ಅವತಾರ್ ರಿ-ರಿಲೀಸ್: ಮೂರು ದಿನಕ್ಕೆ ಗಳಿಸಿದ್ದೆಷ್ಟು? ಇದು ಬೀಸ್ಟ್ ಚಿತ್ರದ ಲೈಫ್‌ಟೈಮ್ ಕಲೆಕ್ಷನ್‌ಗೆ ಸಮ!
ಜೇಮ್ಸ್ ಕೆಮರೂನ್ ನಿರ್ದೇಶನದ ಅವತಾರ್ ಚಿತ್ರ 2009ರಲ್ಲಿ ಬಿಡುಗಡೆಗೊಂಡು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿತ್ತು. 162 ನಿಮಿಷಗಳ ಈ ದೃಶ್ಯ ಕಾವ್ಯ ಚಿತ್ರಮಂದಿರಕ್ಕೆ ಬಂದಿದ್ದ ಸಿನಿಪ್ರೇಕ್ಷಕರನ್ನು ಪ್ಯಾಂಡೋರಾ ಜಗತ್ತಿಗೆ ಕರೆದೊಯ್ದಿತ್ತು. ದಶಕದ ಹಿಂದೆಯೇ ನೆಕ್ಸ್ಟ್ ಲೆವೆಲ್ ಕ್ರಿಯೇಟಿವಿಟಿ ಹಾಗೂ ಮೇಕಿಂಗ್ ಹೊಂದಿದ್ದ ಈ ಚಿತ್ರ ದೊಡ್ಡ ಮಟ್ಟದ ಹಿಟ್ ಆಯಿತು.
ಮೊದಲ ಬಾರಿಗೆ ಬಿಡುಗಡೆಯಾದಾಗ 2878 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿತ್ತು ಅವತಾರ್ ಸಿನಿಮಾ. ಈ ದೈತ್ಯಾಕಾರದ ಬಾಕ್ಸಾಫೀಸ್ ಕಲೆಕ್ಷನ್ ಮೊತ್ತವನ್ನು ಮುಟ್ಟುವ ಸಾಮರ್ಥ್ಯ ನಂತರ ಬಿಡುಗಡೆಯಾದ ಯಾವುದೇ ಚಿತ್ರಗಳಿಗೂ ಸಹ ಇರಲಿಲ್ಲ. ಹೌದು, ಇಂದಿಗೂ ಸಹ ಅತಿ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಅವತಾರ್.
ಹೀಗೆ ವಿಶ್ವ ಬಾಕ್ಸ್ ಆಫೀಸ್ ಅನ್ನು ನಡುಗಿಸಿದ್ದ ಅವತಾರ್ ಇದೀಗ ಮೂರನೇ ಬಾರಿಗೆ ರಿಲೀಸ್ ಆಗಿದೆ. ಹೌದು, ಕಳೆದ ಶುಕ್ರವಾರ ( ಸೆಪ್ಟೆಂಬರ್ 23 ) ಅವತಾರ್ ಚಿತ್ರ ವಿಶ್ವದಾದ್ಯಂತ ಮರುಬಿಡುಗಡೆಯಾಯಿತು. 13 ವರ್ಷಗಳ ಹಳೆಯ ಚಿತ್ರವನ್ನು ಈಗಿನ ಟೆಕ್ನಾಲಜಿ ಬಳಸಿ 3ಡಿಯಲ್ಲೂ ಸಹ ಬಿಡುಗಡೆ ಮಾಡಲಾಯಿತು. ಹೀಗೆ ಮರು ಬಿಡುಗಡೆಯಾದ ಅವತಾರ್ ಈ ಬಾರಿಯೂ ಸಹ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ.

