twitter
    For Quick Alerts
    ALLOW NOTIFICATIONS  
    For Daily Alerts

    ಕಾನ್ ರೆಡ್ ಕಾರ್ಪೆಟ್ ಒಳ ಹೊಕ್ಕ ಸ್ತ್ರೀ ಸಂವೇದಿ ಪ್ರತಿಭಟನೆಗಳು. “ಮೇಲ್ ಇಗೋ”ಅಭದ್ರತೆಯೋ ಪ್ರಾಬಲ್ಯವೋ…

    By ಕಾಂತಿ ಹೆಗಡೆ
    |

    ಮೊನ್ನೆ ಮೊನ್ನೆ ನಡೆದ 2022 ಅಂತರ ರಾಷ್ಟ್ರೀಯ ಕಾನ್ ಚಿತ್ರೋತ್ಸವ ಬಣ್ಣದ ಲೋಕದ ತಾರೆಯರೊಟ್ಟಿಗೆ ಸ್ತ್ರೀಹತ್ಯೆ ಮತ್ತು ಲೈಂಗಿಕ ದೌರ್ಜನ್ಯ ಕುರಿತ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದು ಹಳೆ ವಿಷಯ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಸ್ತ್ರೀಹತ್ಯೆ ಮತ್ತು ಯುದ್ಧ ಪೀಡಿತ ಉಕ್ರೇನ್ ಯುವತಿಯರ ಅತ್ಯಾಚಾರದ ವಿರುದ್ಧ ಮಾತ್ರವೇ ಆದ ಪ್ರತಿಭಟನೆಗಳಿವು ಎಂದರೆ ತಪ್ಪಾದೀತು.

    ಪ್ರಪಂಚದಾದ್ಯಂತ ಇರುವ ಸ್ತ್ರೀ ಕೇಂದ್ರಿತ ದುರ್ವ್ಯವಸ್ಥೆಗಳಿಗೆ ಆಯಾ ಸರ್ಕಾರಗಳ ಹೊಣೆಗಾರಿಕೆ ಪ್ರಶ್ನಿಸುವಂಥಹ ಪ್ರಯತ್ನಕ್ಕೊಂದು ರೆಡ್ ಕಾರ್ಪೆಟ್ ಚಾಲನೆಯಷ್ಟೇ. ಭಾರತ ಅಫ್ಘಾನಿಸ್ತಾನಗಳಂತಹ ದೇಶಗಳಲ್ಲಿ ಮಾತ್ರ ಪುರುಷ ಕೇಂದ್ರಿತ ವ್ಯವಸ್ಥೆ ಆಳವಾಗಿ ಬೇರೂರಿದೆ ಎಂದರೆ, ಉಹೂ!! ಆಸ್ಟ್ರೇಲಿಯಾ, ಸ್ವೀಡನ್, ಯುನೈಟೆಡ್ ಸ್ಟೇಟ್ಸ್ , ಕೆನಡಾದಂತಹ ಮುಂದುವರೆದ ದೇಶಗಳಲ್ಲೂ ಕೂಡ ಮಹಿಳೆಯರ ಮೇಲಿನ ದೌರ್ಜನ್ಯಗಳು ದಾಖಲಾಗುವುದು 21 ನೇ ಶತಮಾನದ ವಾಸ್ತವವೂ ಹೌದು.

    'ವಾರಣಾಸಿ' ರೆಸ್ಟಾರೆಂಟ್‌ನಲ್ಲಿ ಒಂದೇ ರಾತ್ರಿಗೆ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್'ವಾರಣಾಸಿ' ರೆಸ್ಟಾರೆಂಟ್‌ನಲ್ಲಿ ಒಂದೇ ರಾತ್ರಿಗೆ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್

    "All women speak two languages:
    the language of men
    and the language of silent suffering.
    Some women speak a third,
    the language of queens."
    -Mohja Kahf, "E-Mails from Scheherazad"

    ಮೊನ್ನೆಯಷ್ಟೇ ಕೋಲ್ಕತ್ತಾದ ರೇಣು ಖಾತುನ್ ಕೆಲಸಕ್ಕೆ ಹೋಗಬಾರದೆಂದು ಗಂಡ ಬಲಗೈ ಕತ್ತರಿಸಿದ್ದಾನೆ. ನವಜಾತ ಶಿಶುವಿಗೆ ಹಾಲೂಡಿಸದೆ ಬಂದ ಬಾಣಂತಿ ಹೆಂಗಸು ತನ್ನಷ್ಟಕ್ಕೆ ತಾನು ಡಾಕ್ಟರ್ ನಿಂದ ಬೈಗುಳ ತಿಂದು ಹೋಗುತ್ತಾಳೆ. ಮಗು ಹೊಟ್ಟೆಗೆ ಸರಿಯಾದ ಆಹಾರವಿಲ್ಲದೆ ಸಣಕಲಾಗುತ್ತಿದೆ. ಈ ಕಡೆ ತಾಯಿ ಹಾಲೂಣಿಸುವುದೂ ಇಲ್ಲ ಅದರ ಬಗ್ಗೆ ಮಾತೂ ಇಲ್ಲ. ಮಗುವಿನ ಆರೋಗ್ಯದ ಬಗ್ಗೆ ತಾಯಿಗೆ ಈ ಪರಿ ನಿರ್ಲಕ್ಷ ! ಘಟನೆ ಪದೇ ಪದೇ ಪುನರಾವರ್ತಿತವಾಗಿ ಪರೀಕ್ಷಿಸಿದಾಗ ಹೆಣ್ಣು ಮಗುವನ್ನು ಬಯಸದ ಗಂಡ ಮತ್ತು ಮನೆಯವರು ಆಕೆಯ ಮೊಲೆ ತೊಟ್ಟನ್ನೇ ಕತ್ತರಿಸಿದ್ದು ಡಾಕ್ಟರ್ ಗಮನಕ್ಕೆ ಬರುತ್ತದೆ. ಶಿಶುವಿಗೆ ಹಾಲುಣಿಸಲಾಗದ, ಹಾಗೇ ಮನೆಯವರ ಕ್ರೌರ್ಯದ ಬಗ್ಗೆ ಮಾತನಾಡಲಾಗದ ಅಸಹಾಯಕತೆಯಿಂದ ಆಕೆ ಮೌನವಾಗಿ ಬೈಗುಳ ತಿಂದು ಹೊರಡುವ ಪರಿ ನನ್ನ ನಡುಗಿಸಿಬಿಟ್ಟಿತ್ತು ಎನ್ನುತ್ತಾಳೆ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ವೈದ್ಯೆ ಆಗಿದ್ದ ಗೆಳತಿಯೊಬ್ಬಳು.

