಡುವಿನ ಹೋರಾಟದ ಝಲಕ್ ಟ್ರೇಲರ್‌ನಲ್ಲಿ ನೀಡಲಾಗಿದ್ದು ಸಿನಿಮಾ ನೋಡುವ ಕುತೂಹಲವನ್ನು ಇದು ಹೆಚ್ಚಿಸಿದೆ.

'ಬ್ಲ್ಯಾಕ್ ವಿಡೋ' ಳ ಸಾಹಸ ಯಾತ್ರೆ
'ಅವೇಂಜರ್ಸ್' ಸಿನಿಮಾ ಸರಣಿ ಅಭಿಮಾನಿಗಳಿಗೆ 'ಬ್ಲ್ಯಾಕ್ ವಿಡೋ' ಪರಿಚಯದ ಅಗತ್ಯವಿಲ್ಲ. ನಾತಾಶಾ ರೊಮನಾವ್ ಅಲಿಯಾಸ್ ಬ್ಲ್ಯಾಕ್ ವಿಡೋ ಪಾತ್ರವು 'ಅವೇಂಜರ್ಸ್', 'ಐರನ್ ಮ್ಯಾನ್2' ಹಾಗೂ 'ಕ್ಯಾಪ್ಟನ್ ಅಮೆರಿಕ' ಸಿನಿಮಾಗಳಲ್ಲಿ ಇದೆ. ಇದೇ ಮೊದಲ ಬಾರಿಗೆ 'ಬ್ಲ್ಯಾಕ್ ವಿಡೋ' ಪಾತ್ರವನ್ನಷ್ಟೆ ಮುಖ್ಯವಾಗಿಟ್ಟುಕೊಂಡು ಪೂರ್ಣ ಪ್ರಮಾಣದ ಸಿನಿಮಾ ಮಾಡಲಾಗಿದೆ. ಸಿನಿಮಾವು ಮೇ 7ಕ್ಕೆ ಬಿಡುಗಡೆ ಆಗಲಿದೆ.

'ಫಾಸ್ಟ್ ಆಂಡ್ ಫ್ಯೂರಿಯಸ್ 9'
ಅತಿ ಹೆಚ್ಚು ಸರಣಿಗಳನ್ನು ಕಂಡ ಸಿನಿಮಾ ಎನಿಸಿಕೊಂಡಿರುವ 'ಫಾಸ್ಟ್ ಆಂಡ್ ಫ್ಯೂರಿಯಸ್' 9 ನೇ ಸರಣಿ ಬಿಡುಗಡೆಗೆ ತಯಾರಾಗಿದೆ. ಈ ವರ್ಷಾರಂಭದಲ್ಲಿಯೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲಾಗಿ ಈಗ ಜೂನ್ 25 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಜಾನ್ ಸೀನಾ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ 'ಫಾಸ್ಟ್ ಆಂಡ್ ಫ್ಯೂರಿಯಸ್' ನಲ್ಲಿ ಮರಣಿಸಿದ್ದ ಹಾನ್ ಲೀ ಪಾತ್ರ ಮತ್ತೆ ಬಂದಿದೆ. ಈ ಸಿನಿಮಾದಲ್ಲಿ ಡ್ವೇನ್ ಜೋನ್ಸ್ ನಿರ್ವಹಿಸುತ್ತಿದ್ದ ಲ್ಯೂಕ್ ಹಾಬ್ಸ್ ಪಾತ್ರ ಇದ್ದಂತಿಲ್ಲ.

'ಮಿಶನ್ ಇಂಪಾಸಿಬಲ್ 7' ಬಿಡುಗಡೆ ಯಾವಾಗ?
ಟಾಮ್ ಕ್ರೂಸ್ ನಟಿಸಿರುವ ವಿಶ್ವ ವಿಖ್ಯಾತ ಸಿನಿಮಾ ಸರಣಿ 'ಮಿಶನ್ ಇಂಪಾಸಿಬಲ್' ನ ಏಳನೇ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಕೊರೊನಾ ಕಾರಣಕ್ಕೆ ಚಿತ್ರೀಕರಣ ಸ್ಥಗಿತಗೊಳಿಸಿ ನಂತರ ಬಯೋ ಬಬಲ್ ಒಳಗೆ ಸಿನಿಮಾ ಚಿತ್ರೀಕರಣ ಮುಂದುವರೆಸಿ ಮುಗಿಸಿರುವ ಟಾಮ್ ಕ್ರೂಸ್ ರ ಬಹುನಿರೀಕ್ಷಿತ ಸಿನಿಮಾ ನವೆಂಬರ್ 19 ರಂದು ಬಿಡುಗಡೆ ಆಗಲಿದೆ.

ಜೇಮ್ಸ್ ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ'
ಜೇಮ್ಸ್ ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ' ಟ್ರೇಲರ್ ಬಿಡುಗಡೆ ಆಗಿ ವರ್ಷದ ಮೇಲಾಯ್ತು. ಕಳೆದ ವರ್ಷವೇ ಈ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು ಆದರೆ ಕೊರೊನಾ ಕಾರಣಕ್ಕೆ ಬಿಡುಗಡೆ ಆಗಲಿಲ್ಲ. ಇದೀಗ ಸೆಪ್ಟೆಂಬರ್ 30 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಕೆಲವು ದೇಶಗಳಲ್ಲಿ ಅಕ್ಟೋಬರ್ 8 ರಂದು ಬಿಡುಗಡೆ ಆಗಲಿದೆ ಈ ಸಿನಿಮಾ.

