The Odyssey Censor : ನೋಲನ್ 'ದಿ ಒಡಿಸ್ಸಿ' ನೋಡಲು ಚಿತ್ರಮಂದಿರದಲ್ಲಿ ಎಷ್ಟು ಗಂಟೆ ಕೂರಬೇಕು ? ಮನೆಮಂದಿ ಜೊತೆ ನೋಡಬಹುದಾ ?
ಚಿತ್ರರಂಗದವರಿಗೆ ''ಸೆನ್ಸಾರ್'' ಮಂಡಳಿ ಯಾವತ್ತು ಮಗ್ಗಲದ ಮುಳ್ಳು. ಯಾಕೆಂದರೆ.. ಒಂದು ಚಿತ್ರವನ್ನು ತಮ್ಮ ಕಲ್ಪನೆಗೆ ಅನುಗುಣವಾಗಿ ನಿರ್ದೇಶಕರು ರೆಡಿ ಮಾಡಿರುತ್ತಾರೆ. ಆದರೆ.. ಈ ಸೆನ್ಸಾರ್ ಅಂಗಳಕ್ಕೆ ಬಂದಾಗ ಅಲ್ಲಿ ಬರೆ ಹಾಕಲಾಗುತ್ತೆ. ಹಾಲಿವುಡ್ ಚಿತ್ರ ರಸಿಕರ ಪಾಲಿಗೆ ಸಮಾಧಾನದ ವಿಷಯ ಅಂದರೆ ಈ ವಾರ (ಜುಲೈ 17)ತೆರೆಗೆ ಬರುತ್ತಿರುವ ''ದಿ ಒಡಿಸ್ಸಿ'' ಚಿತ್ರಕ್ಕೆ ಭಾರತದ ಸೆನ್ಸಾರ್ ಬೋರ್ಡ್ ಎಲ್ಲಿಯೂ ಕತ್ತರಿ ಹಾಕಿಲ್ಲ. ಬದಲಿಗೆ ಕ್ಲೀನ್ ಚೀಟ್ ನೀಡಿದೆ.
ಹೌದು, ''ದಿ ಒಡಿಸ್ಸಿ''.. ಕ್ರಿಸ್ಟೋಫರ್ ನೋಲನ್ ಅವರ ಹೊಸ ಕನಸು. ಇದೇ ಜುಲೈ 17ರಂದು ತೆರೆಗೆ ಬರಲಿರುವ ಈ ಚಿತ್ರವನ್ನು ಭಾರತೀಯ ಸೆನ್ಸಾರ್ ಮಂಡಳಿ (CBFC) ಕಣ್ತುಂಬಿಕೊಂಡಿದೆ. ಯಾವುದೇ ಕಟ್.. ಮ್ಯೂಟ್ ಅಥವಾ ಬದಲಾವಣೆಗಳನ್ನು ಸೂಚಿಸದೇ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಸರ್ಟಿಫಿಕೆಟ್ ಯಾವುದು..?
''ದಿ ಒಡಿಸ್ಸಿ'' ಚಿತ್ರವನ್ನು ನೋಡಿ ಭಾರತದ ಸೆನ್ಸಾರ್ ಮಂಡಳಿ ಯಾವುದೇ ತಕರಾರು ತೆಗೆದಿಲ್ಲವಾದರೂ ಈ ಚಿತ್ರವನ್ನು ನೀವು ನಿಮ್ಮಅಪ್ರಾಪ್ತ ವಯಸ್ಸಿನ ಮಕ್ಕಳ ಜೊತೆ ಈ ಚಿತ್ರವನ್ನು ನೋಡಲು ಸಾಧ್ಯ ಇಲ್ಲ. ಯಾಕೆಂದರೆ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ''ಎ'' ಸರ್ಟಿಫಿಕೆಟ್ ನೀಡಿದೆ. ಚಿತ್ರ ನೋಡಲು ಕಡ್ಡಾಯವಾಗಿ 18 ವರ್ಷ ತುಂಬಿರಲೇ ಬೇಕು.
ಇನ್ನು ಸಾಮಾನ್ಯವಾಗಿ ''ಎ'' ಸರ್ಟಿಫಿಕೆಟ್ ಸಿಕ್ಕರೆ ಫ್ಯಾಮಿಲಿ ಆಡಿಯನ್ಸ್ ಚಿತ್ರ ನೋಡಲು ಹಿಂದೇಟು ಹಾಕುತ್ತಾರೆ ಎನ್ನುವ ಮಾತು ಇದೆ. ಹೀಗಾಗಿಯೇ ಹಲವರು ಯು/ಎ ಸರ್ಟಿಫಿಕೆಟ್ ಪಡೆಯಲು ನಾನಾ ಕಸರತ್ತು ಮಾಡುತ್ತಾರೆ. ಸೆನ್ಸಾರ್ ಹೇಳದಿದ್ದರೂ ತಾವೇ ಕತ್ತರಿ ಪ್ರಯೋಗಕ್ಕೆ ಮುಂದಾಗುತ್ತಾರೆ. ಆದರೆ, ನೋಲನ್ ಇದಕ್ಕೆ ತದ್ವಿರುದ್ದ. ''ಎ'' ಸರ್ಟಿಫಿಕೆಟ್‌ಗೆ ನೋಲನ್ ತೃಪ್ತಿ ಪಟ್ಟಿದ್ದಾರೆ.