    Is Male Ego showed On Cannes Film Festival 2022 What Is The Reality

    ದೆಹಲಿಯ ಓಡುವ ಬಸ್ಸಿನಲ್ಲಿ ಬರ್ಬರವಾಗಿ ನಿರ್ಭಯ ಅತ್ಯಾಚಾರಕ್ಕೀಡಾಗುತ್ತಾಳೆ. ಎಲ್ಲೆಂದರಲ್ಲಿ ಅದೇ ಸುದ್ದಿ. ಹೆಣ್ಣು ತೊಡುವ ಉಡುಪು, ಬದಲಾಗುತ್ತಿರುವ ಐಡೆಂಟಿಟಿ ಎಲ್ಲವೂ ಮತ್ತೆ ಚರ್ಚೆಯ ರೂಪು ಪಡೆಯುತ್ತದೆ. ಸಂಜೆ ಮನೆಯಿಂದ ಹೊರಗೆ ಓಡಾಡುವ ಮಹಿಳೆಯರ ಬಗ್ಗೆ ಆಕ್ರೋಶವೋ ಆಕ್ರೋಶ. ಆಗೊಮ್ಮೆ ಈಗೊಮ್ಮೆ ಹೊರಗೆಲ್ಲೋ ಎದುರಾಗುವ ತುಂಬು ಜಡೆ, ದಪ್ಪ ಕುಂಕುಮ, ಮೈತುಂಬ ಬಟ್ಟೆ ತೊಟ್ಟ ಹದಿ ಹರೆಯದ ಹುಡುಗಿ ತಾಯಿಯೊಟ್ಟಿಗೆ ಆಸ್ಪತ್ರೆಗೆ ಬರುತ್ತಾಳೆ. ಹುಡುಗಿ ಬಸುರಿ, ನನ್ನ ಗೆಳತಿ ಅಬಾರ್ಶನ್ ಮಾಡಬೇಕು. ಮದುವೆ ಯಾವಾಗ ಆಯ್ತಮ್ಮಾ ? ಹುಡುಗಿ, ತಾಯಿ ಇಬ್ಬರೂ ತಬ್ಬಿಬ್ಬು. ಸರ್ಕಾರಿ ಡಾಕ್ಟರ್ ಹೆಚ್ಚು ಕೆದಕುವಂತಿಲ್ಲ. ಆದರೂ ಕಾಳಜಿ. ಮಗುವಿನ ತಂದೆ ಯಾರು? ತಾಯಿ ಅಳತೊಡಗುತ್ತಾಳೆ. ಮನೆಯ ನಾಲ್ಕು ಗೋಡೆಗಳೊಳಗೆ ತನ್ನ ಗಂಡನೋ, ಮಗನೋ, ಸೋದರ ಸಂಬಂಧಿಯೋ ಮಗಳ ಮೇಲೆ ಮಾಡಿದ ಅತ್ಯಾಚಾರ ಹೊರಬರುವಂತಿಲ್ಲ. ಮರ್ಯಾದಿ ಪ್ರಶ್ನೆ, ತಾಯಿಯೂ ವಿರೋಧಿಸದೆ ಬಾಯಿ ಮುಚ್ಚುತ್ತಾಳೆ. ಇಂಥ ಅದೆಷ್ಟೋ ಸಾಮಾನ್ಯರಲ್ಲಿ ಸಾಮಾನ್ಯರು ಎಂದು ತೋರುವ ಹೈ ಸ್ಕೂಲ್, PUC ಓದುವ ಹೆಣ್ಣುಮಕ್ಕಳ ಅಬಾರ್ಶನ್ ಮಾಡಬೇಕಾಯಿತು. ಕೊನೆ ಕೊನೆಗೆ ತಂದೆ ಯಾರು? ಎಂದು ಕೇಳುವುದನ್ನೇ ಬಿಟ್ಟುಬಿಟ್ಟೆ ಎನ್ನುತ್ತಾಳೆ. ದೆಹಲಿಯ ಓಡುವ ಬಸ್ಸಿನಲ್ಲಿ ಅಪರಿಚಿತರು ನಡೆಸುವ ಭಯಾನಕ ನಿರ್ಭಯ ಅತ್ಯಾಚಾರದಷ್ಟೇ ಕ್ರೂರ ಮನೆಯೊಳಗೇ ನಿತ್ಯ ನರಕ ಸದೃಶವಾದ ತಣ್ಣಗೆ ನಡೆದೇ ಹೋಗುವ ಹೊರಗೆಂದೂ ಬಾರದ ಇಂತಹ ಪ್ರಕರಣಗಳು.

    ನನಗೆ ನಾನೇ ಪತಿ-ಪತ್ನಿ: ಇಂತಹ ಮದುವೆ ಸಿನಿಮಾದಲ್ಲೂ ಬಂದೋಗಿದೆ ಗೊತ್ತಾ?ನನಗೆ ನಾನೇ ಪತಿ-ಪತ್ನಿ: ಇಂತಹ ಮದುವೆ ಸಿನಿಮಾದಲ್ಲೂ ಬಂದೋಗಿದೆ ಗೊತ್ತಾ?

