ನಗುವುದೋ ಅಳುವುದೋ ಪಮೇಲಾ ನೀವೇ ಹೇಳಿ?
ಭಾರತೀಯ ನಾರಿಯರು ಹೀಗೂ ಸೀರೆ ಉಡಬಹುದು ಎಂಬುದನ್ನು ಹಾಲಿವುಡ್ ತಾರೆ 'ಬೇವಾಚ್' ಖ್ಯಾತಿಯ ಪಮೇಲಾ ಆಂಡರ್ ಸನ್ ತೋರಿಸಿಕೊಟ್ಟಿದ್ದಾರೆ. ಅವರು ಸೀರೆ ತೊಟ್ಟಿರುವುದು ನೋಡಿದರೆ ಸೀರೆ ಉಟ್ಟಿದ್ದಾರೋ ಅಥವಾ ಸುತ್ತಿದ್ದಾರೋ ಎಂಬ ಅನುಮಾನ ಕಾಡುವುದು ಸಹಜ.
ಹಾಲಿವುಡ್ಡಿನ ಪ್ಯಾರಾಮೌಂಟ್ ಸ್ಟೂಡಿಯೋದಲ್ಲಿ ಪೂರ್ಣಕುಂಭ ದರ್ಶನ ಮಾಡಿದ್ದ ಪಮೇಲಾ ಸೀರೆ ಜೊತೆಗೆ ಬಳೆ, ಜುಮುಕಿಯನ್ನೂ ತೊಟ್ಟು ಹೀಗೂ ಮಿಂಚಬಲ್ಲೆ ಎಂಬುದನ್ನು ತೋರಿಸಿದ್ದಾರೆ. ಕಲರ್ಸ್ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್ 4'ರಲ್ಲಿ ಅವರು ಹೀಗೆ ತಮ್ಮ ಬಾಹ್ಯ ಸೌಂದರ್ಯವನ್ನು ಸೀರೆಯಲ್ಲಿ ಪ್ರದರ್ಶಿಸಿದ್ದಾರೆ. ಆಕೆ ಶ್ವೇತ ಸೀರೆಯಲ್ಲಿ ಬಿಗ್ ಬಾಸ್‌ಗೆ ಅಡಿಯಿಡುತ್ತಿದ್ದಂತೆ ಯಾನಾ ಗುಪ್ತಾರ "ಬಾಬೂಜಿ ಝರಾ ಧೀರೇ ಛಲೋ..." ಎಂಬ ಗೀತೆ ಹಿನ್ನೆಲೆಯಲ್ಲಿ ಕೇಳಿಬರುತ್ತಿತ್ತು.
ಬಿಗ್ ಬಾಸ್ ಕಾರ್ಯಕ್ರಮದ ಉಳಿದ ಸ್ಪರ್ಧಿಗಳಿಗೆ ನಮಸ್ತೆ ಹೇಳುವ ಮೂಲಕ ಪಮೇಲಾ ವಿಶ್ ಮಾಡಿದರು. ಪಮೇಲಾರ ಹೊಸ ಅವತಾರ ಕಂಡ ಸ್ಪರ್ಧಿಗಳು ಕ್ಷಣಕಾಲ ಮೂಕ ವಿಸ್ಮಿತರಾದರು. ಒಟ್ಟು ಮೂರು ದಿನಗಳ ಕಾಲ ಪಮೇಲಾ ಬಿಗ್ ಬಾಸ್ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಒಟ್ಟಿನಲ್ಲಿ ಈಕೆ ಸೀರೆ ಉಟ್ಟಿರುವುದನ್ನು ನೋಡಿದ ಸಿನಿಕರು ಅಣ್ಣಾವ್ರ 'ಸಂಪತ್ತಿಗೆ ಸವಾಲ್' ಚಿತ್ರದ ಅಳುವುದೋ ನಗುವುದೋ ನೀವೇ ಹೇಳಿ ಎಂದು ಹಾಡುವಂತಾಗಿದೆ. ಭಾರತೀಯ ಸಂಸ್ಕೃತಿಯನ್ನು ಪಮೇಲಾ ಮೂರು ಕಾಸಿಗೆ ಹರಾಜು ಹಾಕಿದ್ದಾರೆ ಎಂಬ ಟೀಕೆಗಳು ಕೂಡ ಕೇಳಿಬಂದಿವೆ.
ವಯಸ್ಕರಿಗೆ ಮಾತ್ರ : ಬಿಗ್ ಬಾಸ್ 4 ಮತ್ತು ರಾಖಿ ಸಾವಂತ್ ಳ ರಾಖಿ ಕಾ ಇನ್ಸಾಫ್ ಟಿವಿ ರಿಯಾಲಿಟಿ ಶೋಗಳನ್ನು ರಾತ್ರಿ 11ರಿಂದ ಬೆಳಗಿನ 5 ಗಂಟೆಯ ಅವಧಿಯಲ್ಲಿ ಮಾತ್ರ ಪ್ರಸಾರ ಮಾಡಬೇಕೆಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ. ಈ ಎರಡೂ ಕಾರ್ಯಕ್ರಮಗಳು ಮಕ್ಕಳಿಗೆ ನೋಡಲು ಯೋಗ್ಯವಾಗಿಲ್ಲ ಎಂಬ ಕೂಗುಗಳು ಮಹಿಳಾ ಸಂಘಟನೆಗಳಿಂದ ಎದ್ದಿದ್ದವು. ಇವುಗಳಲ್ಲಿನ ಅಶ್ಲೀಲ ದೃಶ್ಯಾವಳಿಗಳನ್ನು ಗಮನಿಸಿರುವ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದೆ.


Click it and Unblock the Notifications