ರನ್ ಟೈಮ್ ಎಷ್ಟು ..?
ಜುಲೈ 11ರಂದು ಈ ಚಿತ್ರದ ಪ್ರೀಮಿಯರ್ ಮುಂಬೈನಲ್ಲಿತ್ತು. ಅದಕ್ಕೂ ಮುನ್ನ ಅಂದರೆ ಜುಲೈ 9ರಂದು ಚಿತ್ರ ಸೆನ್ಸಾರ್ ಅಂಗಳದಲ್ಲಿ ''ಎ'' ಸರ್ಟಿಫಿಕೆಟ್ ಪಡೆದಿದ್ದು, ಚಿತ್ರದ ಅವಧಿ 172.33 ನಿಮಷ ಇದೆ ಎಂದು ಉಲ್ಲೇಖ ಮಾಡಲಾಗಿದೆ. ಅಂದರೆ ''ದಿ ಒಡಿಸ್ಸಿ'' ನೋಡಲು ನೀವು ಚಿತ್ರಮಂದಿರಗಳಲ್ಲಿ ಬರೋಬ್ಬರಿ 2 ಗಂಟೆ, 52 ನಿಮಿಷ ಮತ್ತು 33 ಸೆಕೆಂಡ್ ಕೂರಬೇಕು.
ಓಪನ್ ಹೈಮರ್ ಸಮಯದಲ್ಲಾಗಿತ್ತು ವಿವಾದ
ಇದೇ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ''ಓಪನ್ ಹೈಮರ್'' 3 ವರ್ಷದ ಹಿಂದೆ ಬಿಡುಗಡೆಯಾದಾಗ ಭಾರತದಲ್ಲಿ ವಿವಾದಕ್ಕೀಡಾಗಿತ್ತು. ಭಾರತದ ಸೆನ್ಸಾರ್ ಮಂಡಳಿ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಯಾಕೆಂದರೆ
ಸಿನಿಮಾದ ಒಂದು ದೃಶ್ಯದಲ್ಲಿ ಮಹಿಳೆಯು ವ್ಯಕ್ತಿಯೊಬ್ಬನ ಮೇಲೇರಿ, ಲೈಂ*ಗಿಕ ಕ್ರಿಯೆ ನಡೆಸುತ್ತಾ ಭಗವದ್ ಗೀತೆ ಓದುವ ಸನ್ನಿವೇಶ ಇತ್ತು. ಸೆನ್ಸಾರ್ ಇದಕ್ಕೆ ಚಕಾರ ಎತ್ತದೇ ಸರ್ಟಿಫಿಕೆಟ್ ನೀಡಿತ್ತು. ಈ ಹಿನ್ನೆಲೆ ಈ ದೃಶ್ಯದೊಂದಿಗೆ ಸಿನಿಮಾಕ್ಕೆ ಅನುಮತಿ ನೀಡಲು ಹೇಗೆ ಸಾಧ್ಯ ..? ಎನ್ನುವ ಪ್ರಶ್ನೆ ಹಲವರನ್ನು ಕಾಡಿತ್ತು.

''ದಿ ಒಡಿಸ್ಸಿ'' ಸಿನಿಮಾ ಬಗ್ಗೆ
ಹೋಮರ್ ಬರೆದ ಪ್ರಾಚೀನ ಗ್ರೀಕ್ ಕಾದಂಬರಿ ಆಧರಿಸಿ ನೋಲನ್ ಈ ಚಿತ್ರವನ್ನು ಮಾಡಿದ್ದಾರೆ. ಟ್ರೋಜನ್ ಯುದ್ಧದ ನಂತರ ಒಡಿಸ್ಸಿಯಸ್ ತನ್ನ ತಾಯ್ನಾಡಾದ ಇಥಾಕಾಗೆ ಮರಳಲು ನಡೆಸುವ 10 ವರ್ಷಗಳ ಸುದೀರ್ಘ ಪ್ರಯಾಣದ ಕಥೆ ಇದರಲ್ಲಿದೆ.
ತಾರಾಬಳಗ
ಮ್ಯಾಟ್ ಡಾಮನ್ (ಒಡಿಸ್ಸಿಯಸ್), ಆ್ಯನ್ ಹ್ಯಾಥ್‌ವೇ (ಪೆನೆಲೋಪ್), ಟಾಮ್ ಹಾಲೆಂಡ್ (ಮಗ ಟೆಲಿಮ್ಯಾಕಸ್) ಆಗಿ ನಟಿಸಿದ್ದಾರೆ. ಜೊತೆಗೆ ರಾಬರ್ಟ್ ಪ್ಯಾಟಿನ್ಸನ್, ಲುಪಿತಾ ನ್ಯಾಂಗೋ ಮತ್ತು ಝೇಂಡೆಯಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ರ್ಯಾಪರ್ ಟ್ರಾವಿಸ್ ಸ್ಕಾಟ್ ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರಲ್ಲದೆ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ.


Click it and Unblock the Notifications