03 ಬಾರಿ ಮದುವೆಯಾದರೂ ಸಿಗಲಿಲ್ಲ ಸಂಸಾರದ ಸುಖ, ತನ್ನನ್ನು ತಾನೇ ಮದುವೆಯಾದ ವಿಶ್ವವಿಖ್ಯಾತ ಗಾಯಕಿ..!
ಸೊಲೊಗಮಿ ಅಂದರೆ ಸ್ವಯಂ ವಿವಾಹ. ತಮ್ಮನ್ನು ತಾವೇ ಮದುವೆಯಾಗುವ ಪರಿಕಲ್ಪನೆ. ಇದನ್ನು ಸ್ವಯಂ ಪತ್ನಿತ್ವ ಎಂದು ಕೂಡ ಅನೇಕರು ಕರೆಯುತ್ತಾರೆ. 1993ರಲ್ಲಿ ಅಮೆರಿಕಾದಲ್ಲಿ ಶುರುವಾದ ಈ ಸಂಪ್ರದಾಯಕ್ಕೆ ಕಾನೂನಿನಲ್ಲಿ ಅನುಮತಿ ಇಲ್ಲ. ಸ್ಥಾನ ಮಾನ ಕೂಡ ಇಲ್ಲ. ಆದರೂ ಅನೇಕರು ತಮ್ಮ ಸ್ವಯಂ ಪ್ರೀತಿ ಮತ್ತು ಸ್ವಾತಂತ್ರ್ಯವನ್ನು ಅಖಂಡ ವಿಶ್ವಕ್ಕೆ ಸಾರಲು ಸಮಾರಂಭವನ್ನು ಆಯೋಜಿಸಿ ತಮ್ಮನ್ನು ತಾವೇ ಮದುವೆಯಾಗುತ್ತಾರೆ.
2022ರಲ್ಲಿ ಇದೇ ಕಲ್ಪನೆಯಡಿ ಗುಜರಾತ್‌ನ 24 ವರ್ಷದ ಯುವತಿ ಕ್ಷಮಾ ಬಿಂದು ತಮ್ಮನ್ನು ತಾವು ಮದುವೆಯಾಗಿದ್ದು. ತಮ್ಮ ಮದುವೆಯ ಸ್ವಯಂ ಪ್ರೀತಿಯ ಕ್ರಿಯೆ ಎಂದು ಕರೆದಿದ್ದರು. ಈ ಮೂಲಕ ಭಾರತದಲ್ಲಿ ತಮ್ಮನ್ನು ತಾವು ಮದುವೆಯಾದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಕ್ಷಮಾ ಬಿಂದು ಪಾತ್ರವಾಗಿದ್ದರು. ಭಾರೀ ಚರ್ಚೆಗೆ ಕಾರಣ ಕೂಡ ಆಗಿದ್ದರು. ಇದೀಗ ಇದೇ ತರಹದ ಚರ್ಚೆಗೆ ಅಮೆರಿಕಾದಲ್ಲಿ ಬ್ರಿಟ್ನಿ ಸ್ಪಿಯರ್ಸ್ ಮುನ್ನುಡಿ ಬರೆದಿದ್ದಾರೆ. ವ್ಯೆಯಕ್ತಿಕ ಜೀವನದಲ್ಲಿ ನೊಂದು ಬೆಂದು ಪುರುಷರ ಸಹವಾಸ ಸಾಕೆನಿಸಿ ತಮ್ಮನ್ನು ತಾವೇ ಮದುವೆಯಾಗಿದ್ದಾರೆ.

ಹೌದು, ಬ್ರಿಟ್ನಿ ಸ್ಪಿಯರ್ಸ್.. ಒಂದ್ಕಾಲದಲ್ಲಿ ತನ್ನ ಚಿನ್ನದ ಕಂಠದಿಂದ ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಗಾಯಕಿ. ಅಭಿನಯದಲ್ಲಿ ಕೂಡ ಸೈ ಎನಿಸಿಕೊಂಡಿದ್ದ ನಾಯಕಿ. ಆ ಕಾಲದಲ್ಲಿ ಪ್ರಿನ್ಸಸ್ ಆಫ್ ಪಾಪ್ ಎಂದೇ ಜನ ಜನಿತರಾದವರು ಇವರು.
