Coldplay ; ಅಹಮದಾಬಾದ್‌ಗೆ ಹಬ್ಬಿದ 'ಕೋಲ್ಡ್ ಪ್ಲೇ' ಜ್ವರ, ಹೋಟೆಲ್ ಮಾಲೀಕರಿಗೆ ಕುಬೇರ ವರ...!
ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಕೋಲ್ಡ್ ಪ್ಲೇ ತಂಡದ ಸಂಗೀತ ಸುಧೆಯಲ್ಲಿ ತೇಲಲು ನೂಕು ನುಗ್ಗಲು ನಡೆಯುತ್ತಿದೆ. ಅಹಮದಾಬಾದ್ ನಲ್ಲಿ ಹೊಟೇಲ್ ರೂಮ್ ಗಗನದೆತ್ತರಕ್ಕೆ ತಲುಪಿದೆ
ಹೌದು, ಕೋಲ್ಡ್ ಪ್ಲೇ.. ಬ್ರಿಟನ್‌ನ ರಾಕ್ ಬ್ಯಾಂಡ್. ತಮ್ಮ ಸಂಗೀತದಿಂದನೇ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ವಿಶ್ವದೆಲ್ಲೆಡೆ ಸಂಪಾದನೆ ಮಾಡಿರುವ ಈ ತಂಡಕ್ಕೆ ಭಾರತದಲ್ಲಿ ಕೂಡ ಅಪಾರವಾದ ಅಭಿಮಾನಿಗಳಿದ್ದಾರೆ. ಇವರ ಹಾಡನ್ನು ಕೇಳುತ್ತಾ ಮೈ ಮರೆಯುತ್ತಾರೆ. ಕುಂತಲ್ಲಿಯೇ ಕುಣಿಯುತ್ತಾರೆ.

ಇಂತಹ ಕೋಲ್ಡ್ ಪ್ಲೇ ತಂಡ ಒಂಬತ್ತು ವರ್ಷದ ನಂತರ ಭಾರತಕ್ಕೆ ಮರಳಿ ಬರುತ್ತಿದೆ. ಮುಂಬೈ ಬಳಿಕ ಅಹಮದಾಬಾದ್ ನಲ್ಲಿ ಕೂಡ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಹಜವಾಗಿ ಈ ಸುದ್ದಿ ಕೇಳಿದ ಅಭಿಮಾನಿ ವರ್ಗ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಜಾತಕ ಪಕ್ಷಿಯಂತೆ ಕಾಯುತ್ತಿದೆ. ಟಿಕೆಟ್ ಎಲ್ಲೆಲ್ಲಿ ಸಿಗುತ್ತೆ ಎಂದು ಗೂಗಲ್ ಗೆ ಬೇಸರವಾಗುವಷ್ಟು ಹುಡುಕುತ್ತಿದೆ.
ಆದರೆ .. ಟಿಕೆಟ್ ಮಾತ್ರ ಸಿಕ್ತಿಲ್ಲ. ಸಿಕ್ಕರೂ ಹೋಗಲು ಹಣ ಸಾಕಾಗುತ್ತಿಲ್ಲ. ಹೌದು. ಅಸಲಿಗೆ ಮುಂಬೈನಲ್ಲಿ ಈ ಜನವರಿ 18, 19 ಮತ್ತು 21ರಂದು ಸಹಸ್ರಾರು ಸಂಖ್ಯೆಯ ಜನರ ಮುಂದೆ ಕುಣಿದು ಕುಪ್ಪಳಿಸಲಿರುವ ಕೋಲ್ಡ್ ಪ್ಲೇ ತಂಡ, ಮೊನ್ನೆಯಷ್ಟೇ ನಾವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಕೂಡ ಬರುತ್ತಿದ್ದೇವೆ ಎಂದು ಘೋಷಿಸಿದೆ. ಅಹಮದಾಬಾದ್‌ನಲ್ಲಿ ಜನವರಿ 25ರಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹೀಗಾಗಿಯೇ ಮುಂಬೈನಲ್ಲಿ ಟಿಕೆಟ್ ಸಿಗದೇ ನಿರಾಸೆಯಾಗಿದ್ದ ಅನೇಕರು ಈಗ ಅಹಮದಾಬಾದ್‌ನತ್ತ ಮುಖ ಮಾಡಿದ್ದಾರೆ. ಇದನ್ನರಿತ ಅಹಮದಾಬಾದ್‌ನ ಹೊಟೇಲ್ ಮಾಲೀಕರು ಈಗ ದರವನ್ನು ಹೆಚ್ಚಿಸಿದ್ದಾರೆ. ಒಂದು ರಾತ್ರಿ ನಮ್ಮ ಹೊಟೇಲ್‌ನಲ್ಲಿ ತಂಗಲು ಹೆಚ್ಚೇನ್ ಇಲ್ಲ ₹50,000 ಕೊಡಿ ಸಾಕು ಎನ್ನುತ್ತಿದ್ದಾರೆ.
