For Quick Alerts
  ALLOW NOTIFICATIONS  
  For Daily Alerts

  ವೆನಿಸ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸಹಾಯಕ್ಕೆ ಅಂಗಲಾಚಿದ ಅಫ್ಘಾನಿ ನಿರ್ದೇಶಕಿಯರು

  |

  ರಕ್ಕಸ ತಾಲಿಬಾನಿಗಳ ಕೈಗೆ ಸಿಕ್ಕಿದ ಅಫ್ಘಾನಿಸ್ತಾನದ ದೇಶದ ಸ್ಥಿತಿ ಹೀನಾಯವಾಗಿಬಿಟ್ಟಿದೆ. ವ್ಯಕ್ತಿ ಸ್ವಾತಂತ್ರ್ಯ ಬಂದೂಕು ನಳಿಕೆಯ ಮುಂದೆ ಮಂಡಿ ಊರಿದೆ. ಸ್ವಾತಂತ್ರ್ಯ ಇಲ್ಲದ ಕಡೆ ಕಲೆ-ಸಾಹಿತ್ಯ ಅರಳುವುದು ಅಸಾಧ್ಯ. ಹಾಗಾಗಿಯೇ ಅಲ್ಲಿನ ಕಲಾವಿದರು ವಿಶ್ವದ ಮುಂದೆ ಅಂಗಲಾಚುತ್ತಿದ್ದಾರೆ, ನಮ್ಮ ದೇಶವನ್ನು ರಕ್ಷಿಸಿ, ಇಲ್ಲಿನ ಜನರನ್ನು ರಕ್ಷಿಸಿ ಎಂದು.

  ವೆನಿಸ್‌ ಸಿನಿಮೋತ್ಸವದಲ್ಲಿ ಅಫ್ಘಾನಿಸ್ತಾನದ ಸಿನಿಮಾ ನಿರ್ದೇಶಕಿಯರು ಭಾಗವಹಿಸಿದ್ದು, ವಿಶ್ವ ಸಿನಿಮಾ ಕರ್ಮಿಗಳ ಮುಂದೆ ತಮ್ಮ ದೇಶವನ್ನು ರಕ್ಷಿಸುವಂತೆ, ಅಫ್ಘಾನಿಸ್ತಾನದ ಜನರನ್ನು, ಅಲ್ಲಿನ ಕಲೆಯನ್ನು, ಸಂಸ್ಕೃತಿಯನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.

  ಅಫ್ಘಾನಿಸ್ತಾನದ ಸಿನಿಮಾ ಬೋರ್ಡ್‌ನ ಮೊದಲ ಮಹಿಳಾ ಅಧ್ಯಕ್ಷೆ ಸಹಾರಾ ಕರಿಮಿ ಹಾಗೂ ಸಾಕ್ಷ್ಯಚಿತ್ರ ನಿರ್ದೇಶಕಿ ಸಹಾರಾ ಮನಿ ಮಾತನಾಡಿ, ''ಸಂಸ್ಕೃತಿ ಇಲ್ಲದ ದೇಶವು ತನ್ನ ಗುರುತನ್ನು ಕಳೆದುಕೊಳ್ಳುತ್ತದೆ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

  ''ಕಲಾವಿದರಿಲ್ಲದ ದೇಶ, ಸಿನಿಮಾ ಕರ್ಮಿಗಳಿಲ್ಲ ದೇಶ ಹೇಗೆ ತಾನೆ ತನ್ನ ತನವನ್ನು ಉಳಿಸಿಕೊಳ್ಳಲು ಸಾಧ್ಯ, ತನ್ನ ತನವನ್ನು ಮುಂದಿನ ಪೀಳಿಗೆಗೆ ದಾಟಿಸಲು ಸಾಧ್ಯ?'' ಎಂದು ಅಫ್ಘಾನಿಸ್ತಾನದ ಸಿನಿಮಾ ಬೋರ್ಡ್‌ನ ಮೊದಲ ಮಹಿಳಾ ಅಧ್ಯಕ್ಷೆ ಸಹಾರಾ ಕರೀಮಿ ಪ್ರಶ್ನೆ ಮಾಡಿದ್ದಾರೆ.

