ಹೆಚ್‌ಐವಿ ಸೋಂಕಿಗೆ ಬಲಿಯಾದ ಪ್ರಖ್ಯಾತ ಹಾಲಿವುಡ್ ಸ್ಟಾರ್ ; 35ನೇ ವರ್ಷಕ್ಕೆ ನಟಿಯ ದುರಂತ ಅಂತ್ಯ
ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಸಾಂಕ್ರಾಮಿಕ ರೋಗದಲ್ಲಿ ಏಡ್ಸ್ ಕೂಡ ಒಂದು. ಏಡ್ಸ್ ಸೋಂಕನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ 1986ರಲ್ಲಿ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. ಏಡ್ಸ್‌ಗೆ ಕಾರಣವಾದ ವೈರಸ್ ಹೆಚ್‌ಐವಿ ಇದನ್ನು ಮೊಟ್ಟಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು.
ನಿಜ ಹೇಳಬೇಕು ಅಂದರೆ ಈ ಹೆಚ್‌ಐವಿ (Human Immunodeficiency Virus) ಎಂಬುದು ಒಂದು ಸಣ್ಣ ವೈರಸ್ ಅಷ್ಟೇ. ಆದರೆ.. ಇದು ಮನುಷ್ಯನ ದೇಹ ಸೇರಿದರೆ ಸಾಕು, ಕಾಯಿಲೆಗಳ ವಿರುದ್ಧ ಹೋರಾಡುವ ನಮ್ಮ ದೇಹದ ರಕ್ಷಾಕವಚವನ್ನೇ (Immunity) ನಿಧಾನವಾಗಿ ತಿನ್ನಲು ಶುರು ಮಾಡುತ್ತದೆ. ಒಂದು ವೇಳೆ ಇದಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದಿದ್ದರೆ, ದೇಹದ ಶಕ್ತಿ ಸಂಪೂರ್ಣವಾಗಿ ಉಡುಗಿಹೋಗಿ ಅದು ಕೊನೆಯ ಹಂತವಾದ ಏಡ್ಸ್ ಕಾಯಿಲೆಗೆ ದಾರಿ ಮಾಡಿಕೊಡುತ್ತದೆ. ಪ್ರಾಣವನ್ನೇ ಬಲಿ ಪಡೆಯುತ್ತದೆ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಕಣ್ಣೆದುರು ಸದ್ಯಕ್ಕಿರುವುದು ಡೇವೀಗ್ ಚೇಸ್ ಅವರ ಅಕಾಲಿಕ ಸಾವು.

ಹೌದು, ಡೇವಿ ಚೇಸ್.. ಇನ್ನು ಬಾಳಿ ಬದುಕಬೇಕಿದ್ದ ಹಾಲಿವುಡ್‌ನ ಪ್ರತಿಭೆ. ಜುಲೈ 24-1990ರಂದು ನೆವಾಡಾದ ಲಾಸ್ ವೇಗಾಸ್‌ನಲ್ಲಿ ಹುಟ್ಟಿದ್ದ ಡೇವಿ ಚೇಸ್‌ಗೆ ಬಾಲ್ಯದಲ್ಲಿಯೇ ಬಣ್ಣದ ಗೀಳು ಹತ್ತಿತ್ತು.
ಬಾಲ್ಯದಿಂದಲೇ ಹಾಡುಗಾರಿಕೆ ಮತ್ತು ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಡೇವಿ ಚೇಸ್ ಕೇವಲ 7ರ ಹರೆಯದಲ್ಲಿ ಮುಖಕ್ಕೆ ಮೇಕಪ್ ಹಚ್ಚಿದರು. ಜಾಹೀರಾತಿನಲ್ಲಿ ಕಾಣಿಸಿಕೊಂಡರು. 1998ರಲ್ಲಿ ಟಿವಿ ಶೋಗಳ ಮೂಲಕ ಹಲವರ ಕಣ್ಮನ ಸೆಳೆದ ಡೇವೀಗ್ 2002ರ ಹೊತ್ತಿಗೆ ತಮ್ಮ 12ನೇ ವರ್ಷದಲ್ಲಿ ಇಡೀ ಹಾಲಿವುಡ್ ಬೆರಗಾಗುವಂತಹ ಯಶಸ್ಸನ್ನು ಸಾಧಿಸಿದರು.
