Cannes Film Festival 2023: ಫ್ರಾನ್ಸ್ ಸಿನಿಮಾ ಹಬ್ಬಕ್ಕೆ ತಯಾರಿ ಹೇಗಿದೆ? ಈ ಬಾರಿ ಭಾರತದಿಂದ ಯಾರೆಲ್ಲಾ ಭಾಗಿ ಆಗ್ತಾರೆ?
ಸಿನಿಮಾ ಪ್ರಪಂಚದಲ್ಲಿ ಪ್ರತಿಷ್ಠಿತವಾಗಿ ಭಾವಿಸುವ ಕೇನ್ಸ್ ಚಿತ್ರೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ(ಮೇ 16)ಯಿಂದ ಮೇ 27ರ ವರೆಗೆ ಅದ್ಧೂರಿಯಾಗಿ ಈ ಚಿತ್ರೋತ್ಸವ ನಡೆಯಲಿದೆ. ವಿವಿಧ ದೇಶಗಳ ತಾರೆಯರು, ಚಿತ್ರರಂಗದ ಪ್ರಮುಖರು ಈ ಉತ್ಸವದಲ್ಲಿ ಹಾಜರಾಗಿ ರಂಗೇರಿಸಲಿದ್ದಾರೆ. ಡಿಸೈನರ್‌ಗಳು ಸಿದ್ಧಪಡಿಸಿದ ಉಡುಗೆಗಳಲ್ಲಿ ರೆಡ್ ಕಾರ್ಪೆಟ್ ಮೇಲೆ ನಟಿಯರ ಬೆಡಗು ಬಿನ್ನಾಣ ಪ್ರಮುಖ ಆಕರ್ಷಣೆ ಆಗಲಿದೆ.
ಫ್ಯಾಷನ್‌ಗೆ, ರೆಡ್ ಕಾರ್ಪೆಟ್ ಲುಕ್‌ಗೆ ಅಂತರಾಷ್ಟ್ರೀಯ ಚಿತ್ರಪ್ರಪಂಚಕ್ಕೆ ಕೇನ್ಸ್ ಚಿತ್ರೋತ್ಸವ ದೊಡ್ಡ ವೇದಿಕೆ. ನಟ- ನಟಿಯರು ಮಾಡೆಲ್‌ಗಳು ಈ ಉತ್ಸವದಲ್ಲಿ ಭಾಗಿ ಆಗಿ ರೆಡ್ ಕಾರ್ಪೆಟ್‌ನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಮೋಡಿ ಮಾಡುತ್ತಾರೆ. ದೊಡ್ಡ ದೊಡ್ಡ ಡಿಸೈನರ್‌ಗಳು, ಬ್ರ್ಯಾಂಡ್‌ಗಳು ಇವರಿಗಾಗಿ ಉಡುಗೆಗಳನ್ನು ಸಿದ್ಧಪಡಿಸುತ್ತಾರೆ. ಇನ್ನು ಕೇನ್ಸ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ಅಷ್ಟು ಸುಲಭವಾಗಿ ಅವಕಾಶ ಸಿಗುವುದಿಲ್ಲ. ಇಂತಾದೊಂದು ಅವಕಾಶಕ್ಕಾಗಿ ಬಾಲಿವುಡ್ ಬೆಡಗಿಯರು ಕೂಡ ಕಾತರದಿಂದ ಕಾಯುತ್ತಿರುತ್ತಾರೆ. ಫ್ರಾನ್ಸ್‌ನಲ್ಲಿ 76ನೇ ಕೇನ್ಸ್ ಚಿತ್ರೋತ್ಸವ ಸಕಲ ತಯಾರಿ ನಡೆದಿದೆ.

