ತನ್ನ ಚಿತ್ರದ ನಾಯಕಿಗೆ ನರಕ ತೋರಿಸಿದ ನಿರ್ದೇಶಕ, 80 ಪುಟಗಳ ದೂರು ದಾಖಲು..!
ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿಲ್ಲ. ಬದಲಿಗೆ ವಿಶ್ವದ ನಾನಾ ಮೂಲೆಯಲ್ಲಿ ಇರುವ ಚಿತ್ರರಂಗದಲ್ಲಿ ಕೂಡ ಮಹಿಳೆಯರಿಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ. ಚಿತ್ರದ ನಾಯಕಿಯರಿಗೆ ಲೈಂಗಿಕ ಕಿರುಕುಳ ಕೊಡಲಾಗುತ್ತಿದೆ. ಇದಕ್ಕೆ ಇನ್ನೊಂದು ಸಾಕ್ಷಿ ಎನ್ನುವಂತೆ ಬ್ಲೇಕ್ ಲೈವ್ಲಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ.
ಹೌದು, 'ನ್ಯೂಯಾರ್ಕ್ ಐ ಲವ್ ಯೂ', 'ಆಲ್ ಐ ಸೀ ಇಸ್ ಯು', 'ದಿ ಟೌನ್' ಸೇರಿ ಕಳೆದ ಎರಡು ದಶಕದಲ್ಲಿ ಹಲವಾರು ಚಿತ್ರಗಳನ್ನು ಮಾಡಿರುವ ಹಾಲಿವುಡ್‌ನ ನಾಯಕಿ ಬ್ಲೇಕ್ ಲೈವ್ಲಿ ನಾಯಕ ಮತ್ತು ನಿರ್ದೇಶಕ ಜಸ್ಟಿನ್ ಬಾಲ್ಡೋನಿ ವಿರುದ್ಧ ಮೀಟೂ ಆರೋಪವನ್ನು ಮಾಡಿದ್ದಾರೆ. ಜಸ್ಟಿನ್ ಬಾಲ್ಡೋನಿ ಜೊತೆಯಲ್ಲಿ ಇವರ ಒಡೆತನದ ವೇಫೇರರ್ ಸ್ಟುಡಿಯೋಸ್‌ನ ಸಿಇಓ ಜೇಮೀ ಹೀತ್ ವಿರುದ್ಧ ಕೂಡ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 80 ಪುಟಗಳ ದೂರು ದಾಖಲಿಸಿದ್ದಾರೆ.

ಚಿತ್ರದ ಚಿತ್ರೀಕರಣದ ನೆಪದಲ್ಲಿ ಬಾಲ್ಡೋನಿ ತನ್ನ ತುಟಿಗಳನ್ನು ಬೇಕು ಬೇಕಂತಲೇ ಮುಟ್ಟಿದ್ದಾನೆ ಎಂದು ಆರೋಪ ಮಾಡಿರುವ ಬ್ಲೇಕ್ ಲೈವ್ಲಿ ಲಿಪ್ ಲಾಕ್ ಸನ್ನಿವೇಶಗಳನ್ನು ಸೇರಿಸಿ ನನ್ನ ತುಟಿಗಳನ್ನು ಕಚ್ಚಿದ್ದಾನೆ ಎಂದು ಹೇಳಿದ್ದಾರೆ.
ಇನ್ನು ನನ್ನ ಒಪ್ಪಿಗೆ ಇಲ್ಲದೇ ನನ್ನ ಗಮನಕ್ಕೂ ತಾರದೇ ಚಿತ್ರದಲ್ಲಿ ಲೈಂಗಿಕ ದೃಶ್ಯಗಳನ್ನು ಸೇರಿಸಿದ್ದಾರೆ ಎಂದು ಹೇಳಿರುವ ಬ್ಲೇಕ್ ಲೈವ್ಲಿ, ತಮ್ಮ ಮಗುವಿಗೆ ಎದೆಹಾಲು ಉಣಿಸುವಾಗ ನನ್ನೆದುರು ದುತ್ತನೆ ಬಾಲ್ಡೋನಿ ಪ್ರತ್ಯಕ್ಷವಾದ ಎಂದು ಹೇಳಿದ್ದಾರೆ. ನನ್ನ ಬಗ್ಗೆ ಅಸಂಬದ್ದ, ಅಶ್ಲೀಲ ಮಾತುಗಳನ್ನಾಡಿದ್ಧಾರೆ ಎಂದು ಹೇಳಿದ್ದಾರೆ.
