Cannes 2024 ; ಕಾನ್ ಚಿತ್ರೋತ್ಸವದಲ್ಲಿ ಇತಿಹಾಸ ಸೃಷ್ಟಿಸಿದ ಅನಸೂಯಾ ಸೇನ್‌ಗುಪ್ತಾ..!
ಕಾನ್ ಚಿತ್ರೋತ್ಸವ ಮತ್ತು ಭಾರತದ ನಡುವೆ ಇರುವ ಸಂಬಂಧ ಇಂದು ನಿನ್ನೆಯದಲ್ಲ. ಇದಕ್ಕೆ ಅನೇಕ ವರ್ಷದ ಇತಿಹಾಸ ಇದೆ. 1946ರಲ್ಲಿ ಮೊದಲ ಬಾರಿ ಈ ಚಿತ್ರೋತ್ಸವ ಆರಂಭವಾದಾಗ್ಲೇ ಭಾರತದ ಜೊತೆ ಕೊಂಡಿ ಬೆಸೆದುಕೊಂಡಿತ್ತು. ಕಾನ್ ನಲ್ಲಿ ಪ್ರದರ್ಶನ ಕಂಡ ಭಾರತದ ಮೊದಲ ಸಿನಿಮಾ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಚೇತನ್ ಆನಂದ್ ನಿರ್ದೇಶನದ ನೀಚಾ ನಗರ್ ಅದೇ ವರ್ಷ ಗ್ರ್ಯಾಂಡ್ ಪ್ರೈಝ್ ಆಫ್ ಫೆಸ್ಟಿವಲ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತು.
ಅಲ್ಲಿಂದ..ಇಲ್ಲಿಯವರೆಗೆ .. ಕಾನ್‌ನಲ್ಲಿ ಭಾರತದ ಹಲವಾರು ಸಿನಿಮಾ ಪ್ರದರ್ಶನವಾಗಿವೆ. ಹಲವಾರು ಪ್ರಶಸ್ತಿಗಳನ್ನೂ ಕೂಡ ಗೆದ್ದಿವೆ. ಆದರೆ.. ಇಲ್ಲಿಯವರೆಗೆ ಕಾನ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯಲು ಮಾತ್ರ ಭಾರತದ ಯಾವ ನಟಿಯರಿಂದ ಸಾಧ್ಯವಾಗಿರಲಿಲ್ಲ. ಈ ಕೊರಗನ್ನ ಈಗ ಅನಸೂಯಾ ಸೇನ್‌ಗುಪ್ತಾ ದೂರ ಮಾಡಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ

ದಿ ಶೇಮ್ ಲೆಸ್ ಚಿತ್ರದಲ್ಲಿನ ಅಭಿನಯಕ್ಕೆ ಕೋಲ್ಕತ್ತಾ ಮೂಲದ ಅನಸೂಯಾ ಸೇನ್‌ಗುಪ್ತಾಗೆ ಈ ಪ್ರಶಸ್ತಿ ಸಿಕ್ಕಿದೆ. ಬಲ್ಗೇರಿಯನ್ ನಿರ್ದೇಶಕ ʻಕಾನ್‌ಸ್ಟಾಂಟಿನ್ ಬೊಜಾನೋವ್ʼ ನಿರ್ದೇಶನದ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯನ್ನ ಕೊಂದು ದೆಹಲಿಯ ವೇಶ್ಯಾಗೃಹದಿಂದ ತಪ್ಪಿಸಿಕೊಳ್ಳುವ ಮಹಿಳೆಯ ಪಾತ್ರವನ್ನ ಅನಸೂಯಾ ನಿರ್ವಹಿಸಿದ್ದಾರೆ.
