ಅಂತ್ಯಗೊಳ್ಳುತ್ತಿದೆ ವಿಶ್ವದ ಜನಪ್ರಿಯ ಟಾಕ್ ಶೋ
ವಿಶ್ವದ ಜನಪ್ರಿಯ ಟಾಕ್ ಶೋಗಳಲ್ಲಿ ಒಂದಾದ 'ಎಲೆನ್ ಡಿಜೆನೆರೆಸ್ ಶೋ' ಮುಂದಿನ ವರ್ಷ ಅಂತ್ಯವಾಗಲಿದೆ. ಶೋನ ನಿರೂಪಕಿ ಆಗಿರುವ ಎಲೆನ್ ಡಿಜೆನೆರೆಸ್ ಅವರೇ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಕಳೆದ 19 ವರ್ಷಗಳಿಂದಲೂ ಎಲೆನ್ ಡಿ ಜೆನೆರೆಸ್ ಈ ಟಾಕ್ ಶೋ ನಡೆಸುತ್ತಿದ್ದು ಅಮೆರಿಕದ ಹಲವು ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಹಾಲಿವುಡ್‌ನ ನಂಬರ್ ಒನ್ ಸ್ಟಾರ್ ನಟ-ನಟಿಯರು, ಬಿಲ್‌ಗೇಟ್ಸ್ ಸೇರಿದಂತೆ ಹಲವು ಪ್ರಭಾವಿ ಉದ್ಯಮಿಗಳು ಹಲವಾರು ಮಂದಿ ಶೋನಲ್ಲಿ ಭಾಗವಹಿಸಿ ಆಟವಾಡಿ ನಕ್ಕು ನಲಿದಿದ್ದಾರೆ. ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಅಮೆರಿಕದ ಸಾಮಾನ್ಯ ವ್ಯಕ್ತಿಗಳು, ಮಕ್ಕಳು ಸಹ ಶೋನಲ್ಲಿ ಅತಿಥಿಗಳಾಗಿ ಬಂದಿದ್ದಾರೆ.
ಹತ್ತೊಂಬತ್ತು ವರ್ಷದಿಂದಲೂ ಶೋನ ನಿರೂಪಕಿ ಆಗಿರುವ ಎಲೆನ್ ಡಿಜೆನೆರೆಸ್ ತಾವು ಟಾಕ್ ಶೋ ಅನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಸೀಸನ್ ಚಾಲ್ತಿಯಲ್ಲಿದ್ದು ಇದೇ ಶೋನ ಕೊನೆಯ ಸೀಸನ್ ಆಗಿರಲಿದೆ ಎಂದು ಸಹ ಅವರು ಹೇಳಿದ್ದಾರೆ. ಶೋನ ಕೊನೆಯ ಎಪಿಸೋಡ್ ಮುಂದಿನ ವರ್ಷದ ಆರಂಭದಲ್ಲಿ ಪ್ರಸಾರವಾಗಲಿದೆ.

ಶೋ ಅಂತ್ಯಗೊಳಿಸುತ್ತಿರುವ ಬಗ್ಗೆ ಮತ್ತೊಬ್ಬ ಪ್ರಸಿದ್ಧ ಟಾಕ್ ಶೋ ನಿರೂಪಕಿ ಓಪ್ರಾ ವಿನ್‌ಫ್ರೆ ಜೊತೆ ಮಾತನಾಡುತ್ತಾ, 'ಸೃಜನಶೀಲ ವ್ಯಕ್ತಿಯೊಬ್ಬರಿಗೆ ಸವಾಲುಗಳನ್ನು ಎದುರಿಸುವುದು ಮುಖ್ಯವಾಗಿರಬೇಕು. ಈ ಶೋ ಬಹಳ ಚೆನ್ನಾಗಿ ನಡೆಯುತ್ತಿತ್ತು ಆದರೆ ಇದರಲ್ಲಿ ಸವಾಲುಗಳು ಇಲ್ಲ ಎಂದು ನನಗೆ ಅನ್ನಿಸಲು ಆರಂಭಿಸಿದೆ' ಎಂದಿದ್ದಾರೆ.