ಡೇವೀಗ್ ಚೇಸ್ ಅವರ ಖ್ಯಾತ ಸಿನಿಮಾ ಮತ್ತು ಪಾತ್ರ
ಹಾಲಿವುಡ್ ಇತಿಹಾಸದಲ್ಲಿ ಮತ್ತು ಚಿತ್ರ ರಸಿಕರ ಹೃದಯದಲ್ಲಿ ಡೇವೀಗ್ ಚೇಸ್ ಕೇವಲ ಎರಡೇ ಪಾತ್ರಗಳ ಮೂಲಕ ಶಾಶ್ವತ ಸ್ಥಾನ ಪಡೆದಿದ್ದಾರೆ. ಎರಡು ತದ್ವಿರುದ್ದ ಪಾತ್ರಗಳು. ಆ ಪೈಕಿ 2002ರಲ್ಲಿ ಬಂದ ಡಿಸ್ನಿ ಸಂಸ್ಥೆಯ ವಿಶ್ವಪ್ರಸಿದ್ಧ ಲಿಲೋ ಆಂಡ್ ಸ್ಟಿಚ್ ಅನಿಮೇಷನ್ ಚಿತ್ರ ಒಂದು.
ಈ ಚಿತ್ರದಲ್ಲಿ ಹವಾಯ್ ದ್ವೀಪದ ಮುದ್ದಾದ ಹುಡುಗಿ ''ಲಿಲೋ'' ಪಾತ್ರಕ್ಕೆ ಇವರ ಕಂಠ ಕುಣಿದಿತ್ತು. ಇನ್ನು ಅದೇ ವರ್ಷ ಅಂದರೆ 2002ರಲ್ಲಿಯೇ ಬಂದ '' ದಿ ರಿಂಗ್'' ಇವರ ಮತ್ತೊಂದು ಜಗದ್ವಿಖ್ಯಾತ ಚಿತ್ರ.

ಹಾರರ್ ಚಿತ್ರಪ್ರೇಮಿಗಳು ಯಾವತ್ತು ಮರೆಯಲು ಆಗದ ''ದಿ ರಿಂಗ್'' ಚಿತ್ರದಲ್ಲಿ ''ಸಮಾರಾ ಮಾರ್ಗನ್'' ಎಂಬ ಭಯಾನಕ ದೆವ್ವದ ಪಾತ್ರವನ್ನು ನಿರ್ವಹಿಸಿದ್ದವರು ಬೇರೆ ಯಾರು ಅಲ್ಲ. ಬದಲಿಗೆ ಇವರೇ. ಈ ಚಿತ್ರದಲ್ಲಿನ ಇವರ ಅಭಿನಯಕ್ಕೆ 2003ರ ''ಎಂಟಿವಿ ಮೂವಿ ಅವಾರ್ಡ್ಸ್''ನಲ್ಲಿ ''ಬೆಸ್ಟ್ ವಿಲನ್'' ಪ್ರಶಸ್ತಿ ಸಿಕ್ಕಿತ್ತು.
ಇನ್ನು 2001ರಲ್ಲಿ ಆಸ್ಕರ್ ಗೆದ್ದ ಜಪಾನೀಸ್ ಅನಿಮೇಷನ್ ಸಿನಿಮಾ ''ಸ್ಪಿರಿಟೆಡ್ ಅವೇ'' ಯ ಇಂಗ್ಲಿಷ್ ವರ್ಷನ್‌ನಲ್ಲಿ ನಾಯಕಿ ''ಚಿಹಿರೋ'' ಪಾತ್ರಕ್ಕೆ ಧ್ವನಿ ನೀಡಿದ್ದು ಕೂಡ ಇದೇ ಡೇವೀಗ್ ಚೇಸ್. ''ಡೋನಿ ಡಾರ್ಕೊ''.. ''ಬಿಗ್ ಲವ್''.. ಇವರ ಮತ್ತೆರಡು ಮತ್ತು ಪ್ರಮುಖವಾದ ಚಿತ್ರಗಳು.
ಹೀಗೆ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿಯ ಶಿಖರಕ್ಕೇರಿದ್ದ ಡೇವಿ ಚೇಸ್‌ಕಳೆದ ಜೂನ್ 16ರಂದು ಲಾಸ್ ಏಂಜಲೀಸ್‌ನ ತಮ್ಮ ನಿವಾಸದಲ್ಲಿ ಕೇವಲ 35ರ ಹರೆಯದಲ್ಲಿ ಕೊನೆಯುಸಿರೆಳೆದರು. ಇವರ ಈ ಅಕಾಲಿಕ ಸಾವು ಹಾಲಿವುಡ್‌ಗೆ ಬರಸಿಡಿಲಿನಂತೆ ಬಡಿದಿತ್ತು. ಸಾವಿಗೆ ನಿಖರವಾದ ಕಾರಣವೇನು ಎನ್ನುವ ಪ್ರಶ್ನೆ ಹಲವರಲ್ಲಿ ಕಾಡುತ್ತಿತ್ತು.