    ಕೆಲವು ವರ್ಷಗಳ ಹಿಂದೆ ಇಥಿಯೋಪಿಯನ್ ಸಿನೆಮಾವೊಂದು ನನ್ನ ಗಮನ ಸೆಳೆದಿತ್ತು. DIFRET"ಇಥಿಯೋಪಿಯಾದಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ. ಮದುವೆಯಾಗಲೊಪ್ಪದ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅಥ್ಯಾಚಾರವೆಸಗಿ ಮದುವೆಗೆ ಒಪ್ಪಿಸುವುದು ಸರ್ವೇಸಾಮಾನ್ಯವಾದ ಕಾಲದಲ್ಲಿ ಹದಿನಾಲ್ಕರ ಬಾಲಕಿಯೋರ್ವಳು ತನ್ನ ಅತ್ಯಾಚಾರಿಯನ್ನು ಕೊಲ್ಲುತ್ತಾಳೆ. ಇಡೀ ಊರು - ಕೇರಿ - ಕಾನೂನು, "ಅದೇನು ದೊಡ್ಡ ಮಹಾ.. ಏನೋ ಮದುವೆಯಾಗಬಹುದಿತ್ತಲ್ಲ" ಎಂದು ವಾದಿಸುತ್ತದೆಯಲ್ಲದೆ ಆ ಬಾಲಕಿಯ ಕುಟುಂಬವನ್ನು ಗಡಿಪಾರು ಮಾಡುತ್ತವೆ. ವಕೀಲೆಯೊರ್ವರು ದೇಶದ ಕಾನೂನು ತಿದ್ದುಪಡಿಗೆ ಹೋರಾಡುವ ಸನ್ನಿವೇಶ, "ನಾನೂ ನನ್ನ ಪತ್ನಿಯನ್ನು ಅತ್ಯಾಚಾರವೆಸಗಿಯೇ ಮದುವೆಯಾಗಿದ್ದಲ್ವಾ.. ಮದುವೆಯಾಗೋಕೆ ಹುಡುಗಿ ಒಪ್ಪದಾಗ ಪಾಪ ಅವನೇನು ಮಾಡಬೇಕಿತ್ತು? ಅವನು ಮದುವೆಯಾಗು ಅಂತ ಬಂದು ಕೇಳಿದ್ದ ತಾನೇ, ನೀನ್ಯಾಕೆ ಆಗಲ್ಲ ಅಂತ ಸೊಕ್ಕು ಮಾಡಬೇಕಿತ್ತು"ಎಂಬಿತ್ಯಾದಿ ವಾದಗಳೂ .. ಬರೀ ಅತ್ಯಾಚಾರ! ಅಷ್ಟೇನಾ.. ಸೆಲ್ಫ್ ಡಿಫೆನ್ಸ್ ತಪ್ಪೇ ತಪ್ಪು..! ಎನ್ನುವಷ್ಟರ ಮಟ್ಟಿಗೆ ಒಪ್ಪಿಕೊಂಡ ವ್ಯವಸ್ಥೆಯೊಂದನ್ನು ಪ್ರಶ್ನಿಸುವುದು ಮತ್ತು ಬದಲಾಯಿಸುವುದಕ್ಕೆ ವಕೀಲೆ ಹೋರಾಡುವ ಪರಿ ಒಂದು ಪೂರ್ತಿ ಸಮಾಜದ ಮನಸ್ಥಿತಿ ಸರಿ ತಪ್ಪುಗಳ ವಿಭಿನ್ನ ಭಿನ್ನಾಭಿಪ್ರಾಯಕ್ಕೆ ಶತ ಶತಮಾನಗಳ ಇತಿಹಾಸವೇ ಇದೆ.

    ತೊಂಬತ್ತರ ದಶಕ ಮತ್ತು 2000 ದ ಮಧ್ಯಂತರದವರೆಗೂ Jordan ದೇಶದಲ್ಲಿ ಮರ್ಯಾದಾ ಹತ್ಯೆಯ ತಡೆಗೆ ಪೂರಕ ಕಾನೂನು ತಿದ್ದುಪಡಿಗೆ ಹೋರಾಟಗಳೇ ನಡೆದಿವೆ. ಅಲ್ಲಿಯವರೆಗೂ ಮರ್ಯಾದಾ ಹತ್ಯೆ ಎಂಬುದೊಂದು ಹತ್ಯೆಯೇ ಅಲ್ಲವೆನ್ನುವಂತೆ ನಡೆದೊಗುತ್ತಿದ್ದ ಸಾಮಾನ್ಯ ಘಟನೆ. 2003 ರಲ್ಲಿ ನೊರ್ಮ ಕೌರಿ ಎಂಬಾಕೆ ಮರ್ಯಾದಾ ಹತ್ಯೆಗೆ ಬಲಿಯಾದ ತನ್ನ ಸ್ನೇಹಿತೆಯ ನೈಜ ಜೀವನದ ಕಥೆ ಎನ್ನುತ್ತಲೇ The Forbidden Love ಎಂಬ ಪುಸ್ತಕ ಪ್ರಕಟಿಸುತ್ತಾಳೆ. ಅದು ವಿವಾದಿತ ಕೃತಿ ಮಾತ್ರವೇ ಆಗಿ ಉಳಿಯದೆ ಮುಂದೆ ಸಿನೆಮಾ ಆಗಿಯೂ ತೆರೆಕಾಣುತ್ತದೆ. ಆ ಕೃತಿಯ ಸುತ್ತಲೂ ಎದ್ದ ವಿವಾದ ಅಂತಾರಾಷ್ಟ್ರೀಯವಾಗಿ ಹೇಗೆ ಕಾವು ಪಡೆಯುತ್ತದೆಯೆಂದರೆ ಜೋರ್ದಾನಿನ ರಾಜಕುಮಾರ ಮರ್ಯಾದಾ ಹತ್ಯೆ ಕಾನೂನು ಬದ್ಧ ಶಿಕ್ಷಾರ್ಹ ಅಪರಾಧವಾಗಬೇಕೆಂಬ ಕಾನೂನು ತಿದ್ದುಪಡಿಗೆ ಸ್ವತಃ ಮುಂಚೂಣಿಯಲ್ಲಿ ನಿಲ್ಲುತ್ತಾನೆ. ಪ್ರಪಂಚದಾದ್ಯಂತ ಅಭಿಯಾನಗಳೂ ಮತ್ತು ಕಾನೂನು ಹೋರಾಟಗಳೂ ಆ ದೇಶದಲ್ಲಿ ಮರ್ಯಾದಾ ಹತ್ಯೆಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲ್ಪಡುವ ಕಾನೂನು ಜಾರಿಯಾಗಲೇಬೇಕೆಂಬ ಯಶಸ್ವಿ ತಿದ್ದುಪಡಿ ತಂದಿವೆ. ಮರ್ಯಾದಾ ಹತ್ಯೆ ಶಿಕ್ಷಾರ್ಹ ಅಪರಾಧವಾದ ಈ ಹೊತ್ತಿನಲ್ಲಿಯೂ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾತು ಕೇಳದ ಮನೆ ಮಗಳನ್ನು, ಅಕ್ಕ ತಂಗಿಯನ್ನೂ ತಣ್ಣಗೆ ಕೊಂದು ಮುಗಿಸುವ ಔದಾರ್ಯ ನಮ್ಮ ಸಮಾಜದಲ್ಲಿದೆ. ಇಂತಹ ಎಷ್ಟೊ ಉದಾಹರಣೆಗಳನ್ನು ನಾನು ಕೊಡಬಲ್ಲೆ. ಆದರೆ ಇದರ ಹಿಂದಿರುವ ಮಾನಸಿಕತೆಗಳನ್ನು ಸ್ವಲ್ಪ ಮಟ್ಟಿಗೆ ಅವಲೋಕಿಸುವ ಪ್ರಯತ್ನ ಮಾಡೋಣ.

