ಭಾರತದ ಬಾಕ್ಸಾಫೀಸ್‌ಗೆ ಅಪ್ಪಳಿಸಲಿದೆ 'ಅವತಾರ್ 3' ಬೆಂಕಿ ; ಬಿಡುಗಡೆಗೆ 14 ದಿನ ಮುನ್ನವೇ ಅಡ್ವಾನ್ಸ್ ಬುಕಿಂಗ್ ಓಪನ್
ಅಂಗೈನಲ್ಲೇ ಆಕಾಶ ತೋರಿಸೋದ್ರಲ್ಲಿ ''ಹಾಲಿವುಡ್''ನವರು ಸದಾ ಮುಂದು. ಮನುಷ್ಯನ ಊಹೆಗೂ ಮೀರಿದ ಕಥೆಗಳನ್ನು ಬೆಳ್ಳಿತೆರೆಗೆ ತರುವುದರಲ್ಲಿ ಎತ್ತಿದ ಕೈ. ಹೊಸ ಟೆಕ್ನಾಲಜಿ ತ್ರಿಡಿ ಯಾನ ಶುರುವಾದ ಮೇಲಂತೂ ಇವರ ಭಾವನೆ, ಕಲ್ಪನೆಗಳಿಗೆ, ಮತ್ತಷ್ಟು ಮೆರಗು ಬಂದಿದೆ. ಸಿನಿರಸಿಕರ ನಾಡಿ ಮಿಡಿತದ ಜೊತೆ ಇವರ ಕಲ್ಪನೆಗಳು ಬೆರಗಾಗಿಸುತ್ತಿವೆ. ಇದಕ್ಕೆ ಸದ್ಯದ ಮತ್ತೊಂದು ಉದಾಹರಣೆ ''ಅವತಾರ್ :ಫೈರ್ ಆಂಡ್ ಆಶ್''.
ಬಹುತೇಕ ಎಲ್ಲ ಚಿತ್ರಪ್ರೇಮಿಗಳಿಗೆ ಗೊತ್ತಿರುವಂತೆ ''ಅವತಾರ್''.. ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾಗಳಲ್ಲೊಂದು. 2009ರಲ್ಲಿಯೇ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದ 'ಜೇಮ್ಸ್ ಕ್ಯಾಮರೂನ್' ನಿರ್ದೇಶನದ ಈ ಚಿತ್ರದ ಎರಡನೇ ಭಾಗ 2022ರಲ್ಲಿ ತೆರೆಗೆ ಬಂದಿತ್ತು. ಇದೀಗ ''ಅವತಾರ್ 3'' ಸರದಿ.

ಹೌದು, ''ಅವತಾರ್ : ಫೈರ್ ಆಂಡ್ ಆಶ್''.. ಇನ್ನೇನು ಇದೇ ಡಿಸೆಂಬರ್ 19ಕ್ಕೆ ತೆರೆಗೆ ಬರಲಿದೆ. ಇನ್ನೂ ಹಾಲಿವುಡ್ ಸಿನಿಮಾವನ್ನು ಆಂಗ್ಲರ ಪಡೆ ನೋಡುತ್ತಾ..? ಇಲ್ವಾ..? ಗೊತ್ತಿಲ್ಲ. ಆದರೆ.. ಭಾರತೀಯರು ಈ ಸರಣಿಯನ್ನು ಮಾತ್ರ ಮುಗಿ ಬಿದ್ದು ನೋಡುತ್ತಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ 2009ರಲ್ಲಿ ಬಂದಿದ್ದ ''ಅವತಾರ್'' ಮೊದಲ ಭಾಗ ಕೇವಲ ಭಾರತದಲ್ಲಿಯೇ ₹108.44 ಕೋಟಿಯನ್ನು ದೋಚಿತ್ತು. ''ಬಾಲಿವುಡ್ ಹಂಗಾಮ'' ವರದಿಯ ಪ್ರಕಾರ 2022ರಲ್ಲಿ ಬಂದಿದ್ದ ''ಅವತಾರ್ -ದಿ ವೇ ಆಫ್ ವಾಟರ್'' ಭಾರತದಲ್ಲಿ 7 ವಾರ ಪ್ರದರ್ಶನ ಕಂಡಿತ್ತು. ಮೊದಲ ದಿನವೇ ₹40 ಕೋಟಿಯನ್ನು ಗಳಿಸಿತ್ತು. ಚಿತ್ರಮಂದಿರಗಳಿಂದ ಎತ್ತಂಗಡಿಯಾಗುವ ಮುನ್ ಭಾರತದಲ್ಲಿಯೇ ₹378.22 ಕೋಟಿಯನ್ನು ಕೊಳ್ಳೆ ಹೊಡೆದಿತ್ತು.
