ವಿಶ್ವದಾದ್ಯಂತ ಅಬ್ಬರಿಸುತ್ತಿರುವ 'ಬಾರ್ಬಿ' ಚಿತ್ರ ಪಾಕಿಸ್ತಾನದಲ್ಲಿ ಬ್ಯಾನ್ ಆಗಿದ್ದೇಕೆ?
ಕಳೆದ ಶುಕ್ರವಾರ ( ಜುಲೈ 21 ) ಚಿತ್ರಮಂದಿರಗಳ ಅಂಗಳಕ್ಕೆ ವಿವಿಧ ಭಾಷೆಗಳ ಅನೇಕ ಚಿತ್ರಗಳು ತೆರೆಗೆ ಬಂದಿದ್ದು, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಹಾಲಿವುಡ್ ಸಿನಿಮಾಗಳಾದ ಬಾರ್ಬಿ ಹಾಗೂ ಆಪನ್‌ಹೈಮರ್ ಚಿತ್ರಗಳ ಹಾವಳಿ ನಡೆಯುತ್ತಿದೆ. ಹೌದು, ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಆಪನ್‌ಹೈಮರ್ ಹಾಗೂ ಗ್ರೆಟಾ ಗೆರ್ವಿಗ್ ನಿರ್ದೇಶನದ ಬಾರ್ಬಿ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿಗೆ ಬಿದ್ದಿವೆ.
ಸಿನಿ ರಸಿಕರು ಬಾರ್ಬಿ ಎದುರು ಆಪನ್‌ಹೈಮರ್ ಗೆದ್ದು ಬೀಗಲಿದೆ ಎಂದೇ ಊಹಿಸಿದ್ದರು. ಆದರೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಬಾರ್ಬಿ ಅಬ್ಬರ ಜೋರಾಗಿದ್ದು ಆಪನ್‌ಹೈಮರ್‌ಗೆ ತೀವ್ರ ಪೈಪೋಟಿ ನೀಡಿ ಮುನ್ನಡೆ ಕಾಯ್ದುಕೊಂಡಿದೆ. ಹೀಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವ ಬಾರ್ಬಿ ಚಿತ್ರಕ್ಕೆ ಪಾಕಿಸ್ತಾನದಲ್ಲಿ ಹಿನ್ನಡೆ ಉಂಟಾಗಿದೆ.

ಹೌದು, ಪಾಕಿಸ್ತಾನದಲ್ಲಿ ಬಾರ್ಬಿ ಚಿತ್ರವನ್ನು ಬ್ಯಾನ್ ಮಾಡಲು ಕೂಗು ಕೇಳಿಬಂದಿದೆ. ಚಿತ್ರದಲ್ಲಿ LGBTQ+ ( ಲೆಸ್ಬಿಯನ್, ಗೇ, ಬೈಸೆಕ್ಸುಯೆಲ್, ಟ್ರಾನ್ಸ್‌ಜೆಂಡರ್ ಹಾಗೂ ಕ್ವೀರ್ ) ಅಂಶಗಳನ್ನು ತೋರಿಸಲಾಗಿದ್ದು, ಈ ಅಂಶಗಳನ್ನು ಪ್ರೋತ್ಸಾಹಿಸದ ಪಾಕಿಸ್ತಾನ ಬಾರ್ಬಿ ಚಿತ್ರದ ಮೇಲೆ ತಡೆ ಹೇರಿದೆ ಎನ್ನಲಾಗಿದೆ. ಸದ್ಯ ಬಾರ್ಬಿ ಚಿತ್ರವನ್ನು ಪಾಕಿಸ್ತಾನ ತಾತ್ಕಾಲಿಕವಾಗಿ ಬ್ಯಾನ್ ಮಾಡಿದ್ದು, ಈ ಅಂಶಗಳುಳ್ಳ ದೃಶ್ಯಗಳಿಗೆ ಕತ್ತರಿ ಹಾಕಿದರೆ ಚಿತ್ರದ ಪ್ರದರ್ಶನ ಮುಂದುವರಿಯಲಿದೆ ಎಂದು ವರದಿಗಳು ತಿಳಿಸಿವೆ.
ಇನ್ನು ಪಾಕಿಸ್ತಾನ ಮಾತ್ರವಲ್ಲದೇ ಇಸ್ಲಾಮಿಕ್ ದೇಶಗಳಾದ ಈಜಿಪ್ಟ್, ಯುಎಇ, ಕತ್ತರ್, ಇರಾನ್ ಹಾಗೂ ಸೌದಿ ಅರೇಬಿಯಾ ದೇಶಗಳಲ್ಲಿಯೂ ಸಹ ಬಾರ್ಬಿ ಚಿತ್ರವನ್ನು ಇದೇ ಕಾರಣಕ್ಕಾಗಿ ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿದೆ. ಈ ಅಂಶ ಮಾತ್ರವಲ್ಲದೇ ಚೀನಾ ಭೂಪಟವನ್ನು ತಪ್ಪಾಗಿ ತೋರಿಸಿದ ಕಾರಣಕ್ಕಾಗಿ ವಿಯೆಟ್ನಂನಲ್ಲಿ ಬಾರ್ಬಿ ಚಿತ್ರವನ್ನು ಬ್ಯಾನ್ ಮಾಡಲಾಗಿದೆ.
ಇನ್ನು ಇದು ಬಾರ್ಬಿ ಕಥೆಯಾದರೆ ಆಪನ್‌ಹೈಮರ್ ಕಥೆಯೂ ಸಹ ಇದೇ ರೀತಿ ಇದೆ. ಚಿತ್ರದಲ್ಲಿ ಭಗವದ್ಗೀತೆ ಹಾಗೂ ವಿಷ್ಣು ಅಂಶಗಳನ್ನು ತೋರಿಸಲಾಗಿದೆ. ಈ ವಿಷಯವನ್ನು ನಾಯಕ ಸಿಲಿಯನ್ ಮುರ್ಫಿ ಸ್ವತಃ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಈ ವಿಷಯ ಕೇಳಿದ ಭಾರತೀಯರು ಸಂತಸವನ್ನೂ ಸಹ ಪಟ್ಟಿದ್ದರು. ಆದರೆ ಚಿತ್ರ ಬಿಡುಗಡೆಯಾದ ಬಳಿಕ ಇದೇ ಅಂಶ ಅನೇಕ ಭಾರತೀಯರನ್ನು ಕೆರಳಿಸಿದೆ. ತಮ್ನ ಪವಿತ್ರ ಭಗವದ್ಗೀತೆಯನ್ನು ಸರಸದ ಸಮಯದಲ್ಲಿ ಬಳಸಲಾಗಿದೆ ಎಂದು ಭಾರತೀಯರು ಆಪನ್‌ಹೈಮರ್ ತಂಡದ ವಿರುದ್ಧ ಕಿಡಿಕಾರಿದ್ದಾರೆ.


Click it and Unblock the Notifications