ಎಲೆನ್ ಡಿಜೆನೆರೆಸ್ ಶೋ ನಲ್ಲಿ ಕೆಲಸ ಮಾಡಿದ್ದ ಕೆಲವು ಮಾಜಿ ಸಿಬ್ಬಂದಿ ಶೋ ಬಗ್ಗೆ ಕೆಲವು ಆರೋಪ ಮಾಡಿದ್ದರು. ಶೋನ ಸೆಟ್‌ನಲ್ಲಿ ವರ್ಣಬೇಧ ನೀತಿ ಇದೆ, ದಬ್ಬಾಳಿಕೆ, ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದರು. ನಿರೂಪಕಿ ಎಲೆನ್ ಮೇಲೆ ಯಾವುದೇ ಆರೋಪ ಬಂದಿರಲಿಲ್ಲವಾದರೂ ಶೋನ ಮೂವರು ಹಿರಿಯ ಸಿಬ್ಬಂದಿಯ ಮೇಲೆ ಆರೋಪ ಬಂದಿತ್ತು. ಅವರನ್ನು ಶೋನಿಂದ ಹೊರಗೆ ಹಾಕಲಾಯಿತು.
ಆರೋಪಗಳ ಬಗ್ಗೆಯೂ ಮಾತನಾಡಿರುವ ಎಲೆನ್, 'ನಾನು ಏನನ್ನು ನಂಬಿದ್ದೆನೊ ಆ ನಂಬಿಕೆಗೆ ದೊಡ್ಡ ಪೆಟ್ಟು ಬಿದ್ದಿತು. ನಾನು ಮಾನವೀಯತೆ ಮತ್ತು ಸಹಾನುಭೂತಿಯನ್ನು ಹಂಚುವ ಕಾರ್ಯ ಮಾಡುತ್ತಿದ್ದೆ. ಆದರೆ ನನ್ನ ನಂಬಿಕೆಗೆ ನನ್ನ ಆದರ್ಶಕ್ಕೆ ದೊಡ್ಡ ಹೊಡೆತ ಬಿತ್ತು. ಅದು ನನ್ನನ್ನು ತೀವ್ರವಾಗಿ ಘಾಸಿಗೊಳಿಸಿತು' ಎಂದಿದ್ದಾರೆ.
Recommended Video
ನಟಿ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಅಮೆರಿಕದ ಮಾಜಿ ಮೊದಲ ಮಹಿಳೆ ಮಿಷೆಲ್ ಒಬಾಮಾ, ಜಾರ್ಜ್ ಬುಷ್, ಜಸ್ಟಿನ್ ಬೀಬರ್, ಲಿಯಾನಾರ್ಡೊ ಡಿ ಕ್ಯಾಪ್ರಿಕೊ, ಯೂಸಫ್ ಜಾಯ್ ಮಲಾಲ, ದೇವ್ ಪಟೇಲ್, ಟೇಲರ್ ಸ್ವಿಫ್ಟ್ ಇನ್ನೂ ಹಲವಾರು ಮಂದಿ ಖ್ಯಾತರು ಎಲೆನ್ ಡಿಜೆನೆರೆಸ್ ಶೋಗೆ ಅತಿಥಿಯಾಗಿ ಬಂದಿದ್ದರು. ಎಲೆನ್ ಶೋ ಗೆ ಬಂದಾಗಲೆಲ್ಲ ಪ್ರಿಯಾಂಕಾ ಚೋಪ್ರ ಮದ್ಯ ಸೇವಿಸುತ್ತಿದ್ದುದು ವಿಶೇಷ. ಎಲೆನ್ ಎರಡು ಬಾರಿ ಆಸ್ಕರ್ ಸಮಾರಂಭವನ್ನು ನಿರೂಪಣೆ ಮಾಡಿದ್ದಾರೆ.


Click it and Unblock the Notifications