ಈಗ ''ಅವತಾರ್ : ಫೈರ್ ಆಂಡ್ ಆಶ್'' ನೋಡಲು ಕೂಡ ಭಾರತೀಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಜೇಮ್ಸ್ ಕ್ಯಾಮರೂನ್ ಮತ್ತು ತಂಡಕ್ಕೆ ಕೂಡ ಈ ವಿಚಾರ ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ಬಿಡುಗಡೆಗೆ 14 ದಿನ ಮುನ್ನವೇ ''ಅವತಾರ್''ಮೆರವಣಿಗೆ ''ಡಿಸ್ನಿ'' ಕಂಪನಿ ಭಾರತದಲ್ಲಿ ಚಾಲನೆ ನೀಡಲು ಮುಂದಾಗಿದೆ. ಇದೇ ಡಿಸೆಂಬರ್ 5ರಿಂದ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಕೌಂಟರ್ ತೆರೆಯಲಿದೆ.
''ಬಾಲಿವುಡ್ ಹಂಗಾಮ'' ವರದಿಯ ಪ್ರಕಾರ ಭಾರತದಲ್ಲಿರುವ ಅಭೂತಪೂರ್ವ ಬೇಡಿಕೆಯ ಹಿನ್ನೆಲೆ ''ಡಿಸ್ನಿ'' ಸಂಸ್ಥೆ ಮಲ್ಟಿಪ್ಲೆಕ್ಸ್‌ಗಳ ಜೊತೆ ಎರಡು ವಾರದ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದೆ. 3D, IMAX 3D, ScreenX ಮತ್ತು 4DX ಪರದೆಗಳಿಗೆ ಅನುಗುಣವಾಗಿ ಭಾರತದಲ್ಲಿನ ವಿತರಕರು ಕೂಡ ಎರಡು ವಾರದ ಒಪ್ಪಂದಕ್ಕೆ ಸಹಿ ಮಾಡಿದ್ದು ಇದೇ ಡಿಸೆಂಬರ್ 5ರಿಂದ ಭಾರತದೆಲ್ಲೆಡೆ ಟಿಕೆಟ್ ಮುಂಗಡವಾಗಿ ಸಿಗಲಿದೆ.

ಟ್ರೇಡ್ ವಿಶ್ಲೇಷಕರ ಲೆಕ್ಕಾಚಾರದ ಪ್ರಕಾರ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ''ಅವತಾರ್ : ಫೈರ್ ಆಂಡ್ ಆಶ್'' ಚಿತ್ರದ ಟಿಕೆಟ್‌ಗಳು ಭಾರತದಲ್ಲಿ ಬಿಕರಿಯಾಗಲಿವೆ. ಭಾರತದ ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಹೊಸದೊಂದು ದಾಖಲೆಯನ್ನು ಬರೆಯಲಿದೆ.
ಇನ್ನೂ ಈ ಡಿಸೆಂಬರ್ 5ರಿಂದ ಕೇವಲ ಇಂಗ್ಲೀಷ್ ಭಾಷೆಯ ಟಿಕೆಟ್‌ಗಳು ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಟೆಕೆಟ್‌ಗಳು ಕೂಡ ಸಿಗಲಿವೆ. ಕನ್ನಡದಲ್ಲಿ ''ಅವತಾರ್ : ಫೈರ್ ಆಂಡ್ ಆಶ್'' ನೋಡುವ ಆಸೆಯನ್ನು ಯಾರಾದರೂ ಹೊಂದಿದ್ದರೆ ಅವರು ಕೂಡ ಡಿಸೆಂಬರ್ 5ರಿಂದ ಟಿಕೆಟ್ ಖರೀದಿ ಮಾಡಬಹುದು. ಯಾಕೆಂದರೆ. ''ಅವತಾರ್ : ಫೈರ್ ಆಂಡ್ ಆಶ್'' ಕನ್ನಡಕ್ಕೂ ಕೂಡ ಡಬ್ ಆಗಿ ಬಿಡುಗಡೆಯಾಗಲಿದೆ. ಆದರೆ IMAX ನಲ್ಲಿ ಮಾತ್ರ ಚಿತ್ರ ನೋಡಲು ಹೋಗಬೇಡಿ. ಯಾಕೆಂದರೆ IMAX ನಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ಪ್ರದರ್ಶನವಾಗಲಿದೆ.
ಒಟ್ನಲ್ಲಿ ಸದ್ಯ ಭಾರತದ ಬಾಕ್ಸಾಫೀಸ್‌ಗೆ ''ಅವತಾರ್ 3'' ಎಂಬ ಹಾಲಿವುಡ್‌ನ ಬೆಂಕಿ ಚೆಂಡು ಬಂದು ಈ ಡಿಸೆಂಬರ್ 5ಕ್ಕೆ ಅಪ್ಪಳಿಸಲಿದೆ. ಈ ಚಿತ್ರ ಭಾರತದಲ್ಲಿ ಎಷ್ಟು ಕೋಟಿಯನ್ನು ಕೊಳ್ಳೆ ಹೊಡೆಯುತ್ತೆ, ಅಡ್ವಾನ್ಸ್ ಬುಕಿಂಗ್‌ಗೆ ಹೇಗೆ ಪ್ರತಿಕ್ರಿಯೆ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