    Is Male Ego showed On Cannes Film Festival 2022 What Is The Reality

    "Male Ego ಎನ್ನುವುದು ಒಂದು ವ್ಯಕ್ತಿಯ ಮಾನಸಿಕತೆಯಲ್ಲ ಇಡೀ ಸಮಾಜದ ಮಾನಸಿಕತೆಯನ್ನು ಪ್ರತಿಬಿಂಬಿಸುವ ವ್ಯಕ್ತಿಯ ವರ್ತನೆಯಷ್ಟೇ" ಎನ್ನುತ್ತಾನೆ ಖ್ಯಾತ ಮನಶ್ಯಾಸ್ತ್ರಜ್ಞ Sigmund Freud. ನಮ್ಮವರೇ ಆದ ಮೀನಗುಂಡಿ ಸುಬ್ರಮಣ್ಯ ತಮ್ಮ "ಮನಸ್ಸು ಇಲ್ಲದ ಮಾರ್ಗ" ಎಂಬ ಪುಸ್ತಕದಲ್ಲಿ "ಪೇರೆಂಟಲ್ ಪ್ರಾಬ್ಲಮ್" ಎಂದರೇನು? ಅದು ವ್ಯಕ್ತಿಯ ವ್ಯಕ್ತಿತ್ವವನ್ನು ಹೇಗೆ ರೂಪುಗೊಳಿಸುತ್ತದೆ ಎಂಬುದನ್ನು ತಮ್ಮದೇ ಅನುಭವ ಮತ್ತು ಅಧ್ಯಯನಗಳಿಂದ ಪ್ರಚುರಪಡಿಸುತ್ತಾ ಸಾಗುತ್ತಾರೆ. ಹುಟ್ಟಿದ ಮಗು ಮೊದಲ ಏಳು ವರ್ಷ ತನ್ನ ಸುತ್ತಲಿನ ಆಗು ಹೋಗುಗಳನ್ನೂ ವೀಕ್ಷಿಸುತ್ತ ತನ್ನೊಳಗೆ ತಾನು ಗ್ರಹಿಸಿಕೊಳ್ಳುತ್ತದೆ. ವ್ಯಕ್ತಿಯ ಕ್ಯಾರೆಕ್ಟರ್ ಬಿಲ್ಡಿಂಗ್ ಹಂತ ಮೊದಲ ಏಳು ವರ್ಷಗಳಲ್ಲೇ ಶುರುವಾಗುವುದು. ದೈನಂದಿನ ಬದುಕಲ್ಲಿ ಕಾಣುವ ತನ್ನ ಸುತ್ತಲಿನ ಯಾರನ್ನೋ ರೋಲ್ ಮಾಡೆಲ್ ಮಾಡಿಕೊಳ್ಳುತ್ತದೆ. ಹೆಚ್ಚಿನ ಸಾಧ್ಯತೆಗಳಲ್ಲಿ ಹೆಣ್ಣು ಮಕ್ಕಳಿಗೆ ಆ ರೋಲ್ ಮಾಡೆಲ್ ತಾಯಿಯೂ, ಗಂಡು ಮಕ್ಕಳಿಗೆ ತಂದೆಯೂ ಆಗಿರುತ್ತಾನೆ. ಅವಿಭಾಜ್ಯ ಕುಟುಂಬಗಳಲ್ಲಿ ಬೇರೆಯವರನ್ನೂ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಆಯಾ ಕುಟುಂಬದ ಪಾತ್ರ ನಿರ್ವಹಣೆಗಳ ಆಧಾರದ ಮೇಲೆ ಇದು ಬದಲಾಗಲೂ ಬಹುದು. ನಂತರದ ಏಳು ವರ್ಷಗಳು ಅಂದರೆ ಎಂಟರಿಂದ ಹದಿನಾಲ್ಕು ತನ್ನ ಪಾತ್ರದ ವಿಶ್ಲೇಷಣೆ ಮತ್ತು ಅಳವಡಿಕೆ. ಹದಿನಾಲ್ಕು ವರ್ಷಗಳ ನಂತರದ್ದು ಗಟ್ಟಿಯಾಗಿ ಅಳವಡಿಸಿಕೊಂಡ ತನ್ನ ಪಾತ್ರದ ಕಾರ್ಯ ನಿರ್ವಹಣೆ ಅಷ್ಟೇ. ಇವೆಲ್ಲ ಊಹೆಗೂ ನಿಲುಕದೆ ಸರ್ವೇಸಾಮಾನ್ಯವಾಗಿ ಉಪಪ್ರಜ್ಞೆಯೊಳಗೆ ಆಗಿ ಮುಗಿಯುವಂಥವು. ಹಾಗಾಗೇ ನಮ್ಮಿಡೀ ಬದುಕು ನಮ್ಮ ಉಪಪ್ರಜ್ಞೆಯ ನಿಯಂತ್ರಣದಲ್ಲೇ ಸಾಗುವುದು. ಜಗತ್ತನ್ನು ವೀಕ್ಷಿಸುವ ಮತ್ತು ಜೀವನದ ಪ್ರತಿ ಹಂತದಲ್ಲೂ ಪ್ರತಿಕ್ರಿಯಿಸುವ ಪರಿಯನ್ನು ನಾವು ಮೊದಲ 14 ವರ್ಷಗಳಲ್ಲೇ ಅಳವಡಿಸಿಕೊಂಡು ಬಿಟ್ಟಿರುತ್ತೇವೆ. ಹಾಗೆಂದೇ ಹುಟ್ಟುಗುಣ ಸುಟ್ಟರೂ ಹೋಗೋಲ್ಲ ಅನ್ನೋ ಗಾದೆ ಮಾತು ಬಳಕೆಯಲ್ಲಿರುವುದು.

