ತಂದೆಯಾಗ್ತಿದ್ದಾರೆ 83 ವರ್ಷದ ಸ್ಟಾರ್ ನಟ; ಗರ್ಲ್‌ಫ್ರೆಂಡ್ ವಯಸ್ಸು ಕೇವಲ 29!
ಹಾಲಿವುಡ್‌ನ ದಿಗ್ಗಜ ನಟ 83 ವರ್ಷದ ಅಲ್ ಪಸಿನೋ ತನ್ನ 29 ವರ್ಷ ವಯಸ್ಸಿನ ಪ್ರೇಯಸಿ ನೂರ್ ಅಲ್‌ಫಲ್ಲಾಹ್ ಜತೆ ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹರಿದಾಡುತ್ತಿದ್ದವು.
ಕಳೆದ 2022ರ ಏಪ್ರಿಲ್ ತಿಂಗಳಿನಲ್ಲಿ ಇಬ್ಬರು ಒಟ್ಟಿಗೆ ಔತಣಕೂಟವೊಂದರಲ್ಲಿ ಕಾಣಿಸಿಕೊಂಡಾಗಿನಿಂದ ಈ ಸುದ್ದಿ ಹುಟ್ಟಿಕೊಂಡಿತ್ತು. ಅನೇಕ ಬಿಗ್ಗೆಸ್ಟ್ ಹಿಟ್ ಚಿತ್ರಗಳನ್ನು ನೀಡಿ ಹಾಲಿವುಡ್‌ನ ಮೇರುನಟ ಎನಿಸಿಕೊಂಡಿರುವ ಅಲ್ ಪಸಿನೋ ತನ್ನ ಹಿರಿಯ ಮಗಳಿಗಿಂತ ಕಿರಿಯ ವಯಸ್ಸಿನ ಯುವತಿ ಜತೆ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿಯೇ ವೈರಲ್ ಆಗಿತ್ತು, ಚರ್ಚೆಗೀಡಾಗಿತ್ತು ಹಾಗೂ ಟ್ರೋಲ್ ಕೂಡ ಆಗಿತ್ತು.

ಇದೀಗ ಇಬ್ಬರ ನಡುವಿನ ಈ ಡೇಟಿಂಗ್ ಸಂಬಂಧ ಇನ್ನೂ ದೊಡ್ಡ ಬೆಳವಣಿಗೆಯನ್ನು ಪಡೆದುಕೊಂಡಿದ್ದು, ಅಲ್ ಪಸಿನೋ ಹಾಗೂ ನೂರ್ ಫಲ್ಲಾಹ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಸೆಲೆಬ್ರಿಟಿಗಳ ಜೀವನದ ಸುದ್ದಿಗಳನ್ನು ಬಹಿರಂಗಪಡಿಸುವುದರಲ್ಲಿ ಎತ್ತಿದ ಕೈ ಆಗಿರುವ ಟಿಎಂಜೆಡ್ ವೆಬ್ ತಾಣ ಈ ಸುದ್ದಿಯನ್ನು ಮೊದಲು ಬಿತ್ತರಿಸಿತ್ತು.
ಬಳಿಕ ಅಲ್ ಪಸಿನೋ ಅವರ ಪ್ರತಿನಿಧಿ ಒಬ್ಬರು ದ ಪೀಪಲ್ ವೆಬ್ ತಾಣಕ್ಕೆ ಇದರ ಕುರಿತಾಗಿ ಮಾಹಿತಿ ನೀಡಿದ್ದಾರೆ ಎಂದೂ ಸಹ ಹೇಳಲಾಗಿದ್ದು, ಈ ಸುದ್ದಿಗಳು ನಿಜ ಎಂಬುದನ್ನು ತಿಳಿಸಿವೆ. 29 ವರ್ಷದ ನೂರ್ ಫಲ್ಲಾಹ್ ಚಲನಚಿತ್ರ ನಿರ್ಮಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನೊಂದು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ.
ಇನ್ನು ಈ ಮಗು ಅಲ್ ಪಸಿನೋ ಅವರ ನಾಲ್ಕನೇ ಕುಡಿಯಾಗಲಿದ್ದು, ಅಲ್ ಪಸಿನೋ ಅವರ ಮಾಜಿ ಪ್ರೇಯಸಿ ನಟನಾ ತರಬೇತುಗಾರ್ತಿ ಜಾನ್ ಟೆರ್ರೆಂಟ್ ಅವರಿಗೆ ಜನಿಸಿದ ಜೂಲಿ ಮೇರಿ ಮೊದಲ ಮಗಳಾಗಿದ್ದಾಳೆ. ಈಕೆಗೆ 33 ವರ್ಷ ವಯಸ್ಸಾಗಿದೆ. ಸದ್ಯ ಈ ವಿಷಯ ಸಹ ಟ್ರೋಲ್ ಆಗುತ್ತಿದ್ದು, ಹಿರಿಯ ಮಗಳ ವಯಸ್ಸಿವಳಿಗಿಂತ ಕಿರಿಯ ವಯಸ್ಸಿನ ಪ್ರೇಯಸಿಯಿಂದ ಅಲ್ ಪಸಿನೋ ತನ್ನ ನಾಲ್ಕನೇ ಮಗುವನ್ನು ಪಡೆಯುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.
ಅಷ್ಟೇ ಅಲ್ಲದೇ ತನ್ನ ಮತ್ತೋರ್ವ ಮಾಜಿ ಪ್ರೇಯಸಿ ಬೆವೆರ್ಲಿ ಡಿ ಏಂಜೆಲೋ ಜತೆ 1997ರಿಂದ 2003ರವರೆಗೆ ಡೇಟಿಂಗ್ ಮಾಡುತ್ತಿದ್ದ ಅಲ್ ಪಸಿನೋಗೆ ಆಂಟನ್ ಹಾಗೂ ಒಲಿವಿಯಾ ಎಂಬ ಇಬ್ಬರು ಅವಳಿ ಜವಳಿ ಮಕ್ಕಳಿದ್ದಾರೆ. ಹೀಗೆ 83ರ ವಯಸ್ಸಿನ ಮೂರು ಬೆಳೆದುನಿಂತ ಮಕ್ಕಳ ತಂದೆ, ಸ್ಟಾರ್ ನಟ ಅಲ್ ಫಸಿನೋ ಈ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮೂಲಕ ಇದೇ ವರ್ಷ 79ನೇ ವಯಸ್ಸಿನಲ್ಲಿ ತಂದೆಯಾಗಿದ್ದ ಸ್ಟಾರ್ ನಟ ರಾಬರ್ಟ್ ಡಿ ನಿಲ್ರೋ ಅವರನ್ನೇ ಹಿಂದಿಕ್ಕಿದ್ದಾರೆ.


Click it and Unblock the Notifications











