ಹೌದು 'ಟಾಕ್ಸಿಕ್' ಅಡಲ್ಟ್ ಸಿನಿಮಾ ಏನಿವಾಗ? ಬ್ರಿಟೀಷ್ ನಟನ ಹೇಳಿಕೆ ವೈರಲ್
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಟೀಸರ್‌ಗಳು ಬಂದು ಸಖತ್ ಸದ್ದು ಮಾಡ್ತಿವೆ. ಇಂಗ್ಲೀಷ್ ಭಾಷೆಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದ ಭಾಗವಾಗಿದ್ದಾರೆ. ಮುಂಬೈ ಮೂಲದ ಬ್ರಿಟಿಷ್ ನಟ ಹಾಗೂ ಬಾಡಿ ಬಿಲ್ಡರ್ ಬೆನೆಡಿಕ್ಟ್ ಗ್ಯಾರೆಟ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
'ಟಾಕ್ಸಿಕ್' ಚಿತ್ರದ ರಾಯ ಇಂಟ್ರಡಕ್ಷನ್ ಟೀಸರ್ ಭಾರೀ ಸದ್ದು ಮಾಡಿತ್ತು. ಮುಖ್ಯವಾಗಿ ಅದರಲ್ಲಿದ್ದ ಹಸಿಬಿಸಿ ದೃಶ್ಯ ವಿವಾದ ಹುಟ್ಟು ಹಾಕಿತ್ತು. ಈ ಸಂಬಂಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಯಶ್ ಸಿನಿಮಾದಲ್ಲಿ ಇದನ್ನೆಲ್ಲಾ ನಿರೀಕ್ಷೆ ಮಾಡಿರಲಿಲ್ಲ. ಮಕ್ಕಳಿಗೆ ಈ ಸಿನಿಮಾ ತೋರಿಸುವುದು ಹೇಗೆ ಎನ್ನುವ ಚರ್ಚೆ ನಡೆದಿತ್ತು. ಇತ್ತೀಚೆಗೆ ಬಂದಿರುವ ಟೀಸರ್‌ನಲ್ಲಿ ಕೂಡ ಇಂತದ್ದೇ ದೃಶ್ಯವೊಂದಿದೆ. ಈ ಬಗ್ಗೆ ಕೂಡ ಕೆಲವರು ಕಾಮೆಂಟ್ ಮಾಡಿದ್ದರು. ಇದೆಲ್ಲದರ ಬಗ್ಗೆ ನಟ ಬೆನೆಡಿಕ್ಟ್ ಗ್ಯಾರೆಟ್ ಪ್ರತಿಕ್ರಿಯಿಸಿದ್ದಾರೆ.

ಸ್ಪೆಷಲ್ ವಿಡಿಯೋ ಮಾಡಿ ಮಾತನಾಡಿರುವ ನಟ ಬೆನೆಡಿಕ್ಟ್ ಗ್ಯಾರೆಟ್ ನೆಗೆಟಿವ್ ಕಾಮೆಂಟ್ಸ್ ಬಗ್ಗೆ ತಿರುಗೇಟು ನೀಡಿದ್ದಾರೆ. ಇದು ಅಡಲ್ಟ್ ಸಿನಿಮಾ ಎಂದು ಹೇಳಿದ್ದಾರೆ. ಚೈನ್ ಸಾ ಮಿಷಿನ್ ಬಳಸಿ ಮನುಷ್ಯನ ತಲೆ ಕಡಿಯುವ ದೃಶ್ಯಕ್ಕಿಂತ ಇಬ್ಬರು ವಯಸ್ಕರು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡುವ ಮಗುವಿನ ಬಗ್ಗೆ ಪ್ರೇಕ್ಷಕರು ಹೆಚ್ಚು ಚಿಂತೆ ಮಾಡುತ್ತಿದ್ದಾರೆ. ಅದು ಒಂದು ಸಮಸ್ಯೆ ಎನ್ನುವಂತೆ ನೋಡುತ್ತಿರುವುದು ವಿಪರ್ಯಾಸ ಎಂದಿದ್ದಾರೆ.
