Godzilla x Kong: The New Empire: ರಾಕ್ಷಸ ಜೀವಿಯಿಂದ ಮನುಕುಲ ರಕ್ಷಣೆಗೆ ಒಂದಾದ ಗಾಡ್ಜಿಲ್ಲಾ- ಕಿಂಗ್‌ಕಾಂಗ್
ಹಾಲಿವುಡ್‌ನ ಡೈನೋಸಾರ್, ಗಾಡ್ಜಿಲ್ಲಾ, ಕಿಂಗ್‌ಕಾಂಗ್ ಸರಣಿ ಸಿನಿಮಾಗಳಿಗೆ ವಿಶ್ವದಾದ್ಯಂತ ದೊಡ್ಡ ಅಭಿಮಾನಿ ಬಳಗವಿಗೆ. ದೈತ್ಯಾಕಾರದ ಜೀವಿಗಳನ್ನು ತೋರಿಸುತ್ತಾ ಅದರ ಸುತ್ತಾ ಕತೆಗಳನ್ನು ಸೃಷ್ಟಿಸಿ ಹಾಲಿವುಡ್ ಫಿಲ್ಮ್ ಮೇಕರ್ಸ್ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಾ ಬರ್ತುದ್ದಾರೆ. ಆ ಸಾಲಿಗೆ ಸೇರಿಕೊಳ್ಳುತ್ತಿರುವ ಹೊಸ ಸಿನಿಮಾ 'ಗಾಡ್ಜಿಲ್ಲಾ ಅಂಡ್ ಕಾಂಗ್: ದಿ ನ್ಯೂ ಎಂಪೈರ್'.
ಲೆಜೆಂಡರಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಆಡಮ್ ವಿಂಗಾರ್ಡ್ 'ಗಾಡ್ಜಿಲ್ಲಾ ಅಂಡ್ ಕಾಂಗ್: ದಿ ನ್ಯೂ ಎಂಪೈರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮಾನ್‌ಸ್ಟರ್ ಸಿನಿಮಾದಲ್ಲಿ ರೆಬೆಕಾ ಹಾಲ್, ಬ್ರಿಯಾನ್ ಟೈರಿ ಹೆನ್ರಿ, ಡಾನ್ ಸ್ಟೀವನ್ಸ್ ಹಾಗೂ ಫಾಲಾ ಚೆನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 2021 ರಲ್ಲಿ ಬಂದಿದ್ದ 'ಗಾಡ್ಜಿಲ್ಲಾ ವರ್ಸಸ್ ಕಾಂಗ್' ಚಿತ್ರದಲ್ಲಿ ಎರಡು ದೈತ್ಯ ಜೀವಿಗಳು ಪರಸ್ಪರ ಹೋರಾಡುವ ಕತೆ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿತ್ತು. ಕೊನೆಯಲ್ಲಿ ಕಾಂಗ್ ಮಾನವ ಸಂಕುಲ ಉಳಿಸುವಲ್ಲಿ ಯಶಸ್ವಿಯಾಗಿದ್ದ. ಸದ್ಯ ಆ ಚಿತ್ರ ಸೀಕ್ವೆಲ್ ಈಗ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗ್ತಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

'ಗಾಡ್ಜಿಲ್ಲಾ ಅಂಡ್ ಕಾಂಗ್: ದಿ ನ್ಯೂ ಎಂಪೈರ್' ಚಿತ್ರದಲ್ಲಿ ಭೂಮಿಗೆ ಹೊರಗಿನ ಜೀವಿಗಳಿಂದ ಸಂಕಷ್ಟ ಎದುರಾಗುವ ಕತೆಯಿದೆ. ಗಾಡ್ಜಿಲ್ಲಾ-ಕಾಂಗ್ ಸೇರಿ ಆ ಜೀವಿಗಳ ವಿರುದ್ಧ ಹೋರಾಡುವ ಕತೆ ಸರಣಿಯ ಹೊಸ ಸಿನಿಮಾದಲ್ಲಿದೆ. ಗಾಡ್ಜಿಲ್ಲಾ ಮತ್ತು ಕಾಂಗ್ ಹಿಂದೆಂದೂ ನೋಡಿರದ ಒಂದು ರಾಕ್ಷಸ ಜೀವಿ ಜೊತೆ ಈ ಚಿತ್ರದಲ್ಲಿ ಕಾದಾಡಲಿವೆ. ಅದರ ಸಣ್ಣ ಝಲಕ್ ಟ್ರೈಲರ್‌ನಲ್ಲಿ ನೋಡಬಹುದಾಗಿದೆ. ಈ ಸೀಕ್ವೆಲ್ ಚಿತ್ರದ ಮೂಲಕ ಸ್ಕಲ್ ಐಲ್ಯಾಂಡ್, ಕಾಂಗ್ ಮತ್ತು ಗಾಡ್ಜಿಲ್ಲಾ ಬಗ್ಗೆ ಮತ್ತಷ್ಟು ಸಂಗತಿಗಳನ್ನು ತೋರಿಸುವ ಪ್ರಯತ್ನ ನಡೀತಿದೆ.
