ತ್ರಿಡಿಯಲ್ಲಿ ಮೋಡಿ ಮಾಡಲು ಬರುತ್ತಿದೆ ಟೈಟಾನಿಕ್
ಪ್ರೇಮಕಥೆ ಎಂದರೆ ಹೀಗಿರಬೇಕು ಎಂದು ತೋರಿಸಿ ಕೊಟ್ಟ ಹಾಲಿವುಡ್ ಚಿತ್ರ 'ಟೈಟಾನಿಕ್'. ಪ್ರೇಕ್ಷಕರ ಮೇಲೆ ಅಚ್ಚಳಿಯದ ಮುದ್ರೆ ಒತ್ತಿದ ಚಿತ್ರವಿದು. 1997ರಲ್ಲಿ ತೆರೆಕಂಡ ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳ ಸುರಿಮಳೆಯಾಗಿತ್ತು.
ಜೇಮ್ಸ್ ಕೆಮರಾನ್ ನಿರ್ದೇಶನಕ್ಕೆ, ಅವರ ತಾಂತ್ರಿಕ ಪ್ರತಿಭೆಗೆ ಕನ್ನಡಿ ಹಿಡಿದ ಚಿತ್ರ. ಲಿಯೊನಾರ್ಡೊ ಡಿಕಾಪ್ರಿಯಾ, ಕೇಟ್ ವಿನ್ಸ್‌ಲೆಟ್ ಅದ್ಭುತ ಅಭಿನಯ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಇಷ್ಟೆಲ್ಲಾ ಹೇಳಲು ಕಾರಣ, ಈಗ ಇದೇ ಚಿತ್ರ ತ್ರಿಡಿಯಲ್ಲಿ ಮೂಡಿಬರುತ್ತಿದೆ.
'ಅವತಾರ್' ಚಿತ್ರದ ಬಳಿಕ ಜೇಮ್ಸ್ ತಮ್ಮ 'ಟೈಟಾನಿಕ್' ಚಿತ್ರವನ್ನು ತ್ರಿಡಿ ರೂಪಕ್ಕೆ ತರುತ್ತಿದ್ದಾರೆ. ಇದಕ್ಕಾಗಿ ಮೂರು ವರ್ಷಗಳ ಸುದೀರ್ಘ ಸಮಯ ವ್ಯಯಿಸಿ ತ್ರಿಡಿಯಲ್ಲಿ ಚಿತ್ರವನ್ನು ರೂಪಿಸಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಟ್ವಿಂಟಿಯತ್ ಸೆಂಚುರಿ ಫಾಕ್ಸ್ ಸಂಸ್ಥೆ 'ಟೈಟಾನಿಕ್' ತ್ರಿಡಿ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಸಂಸ್ಥೆಯ ಪ್ರತಿನಿಧಿ ಮಾತನಾಡುತ್ತಾ, "ಟೈಟಾನಿಕ್ ಚಿತ್ರವನ್ನು ತ್ರಿಡಿಯಲ್ಲಿ ನೋಡುವುದು ಮರೆಯಲಾಗದ ಅನುಭವ. ತಾಂತ್ರಿಕವಾಗಿ ಅತ್ಯುನ್ನತ ಗುಣಮಟ್ಟದೊಂದಿಗೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಮತ್ತೊಮ್ಮೆ ಜೇಮ್ಸ್ ಮೋಡಿ ಪ್ರೇಕ್ಷಕರನ್ನು ರಂಜಿಸಲಿದೆ" ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