ಮೊದಲ 3 ದಿನಕ್ಕೆ ಅವತಾರ್ ಗಳಿಸಿದ್ದೆಷ್ಟು?
ಸೆಪ್ಟೆಂಬರ್ 23ರ ಶುಕ್ರವಾರದಂದು ಮರುಬಿಡುಗಡೆಗೊಂಡ ಅವತಾರ್ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ 3 ದಿನಗಳು ಸೇರಿದಂತೆ ಒಟ್ಟು 30.5 ಮಿಲಿಯನ್ ಅಂದರೆ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ದಳಪತಿ ವಿಜಯ್ ಅಭಿನಯದ ಬೀಸ್ಟ್ ಚಿತ್ರ ತನ್ನ ಲೈಫ್ ಟೈಮ್ ಥಿಯೇಟ್ರಿಕಲ್ ರನ್ ಮೂಲಕ 250 ಕೋಟಿ ಸಂಪಾದಿಸಿತ್ತು. ಹೀಗೆ ಸಾಮಾನ್ಯ ಚಿತ್ರಗಳು ಒಟ್ಟಾರೆ ಮಾಡುವ ಕಲೆಕ್ಷನ್ ಅನ್ನು ಅವತಾರ್ ಮೂರೇ ದಿನಕ್ಕೆ ಅದೂ ಸಹ ಮರು ಬಿಡುಗಡೆಯಾದಾಗ ಮಾಡಿದೆ ಎಂದರೆ ಚಿತ್ರದ ಮೇಲೆ ಎಷ್ಟರ ಮಟ್ಟಿಗಿನ ಕ್ರೇಜ್ ಇರಬೇಡ ಎಂದು ಸಿನಿರಸಿಕರು ಆಶ್ಚರ್ಯಕ್ಕೊಳಗಾಗಿದ್ದಾರೆ.

ಭಾರತದಲ್ಲಿಯೇ 5.65 ಕೋಟಿ
ಇನ್ನು ಅವತಾರ್ ಚಿತ್ರ ಭಾರತದಲ್ಲಿ ಶುಕ್ರವಾರ 2.2 ಕೋಟಿ, ಶನಿವಾರ 1.85 ಕೋಟಿ ಹಾಗೂ ಭಾನುವಾರ 1.60 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮೊದಲ ವಾರಾಂತ್ಯಕ್ಕೆ ಅವತಾರ್ 5.65 ಕೋಟಿಯನ್ನು ಭಾರತದಲ್ಲಿ ಕಲೆಕ್ಟ್ ಮಾಡಿದೆ.

ಅವತಾರ್ 2 ಮೇಲೆ ಹೆಚ್ಚಿದ ನಿರೀಕ್ಷೆ
ಸದ್ಯ ಅವತಾರ್ ಮರು ಬಿಡುಗಡೆಯಾಗಿರುವುದರಿಂದ 'ಅವತಾರ್: ದ ವೇ ಆಫ್ ವಾಟರ್' ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಹೌದು, ಚಿತ್ರತಂಡ ಚಿತ್ರದ ಕೊನೆಯಲ್ಲಿ ಎರಡನೆಯ ಭಾಗದ ಚಿತ್ರದ ದೃಶ್ಯವೊಂದನ್ನು ಸೇರಿಸಿದ್ದು, ಚಿತ್ರಮಂದಿರಕ್ಕೆ ಬಂದಿದ್ದ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಮುಂದುವರಿದ ಭಾಗದ ದೃಶ್ಯ ತೆರೆಯ ಮೇಲೆ ಬರುತ್ತಿದ್ದಂತೆ ಸಿನಿ ಪ್ರೇಕ್ಷಕರು ಕೂಗಿ ಸ್ಪಂದಿಸಿದ್ದಾರೆ. ಈ ಮೂಲಕ ವಿಶ್ವದಾದ್ಯಂತ ಎರಡನೇ ಸಿನಿಮಾಗೆ ಒಳ್ಳೆ ಪ್ರಚಾರ ಸಿಕ್ಕಂತಾಗಿದೆ.


Click it and Unblock the Notifications