ಇನ್ನೂ ವಿಶೇಷ ಅಂದರೆ ಅಹಮದಾಬಾದ್‌ನಲ್ಲಿ ಕೋಲ್ಡ್ ಪ್ರೇ ಕಾರ್ಯಕ್ರಮ ಆಯೋಜನೆಯಾಗುವ ಮುನ್ನ ಮುಂಬೈನಲ್ಲಿ ಕೋಲ್ಡ್ ಪ್ಲೇ ಕಾರ್ಯಕ್ರಮಕ್ಕೆ ಇರುವ ಬೇಡಿಕೆ ಗಮನಿಸಿ, ಅಹಮದಾಬಾದ್‌ನಲ್ಲಿಯೂ ಕೋಲ್ಡ್ ಪ್ಲೇ ಕಾರ್ಯಕ್ರಮ ನಡೆಯಬಹುದೆಂದು ಸಂಗೀತ ಪ್ರಿಯರು ಅನುಮಾನ ವ್ಯಕ್ತಪಡಿಸಿದ್ದರು. ಯಾವುದಕ್ಕೂ ಇರಲಿ ಎಂದು ಅಹಮದಾಬಾದ್‌ನಲ್ಲಿ ಹೊಟೇಲ್ ರೂಮ್‌ನ ಬುಕ್ ಮಾಡಿದ್ದರು. ಅದು ಕೇವಲ ₹1800 ರೂಪಾಯಿಗೆ.
ಆದರೆ ಇವರ ಅನುಮಾನ ನಿಜಾ ಆಗಿ ಕೋಲ್ಡ್ ಪ್ಲೇ ತಂಡ ಅಧಿಕೃತವಾಗಿ ತಮ್ಮ ಅಹಮದಾಬಾದ್ ಪ್ರವಾಸ ಘೋಷಿಸಿದ್ದೇ ತಡ, ಈ ಮೊದಲು ₹1800ಕ್ಕೆ ಆಗಿದ್ದ ಬುಕ್ಕಿಂಗ್‌ನ ಹೊಟೇಲ್ ಮಾಲೀಕರು ಕ್ಯಾನ್ಸಲ್ ಮಾಡಲು ಶುರುಮಾಡಿದ್ದಾರೆ. ಅಹಮದಾಬಾದ್‌ನಲ್ಲಿ ರೂಮ್ ₹18000 ದಿಂದ ₹50,000ದವರೆಗೆ ಹಣವನ್ನು ಹೊಟೇಲ್‌ನವರು ಕೇಳುತ್ತಿದ್ದಾರೆ.
ಅಂದ್ಹಾಗೇ ಜನವರಿ 25ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಟಿಕೆಟ್ ಇಂದು ಮಾರಾಟವಾಗಲಿದೆ. ಹನ್ನೆರಡು ಘಂಟೆಯಿಂದ ಟೆಕೆಟ್ ಮಾರಾಟ ಶುರುವಾಗಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಜನ ಮುಗಿ ಬಿದ್ದಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ನೋಯ್ಡಾದ ಸಾಫ್ಟವೇರ್ ಉದ್ಯೋಗಿಯೊಬ್ಬರು ಮೂರು ಉಪಕರಣ ಮತ್ತು ಆರು ಟ್ಯಾಬ್‌ಗಳಿಂದ ಟಿಕೆಟ್ ಬುಕ್ ಮಾಡುವ ಪ್ರಯತ್ನ ಮಾಡಿ ವಿಫಲವಾಗಿದ್ದಾರೆ. ಸರತಿ ಸಾಲಿನಲ್ಲಿ 64,000ಜನರ ಹಿಂದೆ ಇದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವ್ಯಕ್ತಿ ಕಾರ್ಯಕ್ರಮಕ್ಕೆ ಹೋಗಲು ಬಹುಶಃ ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











