ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆ: ಪತಿಯೇ ಕೊಲೆಗಾರ!
ನಟಿಯೊಬ್ಬರು ನಾಪತ್ತೆಯಾದ ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದು, ನಟಿಯ ಪತಿ, ತಾನೇ ಪತ್ನಿಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ನಡೆದಿರುವುದು ನೆರೆಯ ಬಾಂಗ್ಲಾದೇಶದಲ್ಲಿ.
ಬಾಂಗ್ಲಾದೇಶ ಸಿನಿಮಾರಂಗದ ನಟಿ ರೈಮಾ ಇಸ್ಲಾಂ ಶಿಮು ಕಳೆದ ಕೆಲವು ದಿನಗಳಿಂದಲೂ ನಾಪತ್ತೆಯಾಗಿದ್ದರು. ಆದರೆ ಎರಡು ದಿನದ ಹಿಂದೆ ಗೋಣಿಚೀಲದಲ್ಲಿ ತುಂಬಲಾಗಿದ್ದ ಅವರ ಶವ ಕೆರಾನಿಗಂಜ್‌ನ ಹಜರ್‌ಪುರ್ ಸೇತುವೆ ಬಳಿ ಪತ್ತೆಯಾಯಿತು.
ನಟಿಯ ಶವ ಪತ್ತೆಯಾದ ಬಳಿಕ ಆಕೆಯ ಪತಿ ಶಕಾವತ್ ಅಲಿ ಅನ್ನು ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದರು ಆಗ ಶಕಾವತ್ ಅಲಿ, ತಾನೇ ತನ್ನ ಪತ್ನಿ ರೈಮಾ ಇಸ್ಲಾಂ ಶಿಮು ಅನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.

ನಟಿಯ ಶಕಾವತ್ ಅಲಿ ತನ್ನ ಗೆಳೆಯ ಅಬ್ದುಲ್ ಫರ್ಹಾದ್ ಜೊತೆ ಸೇರಿ ಕೊಲೆ ಮಾಡಿದ್ದು, ಇದೀಗ ಶಕಾವತ್ ಅಲಿ ಹಾಗೂ ಅಬ್ದುಲ್ ಫರ್ಹಾದ್ ಅವರುಗಳನ್ನು ಢಾಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚುವರಿ ತನಿಖೆ ಜಾರಿಯಲ್ಲಿದೆ.
ರೈಮಾ ಇಸ್ಲಾಂ ಶಿಮು ಪತಿ ಶಕಾವತ್ ಹಾಗೂ ಮಗನೊಟ್ಟಿಗೆ ವಾಸ ಮಾಡುತ್ತಿದ್ದರು. ಜವನರಿ 16 ರಂದು ರೈಮಾ ಕಾಣೆಯಾಗಿದ್ದರು. ಈ ಬಗ್ಗೆ ಪತಿ ಶಕಾವತ್ ಪೊಲೀಸರಿಗೆ ದೂರು ನೀಡಿದ್ದ. ಜನವರಿ 18ರಂದು ನಟಿಯ ಶವ ಗೋಣಿಚೀಲದಲ್ಲಿ ಪತ್ತೆಯಾಗಿತ್ತು. ನಟಿಯನ್ನು ಅತ್ಯಂತ ಬರ್ಭರವಾಗಿ ಕೊಲ್ಲಲಾಗಿತ್ತು.
ಕುಟುಂಬ ಸಮಸ್ಯೆಯಿಂದಾಗಿ ಶಕಾವತ್ ತನ್ನ ಪತ್ನಿಯನ್ನು ಕೊಂದಿರಬಹುದು ಎನ್ನಲಾಗುತ್ತಿದೆ. ಮೊದಲು ಬೇರೆಡೆ ನಟಿಯನ್ನು ಕೊಂದು ನಂತರ ಆಕೆಯ ಶವವನ್ನು ಗೋಣಿಚೀಲಕ್ಕೆ ಹಾಕಿ ಸೇತುವೆಯ ಕೆಳಕ್ಕೆ ಬಿಸಾಡಲಾಗಿದೆ. ಶವದ ವೈದ್ಯಕೀಯ ಪರೀಕ್ಷೆಯಿಂದ ನಟಿಯ ದೇಹಕ್ಕೆ ಹಲವು ಕಡೆ ಗಂಭೀರ ಗಾಯಗಳಾಗಿರುವುದು, ಹಲವು ಮೂಳೆಗಳು ಮುರಿದಿರುವುದು ಗೊತ್ತಾಗಿದೆ ಎಂದು ಪೊಲೀಸರು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೆಲವು ಸ್ಥಳೀಯ ಮಾಧ್ಯಮಗಳ ವರದಿಯಂತೆ, ಈ ಹತ್ಯೆಯಲ್ಲಿ ಬಾಂಗ್ಲಾದೇಶ ಸಿನಿಮಾ ರಂಗದ ನಟನೊಬ್ಬನ ಹಸ್ತಕ್ಷೇಪ ಇದೆ ಎನ್ನಲಾಗುತ್ತಿದೆ. ಆದರೆ ಪ್ರಸ್ತುತ ನಟಿಯ ಪತಿ ಶಕಾವತ್ ಹಾಗೂ ಆತನ ಗೆಳೆಯ ಅಬ್ದುಲ್ಲಾ ಇಬ್ಬರನ್ನಷ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ರೈಮಾ ಇಸ್ಲಾಂ ಶಿಮು 1998 ರಲ್ಲಿ 'ಬರ್ತಮಾನ್' ಸಿನಿಮಾದಿಂದ ನಟನೆ ಆರಂಭಿಸಿದ್ದರು. ಈ ವರೆಗೆ ಹಲವು ಸಿನಿಮಾಗಳಲ್ಲಿ ಟಿವಿ ಧಾರಾವಾಹಿಗಳಲ್ಲಿ ರೈಮಾ ಇಸ್ಲಾಂ ಶಿಮು ನಟಿಸಿದ್ದರು. ಬಾಂಗ್ಲಾದ ಜನಪ್ರಿಯ ಟಿವಿ ಶೋ 'ಗ್ರಾಜುಯೇಟ್'ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ರೈಮಾ ಇಸ್ಲಾಂ ಶಿಮು, ಬಾಂಗ್ಲಾದೇಶಿ ಸಿನಿಮಾ ನಟರ ಸಂಘದ ಸದಸ್ಯೆಯೂ ಆಗಿದ್ದರು. ನಟಿಯ ಸಾವಿಗೆ ಬಾಂಗ್ಲಾ ಚಿತ್ರರಂಗ ಸಂತಾಪ ಸೂಚಿಸಿದೆ.


Click it and Unblock the Notifications