  ವೆನಿಸ್ ಚಿತ್ರೋತ್ಸವದ ಆಯೋಜಕರು ಅಫ್ಘಾನ್ ಮಹಿಳಾ ಸಿನಿಮಾ ಕರ್ಮಿಗಳ ಜೊತೆಗೆ ವಿಶೇಷ ಸಂವಾದವನ್ನು ಆಯೋಜಿಸಿದ್ದರು. ಅಫ್ಘಾನ್‌ನ ಪರಿಸ್ಥಿತಿ ಎಲ್ಲರಿಗೂ ಗೊತ್ತಾಗಲಿ, ಹೆಚ್ಚು-ಹೆಚ್ಚು ಬೆಂಬಲ ಅಫ್ಘಾನಿಯರಿಗೆ ದೊರಕಲಿ ಎಂಬ ಉದ್ದೇಶದಿಂದ ಸಂವಾದವನ್ನು ಆಯೋಜಿಸಲಾಗಿತ್ತು.

  ''ಅಫ್ಘಾನ್‌ ಬಗ್ಗೆ ಇದ್ದ ಪೂರ್ವಾಗ್ರಹ ಪೀಡಿತ ಅಭಿಪ್ರಾಯವನ್ನು ಬದಲಾಯಿಸಿ ನಿಜವಾದ ಅಫ್ಘಾನಿಸ್ತಾನದ ಮುಖವನ್ನು ವಿಶ್ವದ ಎದುರು ತೆರೆದಿಡುವುದು ನಮ್ಮ ಕನಸಾಗಿತ್ತು. ಅಫ್ಘಾನಿಸ್ತಾನದ ಬಗ್ಗೆ ಕ್ಲೀಷೆಗಳನ್ನು ಕೇಳಿ-ಕೇಳಿ ಸಾಕಾಗಿ ಹೋಗಿತ್ತು. ಆದರೆ ಈಗ ಪರಿಸ್ಥಿತಿ ನಮಗೆ ವ್ಯತಿರಿಕ್ತವಾಗಿದೆ'' ಎಂದರಿದ್ದಾರೆ ಕರೀಮಿ.

  ''ನಾವು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡಿ ನಮ್ಮ ದೇಶದ ಕತೆ, ನಮ್ಮ ದೇಶದ ಜನರ ಕತೆಗಳನ್ನು ಭಿನ್ನ-ಭಿನ್ನ ಆಯಾಮದ ಮೂಲಕ ವಿಶ್ವದ ಎದುರು ತೆರೆದಿಡುವ ಉತ್ಸಾಹದಲ್ಲಿದ್ದೆವು. ನಿಜವಾದ ಅಫ್ಘಾನಿಸ್ತಾನವನ್ನು ವಿಶ್ವಕ್ಕೆ ಪರಿಚಯಿಸುವ ಹುಮ್ಮಸ್ಸಿನಲ್ಲಿದ್ದೆವು ಆದರೆ ಎಲ್ಲವೂ ಬದಲಾಗಿ ಹೋಯಿತು'' ಎಂದಿದ್ದಾರೆ ಕರೀಮಿ.

  Afghanistan Film Makers Urge Help From World In Venice Film Festival

  ''ಹಲವು ಸಿನಿಮಾಗಳ ನಿರ್ಮಾಣವನ್ನು ನಾವು ಆರಂಭಿಸಿದ್ದೆವು. ಹಲವು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಹಲವು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಅಫ್ಘಾನಿ ಸಿನಿಮಾ ಸಂಗ್ರಹಾಲಯದಲ್ಲಿದ್ದ ಸಿನಿಮಾಗಳಿಗೆ ಹಾನಿ ಮಾಡಲಾಗಿದೆ. ಸಿನಿಮಾ ಕಾರ್ಯಾಗಾರಗಳನ್ನು ರದ್ದು ಮಾಡಲಾಗಿದೆ, ಸಿನಿಮಾ ವಿಮೆಗಳನ್ನು ರದ್ದು ಮಾಡಲಾಗಿದೆ ಎಂದು ಕರೀಮಿ ಬೇಸರ ವ್ಯಕ್ತಪಡಿಸಿದರು.

