Georgie Grier: ತನ್ನ ಶೋ ನೋಡಲು ಒಬ್ಬನೇ ಪ್ರೇಕ್ಷಕ ಬಂದಿದ್ದು ನೋಡಿ ಕಣ್ಣೀರು ಹಾಕಿದ ನಟಿ!
ಆಗಸ್ಟ್ 4ರಿಂದ ಆಗಸ್ಟ್ 28ರವರೆಗೆ ಎಡಿನ್ ಬರ್ಗ್ ಫ್ರಿಂಜ್ ಫೆಸ್ಟಿವಲ್ 2023 ಆಯೋಜನೆಗೊಂಡಿದೆ. ಈ ಕಲಾ ಹಬ್ಬದಲ್ಲಿ ಪ್ರಪಂಚದ ಮೂಲೆ ಮೂಲೆಯಿಂದ ಬರುವ ಕಲಾವಿದರು ತಮ್ಮಲ್ಲಿನ ಅದ್ಭುತ ಕಲೆಗಳನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಾರೆ. ಅದೇ ರೀತಿ ಜಾರ್ಜಿ ಗ್ರಿಯರ್ ಎಂಬ ನಟಿ ಸಹ ಈ ಎಡಿನ್ ಬರ್ಗ್ ಫ್ರಿಂಜ್ ಫೆಸ್ಟಿವಲ್ 2023ರಲ್ಲಿ ಭಾಗವಹಿಸಿ 'ಸನ್ ಸೆಟ್' ಎಂಬ ಕಾಮಿಡಿ ಡ್ರಾಮಾ ಪ್ರದರ್ಶನ ಮಾಡಿದ್ದರು.
ಈ ಕಾರ್ಯಕ್ರಮ ಮುಗಿದ ಬಳಿಕ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಜಾರ್ಜಿ ಗ್ರಿಯರ್ ತನ್ನ ಡ್ರಾಮಾವನ್ನು ವೀಕ್ಷಿಸಲು ಕೇವಲ ಓರ್ವ ಪ್ರೇಕ್ಷಕ ಮಾತ್ರ ಬಂದಿದ್ದನ್ನು ತಿಳಿಸಿ ಕಣ್ಣೀರು ಹಾಕಿದ್ದಾರೆ. ಹೌದು, ತಾನು ಕಣ್ಣೀರು ಸುರಿಸುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ನಟಿ ಜಾರ್ಜಿ ಗ್ರಿಯರ್ "ನಾನು ಇಂದು ಎಡಿಬ್ ಬರ್ಗ್ ಫ್ರಿಂಜ್ ಫೆಸ್ಟಿವಲ್‌ನಲ್ಲಿ ಸನ್ ಸೆಟ್ ಎಂಬ ಏಕ ಮಹಿಳಾ ನಾಟಕವನ್ನು ಪ್ರದರ್ಶಿಸಿದಾಗ ಕೇವಲ ಓರ್ವ ಪ್ರೇಕ್ಷಕ ಮಾತ್ರ ವೀಕ್ಷಿಸಲು ಬಂದಿದ್ದರು. ಇದು ಸರಿ.. ಇದು ಸರಿ ಅಲ್ವಾ? ಇದು ಸರಿನಾ?" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಹೀಗೆ ನಟಿ ತನ್ನ ನಾಟಕವನ್ನು ನೋಡಲು ಓರ್ವ ಪ್ರೇಕ್ಷಕ ಮಾತ್ರ ಬಂದಿದ್ದರ ಕುರಿತು ಕಣ್ಣೀರು ಸುರಿಸುತ್ತಾ ಟ್ವೀಟ್ ಮಾಡುತ್ತಿದ್ದಂತೆಯೇ ಮಿಡಿದ ಕಲಾಭಿಮಾನಿಗಳು ಆಕೆಗೆ ಸಮಾಧಾನ ಮಾಡುವ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಅಲ್ಲದೇ ಈ ಘಟನೆ ನಡೆದ ಬಳಿಕ ಮತ್ತೆ ನಟಿ ನಡೆಸಿದ ಮತ್ತೊಂದು ನಾಟಕ ಪ್ರದರ್ಶನ ಹೌಸ್‌ಫುಲ್ ಆಗಿದೆ.
ಹೌದು, ನಟಿ ಕಣ್ಣೀರು ಹಾಕಿದ್ದನ್ನು ಕಂಡ ಬಳಿಕ ಆಕೆಯ ಮುಂದಿನ ನಾಟಕ ಪ್ರದರ್ಶನದ ಟಿಕೆಟ್‌ಗಳನ್ನು ಅನೇಕರು ಖರೀದಿಸಿದ್ದಾರೆ. ಪರಿಣಾಮ ಆ ಪ್ರದರ್ಶನ ಹೌಸ್‌ಫುಲ್ ಆಗಿದೆ. ಇದರ ಕುರಿತೂ ಸಹ ಬರೆದುಕೊಂಡಿರುವ ನಟಿ ತನ್ನ ನಾಟಕಕ್ಕೆ ಈ ರೀತಿಯ ಪ್ರತಿಕ್ರಿಯೆ ನೀಡಿದ ಕಲಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


Click it and Unblock the Notifications