ಅಂದ್ಹಾಗೇ ಜಾದವ್‌ಪುರ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿರುವ ಅನಸೂಯಾ, ಪತ್ರಿಕೋದ್ಯಮಕ್ಕೆ ಕಾಲಿಡಲು ಯೋಚಿಸಿದ್ದರು. ಆದರೆ ವಿಧಿ ಲಿಖಿತ.. 2009ರಲ್ಲಿ ಅಂಜನ್ ದತ್ತಾ ನಿರ್ದೇಶನದ ಬಂಗಾಲಿ ಚಿತ್ರ ಮ್ಯಾಡ್ಲಿ ಇವರನ್ನ ನಟಿಯನ್ನಾಗಿಸಿತು. ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಸೂಯಾ ಆ ನಂತರ 2013 ರಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ರಂಗಭೂಮಿಯಲ್ಲಿ ತಮ್ಮನ್ನ ತೋಡಗಿಸಿಕೊಂಡರು. ಆ ನಂತರ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದರು ಅನಸೂಯಾ ಸೇನ್‌ಗುಪ್ತಾ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬಂತೆ ಬದುಕು ಒಂದು ಹಂತಕ್ಕೆ ತಲುಪಿದ್ದಾಗ, ಶೂನ್ಯತಾ ಭಾವ ಇವರನ್ನ ಆವರಿಸಿಕೊಂಡಿತು. ಹೀಗಾಗಿಯೇ ಮುಂಬೈಯನ್ನೂ ಖಾಲಿ ಮಾಡಿದ ಅನಸೂಯಾ ಆ ನಂತರ ಗೋವಾಗೆ ತೆರಳಿದರು. ಇಲ್ಲಿಯೇ ಯಶ್‌ದೀಪ್ ಅವರನ್ನ ಭೇಟಿಯಾದ ಅನಸೂಯಾ ಆ ನಂತರ ಪ್ರೇಮದಲ್ಲಿ ಬಿದ್ದರು. ಯಶ್‌ದೀಪ್ ಅವರ ಜೊತೆ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟರು.
ಇಂತಹ ಅನಸೂಯಾ ಸೇನ್‌ಗುಪ್ತಾ ಅವರಿಗೆ ದಿ ಶೇಮ್ ಲೆಸ್ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದ್ದು ಸಾಮಾಜಿಕ ಜಾಲತಾಣದ ಮೂಲಕ ಅನ್ನುವುದು ವಿಶೇಷ. 2020ರಲ್ಲಿ ಚಿತ್ರದ ನಿರ್ದೇಶಕ ʻಕಾನ್‌ಸ್ಟಾಂಟಿನ್ ಬೊಜಾನೋವ್ʼ ಫೇಸ್ ಬುಕ್ ಮೂಲಕ ಆಡಿಷನ್ ನೀಡುವಂತೆ ಸಂದೇಶವನ್ನ ಕಳಿಸಿದ್ದರು. ಅಲ್ಲಿಂದ ಆರಂಭವಾದ ಪ್ರಯಾಣ ಈಗ ಅನಸೂಯಾ ಅವರನ್ನ ಜಗದ್ವಿಖ್ಯಾತ ಕಾನ್ ಫಿಲ್ಮ್ ಫೆಸ್ಟಿವಲ್‌ವರೆಗೆ ಕರೆದೊಯ್ದಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯುವ ಮೂಲಕ ಅನಸೂಯಾ ಅವರ ಹೆಸರು ಜಗದಗಲ ಪಸರಿಸಿದೆ.
ಉಳಿದಂತೆ ನಿರ್ದೇಶಕ ʻಹೂ ಗುವಾನ್ʼ ಅವರ (Hu Guan) ಬ್ಲ್ಯಾಕ್ ಡಾಗ್ (Black Dog) ಸಿನಿಮಾ ಕಾನ್ ಅನ್ ಸರ್ಟೈನ್ ರಿಗಾರ್ಡ್ ಪ್ರಶಸ್ತಿಯನ್ನು (Un Certain Regard prize) ಗೆದ್ದುಕೊಂಡಿತು. ಸದ್ಯಕ್ಕೆ ಅನಸೂಯಾ ಸೇನ್‌ಗುಪ್ತಾ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.


Click it and Unblock the Notifications











