'ಅವತಾರ್' ಹೊಸ ಟ್ರೈಲರ್: ಪ್ಯಾಂಡೋರಾದಲ್ಲಿ ಆಕ್ಷನ್, ಪ್ರೇಮ, ಬಾಂಧವ್ಯ
ಹದಿಮೂರು ವರ್ಷದ ಹಿಂದೆ ಬಿಡುಗಡೆ ಆಗಿದ್ದ 'ಅವತಾರ್' ಸಿನಿಮಾ ಪ್ರೇಕ್ಷಕರನ್ನು ಹೊಸದೊಂದು ಮಾಯಾಲೋಕಕ್ಕೆ ಕರೆದುಕೊಂಡು ಹೋಗಿತ್ತು. ಜೇಮ್ಸ್ ಕ್ಯಾಮರನ್ ನಿರ್ದೇಶನದ ಈ ಸಿನಿಮಾ ಹದಿಮೂರು ವರ್ಷದ ಹಿಂದೆ ಸೃಷ್ಟಿಸಿದ ದಾಖಲೆಗಳನ್ನು ಇತರೆ ಸಿನಿಮಾಗಳು ಅಳಿಸಲು ಸಾಧ್ಯವಾಗಿದ್ದು ತೀರಾ ಇತ್ತೀಚೆಗೆ!
ಇದೀಗ ಅದೇ ಜೇಮ್ಸ್ ಕ್ಯಾಮರನ್ ಹೊಸ 'ಅವತಾರ್' ಹೊತ್ತು ತಂದಿದ್ದಾರೆ. 'ಅವತಾರ್ 2' ಅಥವಾ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾದ ಹೊಸ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.
ಈ ಹಿಂದೆಯೇ ಸಿನಿಮಾದ ಟೀಸರ್, ಮೋಷನ್ ಟೀಸರ್, ಪಾತ್ರಗಳ ಪರಿಚಯದ ಟೀಸರ್‌ಗಳು ಬಿಡುಗಡೆ ಆಗಿದ್ದವು. ಇದೀಗ ಹೊಸದೊಂದು ಟ್ರೈಲರ್ ಬಿಡುಗಡೆ ಆಗಿದ್ದು, ಈ ಟ್ರೈಲರ್ 'ಅವತಾರ್' ಸಿನಿಮಾದ ಪ್ರಪಂಚದ ಇನ್ನಷ್ಟು ಇಣುಕು ನೋಟವನ್ನು ನೀಡುತ್ತಿದೆ.

ಮಷೀನ್‌ಗಳೊಂದಿಗೆ ಅರಣ್ಯವಾಸಿಗಳ ಕಾದಾಟ
2009 ರಲ್ಲಿ ಬಿಡುಗಡೆ ಆಗಿದ್ದ 'ಅವತಾರ್' ಸಿನಿಮಾ ಮಾನವ ಹಾಗೂ ಪ್ರಕೃತಿಯ ನಡುವಿನ ಹೋರಾಟವಾಗಿತ್ತು, ಆ ಪ್ರಕೃತಿಯನ್ನು ಕಾಪಾಡಲು ಮನುಷ್ಯರೊಂದಿಗೆ, ಅವರ ಆಧುನಿಕ ಮಷೀನ್‌ಗಳೊಂದಿಗೆ ಅರಣ್ಯವಾಸಿಗಳು ಕಾದಾಡಿದ್ದರು. ಅದೇ ಮಾದರಿಯ ಕತೆ 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾದಲ್ಲಿಯೂ ಮುಂದುವರೆದಿರುವುದು ಟ್ರೈಲರ್‌ನಿಂದಲೇ ಗೊತ್ತಾಗುತ್ತಿದೆ.

