ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ 'ಟಾಕ್ಸಿಕ್' ಬೆಡಗಿ ನಟಾಲಿಯ ಬರ್ನ್
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ದೇಶ, ವಿದೇಶದ ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ.
ಯಶ್ ಜೊತೆಗೆ ಘಟನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ನಟೀಮಣಿಯರ ಸಂಖ್ಯೆ ದೊಡ್ಡದಿದೆ. ನಯನತಾರಾ. ಕಿಯಾರಾ ಅದ್ವಾನಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ. ಹಾಲಿವುಡ್ ಚೆಲುವೆ ನಟಾಲಿಯ ಬರ್ನ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಇತ್ತೀಚೆಗೆ 'ಟಾಕ್ಸಿಕ್' ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಅದರಲ್ಲಿರುವ ಹಸಿಬಿಸಿ ದೃಶ್ಯದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಇನ್ನು ಆ ದೃಶ್ಯದಲ್ಲಿ ನಟಿಸಿರುವ ಚೆಲುವೆ ಯಾರು ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ ನಡೆದಿತ್ತು. ಆಕೆ ನಟಾಲಿಯ ಬರ್ನ್ ಎಂದು ಸಾಕಷ್ಟು ಜನ ತಪ್ಪು ತಿಳಿದಿದ್ದರು. ಇದೇ ಕಾರಣಕ್ಕೆ ಆಕೆಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಮುಗಿಬಿದ್ದು ನೋಡಿದ್ದರು. ಕೆಲವರು ಫಾಲೋ ಮಾಡಲು ಆರಂಭಿಸಿದ್ದರು. ಕಳೆದೊಂದು ತಿಂಗಳಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಹುಡುಕುವವರ ಸಂಖ್ಯೆ ಹೆಚ್ಚಿದೆ ಎಂದು ಸ್ವತಃ ಆಕೆ ಪೋಸ್ಟ್ ಮಾಡಿದ್ದರು.
ಕೊನೆಗೆ ರಾಯನ ಜೊತೆ ಕಾರಿನಲ್ಲಿ ಇದ್ದ ಚೆಲುವೆ ಯಾರು ಎನ್ನುವ ಬಗ್ಗೆ ಸ್ವತಃ ನಿರ್ದೇಶಕಿ ಗೀತು ಮೋಹನ್ ದಾಸ್ ಸ್ಪಷ್ಟನೆ ನೀಡಿದ್ದರು. ಇದನ್ನು ಕೇಳಿ ಕೆಲವರು ಅಚ್ಚರಿಗೊಂಡಿದ್ದರು. ಆಕೆ ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಎನ್ನುವ ಅಧಿಕೃತ ಮಾಹಿತಿ ಸಿಕ್ಕಿತ್ತು. ಒಟ್ಟಾರೆ ಕೆಲವರು ಕನ್‌ಫ್ಯೂಸ್ ಮಾಡಿಕೊಂಡ ಕಾರಣಕ್ಕೆ ನಟಾಲಿಯ ಬರ್ನ್ ಅವರಿಗೆ ಒಳ್ಳೆ ಪ್ರಚಾರ ಸಿಕ್ಕಿತ್ತು. ಇದೀಗ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಯಶ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
"ಟಾಕ್ಸಿಕ್ ಚಿತ್ರಕ್ಕಾಗಿ ಯಾರೆಲ್ಲಾ ಕಾಯ್ತಿದ್ದೀರಾ? ಯಶ್ ಜೊತೆ ಕೆಲಸ ಮಾಡಿದ್ದು ಅದ್ಭುತ ಮತ್ತು ಒಳ್ಳೆ ಅನುಭವ. ಗೀತು ಮೋಹನ್ ದಾಸ್ ಸೊಗಸಾಗಿ ನಿರ್ದೇಶಿಸಿದ್ದಾರೆ. ಕ್ರೇಜಿ ಆಕ್ಷನ್ ದೃಶ್ಯಗಳಲ್ಲಿ ನಟಿಸುವುದು. ಜೆಜೆ ಪೆರ್ರಿ ನಿರ್ದೇಶನದ ಆಕ್ಷನ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದು ಖುಷಿ ಕೊಟ್ಟಿದೆ. ಯಶ್ ಅಭಿಮಾನಿಗಳು ಸೊಗಸಾದ ಫ್ಯಾನ್‌ಮೇಡ್ ಪೋಸ್ಟರ್ ಮಾಡಿದ್ದಾರೆ. ಧನ್ಯವಾದಗಳು" ಎಂದು ನಟಾಲಿಯ ಬರ್ನ್ ಬರೆದುಕೊಂಡಿದ್ದಾರೆ. ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.
ಯೂರೋಪ್ ಭಾಷೆಗಳಿಗೆ 'ಟಾಕ್ಸಿಕ್' ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ ಅಲ್ಲಿನ ಕಲಾವಿದರನ್ನು ಕೂಡ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ. ಸಾಕಷ್ಟು ಹಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಾಲಿಯ ಬರ್ನ್ ನಟಿಸಿದ್ದಾರೆ. ಉಕ್ರೇನ್‌ನಲ್ಲಿ ಹುಟ್ಟಿದ ಈಕೆ ಮಾಸ್ಕೋ ಹಾಗೂ ಲಂಡನ್‌ನಲ್ಲಿ ಓದಿ ಬೆಳೆದಾಕೆ. ಮಾಡೆಲ್ ಹಾಗೂ ನಟಿಯಾಗಿ ನಟಿ, ರೂಪದರ್ಶಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿದ ಬರ್ನ್ ಮುಂದೆ ಬರಹಗಾರ್ತಿ ಮತ್ತು ನಿರ್ಮಾಪಕರಾದರು. 7ಹೆವನ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಕಂಪನಿ ಹೊಂದಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಪೋಸ್ಟರ್, ಟೀಸರ್‌ಗಳು ಹಿಟ್ ಆಗಿದೆ. ಮಾರ್ಚ್ 19ಕ್ಕೆ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಅದೇ ದಿನ ಬಾಲಿವುಡ್ ಸಿನಿಮಾ 'ಧುರಂಧರ್'-2 ಕೂಡ ಬಿಡುಗಡೆ ಆಗಲಿದೆ. ಹಾಗಾಗಿ ಎರಡು ಸಿನಿಮಾಗಳ ನಡುವೆ ಬಾಕ್ಸಾಫೀಸ್‌ನಲ್ಲಿ ಭಾರೀ ಕ್ಲ್ಯಾಶ್ ಏರ್ಪಡುವ ಸುಳಿವು ಸಿಕ್ತಿದೆ.


Click it and Unblock the Notifications











