ಬೆಂಗಳೂರಿನ ಬೀದಿ ಬದಿ ಹಾಡು ಹಾಡಿದ ಇಂಗ್ಲೆಂಡ್‌ನ ಖ್ಯಾತ ಗಾಯಕ, ಸ್ಪೀಕರ್ ಪ್ಲಗ್ ಕಿತ್ತು ಹಾಕಿದ ಪೊಲೀಸರು..!
ನಾಲ್ಕು ಗ್ರ್ಯಾಮಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು ಎಡ್ ಶೀರನ್. ತನ್ನ ಕಂಠದಿಂದಲೇ ವಿಶ್ವದೆಲ್ಲೆಡೆ ಇರುವ ಸಂಗೀತ ಪ್ರಿಯರನ್ನು ಕುಂತಲ್ಲಿಯೇ ಕುಣಿಸಬಲ್ಲ ಸಾಮರ್ಥ್ಯ ಇವರದ್ದು. ಇನ್ನೂ ಇವರ ಲೈವ್ ಕಾರ್ಯಕ್ರಮಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತೆ. ತಮ್ಮೂರಿಗೆ ಎಡ್ ಶೀರನ್ ಬರುತ್ತಿದ್ದಾರೆ ಎನ್ನುವ ವಿಚಾರ ತಿಳಿದರೆ ಸಾಕು ಯುವ ಸಮೂಹ ಹುಚ್ಚೆದ್ದು ಕುಣಿಯುತ್ತೆ.
ಇಂಥಾ ಎಡ್ ಶಿರಿನ್ ಬೆಳ್ಳಂ ಬೆಳ್ಳಗ್ಗೆ ಬೆಂಗಳೂರಿಗೆ ಸರ್‌ಪ್ರೈಸ್ ನೀಡಲು ಬಂದಿದ್ದಾರೆ. ಬೆಂಗಳೂರಿನಲ್ಲಿ ಚರ್ಚ್‌ಸ್ಟ್ರೀಟ್‌ನಲ್ಲಿ ತಮ್ಮ ತಂಡದ ಜೊತೆ ಪ್ರತ್ಯಕ್ಷರಾಗಿದ್ದಾರೆ. ಅಲ್ಲಿಯೇ ಬೀದಿ ಬದಿ ನಿಂತುಕೊಂಡು ಹಾಡು ಹಾಡಲು ಶುರು ಕೂಡ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಪೊಲೀಸರು ಬಂದು ಕಾರ್ಯಕ್ರಮಕ್ಕೆ ಶುಭಂ ಹಾಡಿದ್ದಾರೆ.

ಹೌದು, ಅಸಲಿಗೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ರಸ್ತೆಯ ಬದಿಯಲ್ಲಿ ಎಡ್ ಶೀರನ್ ತಮ್ಮ ತಂಡದ ಜೊತೆ ಸಂಗೀತವನ್ನು ನುಡಿಸುತ್ತಾ ಹಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಯೊಬ್ಬರು ತಕ್ಷಣವೇ ಕಾರ್ಯಕ್ರಮ ನಿಲ್ಲಿಸುವಂತೆ ಹೇಳುತ್ತಾರೆ. ಸ್ಪೀಕರ್‌ಗಳ ಪ್ಲಗ್‌ನ ಕೂಡ ತಾವೇ ಕಿತ್ತು ಹಾಕುತ್ತಾರೆ. ಪೊಲೀಸರ ಈ ವರ್ತನೆಗೆ ಎಸ್ ಶಿರಿನ್ ಅಲ್ಲೇ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ. ಸದ್ಯ ಎಡ್ ಶೀರನ್ ಕಾರ್ಯಕ್ರಮಕ್ಕೆ ಪೊಲೀಸರು ತಕರಾರು ತೆಗೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆ ಈ ಕಾರ್ಯಕ್ರಮದ ಸುತ್ತ ಮುತ್ತ ವಿಚಾರಣೆಯನ್ನು ಮಾಡಿದರೆ ಚರ್ಚ್ ಸ್ಟ್ರೀಟ್‌ನಲ್ಲಿ ಹಾಡಲು ಪೊಲೀಸರ ಬಳಿ ಎಡ್ ಶೀರನ್ ಅನುಮತಿಯನ್ನು ಕೇಳಿದ್ದರು, ಆದರೆ ಪೊಲೀಸರು ಅನುಮತಿಯನ್ನು ನೀಡಿರಲಿಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೂ ಕೂಡ ಎಡ್ ಶೀರನ್ ತಮ್ಮ ಬಳಿ ಅನುಮತಿ ಇದೆ ಎಂಬ ವಾದ ಮಾಡಿದ್ದಾರೆ. ಹಾಡು ಹಾಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡಿಲ್ಲ.