'ಅವತಾರ್; ದಿ ವೇ ಆಫ್ ವಾಟರ್'
'ಅವತಾರ್' ಸಿನಿಮಾದಲ್ಲಿ ಪಾತ್ರಗಳ ಜೊತೆಗೆ ಹಲವು ಹೊಸ ಪಾತ್ರಗಳು 'ಅವತಾರ್; ದಿ ವೇ ಆಫ್ ವಾಟರ್' ಸಿನಿಮಾದಲ್ಲಿ ಕಾಣುತ್ತವೆ ಎಂಬುದನ್ನು ಟ್ರೈಲರ್‌ನಲ್ಲಿಯೇ ತೋರಿಸಲಾಗಿದೆ. 'ಅವತಾರ್' ಸಿನಿಮಾದಲ್ಲಿ ತೋರಿಸಲಾಗಿದ್ದ ಅದ್ಭುತ ಪ್ರಪಂಚಕ್ಕೆ ಇನ್ನಷ್ಟು ಹೊಸತನ್ನು ಸೇರಿಸಲಾಗಿದೆ. ಅದರಲ್ಲಿಯೂ 'ಪ್ಯಾಂಡೊರಾ'ದ ನೀರಿನಾಳದ ಜಗತ್ತನ್ನು ಈ ಸಿನಿಮಾದಲ್ಲಿ ಹೆಚ್ಚು ತೋರಿಸಲಾಗಿದೆ.

ದುಪ್ಪಟ್ಟಾಗಿದೆ ಆಕ್ಷನ್!
'ಅವತಾರ್' ಸಿನಿಮಾದಲ್ಲಿರುವಂತೆಯೇ ಇಲ್ಲೂ ಪ್ರಕೃತಿ ಹಾಗೂ ಮನುಷ್ಯ ಹಾಗೂ ಅವನ ಮಷೀನ್‌ಗಳೊಟ್ಟಿಗಿನ ಕಾದಾಟವೇ ಪ್ರಮುಖ ಧಾತುವಾಗಿದೆ ಎಂಬುದು ಟ್ರೈಲರ್‌ನಿಂದ ತಿಳಿದುಬರುತ್ತಿದೆ. 'ಅವತಾರ್' ಮೊದಲ ಸಿನಿಮಾದಲ್ಲಿದ್ದ ಕೆಲವು ಮಷೀನ್‌ಗಳು ಇಲ್ಲೂ ಮುಂದುವರೆದಿವೆ. ಅಲ್ಲಿದ್ದ ಕೆಲವು ವಿಚಿತ್ರ ಪ್ರಾಣಿಗಳು ಇಲ್ಲೂ ಇವೆ. ಆದರೆ ಆಕ್ಷನ್ ಮಾತ್ರ ಮೊದಲ 'ಅವತಾರ್' ಗಿಂತಲೂ ದುಪ್ಪಟ್ಟಾದಂತೆ ತೋರುತ್ತಿದೆ.

ಡಿಸೆಂಬರ್ 16 ರಂದು ಬಿಡುಗಡೆ
ಮೊದಲ 'ಅವತಾರ್' ನಲ್ಲಿ ನಾಯಕ ಜೇಕ್ ಸೂಲಿ, ನಾಯಕಿ ನಟೇರಿಗೆ ಮಕ್ಕಳಾಗಿ ಅವರು ಈಗ ಪೋಷಕರೊಟ್ಟಿಗೆ ಸೇರಿಕೊಂಡು ತಮ್ಮ ನೆಲ ಉಳಿಸಿಕೊಳ್ಳಲು ಮಾಡುವ ಹೋರಾಟದ ಕತೆಯನ್ನು 'ಅವತಾರ್; ದಿ ವೇ ಆಫ್ ವಾಟರ್' ಹೊಂದಿದೆ ಎಂದು ಟ್ರೈಲರ್ ನೋಡಿ ಅಂದಾಜಿಸಬಹುದಾಗಿದೆ. ಸಿನಿಮಾದ ಪೂರ್ತಿ ಕತೆ ತಿಳಿಯಲು ಡಿಸೆಂಬರ್ 16 ರ ವರೆಗೆ ಕಾಯಲೇ ಬೇಕು. ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ, ಲಕ್ಷಾಂತರ ಶೋಗಳು ಅಂದು ಪ್ರದರ್ಶಿತವಾಗಲಿವೆ. ಸಿನಿಮಾದ ಪ್ರೀ ಬುಕಿಂಗ್ ಬೆಂಗಳೂರು ಸೇರಿದಂತೆ ಈಗಾಗಲೇ ಓಪನ್ ಆಗಿದೆ.


Click it and Unblock the Notifications