    ಹಾಲಿವುಡ್‌ನಲ್ಲಿ ಮಿಂಚುತ್ತಿರೋ ಬೆಂಗಳೂರಿನ ಸೆಟ್ ಡಿಸೈನರ್ ಹರ್ಷಿತಾ: 'ಕೆಜಿಎಫ್ 2' ಬಗ್ಗೆ ಹೇಳಿದ್ದೇನು?ಹಾಲಿವುಡ್‌ನಲ್ಲಿ ಮಿಂಚುತ್ತಿರೋ ಬೆಂಗಳೂರಿನ ಸೆಟ್ ಡಿಸೈನರ್ ಹರ್ಷಿತಾ: 'ಕೆಜಿಎಫ್ 2' ಬಗ್ಗೆ ಹೇಳಿದ್ದೇನು?

    ಯಾವ್ಯಾವುದೋ ಸಮಾಜವನ್ನು ಉದಾಹರಣೆಯಾಗಿಟ್ಟುಕೊಂಡು ಪುರುಷಾಹಂಕಾರವೆಂಬ ದೈತ್ಯನನ್ನು ವಿಶ್ಲೇಷಿಸುವುದರ ಬದಲಾಗಿ ನಮ್ಮ ಸುತ್ತಲಿನ ಸಮಾಜವನ್ನೇ ಉದಾಹರಣೆಯಾಗಿ ಬಳಸಿಕೊಳ್ಳೋಣ. "ಛಿ! ಗಂಡಾಗಿ ಅಳ್ತೀಯಲ್ಲೋ ಶೇಮ್ ಶೇಮ್" ಎಂದು ಎರಡೋ ಮೂರೋ ವರ್ಷದ ಗಂಡು ಮಗು ಹಠ ಮಾಡುವಾಗ ಹಿರಿಯರು ಅಣಕಿಸುತ್ತಾರೆ. ತಾನೊಂದು ಗಂಡು, ತಾನು ಅತ್ತರೆ ಅವಮಾನ ಅಂತ ಅದರ ಉಪಪ್ರಜ್ಞೆಯಲ್ಲಿ ಗೊತ್ತಿಲ್ಲದೇ ನೋಂದಣಿಯಾಗುತ್ತದೆ. ಹಾಗಾದರೆ ಅತ್ತು ಹೊರ ಹಾಕಬೇಕಾದ ಭಾವನೆಗಳನ್ನು ಆ ಮಗು ಸಂಭಾಳಿಸುವ ಪರಿ ಹೇಗೆ? ಅಪ್ಪ, ದೊಡ್ಡಪ್ಪ, ಅಜ್ಜ ಯಾರೂ ಅಳೋಲ್ಲ, ಸಿಟ್ಟು ಮಾಡ್ತಾ ಜೋರಾಗಿ ಬೈತಾರೆ. ಇನ್ನೂ narcissistic ಆಗಿದ್ರೆ ಹೆಂಡತಿ ಮೇಲೋ, ಮಕ್ಕಳ ಮೇಲೋ ಕೈ ಮಾಡ್ತಾರೆ. ತಾನು ಸ್ಟ್ರಾಂಗ್ ಗಂಡು ಹಾಗಾಗಿ ಬೆಳಿತಾ ಬೆಳಿತಾ ಮಗು ತನ್ನ ಸುತ್ತಲಿನ ಸ್ಟ್ರಾಂಗ್ ಗಂಡಸೊಬ್ಬನ ಕ್ಯಾರೆಕ್ಟರ್ ಒಪ್ಪಿಕೊಳ್ಳುವಲ್ಲಿ ಮತ್ತು ಪ್ರತಿನಿಧಿಸುವಲ್ಲಿ ಬಾಲ್ಯ ನಾಂದಿ ಹಾಡುತ್ತದೆ.

    ಗಂಡು - ಹೆಣ್ಣು ದೈಹಿಕ ವಿಭಿನ್ನತೆಯಷ್ಟೇ. ಮಾನಸಿಕವಾಗಿ ಗಂಡು ಕೂಡ ಹೆಣ್ಣಿನಷ್ಟೇ ಭಾವಜೀವಿ ಎನ್ನುತ್ತವೆ ಅಧ್ಯಯನಗಳು. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸೂಕ್ತ ಸಮಯದಲ್ಲಿ, ಪರಿಸರಕ್ಕನುಗುಣವಾಗಿ ಭಾವನೆಗಳ ಅಭಿವ್ಯಕ್ತಿ ಇಬ್ಬರಲ್ಲೂ ಮುಖ್ಯವಾಗುತ್ತದೆ. ದುಃಖ, ಸಿಟ್ಟು, ಖುಷಿ ಯಾವುದೇ ಆಗಿರಬಹುದು. ಸೂಕ್ತ ಅಭಿವ್ಯಕ್ತಿ ಸಾಧ್ಯವಾಗದಾಗ ಅಸಮತೋಲನ ಸೃಷ್ಟಿಯಾಗುತ್ತದೆ. ಭಾವನೆಗಳ ಅಭಿವ್ಯಕ್ತಿಯಲ್ಲಿ ದುಃಖವನ್ನು ಹೊರಹಾಕುವಲ್ಲಿ ಅಳುವುದೂ ಒಂದು ಪ್ರಬಲವಾದ ಅಭಿವ್ಯಕ್ತಿ. ಅದನ್ನು ಲಿಂಗಾನುಸಾರ ದೌರ್ಬಲ್ಯ ಎಂದು ಪರಿಗಣಿಸುವುದೇ ತಪ್ಪಾಗುತ್ತದೆ. ಹಾಗೆ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಹೊರಗಾಕಲಾಗದ ನಕಾರಾತ್ಮಕ ಭಾವನೆಗಳು ಬ್ಲಾಕೇಜ್‌ಗಳಾಗಿ ನಮ್ಮ ದೇಹದ ನಾನಾ ಭಾಗಗಳಲ್ಲಿ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುತ್ತವೆ. ಇವುಗಳು ದೈಹಿಕ ರೋಗಗಳಾಗಿ ಮಾರ್ಪಾಡಾಗುವುದೂ ಸರ್ವೇಸಾಮಾನ್ಯ. ಅಹಂಕಾರದಂತಹ ಮಾನಸಿಕತೆಯೊಂದು ತನ್ನ ಅಭದ್ರತೆಗಳನ್ನು ದೇಹದಲ್ಲಿ ಹುಡುಗಿಸಿಕೊಳ್ಳುತ್ತಲೇ ಬೆನ್ನು ನೋವು, ಮಂಡಿ ನೋವು, ನರ ದೌರ್ಬಲ್ಯ, ಹೃದಯ ಸಂಬಂಧಿ ಖಾಯಿಲೆಗಳು ಮುಂತಾದ ದೀರ್ಘಾವಧಿಯ ದೈಹಿಕ ರೋಗಗಳಾಗಿ ಮಾರ್ಪಾಡಾಗುವ ಸಾಧ್ಯತೆಗಳೇ ಹೆಚ್ಚು. ಹಾಗೂ ಕ್ರೋಧ, ಮದ, ಮತ್ಸರಗಳಂತಹ ಭಾವನಾತ್ಮಕ ದೌರ್ಬಲ್ಯವಾಗಿ ಮಾರ್ಪಾಡಾಗುವುದು.