ಸದ್ಯ ಪೊಲೀಸರ ಈ ನಡೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಪೊಲೀಸರ ಪರವಾಗಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ವಿಶ್ವ ಪ್ರಸಿದ್ದ ಗಾಯಕನನ್ನು ಪೊಲೀಸರು ಹೀಗೆ ನಡೆಸಿಕೊಳ್ಳಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲದಕ್ಕೂ ಯೋಗ ಬೇಕು, ಎಡ್ ಶೀರನ್ ಅವರ ಲೈವ್ ಕಾರ್ಯಕ್ರಮವನ್ನು ಪುಕ್ಸಟ್ಟೆಯಾಗಿ ಕಣ್ತುಂಬಿಕೊಳ್ಳುವ ಸುವರ್ಣ ಅವಕಾಶವನ್ನು ಬೆಂಗಳೂರಿಗರು ಕಳೆದುಕೊಂಡರು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಪೊಲೀಸರು ಮಾಡಿರುವುದರಲ್ಲಿ ಯಾವ ತಪ್ಪಿಲ್ಲ ಎಡ್ ಶೀರನ್ ನೋಡಲು ಜನ ಸೇರಿದ್ದರೆ, ಆ ನಂತರ ಅಲ್ಲಿ ಕಾಲ್ತುಳಿತವಾಗಿದ್ದರೆ ಅದಕ್ಕೆ ಹೊಣೆ ಯಾರು ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಸದ್ಯ ಪೊಲೀಸರಿಂದ ಈ ವಿಚಾರದ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಮುಂದೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.
ಅಂದ್ಹಾಗೇ ಎಡ್ ಶೀರನ್ ಕಳೆದ ಹಲವು ದಿನಗಳಿಂದ ಭಾರತದಲ್ಲಿ ಬೀಡು ಬಿಟ್ಟಿದ್ದಾರೆ. ಪುಣೆ, ಹೈದರಾಬಾದ್, ಚೆನ್ನೈನಲ್ಲಿ ಈಗಾಗಲೇ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇನ್ನು ಇಂದು ಈಗ ಬೆಂಗಳೂರಿನ ಮಾದವಾರ ಬಳಿ ಇರುವ ನೈಸ್ ಗ್ರೌಂಡ್‌ನಲ್ಲಿ ಇವರ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಎಡ್ ಶೀರಿನ್ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಇಷ್ಟೆಲ್ಲ ಕೆಲಸ ಮಾಡಿ ಬಂದಿದ್ದಾರೆ. ಇನ್ನುಳಿದಂತೆ ಪರ್ಫೆಕ್ಟ್, ಶೇಪ್ ಆಫ್ ಯೂ, ಫೋಟೋಗ್ರಾಫ್ಸ್ , ಥಿಂಕಿಂಗ್ ಔಟ್ ಲೌಡ್, ಬ್ಯಾಡ್ ಹ್ಯಾಬಿಟ್ಸ್, ಯೂ ನೀಡ್ ಮೀ, ಐ ಡೋಂಟ್ ನೀಡ್ ಯೂ, ದಿ ಎ ಟೀಮ್ , ಕ್ಯಾಸಲ್ ಆನ್ ದಿ ಹಿಲ್, ಗ್ಯಾಲ್ವೇ ಗರ್ಲ್ ಎಡ್ ಶೀರನ್ ಹಾಡಿರುವ ಕೆಲ ಜನಪ್ರಿಯ ಹಾಡುಗಳು.


Click it and Unblock the Notifications











