ಹಾಲಿವುಡ್‌ಗೆ ಹಾರಿದ ಆಲಿಯಾ ಭಟ್, ವಂಡರ್ ವುಮನ್ ಜೊತೆ ಕಾಳಗ!
ಬಾಲಿವುಡ್ ನಟಿ ಆಲಿಯಾ ಭಟ್ ತನ್ನ ಅಭಿನಯದ ಮೂಲಕ ಈಗಾಗಲೇ ಸಿನಿಮಾರಂಗದಲ್ಲಿ ದೊಡ್ಡ ಛಾಪು ಮೂಡಿಸಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಇರುವ ಸ್ಟಾರ್ ನಟಿಯರ ಸಾಲಿನಲ್ಲಿ ಅಲಿಯಾ ಮೊದಲು ನಿಲ್ಲುತ್ತಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ 'ಗಂಗೂಬಾಯಿ ಕಠಿಯಾವಾಡಿ' ಚಿತ್ರದ ಯಶಸ್ಸಿನಲ್ಲಿ ಆಲಿಯಾ ಭಟ್ ತೇಲಾಡುತ್ತಿದ್ದಾರೆ.
Recommended Video
ಆಲಿಯಾ RRR ಚಿತ್ರದ ಮೂಲಕ ಸೌತ್ ಚಿತ್ರರಂಗಕ್ಕೂ ಕೂಡ ಎಂಟ್ರಿ ಕೊಡ್ತಿದ್ದಾರೆ. ಆದರೆ ಇತ್ತೀಚೆಗೆ ಆಲಿಯಾ ಭಟ್ ಹಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಈಗ ಆ ಸುದ್ದಿ ನಿಜವಾಗಿದೆ. ಆಲಿಯಾ ಭಟ್ ಈಗ ಹಾಲಿವುಡ್‌ಗೆ ಹಾರಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ಮಾಡುತ್ತಿರುವ ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ವಿಚಾರವನ್ನು ಬಾಲಿವುಡ್‌ನ ಖ್ಯಾತ ವಿಮರ್ಶಕ ತರಣ್ ಆದರ್ಶ್ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ವಿಶೇಷ ಎಂದರೆ ಈ ಚಿತ್ರದಲ್ಲಿ ಆಲಿಯಾ 'ವಂಡರ್ ವುಮನ್' ಚಿತ್ರ ಖ್ಯಾತಿಯ ಸ್ಟಾರ್ ನಟಿ ಗಾಲ್ ಗಡೋಟ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರಕ್ಕೆ ಈಗಾಗಲೇ ಟೈಟಲ್ ಕೂಡ ಫಿಕ್ಸ್ ಆಗಿದೆ. 'ಹಾರ್ಟ್ ಆಫ್ ಸ್ಟೋನ್' ಎಂದು ಹೆಸರಿಡಲಾಗಿದೆ. ಮತ್ತು ಈ ಸಿನಿಮಾ ಅಂತಾರಾಷ್ಟ್ರೀಯ ಸ್ಪೈ ಥ್ರಿಲ್ಲರ್ ಎಂದು ಹೇಳಲಾಗಿದೆ. ಚಿತ್ರಕ್ಕೆ ಟಾಮ್ ಹಾರ್ಪರ್ ನಿರ್ದೇಶನವಿದೆ.

ಈ ಹಿಂದೆ, ಆಲಿಯಾ ಹಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ದೊಡ್ಡದಾಗಿ ಹಬ್ಬಿತ್ತು. ಆದರೆ ಆಲಿಯಾ ಈಗ ಓಟಿಟಿ ಮೂಲಕ ಹಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ದೊಡ್ಡ ಖ್ಯಾತ ಕಲಾವಿದರ ದಂಡೇ ಇದೆ. ಗ್ಯಾಲ್ ಗಡೋಟ್ ಸೇರಿದಂತೆ ಎಮ್ಮಾ ಸ್ಟೋನ್, ಓಪ್ರಾ ಮತ್ತು ಚಾರ್ಲಿಝ್ ಥರಾನ್ ಅವರಂತಹ ಪ್ರತಿಭೆಗಳು ಚಿತ್ರದಲ್ಲಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದರ ಜೊತೆಗೆ ಚಿತ್ರದ ಬಗ್ಗೆ ಒಂದಷ್ಟು ಕುತೂಹಲಕಾರಿ ಅಂಶಗಳು ಕೂಡ ರಿವೀಲ್ ಆಗಿವೆ. ನಟಿ ಗಾಲ್ ಗಡೋಟ್ ತಮ್ಮ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಹಾರ್ಟ್ ಆಫ್ ಸ್ಟೋನ್' ಚಿತ್ರೀಕರಣದ ಕೆಲವು ಗ್ಲಿಂಪ್ಸ್‌ಗಳನ್ನು ನಟಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ತನ್ನ ಪಾತ್ರವನ್ನು 'ರಾಚೆಲ್ ಸ್ಟೋನ್' ಎಂದು ಪರಿಚಯಿಸಿದ್ದಾರೆ. ಚಿತ್ರದಲ್ಲಿನ ಅವರ ಲುಕ್ ರಿವೀಲ್ ಮಾಡುವ ಫೋಟೊ ಒಂದನ್ನು ಕೂಡ ಹಂಚಿಕೊಂಡಿದ್ದಾರೆ. ಫೊಟೋದಲ್ಲಿ ಗಡೋಟ್ ಬಿಳಿ ಮತ್ತು ಕಪ್ಪು ಬಣ್ಣದ ಕಾಸ್ಟ್ಯೂಂ ತೊಟ್ಟಿದ್ದಾರೆ.
ಇತ್ತ ಭಾರತೀಯ ಚಿತ್ರರಂಗದಲ್ಲಿ ಸಾಲು, ಸಾಲು ಸಿನಿಮಾಗಳಲ್ಲಿ ಆಲಿಯಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮಾರ್ಚ್ 25ಕ್ಕೆ RRR ಚಿತ್ರ ತೆರೆಕಾಣಲಿದೆ. ಇದನ್ನು ಬಿಟ್ಟರೆ ಬಾಲಿವುಡ್‌ನ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ಆಲಿಯಾ ಕಾಣಿಸಿಕೊಂಡಿದ್ದಾರೆ. ಹಾಗೆ ಡಾರ್ಲಿಂಗ್ಸ್, ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಗಳು ಆಲಿಯಾ ಕೈಯಲ್ಲಿ ಇವೆ. ಇನ್ನು ಆಲಿಯಾ ಹಾಲಿವುಡ್ ಪಾತ್ರದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ. ಆಲಿಯಾ ಲುಕ್ ಹೇಗೆ ಇರಲಿದೆ, ಪಾತ್ರ ಯಾವ ರೀತಿ ಇರಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications











