ಹಿಂದು ಧರ್ಮದೆಡೆಗೆ ತಾರೆ ಜೂಲಿಯಾ ರಾಬರ್ಟ್ಸ್
ಆಸ್ಕರ್ ಪ್ರಶಸ್ತಿ ಪುರಸ್ಕೃತ ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಹಿಂದು ಧರ್ಮದೆಡೆಗೆ ಒಲವು ತೋರಿಸಿದ್ದಾರೆ. ತಮ್ಮ ಮಕ್ಕಳನ್ನು ಭಾರತಕ್ಕೆ ಕರೆತಂದು ದೇವರಿಗೆ ಮುಡಿ ಕೊಡಿಸುವುದಾಗಿ Oprah.com ಅಂತರ್ಜಾಲ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಾವು ಮತ್ತ್ತು ತಮ್ಮ ಮಕ್ಕಳು ಭಾರತದ ಬಗ್ಗೆ ಆಕರ್ಷಿತರಾಗಿದ್ದೇವೆ. ತಮ್ಮ ಮಗಳು ಹಜಲ್ ಹೇಳುವುದೇನೆಂದರೆ, ಅಮ್ಮ ನಾವು ದೊಡ್ದವರಾದ ಬಳಿಕ ಭಾರತದಲ್ಲೇ ಬದುಕೋಣ ಎನ್ನುತ್ತಾಳೆ ಎಂದು ತಿಳಿಸಿದ್ದಾರೆ. ಮಗ ಫಿನಾಸ್ ಈಗಾಗಲೆ ತಲೆ ಬೋಳಿಸಿಕೊಂಡಿದ್ದ. ಹಜಲ್ ಸಹ ತಲೆ ಬೋಳಿಸಿಕೊಳ್ಳಲು ನಿರ್ಧರಿಸಿದ್ದಾಳೆ.
ಭಾರತದಲ್ಲಿ ಮುಡಿ ಕೊಟ್ಟು ತಲೆ ಬೋಳಿಸಿಕೊಳ್ಳಲು ಹಜಲ್ ಆಸಕ್ತಿ ತೋರಿದ್ದಾಳೆ. ಪೂಜೆ ಪುನಸ್ಕಾರಗಳ ಬಗ್ಗೆಯೂ ಹಜಲ್‌ಗೆ ಸಾಕಷ್ಟು ಆಸಕ್ತಿ ಇದೆ. ಛಾಯಾಗ್ರಾಹಕ ಡೇನಿಯಲ್ ಮೋಡರ್ ಅವರನ್ನು ಮದುವೆಯಾದ ಬಳಿಕ ಜೂಲಿಯಾಗೆ ಮೂವರು ಮಕ್ಕಳು. ಹಜಲ್ ಮತ್ತು ಫಿನಾಸ್ ಐದು ವರ್ಷ ವಯಸ್ಸಿನ ಅವಳಿ ಜವಳಿಗಳು. ಹೆನ್ರಿಗೆ ಮೂರು ವರ್ಷ.
ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಭಾರತಕ್ಕೆ ಭೇಟಿ ನೀಡಿ, ಯಾವುದಾದರೂ ದೇವಸ್ಥಾನದಲ್ಲಿ ಮುಡಿ ಸಮರ್ಪಿಸಲು ಸಿದ್ಧತೆ ನಡೆಸಿರುವುದಾಗಿ ಜೂಲಿಯಾ ತಿಳಿಸಿದ್ದಾರೆ. ಹಿಂದು ಧರ್ಮದ ಬಗ್ಗೆ ನನಗೆ ಅದೇನೋ ವ್ಯಾಮೋಹ. 1973ರಲ್ಲಿ ನಿಧನರಾದ ಹನುಮಂತನ ಪರಮಭಕ್ತರಾಗಿದ್ದ ಹಿಂದು ಗುರು ಕರೋಲಿ ಬಾಬಾ ಅವರ ಭಾವಚಿತ್ರವನ್ನು ನೋಡಿದ ಬಳಿಕ ತಮಗೆ ಹಿಂದು ಧರ್ಮದಲ್ಲಿ ಆಸಕ್ತಿ ಬಂದಿದೆ ಎಂದು ರಾಬರ್ಟ್ಸ್ ಯಾವುದೇ ಅಳುಕಿಲ್ಲದೆ ಹೇಳಿದ್ದಾರೆ.


Click it and Unblock the Notifications