ಇಂಥಾ ಬ್ರಿಟ್ನಿ ಸ್ಪಿಯರ್ಸ್ 2004ರಲ್ಲಿ ಜೇಸನ್ ಅಲೆಕ್ಯಾಂಡರ್‌ನ ಮದುವೆಯಾಗಿದ್ದರು. ಆದರೆ, ದುರಾದೃಷ್ಟವಶಾತ್.. ಈ ಸಂಬಂಧ ಕೇವಲ 55 ಘಂಟೆಗಳಲ್ಲಿ ಅಂದರೆ ಎರಡೂವರೆ ದಿನದಲ್ಲಿಯೇ ಹಳಸಿ ಹೋಗಿತ್ತು. ಹೀಗಾಗಿ ಜೇಸನ್ ಅಲೆಕ್ಸಾಂಡರ್‌ಗೆ ವಿಚ್ಛೇದನ ನೀಡಿದ್ದ ಬ್ರಿಟ್ನಿ ಸ್ಪಿಯರ್ಸ್ ಅದೇ ವರ್ಷ ಅಂದರೆ 2004ರಲ್ಲಿಯೇ ಕೆವಿನ್ ಫೆಡರಲ್ ನ ಮದುವೆಯಾದರು. ಮೂರು ವರ್ಷ ಸಂಸಾರವನ್ನು ನಡೆಸಿದರು. ಇಬ್ಬರ ಪ್ರೀತಿಯ ಸಂಕೇತವಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಈ ಮದುವೆ ಕೂಡ ಮುರಿದು ಬಿತ್ತು.
ಆ ನಂತರ 2019ರಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡ ಬ್ರಿಟ್ನಿ ಸ್ಪಿಯರ್ಸ್ ಖಿನ್ನತೆಗೆ ಜಾರಿದರು. ಒಂದೂವರೆ ತಿಂಗಳು ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆದರು. ಆಗ ಬ್ರಿಟ್ನಿ ಸ್ಪಿಯರ್ಸ್ ಅವರ ಅಭಿಮಾನಿಗಳು ಕ್ಯಾಲಿಪೋರ್ನಿಯಾದ ಸಿಟಿ ಹಾಲ್ ಹೊರಗೆ ಪ್ರತಿಭಟನೆಯನ್ನು ಮಾಡಿದ್ದರು. ಬ್ರಿಟ್ನಿಯನ್ನು ಕೂಡಲೇ ಮಾನಸಿಕ ಚಿಕಿತ್ಸಾ ಕೇಂದ್ರದಿಂದ ಬಿಡುಗಡೆ ಮಾಡಬೇಕು, ಆಕೆಗೆ ಏನೂ ಆಗಿಲ್ಲ ಎಂದು ಘೋಷಣೆ ಕೂಗಿದ್ದರು. ಆಕೆಯ ಮ್ಯಾನೇಜರ್‌ನಿಂದ ಈ ಸ್ಥಿತಿ ಆಕೆಗೆ ಬಂದಿದೆ ಎಂದು ದೂರಿದ್ದರು. ಅಭಿಮಾನಿಗಳ ಈ ಅಭಿಮಾನವನ್ನು ಸಾಮಾಜಿಕ ಜಾಲತಾಣದ ಮೂಲಕ ನೋಡಿದ್ದ ಬ್ರಿಟ್ನಿ ನನ್ನ ಬದುಕಿನಲ್ಲಿ ಬಂದಿರುವ ಕೆಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ನನಗೆ ಸ್ವಲ್ಪ ಪ್ರೈವೆಸಿ ಬೇಕಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಆ ನಂತರ ಚೇತರಿಸಿಕೊಂಡರು.