  'ನಮ್ಮ ಸಂಗೀತದ ಮೂಲಕ, ನಮ್ಮ ಸಂಸ್ಕೃತಿಯ ಮೂಲಕ, ನಮ್ಮ ಸಿನಿಮಾಗಳ ಮೂಲಕ ನಾವು ನಮ್ಮದೇ ಆದ ಗುರುತನ್ನು ವಿಶ್ವದಲ್ಲಿ ಹೊಂದಿದ್ದೆವು ಆದರೆ ಇಂದು ನಾವು ಮನೆಯೇ ಇಲ್ಲದ ನಿರ್ಗತಿಕರಾಗಿದ್ದೀವಿ'' ಎಂದು ಸಂವಾದ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದರು ಕರೀಮಿ. ಕೆಲವೇ ಗಂಟೆಗಳಲ್ಲಿ ಹೇಗೆ ತಮ್ಮ ಜೀವನ ಬದಲಾಗಿ ಹೋಯ್ತು, ದೇಶ ಬಿಟ್ಟು ಹೊರಡುವ ನಿರ್ಣಯ ತೆಗೆದುಕೊಂಡಿದ್ದು ಹೇಗೆ, ದೇಶ ಬಿಟ್ಟು ಬಂದಿದ್ದು ಹೇಗೆ ಎಂಬುದನ್ನು ಸಹ ಅವರು ವಿವರಿಸಿದರು.

  ಕರೀಮಿ, ತಮ್ಮ ಇತರ ಕೆಲವು ಸಂಬಂಧಿಕರೊಟ್ಟಿಗೆ ಆಗಸ್ಟ್ 15 ರಂದು ಅಫ್ಘಾನಿಸ್ತಾನ ಬಿಟ್ಟು ಬಂದರು. ಕರೀಮಿ ಹೇಳಿರುವಂತೆ, ಅಫ್ಘಾನಿಸ್ತಾನದ ಸಾವಿರಾರು ಮಂದಿ ಸಿನಿಮಾ ಕರ್ಮಿಗಳು ತಮ್ಮ ಭದ್ರತೆಯ ಬಗ್ಗೆ ಭೀತಿ ಪಡುತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಡಿಲೀಟ್ ಮಾಡಿ ಇರುವ ಸ್ಥಳಗಳನ್ನು, ಆಸ್ತಿಗಳನ್ನು ಬಿಟ್ಟು ಬೇರೆ ಸ್ಥಳಗಳಿಗೆ ಪರಾರಿಯಾಗುತ್ತಿದ್ದಾರೆ ಎಂದು ಸಿನಿಮಾ ಕರ್ಮಿಗಳ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ ಕರೀಮಿ.

  ತಾಲಿಬಾನ್ ಕಾಬೂಲ್‌ಗೆ ಬರುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದ ಕರೀಮಿ ದೇಶ ಸಂಕಷ್ಟದಲ್ಲಿರುವುದಾಗಿ ಹೇಳಿದ್ದರು. ತಾಲಿಬಾನ್ ಕಾಬೂಲ್ ಪ್ರವೇಶ ಮಾಡಿದ ಬಳಿಕ ಕರೀಮಿ ಬೀದಿಯಲ್ಲಿ ಆತಂಕದಿಂದ ಓಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಕೊನೆಗೆ ಆಗಸ್ಟ್ 15 ರಂದು ಅಫ್ಘಾನಿಸ್ತಾನ ಬಿಟ್ಟು ಹೊರಟ ಕರೀಮಿ ಈಗ ಉಕ್ರೇನ್‌ ದೇಶದಲ್ಲಿ ನಿರಾಶ್ರಿತಳಾಗಿ ಬದುಕುತ್ತಿದ್ದಾರೆ.

  English summary
  Afghanistan film makers urge for help from world film makers in Venice film festival. They said do not give up on Afghanistan people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X