    ಹಾಗಾದರೆ ಒಂದು ವಯಸ್ಸಿನ ನಂತರ ನಮ್ಮ ವರ್ತನೆಗಳನ್ನು ತಿದ್ದಿಕೊಳ್ಳಲು ಸಾಧ್ಯವಿಲ್ಲವೇ ? ಮನೋವೈಜ್ಞಾನಿಕ ವಿಶ್ಲೇಷಣೆಗಳ ಪ್ರಕಾರ 30ರ ನಂತರ ಕಷ್ಟ ಸಾಧ್ಯ. ಅಂದರೆ ಖಡಾ ಖಂಡಿತವಾಗಿ ಸಾಧ್ಯ. ನಮ್ಮ ವರ್ತನೆಗಳ ಮಾದರಿಗಳನ್ನು ಸ್ವಯಂ ವಿಶ್ಲೇಷಿಸಿಕೊಂಡು, ನಮ್ಮ ನಡಾವಳಿಗಳಲ್ಲಿರುವ ತಪ್ಪನ್ನು ತಪ್ಪು ಅಂತಲೇ ವಿಮರ್ಶಿಸಿ ಒಪ್ಪಿಕೊಳ್ಳುವುದು ಮೊದಲ ಹೆಜ್ಜೆ. ನಂತರದ್ದು conscious paradigm shift. ನಮ್ಮ ಜಾಗೃತ ಮನಸ್ಸಿನಿಂದ ಸುಪ್ತ ಮನಸ್ಸಿಗೆ ಪದೇ ಪದೇ ಸ್ಥಿರ ಸಂದೇಶ ರವಾನಿಸುವ, ಆ ಮೂಲಕ ಸುಪ್ತ ಲೋಕವನ್ನೇ ಬದಲಾಯಿಸಿ ಉತ್ತಮ ದೃಷ್ಟಿಕೋನ ಬೆಳೆಸಿಕೊಳ್ಳುವ ಹಲವಾರು ತಂತ್ರಗಳು ಲಭ್ಯವಿದೆ. ಆದರೆ ಆ ಬಗೆಯ ಪ್ರಕ್ರಿಯೆ ಪೂರ್ತಿಯಾಗಿ ಯಶಸ್ಸು ಕಾಣುವುದು ನಮ್ಮೊಳಗಿನ ದೃಢ ನಿರ್ಧಾರಗಳಿಂದಲೇ ಹೊರತು ಹೊರ ಜಗತ್ತಿನ ಒತ್ತಡಗಳಿಂದಲ್ಲ.

    ಕೆಲವು ವರ್ಷಗಳ ಹಿಂದೆ ನಾನು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆಯಿದು. ಆಂದ್ರಪ್ರದೇಶದ ಹಳ್ಳಿಯೊಂದರಿಂದ ಬಂದ ಹುಡುಗನೊಟ್ಟಿಗೆ ಕೆಲವಾರು ದಿನಗಳಿಂದ ಕೆಲಸ ಮಾಡುತ್ತಿದ್ದೆ. ಆತನ ಕೆಲಸದ ಮೇಲ್ವಿಚಾರಣೆ ನೋಡಿ ಸಲಹೆ ಸೂಚನೆ ಕೊಡಬೇಕಾಗಿತ್ತು. ನನ್ನೆಲ್ಲ ಸಲಹೆಗಳೂ ಒಂದೋ ನಿರ್ಲಕ್ಷಿಸಲ್ಪಡುತ್ತಿದ್ದವು. ಒತ್ತು ಕೊಟ್ಟು ಹೇಳಿದಾಗ ಪ್ರತಿಕ್ರಿಯೆಯಾಗಿ ವಿನಾ ಕಾರಣ ಸಿಡುಕು, ಅಸಮಾಧಾನ. ನನ್ನ ಮ್ಯಾನೇಜರ್ ಅಮೆರಿಕನ್. ಆ ಮನುಷ್ಯನ ವರ್ತನೆ ನಿನ್ನ ಜೊತೆ ಹೇಗಿದೆ ಎಂದು ಕೇಳಿದಾಗ, ಹೀಗಾಗೆ ಅಂತ ಕೆಲವು ವಿಷಯಯಗಳನ್ನು ವೃತ್ತಿಪರವಾಗಿ ಬಹಿರಂಗಪಡಿಸಿದ್ದೆ. ಆಕೆ ಹೇಳಿದ್ದು ಇನ್ನೂ ನನಗೆ ನೆನಪಿದೆ "He behaves rude with you and one more Indian girl just because you both belong to the same region, race and culture of his own." ನಿಮ್ಮಿಬ್ಬರನ್ನು ಹೊರತುಪಡಿಸಿ ನಮ್ಮೆಲ್ಲರೊಟ್ಟಿಗೆ ಆತ ಗೌರವಾನ್ವಿತವಾಗಿ ವರ್ತಿಸುತ್ತಾನೆ. ಆಫೀಸಿನ ಹೊರಗೆಲ್ಲೋ ಸಿಕ್ಕಾಗ ನಗುನಗುತ್ತಲೇ ಮಾತನಾಡುವ ಮನುಷ್ಯ ವೃತ್ತಿಪರವಾಗಿ ತನ್ನ ದೇಶದ ಹೆಣ್ಣು ಸಲಹೆ ಸೂಚನೆ ಕೊಡುವುದನ್ನು ಸಹಿಸಲಾರ. ವರದಕ್ಷಿಣೆ, ಸ್ತ್ರೀ ಶೋಷಣೆ ಅತಿಯಾಗಿರುವ ಚಾಲ್ತಿಯಲ್ಲಿರುವ ಪ್ರದೇಶವೊಂದರಿಂದ ಹೊರಬಂದ ಮಾನಸಿಕತೆಯಿದು.