ಈ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದ ಅವರ ಮ್ಯಾನೇಜರ್ ಜಾನ್ ರ್‍ಯಾನ್ ಮತ್ತು ಬಾಯ್‌ಫ್ರೆಂಡ್ ರಾಯ್ ಹೆರ್ನಾಂಡೆಜ್ ಕೆಲವು ದಿನಗಳ ಹಿಂದೆ ತೀವ್ರ ಅಪೌಷ್ಟಿಕತೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೆನಿಂಜೈಟಿಸ್‌ನಿಂದ ಉಂಟಾದ ಗಂಭೀರ ತೊಂದರೆಗಳು ಹಾಗೂ ರಕ್ತದ ಸೋಂಕು (ಸೆಪ್ಸಿಸ್) ಕಾಣಿಸಿಕೊಂಡಿದ್ದು, ಅಂತಿಮವಾಗಿ ಅವರು ಸಾವು ಬದುಕಿನ ಹೋರಾಟದಲ್ಲಿ ಸೋತರು ಎಂದಿದ್ದರು. ಈಗ ಡೇವೀಗ್ ಚೇಸ್ ಅವರ ನಿಧನದ 14-15 ದಿನದಗಳ ನಂತರ ಡೇವೀಗ್ ಸಾವಿಗೆ ನಿಖರವಾದ ಕಾರಣವೇನು ಎನ್ನುವುದು ಗೊತ್ತಾಗಿದೆ.
ಏಡ್ಸ್, ಮಾದಕ ದ್ರವ್ಯ, ದುರಂತ ಅಂತ್ಯ
ಅಂತರಾಷ್ಟ್ರೀಯ ನಿಯತಕಾಲಿಕೆ ''ವೆರೈಟಿ'' ಪ್ರಕಟಿಸಿರುವ ಡೇವಿ ಚೇಸ್ ಅವರ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಡೇವಿ ಚೇಸ್ ಅವರ ನಿಧನಕ್ಕೆ ಹೆಚ್‌ಐವಿ ಸೋಂಕು ಕಾರಣ. ಸರಿಯಾದ ಸಮಯಕ್ಕೆ ಡೇವಿ ಚೇಸ್ ಚಿಕಿತ್ಸೆ ಪಡೆಯದ ಹಿನ್ನೆಲೆ ಕೊನೆಯ ಹಂತಕ್ಕೆ ತಲುಪಿತ್ತು. ಮಾರಕ ಕಾಯಿಲೆಯಾದ ಏಡ್ಸ್‌ದಿಂದ ತೀವ್ರ ಶಾರೀರಿಕ ದೈಹಿಕ ತೊಂದರೆಗಳಿಂದ ಡೇವಿ ಚೇಸ್ ನರಳುತ್ತಿದ್ದರು.
ದೇಹದಲ್ಲಿನ ರೋಗ ನಿರೋಧಕ ಶಕ್ತಿ ದಿನದಿಂದ ದಿನಕ್ಕೆ ಕುಗ್ಗುತ್ತಾ ಬಂದ ಪರಿಣಾಮ, ಕೊನೆಯ ದಿನಗಳಲ್ಲಿ ತೀವ್ರವಾದ ಮಿದುಳು ಜ್ವರ (Meningitis) ಮತ್ತು ರಕ್ತದ ಸೋಂಕು (ಸೆಪ್ಪಿಸ್) ತಗುಲಿ ದೇಹದ ಪ್ರಮುಖ ಅಂಗಾಂಗಗಳು ಒಂದೊಂದಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದವು.
ಇನ್ನು ಒಂದು ಕಡೆ ಏಡ್ಸ್‌ನಿಂದ ಬಳಲುತ್ತಿದ್ದ ಡೇವಿ ಚೇಸ್ ಮತ್ತೊಂದು ತೀವ್ರ ಖಿನ್ನತೆಯಿಂದಾಗಿ ದೀರ್ಘಕಾಲದಿಂದ ಮಾದಕವಸ್ತು ವ್ಯಸನಕ್ಕೂ ಬಲಿಯಾಗಿದ್ದರು ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ವೆರೈಟಿ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಚಿತ್ರರಂಗದಿಂದ ದೂರ ಇದ್ದ ಡೇವಿ ಚೇಸ್, ಬೆಂಬಿಡದ ವಿವಾದಗಳು
ತೀರಾ ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿಯ ಶಿಖರಕ್ಕೇರಿದ್ದ ಡೇವಿ ಚೇಸ್ ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ವಿವಾದಗಳು ಇವರ ಬೆನ್ನು ಬಿಡಲಿಲ್ಲ. ಮಾದಕ ದ್ರವ್ಯ ಹೊಂದಿರುವ ಆರೋಪ ಸೇರಿ ಕೆಲವು ಅಪರಾಧಗಳಲ್ಲಿ ಇವರ ಹೆಸರು ಕೇಳಿ ಬಂದಿತ್ತು.


Click it and Unblock the Notifications