ನಿರ್ದೇಶಕ ಪೌಲ್ ಡೇನೊ, ಅಫ್ಘಾನಿಸ್ತಾನದ ಕಥೆಗಾರ, ನಿರ್ದೇಶಕ ಅತಿಖ್ ರಹೀಮಿ ಸೇರಿದಂತೆ ಹಲವರು ಈ ಬಾರಿ ಚಿತ್ರೋತ್ಸವದ ಪ್ಯಾನಲ್‌ನಲ್ಲಿ ಇದ್ದಾರೆ. ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಸೋನಂ ಕಪೂರ್, ಆಲಿಯಾ ಭಟ್ ಸೇರಿದಂತೆ ಹಲವರು ಈ ಚಿತ್ರೋತ್ಸವದಲ್ಲಿ ಭಾಗಿ ಆಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಖುಷಿಪಟ್ಟಿದ್ದರು. ಕಳೆದ ವರ್ಷ ತಮನ್ನಾ, ಪೂಜೆ ಹೆಗ್ಡೆ ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ಮಿರಿ ಮಿರಿ ಮಿಂಚಿದ್ದರು. ತಮನ್ನಾ ಕಪ್ಪು ಬಣ್ಣದ ಗೌನ್‌ನಲ್ಲಿ ಗಮನ ಸೆಳೆದರೆ, ಪೂಜಾ ಬಿಳಿ ಬಣ್ಣದ ದೊಡ್ಡ ಗೌನ್‌ನಲ್ಲಿ ನಗೆ ಬೀರಿದ್ದರು.
ಇನ್ನು ತಾರೆಯರ ಫೋಟೊ, ವಿಡಿಯೋಗಳನ್ನು ಕ್ಲಿಕ್ಕಿಸಲು ಪಾಪರಾಜಿಗಳ ದೊಡ್ಡ ದಂಡೇ ಅಲ್ಲಿ ನೆರೆದಿರುತ್ತದೆ. ಈ ಬಾರಿ ಭಾರತದಿಂದ ಅನುಷ್ಕಾ ಶರ್ಮಾ ಕೇನ್ಸ್ ಚಿತ್ರೋತ್ಸವದಲ್ಲಿ ಭಾಗಿ ಆಗುವುದು ಪಕ್ಕಾ ಆಗಿದೆ. ಜ್ಯೂರಿಯಿಂದ ಈಗಾಗಲೇ ವಿರಾಟ್ ಕೊಹ್ಲಿ ಪತ್ನಿಗೆ ಬುಲಾವ್ ಬಂದಿದೆ. 'ಟೈಟಾನಿಕ್' ಸಿನಿಮಾ ನಟಿ ಕೇನ್ಸ್ ವಿನ್ಸ್‌ಲೆಟ್ ಜೊತೆ ಸೇರಿ ಕೆಲ ಮಹಿಳಾ ವಿಜೇತರಿಗೆ ಅನುಷ್ಕಾ ಶರ್ಮಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 2017ರಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಮಾನುಷಿ ಚಿಲ್ಲಾರ್, ಶಾನನ್ ಕೆ ಮತ್ತು ಡಾಲಿ ಸಿಂಗ್ ಕೂಡ ಭಾಗಿ ಆಗಲಿದ್ದಾರೆ.

ಪ್ರಿಯಾಂಕ ಚೋಪ್ರಾ, ಐಶ್ವರ್ಯಾ ರೈ ಹಾಗೂ ಅದಿತಿ ಹೈದರಿ ಕೂಡ ಕೇನ್ಸ್ ಚಿತ್ರೋತ್ಸವದ ಸಿನಿಮಾ ಪ್ರೀಮಿಯರ್‌ಗಳಲ್ಲಿ ಭಾಗಿ ಆಗುವ ಸಾಧ್ಯತೆಯಿದೆ. ಐಶ್, ವಿದ್ಯಾ ಬಾಲನ್, ಶರ್ಮಿಳಾ ಟ್ಯಾಗೋರ್ ಮತ್ ದೀಪಿಕಾ ಪಡುಕೋಣೆ ಸೇರಿದಂತೆ ಕೆಲವರು ಈ ಹಿಂದೆಫ್ರೆಂಚ್ ಉತ್ಸವದ ಜ್ಯೂರಿಗಳಾಗಿ ಭಾಗವಹಿಸಿದ್ದರು. ಆದರೆ ಈ ವರ್ಷ ಪ್ಯಾನಲ್‌ನಲ್ಲಿ ಭಾರತೀಯರಿಗೆ ಅವಕಾಶ ಸಿಕ್ಕಿಲ್ಲ. ನಿರ್ದೇಶಕ ಅನುರಾಗ್ ಕಶ್ಯಪ್ ಅವರ 'ಕೆನಡಿ' ಚಿತ್ರೋತ್ಸವದ ಮಿಡ್‌ನೈಟ್ ಸ್ಕ್ರೀನಿಂಗ್ಸ್ ವಿಭಾಗಕ್ಕೆ ಆಯ್ಕೆಯಾಗಿದೆ.
ರಾಹುಲ್ ರಾಯ್ ಅಭಿನಯದ 'ಆಗ್ರಾ' ಚಿತ್ರವು ಚಿತ್ರೋತ್ಸವದ ಡೈರೆಕ್ಟರ್ಸ್ ಫೋರ್ಟ್‌ನೈಟ್ ವಿಭಾಗದಲ್ಲಿ ಪ್ರದರ್ಶನ ಆಗಲಿದೆ. ಇನ್ನು ಮಣಿಪುರಿ ಸಿನಿಮಾ ನಿರ್ಮಾಪಕ ಅರಿಬಮ್ ಶ್ಯಾಮ್ ಶರ್ಮಾ ಅವರ 1990ರ 'ಇಶಾನೌ' ಸಿನಿಮಾ ಈ ವರ್ಷ ಕೇನ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಕೇನ್ಸ್ ಕ್ಲಾಸಿಕ್ ವಿಭಾಗದಲ್ಲಿ ಮೇ 19 ರಂದು ರೆಡ್ ಕಾರ್ಪೆಟ್ ವರ್ಲ್ಡ್ ಪ್ರೀಮಿಯರ್‌ಗೆ ಅಧಿಕೃತವಾಗಿ ಆಯ್ಕೆಯಾಗಿದೆ. ಇದು ಕೇನ್ಸ್ ಚಿತ್ರೋತ್ಸವ ಕ್ಲಾಸಿಕ್ ವಿಭಾಗದ ಅಡಿಯಲ್ಲಿ ಪರಿಗಣಿಸಲ್ಪಟ್ಟ ಏಕೈಕ ಭಾರತೀಯ ಚಲನಚಿತ್ರವಾಗಿದೆ.


Click it and Unblock the Notifications