ವಿಡಿಯೋ ಮಾಡಿ ಮಾತನಾಡಿರುವ ನಟ ಬೆನೆಡಿಕ್ಟ್ ಗ್ಯಾರೆಟ್ "ಟಾಕ್ಸಿಕ್ ಒಂದು ವಯಸ್ಕರ ಚಿತ್ರ. ಇದರ ಟ್ಯಾಗ್‌ಲೈನ್ ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಅಂತಿದೆ ಎಂದಿದ್ದಾರೆ. ಟೀಸರ್‌ನಲ್ಲಿ ನೀವು "ಕ್ರೂರ ಹಿಂಸೆಯನ್ನು ನೋಡುತ್ತೀರಿ, ರಕ್ತವನ್ನು ನೋಡುತ್ತೀರಿ ಮತ್ತು ಒಬ್ಬ ವ್ಯಕ್ತಿಯ ತಲೆಯನ್ನು ಚೈನ್ ಗರಗಸದಿಂದ ಕತ್ತರಿಸುವುದನ್ನು ನೀವು ನೋಡುತ್ತೀರಿ - ಯಾರೂ ಕಣ್ಣು ಮಿಟುಕಿಸುವುದಿಲ್ಲ. 8 ವರ್ಷದ ಮಗುವಿಗೆ ಇದೆಲ್ಲಾ ಅತಿಯಾಯಿತು ಎಂದು ಯಾರೂ ಕೇಳುವುದಿಲ್ಲ. ಆದರೆ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಲೈಂಗಿಕ ಸನ್ನಿವೇಶದಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ಆಕ್ಷೇಪ, ಆಕ್ರೋಶ ಯಾಕೆ?" ಎಂದು ಬೆನೆಡಿಕ್ಟ್ ಗ್ಯಾರೆಟ್ ಪ್ರಶ್ನಿಸಿದ್ದಾರೆ.
ತೆರೆಮೇಲೆ ಜನರು ಪರಸ್ಪರ ಕೊಲ್ಲುವುದನ್ನು ನೋಡುವುದು ನಮಗೆ ಸಂಪೂರ್ಣವಾಗಿ ಸರಿ ಎಂದು ತೋರುತ್ತದೆ. ಆದರೆ ಇಬ್ಬರು ಮನುಷ್ಯರು ಸಾಧ್ಯವಾದಷ್ಟು ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಸರಿ ಅಲ್ಲ ಎಂದರೆ ಹೇಗೆ? ಈ ಡಬಲ್ ಸ್ಟ್ಯಾಂಡರ್ಡ್ ವಾದ ಯಾಕೆ? ಎಂದು ಬೆನೆಡಿಕ್ಟ್ ಗ್ಯಾರೆಟ್ ಕೇಳಿದ್ದಾರೆ. ಬ್ರಿಟಿಷ್ ನಟನ ಅಭಿಪ್ರಾಯವನ್ನು ಯಶ್ ಅಭಿಮಾನಿಗಳು ಸ್ವಾಗತಿಸಿದ್ದಾರೆ. "ಸರಿಯಾಗಿ ಹೇಳಿದ್ದೀರಾ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಮಾರ್ಚ್ 19ರಂದು 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಟ್ರೈಲರ್ ರಿಲೀಸ್ ಆಗಬೇಕಿದೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ. ರವಿ ಬಸ್ರೂರು ಸೇರಿ 5 ಜನ ಸಂಗೀತ ನಿರ್ದೇಶಕರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ. ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಚಿತ್ರದ ತಾರಾಗಣದಲ್ಲಿದ್ದಾರೆ. ಬಾಲಿವುಡ್ ಸಿನಿಮಾ 'ಧುರಂಧರ್- 2' ಎದುರು 'ಟಾಕ್ಸಿಕ್' ಸಿನಿಮಾ ಬಾಕ್ಸಾಫೀಸ್ ಕದನ ನಡೆಯಲಿದೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಜೋರಾಗಿ ನಡೀತಿದೆ. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಲೆಕ್ಕಾಚಾರ ನಡೀತಿದೆ.


Click it and Unblock the Notifications











