ಯಶ್ ಜೊತೆ ಕೈ ಜೋಡಿಸಿದ ಹಾಲಿವುಡ್ ಚಿತ್ರ ನಿರ್ಮಾಪಕ ಚಾರ್ಲ್ಸ್ ರೋವೆನ್
ರಾಕಿಂಗ್ ಸ್ಟಾರ್ ಯಶ್ ದೊಡ್ಡ ದೊಡ್ಡ ಕನಸುಗಳನ್ನು ಕಂಡು ಅದನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಬಿಟ್ಟು ಪ್ಯಾನ್ ವರ್ಲ್ಡ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾಗಳ ಮೂಲಕ ಹೊದ ಮೈಲಿಗಲ್ಲು ಸ್ಥಾಪಿಸಲು ಹೊರಟಿದ್ದಾರೆ.
'KGF' ಸರಣಿ ಸಿನಿಮಾಗಳನ್ನು ಮಾಡಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದರು. ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಲ್ಲಿ ನಟಿಸುವುದು ಮಾತ್ರವಲ್ಲ ಹಣ ಸಹ ಹೂಡುತ್ತಿದ್ದಾರೆ. ನೂರಾರು ಕೋಟಿ ಬಜೆಟ್‌ನಲ್ಲಿ ಹಾಲಿವುಡ್ ರೇಂಜ್‌ನಲ್ಲಿ ಈ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಹಾಲಿವುಡ್ ಸ್ಟಾರ್ ತಂತ್ರಜ್ಞರು ಎರಡೂ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೆವಿಎಲ್ ಪ್ರೊಡಕ್ಷನ್ಸ್ ಜೊತೆ ಸೇರಿ ತಮ್ಮದೇ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಿಸುತ್ತಿದ್ದಾರೆ. ಇನ್ನು ನಿಮಿತ್ ಮಲ್ಹೋತ್ರಾ ಜೊತೆ 'ರಾಮಾಯಣ' ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ಈಗಾಗಲೇ ರಾವಣನ ಪಾತ್ರದಲ್ಲಿ ನಟಿಸಲು ಆರಂಭಿಸಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ಯುದ್ಧ ಸನ್ನಿವೇಶಗಳ ಚಿತ್ರೀಕರಣದಲ್ಲಿ ಯಶ್ ಭಾಗಿ ಆಗಿದ್ದರು. ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಎರಡು ಭಾಗಗಳಾಗಿ ರಾಮಾಯಣ ಕಾವ್ಯ ತೆರೆಗೆ ಬರಲಿದೆ.
ಮುಂದಿನ ವರ್ಷ ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಬಳಿಕ ವರ್ಷದ ಕೊನೆ ಕೊನೆಗೆ ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ-1' ಸಿನಿಮಾ ಬಿಡುಗಡೆಯಾಗಲಿದೆ. ಇದೆಲ್ಲದರ ನಡುವೆ ಹಾಲಿವುಡ್ ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕ ಚಾರ್ಲ್ಸ್ ರೋವೆನ್ ಇದೀಗ ಯಶ್ ಜೊತೆ ಕೈಜೋಡಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. 'ದಿ ಡಾರ್ಕ್ ನೈಟ್', 'ಜಸ್ಟೀಸ್ ಲೀಗ್', 'ಸುಸೈಡ್ ಸ್ಕ್ವಾಡ್' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಚಾರ್ಲ್ಸ್ ರೋವೆನ್ ನಿರ್ಮಾಣ ಮಾಡಿದ್ದಾರೆ.

ಅಂದಹಾಗೆ ಚಾರ್ಲ್ಸ್ ರೋವೆನ್ ಯಾವುದೋ ಹೊಸ ಚಿತ್ರಕ್ಕಾಗಿ ಯಶ್ ಜೊತೆ ಕೈ ಜೋಡಿಸಿಲ್ಲ. ಬದಲಿಗೆ 'ರಾಮಾಯಣ' ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇಷ್ಟು ದಿನ ನಿಮಿತ್ ಮಲ್ಹೋತ್ರಾ ಹಾಗೂ ಯಶ್ ಮಾತ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಮೂವರು ಸೇರಿ ಈ ಪೌರಾಣಿಕ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. 'ರಾಮಾಯಣ' ಸಿನಿಮಾ ಅನೌನ್ಸ್‌ಮೆಂಟ್ ಟೀಸರ್ ಬಂದಾಗ ಎಲ್ಲಾ ಊಹಾಪೋಹಗಳಿಗೆ ಉತ್ತರ ಸಿಗಲಿದೆ. ರಾಮಾಯಣ ಸಿನಿಮಾ ಸೆಟ್‌ನಲ್ಲಿ ಚಾರ್ಲ್ಸ್ ರೋವೆನ್ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗ್ತಿದೆ.
ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇನ್ನು ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿಲ್, ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎ. ಆರ್ ರಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗ್ತಿದೆ.
ಇತ್ತೀಚೆಗೆ 'ಮ್ಯಾಡ್ ಮ್ಯಾಕ್ಸ್' ಸ್ಟಂಟ್ ನಿರ್ದೇಶಕ ಗೈ ನೋರಿಸ್ ನೇತೃತ್ವದಲ್ಲಿ 'ರಾಮಾಯಣ' ಚಿತ್ರದ ಒಂದಷ್ಟು ಆಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿತ್ತು. ಯಶ್ ಹಾಗೂ ಗೈ ನೋರಿಸ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳು ಹೊರ ಬಂದಿತ್ತು. ಈಗಾಗಲೇ ಮೊದಲ ಭಾಗ ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ ಎನ್ನಲಾಗ್ತಿದೆ. ಇನ್ನು ಚಾರ್ಲ್ಸ್ ರೋವೆನ್ ಕೂಡ ಕೈ ಜೋಡಿಸಿರುವುದರಿಂದ ಸಿನಿಮಾ ಹಾಲಿವುಡ್ ಮಟ್ಟದಲ್ಲಿ ಬಹಳ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ತಿದೆ. ಮುಂದೆ ಚಾರ್ಲ್ಸ್ ರೋವೆನ್ ಜೊತೆ ಸೇರಿ ಯಶ್ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸಿದರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