ಇಷ್ಟರಲ್ಲಿ ಬ್ರಿಟ್ನಿ ಸ್ಪಿಯರ್ಸ್ ಬದುಕಿನಲ್ಲಿ ಮೂರನೇ ವ್ಯಕ್ತಿ ಪ್ರವೇಶವಾಗಿತ್ತು. ಹೀಗಾಗಿ ತಮಗಿಂತ ಹನ್ನೆರಡು ವರ್ಷ ಚಿಕ್ಕವನಾದರೂ ಕೂಡ ಸ್ಯಾಮ್ ಅಸ್ಗರಿ ಜೊತೆ 2022ರಲ್ಲಿ ಬ್ರಿಟ್ನಿ ಸ್ಪಿಯರ್ಸ್ ಮದುವೆಯಾದರು. ಆದರೆ ಈ ಸಂಬಂಧ ಕೂಡ ಒಂದೇ ವರ್ಷಕ್ಕೆ ಉಸಿರು ಚೆಲ್ಲಿತ್ತು. ಹೀಗೆ ಮೂರು ಬಾರಿ ಮದುವೆಯಾಗಿ ಡಿವೋರ್ಸ್ ಪಡೆದ ಬ್ರಿಟ್ನಿ ಸ್ಪಿಯರ್ಸ್ ಇದೀಗ ಎಲ್ಲರಿಗೆ ಶಾಕ್ ನೀಡಿದ್ದಾರೆ. ನನ್ನನ್ನೂ ನಾನೇ ಮದುವೆಯಾಗಿದ್ದೇನೆ ಎಂದು ವಧುವಿನಂತೆ ಸಿಂಗಾರಗೊಂಡು ವಿಡಿಯೋ ಹಂಚಿಕೊಂಡಿದ್ದಾರೆ. ಸ್ಯಾಟಿವ್ ವೆಡ್ಡಿಂಗ್ ಗೌನ್ ಮತ್ತು ಮುಸುಕು ಧರಿಸಿ ತನ್ನ ಅಭಿಮಾನಿಗಳಿಗೆ ತಾನು ಮದುವೆಯಾದ ವಿಚಾರವನ್ನು ಹೇಳಿರುವ ಬ್ರಿಟ್ನಿ ಸ್ಪಿಯರ್ಸ್, ನನ್ನನ್ನೇ ನಾನು ಮದುವೆಯಾಗಿದ್ದೇನೆ. ಇದು ಮುಜುಗರದಂತೆ.. ಮೂರ್ಖತನದಂತೆ ನಿಮಗೆ ಕಾಣಬಹುದು ಆದರೆ ನನ್ನ ಪ್ರಕಾರ ಇದು ನಾನು ಮಾಡಿದ ಅತ್ಯಂತ ಬುದ್ದಿವಂತ ಕೆಲಸ ಎಂದಿದ್ದಾರೆ. ಮುಂದುವರೆದು ಟರ್ಕ್ಸ್ ಮತ್ತು ಕೈಕೋಸ್ ದ್ವೀಪದಲ್ಲಿ ಹನಿಮೂನ್ ಕೂಡ ಪ್ಲ್ಯಾನ್ ಮಾಡಿದ್ದೇನೆ ಎಂದಿರುವ ಬ್ರಿಟ್ನಿ ಸ್ಪಿಯರ್ಸ್ ಹನಿಮೂನ್‌ನಲ್ಲಿ ನಾನೇನು ಮಾಡುತ್ತೇನೆ ಎನ್ನುವುದನ್ನು ನಾನು ನಿಮಗೆ ಶೀಘ್ರದಲ್ಲಿಯೇ ಹೇಳುತ್ತೇನೆ ಎಂದಿದ್ದಾರೆ. ಸದ್ಯಕ್ಕೆ ಬ್ರಿಟ್ನಿ ಸ್ಪಿಯರ್ಸ್ ಅವರ ಈ ವಿಡಿಯೋ ನೋಡಿ ಅನೇಕರು ಬೆಚ್ಚಿ ಬಿದ್ದಿದ್ದಾರೆ. ಬ್ರಿಟ್ನಿ ಸ್ಪಿಯರ್ಸ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.


Click it and Unblock the Notifications