    Is Male Ego showed On Cannes Film Festival 2022 What Is The Reality

    ಆಮೇಲೆ ನಡೆದ ಘಟನಾವಳಿಗಳು ನನಗೊಂದು ಕಲಿಕೆ. "ನಾವು ಜನಾಂಗ ಮತ್ತು ಲಿಂಗಾಧಾರಿತ ಕೆಟ್ಟ ನಡವಳಿಕೆಗಳನ್ನು ಸಹಿಸುವುದಿಲ್ಲ. ನಿನ್ನ ವರ್ತನೆಗಳು ನಮ್ಮ ಪಾಲಿಸಿಗೆ ತದ್ವಿರುದ್ದವಾಗಿದ್ದುದ್ದು ನಾವು ಹಲವು ಬಾರಿ ಗಮನಿಸಿದ್ದೇವೆ. ಹಾಗಾಗಿ ನಿನ್ನನ್ನು ಕೆಲಸದಿಂದ ವಜಾಗೊಳಿಸುತ್ತಿದ್ದೇವೆ" ಎಂಬ ಸ್ಪಷ್ಟ ಸಂದೇಶದೊಂದಿಗೆ ಆತನನ್ನು ಹೊರಹಾಕಿದ್ದು. ಸುಪ್ತ ಪ್ರಜ್ಞೆಯಲ್ಲಿ ಬೇರೂರಿದ ಯಾವ ಮಾದರಿಗಳನ್ನೂ ಅಮೆರಿಕ ಬಿಡಿ ಚಂದ್ರ ಲೋಕಕ್ಕೆ ವೀಸಾ ಕೊಟ್ಟು ರವಾನಿಸಿದರೂ ಜಾಗೃತ ಸ್ವಯಂ ಪ್ರಯತ್ನವಿಲ್ಲದೆ ಬದಲಾಯಿಸುವುದು ಅಸಾಧ್ಯ. ಆ ರೀತಿಯ ನಡವಳಿಕೆಗಳು abuse ಅಂತನ್ನಿಸದೆ, ಸರ್ವೇ ಸಾಮಾನ್ಯ ಅಂತನ್ನಿಸೋ ಮಟ್ಟಿಗೆ ನಾವು ಮಹಿಳೆಯರು ಭಾರತದಲ್ಲಿ ಒಪ್ಪಿಕೊಂಡುಬಿಟ್ಟಿದ್ದೇವೆ. ಅದು ನಮ್ಮೊಳಗಿನ ಸುಪ್ತ ಮನಸ್ಸು ಪ್ರತಿಕ್ರಿಯಿಸುವ ರೀತಿ. ಅಲ್ಲಿದ್ದ ಆರು ವರ್ಷಗಳಲ್ಲಿ "ನೀವು ಭಾರತೀಯ ಮಹಿಳೆಯರು ಇದನ್ನೆಲ್ಲಾ ಹೇಗೆ ವಿರೋಧಿಸದೆ ಒಪ್ಪಿಕೊಳ್ಳುತ್ತೀರೋ ! " ಅನ್ನೋ ಆಶ್ಚರ್ಯ ಸೂಚಕಗಳನ್ನು ಎಷ್ಟೆಷ್ಟೋ ಸಂಧರ್ಭಗಳಲ್ಲಿ ಕೇಳಿ, ಆಳವಾಗಿ ಬೇರೂರಿದ ನನ್ನ It's OK, granted ವರ್ತನೆಗಳನ್ನು ಅವಲೋಕಿಸಿ ತಿದ್ದಿಕೊಂಡಿದ್ದಿದೆ. ಅವೆಲ್ಲ ತಿದ್ದುಪಡಿಗಳನ್ನೂ ಮೀರಿ ಮತ್ತೆ ಗಂಡಸಿನ ಅಹಂಕಾರಕ್ಕೆ, It's not at all OK ಅಂತನ್ನಿಸುವ ದುರ್ವರ್ತನೆಗೆ ಅನಿವಾರ್ಯವಾಗಿ ಸೊಪ್ಪು ಹಾಕಲೇಬೇಕಾದ ಪ್ರಸಂಗಗಳೂ ಭಾರತಕ್ಕೆ ವಾಪಸಾದ ಈ ಮೂರು ವರ್ಷಗಳಲ್ಲಿ ಜರುಗಿವೆ. "My job duty is not to satisfy my co-workers ego" ಎಂದು ನೇರವಾಗಿ ಹೇಳಬಲ್ಲ ಮಹಿಳೆಯರು ಎಷ್ಟಿದ್ದಾರೆ? ಹಾಗೆ ಸ್ಪಷ್ಟವಾಗಿ ನನ್ನೊಂದಿಗೆ ಸರಿಯಾಗಿ ವರ್ತಿಸು ಎಂದು ಗಂಡಸಿಗೆ ಹೇಳುವ ಮಹಿಳೆಯರನ್ನು ಭಾರತದಲ್ಲಿ ಸಹವರ್ತಿಗಳೂ, leadership ಎಷ್ಟು ಸಭ್ಯವಾಗಿ ನಡೆಸಿಕೊಳ್ಳುತ್ತದೆ? ನನ್ನನ್ನೂ ಸೇರಿ ಹಲವು ಮಹಿಳೆಯರ ವೃತ್ತಿ ಜೀವನದಲ್ಲೂ ಇಂತಹ ಪ್ರಸಂಗಗಳು ಮತ್ತೆ ಮತ್ತೆ ಪುನರಾವರ್ತನೆಯಾಗುವುದು ಭಾರತ ಮಾತೆಯ ದುರ್ದೈವವೇ ಸೈ.