ನಮ್ಮ ಗ್ರಹದಲ್ಲಿ ಮಾತ್ರ ಜೀವಸಂಕುಲವಿದೆ ಎಂದು ಜನರು ನಂಬಿದ್ದರು. ಆದರೆ ಅದು ತಪ್ಪು ಎಂದು ಗೊತ್ತಾಯಿತು. ಈ ಜಗತ್ತಿನಲ್ಲಿ ನಾವು ಇನ್ನೂ ಊಹಿಸದ ಮತ್ತು ನಮಗೆ ತಿಳಿದಿಲ್ಲದ ಅನೇಕ ರಹಸ್ಯಗಳಿವೆ ಎನ್ನುವ ಡೈಲಾಗ್‌ನೊಂದಿಗೆ 'ಗಾಡ್ಜಿಲ್ಲಾ ಅಂಡ್ ಕಾಂಗ್: ದಿ ನ್ಯೂ ಎಂಪೈರ್' ಸಿನಿಮಾ ಟ್ರೈಲರ್ ಶುರುವಾಗುತ್ತದೆ. ಕಿಂಗ್‌ಕಾಂಗ್ ರೀತಿ ಕಾಣುವ ಮತ್ತೊಂದು ರಾಕ್ಷಸ ಜೀವಿ ಎಂಟ್ರಿ ಕೊಡುತ್ತದೆ. ಅದರ ವಿರುದ್ಧ ಕಾಂಗ್ ಮಾತ್ರ ಹೋರಾಡಲು ಸಾಧ್ಯವಿಲ್ಲ ಎಂದಾಗ ಗಾಡ್ಜಿಲ್ಲಾ ಎಂಟ್ರಿಯಾಗುತ್ತದೆ.
ಟ್ರೈಲರ್ ನೋಡಿ ಹಾಲಿವುಡ್ ಪ್ರೇಕ್ಷಕರು ಥ್ರಿಲ್ಲಾಗಿದ್ದಾರೆ. ಚಿತ್ರದಲ್ಲಿರುವ ಆ ವಿಚಿತ್ರ ಜೀವಿಯನ್ನು ಅಷ್ಟಾಗಿ ತೋರಿಸಿಲ್ಲ. ನೋಡಲು ಕಿಂಗ್ ಕಾಂಗ್ ರೀತಿ ಕಾಣುವ ಆ ಜೀವಿ ಬಹಳ ಶಕ್ತಿಶಾಲಿಯಾಗಿದ್ದು ಗಾಡ್ಜಿಲ್ಲಾ- ಕಾಂಗ್ ಎರಡು ಸೇರಿ ಹೋರಾಡುವ ಸನ್ನಿವೇಶಗಳು ಪ್ರೇಕ್ಷಕರಿಗೆ ಮಜಾ ಕೊಡಲಿದೆ. ಮುಂದಿನ ವರ್ಷ ಏಪ್ರಿಲ್ 12ಕ್ಕೆ 'ಗಾಡ್ಜಿಲ್ಲಾ ಅಂಡ್ ಕಾಂಗ್: ದಿ ನ್ಯೂ ಎಂಪೈರ್' ಸಿನಿಮಾ ರಿಲೀಸ್ ಆಗಲಿದೆ.
ಮೇರಿ ಪೇರೆಂಟ್, ಅಲೆಕ್ಸ್ ಗಾರ್ಸಿಯಾ, ಎರಿಕ್ ಮೆಕ್ಲಿಯೋಡ್, ಬ್ರಿಯಾನ್ ರೋಜರ್ಸ್, ಥಾಮಸ್ ಟುಲ್ ಹಾಗೂ ಜಾನ್ ಜಶ್ನಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆನ್ ಸೆರೆಸಿನ್ ಛಾಯಾಗ್ರಹಣ, ಟಾಮ್ ಹೋಲ್ಕೆನ್ಬೋರ್ಗ್ ಹಾಗೂ ಆಂಟೋನಿಯೊ ಡಿ ಐರಿಯೊ ಸಂಗೀತ ಚಿತ್ರಕ್ಕಿದೆ. ವಾರ್ನರ್ ಬ್ರೊಸ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ವಿಶ್ವದಾದ್ಯಂತ ವಿತರಣೆ ಮಾಡಲಿದೆ.
'ಗಾಡ್ಜಿಲ್ಲಾ ಅಂಡ್ ಕಾಂಗ್: ದಿ ನ್ಯೂ ಎಂಪೈರ್' ಸಿನಿಮಾ ಇಂಗ್ಲೀಷ್ ಜೊತೆಗೆ ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ. ಆದರೆ ಕನ್ನಡ ಭಾಷೆಗೆ ಡಬ್ ಆಗಿಲ್ಲ ಎನ್ನುವುದು ಬೇಸರದ ಸಂಗತಿ.


Click it and Unblock the Notifications