35 ವರ್ಷಗಳ ನಂತರ ಮತ್ತೆ ಬರುತ್ತಿದೆ 'ಟಾಪ್ ಗನ್'
1986 ರಲ್ಲಿ ಬಿಡುಗಡೆ ಆಗಿದ್ದ 'ಟಾಪ್ ಗನ್' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಅದೇ ಸಿನಿಮಾದ ಮುಂದುವರೆದ ಭಾಗ ಮತ್ತೆ ಬರುತ್ತಿದೆ ಸಿನಿಮಾದ ಹೆಸರು 'ಟಾಪ್ ಗನ್: ಮೆವರಿಕ್'. 1986 ರಲ್ಲಿ ನಟಿಸಿದ್ದ ಟಾಮ್ ಕ್ರ್ಯೂಸ್ ಈ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಸಿನಿಮಾವು ಜುಲೈ 2 ರಂದು ಸಿನಿಮಾ ಬಿಡುಗಡೆ ಆಗಲಿದೆ.

ಮತ್ತೆ ಬರುತ್ತಿದೆ 'ವೆನಮ್'
2018 ರಲ್ಲಿ ಬಿಡುಗಡೆ ಆಗಿದ್ದ 'ವೆನಮ್' ಸಿನಿಮಾವು ಈಗ ಮತ್ತೆ ಬರುತ್ತಿದೆ. 2018 ರಲ್ಲಿ ಬಿಡುಗಡೆ ಆಗಿದ್ದ 'ವೆನಮ್' ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿತ್ತು ಆದರೆ ಸಿನಿಮಾ ಹಣ ಗಳಿಸಿತ್ತು. ಹಾಗಾಗಿಯೇ ಈಗ 'ವೆನಮ್; ಲೆಟ್ ದೇರ್ ಬಿ ಕೆರೆಂಜ್' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾವು ಜೂನ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ದಟ್ಟಾರಣ್ಯದಲ್ಲಿ ಸಾಹಸಯಾತ್ರೆ 'ಜಂಗಲ್ ಕ್ರೂಸ್'
ವಿಶ್ವದ ಶ್ರೀಮಂತ ನಟ ಡ್ವೇನ್ ಜೋನ್ಸ್ ನಟಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಜಂಗಲ್ ಕ್ರೂಸ್' ಜುಲೈ 30 ರಂದು ವಿಶ್ವದೆಲ್ಲೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದ್ಭುತ ಸಾಹಸ ದೃಶ್ಯಗಳು, ಮಾಯಾವಿ ಲೋಕ, ಅರಣ್ಯದ ನಿಗೂಢತೆ, ರೊಮಾನ್ಸ್, ಹಾಸ್ಯ ಇನ್ನೂ ಹಲವಾರು ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ.

'ದಿ ಕಿಂಗ್ಸ್ ಮ್ಯಾನ್'
ಗೂಡಾಚಾರಿ ಸಂಸ್ಥೆಯ ಸದಸ್ಯರು ದೇಶಗಳ ನಡುವೆ ದ್ವೇಷ ಹುಟ್ಟಿಸಲು ಯತ್ನಿಸುವ ದುಷ್ಟರ ಗುಂಪನ್ನು ತಡೆಯುವ ಕತೆಯನ್ನು ಒಳಗೊಂಡ ಸಿನಿಮಾ 'ದಿ ಕಿಂಗ್ಸ್ ಮ್ಯಾನ್'. ಇದೇ ಹೆಸರಿನಲ್ಲಿ 2017 ರಲ್ಲಿ ಸಿನಿಮಾ ಒಂದು ಬಂದು ಹಿಟ್ ಆಗಿತ್ತು. ಅದೇ ಹೆಸರಿನಲ್ಲಿ ಇನ್ನಷ್ಟು ಆಕ್ಷನ್ ಭರಿತವಾಗಿ ಬರುತ್ತಿದೆ ಹೊಸ ಸಿನಿಮಾ. 'ದಿ ಕಿಂಗ್ಸ್ ಮ್ಯಾನ್' ಸಿನಿಮಾವು ಆಗಸ್ಟ್ 20 ರಂದು ಬಿಡುಗಡೆ ಆಗಲಿದೆ.
Recommended Video

ಈ ವರ್ಷ ಬಿಡುಗಡೆ ಆಗಲಿರುವ ಮುಖ್ಯ ಹಾಲಿವುಡ್ ಸಿನಿಮಾಗಳು
'ಮಾರ್ಟಲ್ ಕಾಂಬ್ಯಾಟ್', 'ನೋಬಡಿ', 'ಎ ಕ್ವೈಟ್ ಪ್ಲೇಸ್ 2', ರಾಯಾ ಆಂಡ್ ದಿ ಲಾಸ್ಟ್ ಡ್ರಾಗನ್ (ಅನಿಮೇಷನ್ ಸಿನಿಮಾ), ವಿಡಿಯೋ ಗೇಮ್ ಆಧರಿತ ಸಿನಿಮಾ 'ಫ್ರೀ ಗಯ್', ಅಂತರಿಕ್ಷದಲ್ಲಿ ನಡೆವ ಕತೆ ಆಧರಿಸಿದ 'ಡ್ಯೂನ್', 'ದಿ ಸೂಸೈಡಲ್ ಸ್ಕ್ವಾಡ್', 'ಕಾಂಜ್ಯುರಿಂಗ್ 3', 'ರಾಂಗ್ ಟರ್ನ್' ಇನ್ನೂ ಕೆಲವು ಸಿನಿಮಾಗಳು 2021 ರಲ್ಲಿ ಬಿಡುಗಡೆ ಆಗಲಿವೆ.


Click it and Unblock the Notifications