ತಮ್ಮ ಕಂಪನಿಯ ಸಿಇಓ ಜೇಮೀ ಹೀತ್ ಅವರ ಪತ್ನಿಯನ್ನು ಒಳಗೊಂಡಂತೆ ಅನೇಕ ಮಹಿಳೆಯರ ನಗ್ನ ಚಿತ್ರಗಳನ್ನು ನನಗೆ ಬಲವಂತವಾಗಿ ತೋರಿಸಿದ್ದಾರೆ ಎಂದು ಆರೋಪವನ್ನು ಮಾಡಿರುವ ಬ್ಲೈಕ್ ಲೈವ್ಲಿ, ತೀರಿಕೊಂಡಿರುವ ನನ್ನ ತಂದೆಯ ಜೊತೆ ಮಾತನಾಡುವುದಾಗಿ ಕೂಡ ಜಸ್ಟಿನ್ ಬಾಲ್ಡೋನಿ ನನಗೆ ಹೇಳಿದ್ದಾರೆ ಎಂದಿರುವ ಬ್ಲೇಕ್ ಲೈವ್ಲಿ ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ ನಿರಂತರವಾಗಿ ಕಿರುಕುಳ ನೀಡಲಾಗಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿನ ಹೆರಿಗೆಯ ದೃಶ್ಯದ ಚಿತ್ರೀಕರಣದಂದು ಚಿತ್ರತಂಡಕ್ಕೆ ಸಂಬಂಧವೇ ಇರದ ತಮ್ಮ ಸ್ನೇಹಿತನನ್ನು ಕರೆದು ನನ್ನ ಅರೆಬೆತ್ತಲೆಯನ್ನಾಗಿಸಿ ಚಿತ್ರೀಕರಣ ಮಾಡಿದ್ದಾರೆ ಎಂದು ಆರೋಪವನ್ನು ಕೂಡ ಮಾಡಿದ್ದಾರೆ.
ಅಂದ್ಹಾಗೇ ಬ್ಲೇಕ್ ಲೈವ್ಲಿ ಮತ್ತು ಜಸ್ಟಿನ್ ಬಾಲ್ಡೋನಿ ಇಟ್ ಎಂಡ್ಸ್ ವಿತ್ ಅಸ್ ಎಂಬ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಬ್ಲೇಕ್ ಲೈವ್ಲಿ ಎದುರು ನಾಯಕನಾಗಿ ಅಭಿನಯಿಸುವುದಲ್ಲದೇ ಜಸ್ಟಿನ್ ಬಾಲ್ಡೋನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ಮಾಣದಲ್ಲಿ ಕೂಡ ಕೊಲಂಬಿಯಾ ಪಿಕ್ಚರ್ಸ್ ಜೊತೆ ಕೈ ಜೋಡಿಸಿದ್ದಾರೆ. ವಿಶೇಷ ಅಂದರೆ ಬ್ಲೇಕ್ ಲೈವ್ಲಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಕೂಡ ಹೌದು. ಇನ್ನು ಕೌಟಂಬಿಕ ಹಿಂಸೆ ಮತ್ತು ದೌರ್ಜನ್ಯದ ಸುತ್ತ ಸುತ್ತುವ ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ಚಿತ್ರದ ಕಥಾನಾಯಕಿ ಬ್ಲೇಕ್ ಲೈವ್ಲಿ ಅವರ ಮೇಲೆ ಜಸ್ಟಿನ್ ಬಾಲ್ಡೋನಿ ದೌರ್ಜನ್ಯ ಎಸಗಿರುವುದು ವಿಪರ್ಯಾಸ.
ಸದ್ಯ ಬ್ಲೇಕ್ ಲೈವ್ಲಿ ಅವರ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇನ್ನು ಹಾಲಿವುಡ್‌ನ ಅನೇಕ ನಟಿಯರು ಬ್ಲೇಕ್ ಲೈವ್ಲಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಕಡೆ ಜಸ್ಟಿನ್ ಬಾಲ್ಡೋನಿ ವಿರುದ್ಧ ಬ್ಲೇಕ್ ಲೈವ್ಲಿ ದೂರು ದಾಖಲಿಸಿದ ಬೆನ್ನಲ್ಲಿಯೇ ಜಸ್ಟಿನ್ ಬಾಲ್ಡೋನಿಯ ಪ್ರಚಾರವನ್ನು ಹಿಂದೆ ಮಾಡುತ್ತಿದ್ದ ಪ್ರಚಾರಕ ಸ್ಟೆಫ್ ಜೋನ್ಸ್ ಕೂಡ ಜಸ್ಟಿನ್ ಬಾಲ್ಡೋನಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಇವರಿಬ್ಬರ ವಿರುದ್ಧ ಜಸ್ಟಿನ್ ಬಾಲ್ಡೋನಿ ಕಾನೂನು ಸಮರವನ್ನು ಕೂಡ ಸದ್ಯ ಸಾರಿದ್ದಾರೆ.


Click it and Unblock the Notifications