    ಸರ್ಕಾರಿ ಗೆಝೆಟೆಡ್ ಆಫೀಸರಾದ ಗೆಳತಿ ಹೇಳುತ್ತಾಳೆ. ಮಹಿಳೆ ಎಂಬ ಒಂದೇ ಕಾರಣಕ್ಕೆ ಆಕೆಯ ಕೈ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳು ಮರ್ಯಾದೆ ತೋರದಿರುವುದು. ಸಾಮರ್ಥ್ಯವಿದ್ದರೂ ಕೆಲವೊಂದು ಪ್ರಮುಖ ಕಾರ್ಯಗಳಿಗೆ ತನಗಿಂತ ಕಿರಿಯ ಅನಾನುಭವಿ ಪುರುಷ ಆಫೀಸರನ ನೇಮಕಾತಿ ಮಾಡುವುದು. ಪುರುಷ ಅಧಿಕಾರಿಯೊಂದಿಗೆ ಗೌರವಾದರಗಳಿಂದ ಮಾತನಾಡುವ ಸಾರ್ವಜನಿಕ ಕೂಡ ಮಹಿಳಾ ಅಧಿಕಾರಿಯೊಂದಿಗೆ ಮಾತನಾಡುವಾಗ ತೋರುವ ಅಸಡ್ಡೆಯ tone variations. ಮೇಲಾಧಿಕಾರಿಗಳು ಆತ್ಮವಿಶ್ವಾಸವನ್ನೇ ಕದಡುವ ಮಟ್ಟಕ್ಕೆ ಅನಗತ್ಯ ಕುಹಕವಾಡುವುದು. ಮಹಿಳಾ ಅಧಿಕಾರಿಯ ಘನತೆ, ಸಾಮರ್ಥ್ಯವನ್ನು ಪದೇ ಪದೇ ಪ್ರಶ್ನಿಸುವ, ಕುಗ್ಗಿಸುವ ಇಂತಹ ವರ್ತನೆಗಳನ್ನು ಭಾರತದಲ್ಲಿ ಗಂಡಸು ಅನುವಂಶಿಕವಾಗಿ ಪಡೆದಿರಬೇಕು ಎನ್ನುತ್ತಾಳೆ. ಇಂಥದ್ದನ್ನು ನಾನು ಭಾರತೀಯ ಕಾರ್ಪೊರೇಟ್ ರಂಗದಲ್ಲೂ ಪ್ರತಿನಿತ್ಯ ನೋಡುತ್ತೇನೆ, ಅನುಭವಿಸುತ್ತೇನೆ. ಅನಾವಶ್ಯಕವಾಗಿ ಕುಗ್ಗಿಸುವ, ಬಗ್ಗಿಸುವ ಪ್ರಯತ್ನಗಳು ಒಂದು ಮನುಷ್ಯನ ಪೂರ್ತಿ ಪ್ರೊಡಕ್ಟಿವಿಟಿಯನ್ನೇ ನಾಶಗೊಳಿಸಿ, ಸಾಮರ್ಥ್ಯವನ್ನೇ ಅಡಗಿಸಿಬಿಡಬಹುದು. "ಆಕೆಯನ್ನು ನಿಗ್ರಹಿಸುವ ಹಪಾಹಪಿ ತನ್ನ ದೌರ್ಬಲ್ಯವಲ್ಲ. ಬದಲಿಗೆ ತನ್ನಿಂದ ನಿಗ್ರಹಕ್ಕೊಳಪಡಲಿಚ್ಛಿಸದ ಆಕೆ ಸರಿಯಿಲ್ಲ" ಎಂಬ ಅನುಭವೀ ಜೀವಿಗಳಿಗೆ ... "ಹೆಣ್ಣು ಎಲ್ಲಿಯೂ suppress ಆಗಲಿಚ್ಚಿಸದೆ ತನ್ನಷ್ಟಕ್ಕೆ ತಾ ಬದುಕುವ ಎಲ್ಲ ಮೂಲಭೂತ ಹಕ್ಕುಗಳನ್ನು ಹೊಂದಿದ್ದಾಳೆ." ಎಂಬ ಸೂಕ್ಷ್ಮದ ಅರಿವು ಭಾರತದ ವಿದ್ಯಾವಂತ ಸಮುದಾಯಗಳಲ್ಲೂ ಪೂರ್ತಿಯಾಗಿ ಬಾರದಿರುವುದು ಶಿಕ್ಷಣ ವ್ಯವಸ್ಥೆಯ ದೊಡ್ಡ ವೈಫಲ್ಯ. ಇನ್ನು housewife ಆಗಿ ಮನೆಯೊಳಗೇ ದುಡಿಯುವ ಹೆಣ್ಣುಗಳ ಸ್ಥಿತಿ ಹೇಗಿರಬಹುದು. ಹಾಗೆಂದೇ ಹಲವು ನಾಗರೀಕ ಸಮಾಜಗಳಲ್ಲಿ ಮಾನಸಿಕ ಹಿಂಸೆ ಶಿಕ್ಷಾರ್ಹ ಅಪರಾಧವಾಗಿದೆ. ಅದು ಇತರರನ್ನು ಹಂಗಿಸುವುದಿರಬಹುದು, ಕುಹಕವಿರಬಹುದು, ಕೂಗಾಟ - ಬೈದಾಡುವಿಕೆ, ಯಾವುದೇ ಮಾನಸಿಕವಾಗಿ ಹಾನಿಮಾಡುವ ಅಸಭ್ಯ ವರ್ತನೆಗಳನ್ನು emotional abuse ಎಂದೇ ಪರಿಗಣಿಸಲ್ಪಡುವುದು. ಅಂತಹ ಸಮಾಜದಲ್ಲಿ ಗಂಡಸಿನ ಮಾನಸಿಕ ಪರಿವರ್ತನೆ ಕೂಡ ಸಹಜವಾಗಿ ನಡೆದು ಹೋಗಿದೆ. ಪರಿವರ್ತನೆ ಅನಿವಾರ್ಯವಾದಾಗ ಮನುಷ್ಯ ಬದಲಾಗುವ ಯೋಚನೆಯನ್ನಾದರೂ ಮಾಡುತ್ತಾನೆ.

    ಅಂತರರಾಷ್ಟ್ರೀಯವಾಗಿ ತೆರೆದುಕೊಂಡ IT ಕ್ಷೇತ್ರದಲ್ಲಿ ಭಾರತದಲ್ಲಿ 20% ಮಹಿಳೆಯರಷ್ಟೇ ಕೆಲಸ ಮಾಡುವುದು. Leadership role ಅಲ್ಲಿ ಕೆಲಸ ಮಾಡುವ ಮಹಿಳೆಯರು ಅತೀ ಕಡಿಮೆ. ತಡ ರಾತ್ರಿಯವರೆಗೂ ಕೆಲಸ, work life balance ಕಷ್ಟ ಎಂದು ಹಲವರು ಮದುವೆ, ಮಕ್ಕಳಾಗುತ್ತಿದ್ದಂತೆ ತೊರೆಯುತ್ತಾರೆ. ಆದರೆ "ಹುಡ್ಗೀರು ಕೆಲಸ ಮಾಡೋದೇ ಇಲ್ಲ, ಟೀಮ್‌ಗೆ ಬೇಡವೇ ಬೇಡ" ಅಂತನ್ನೋ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದ ಮಾಡರ್ನ್ ಕಾರ್ಪೊರೇಟ್ ಕುಲತಿಲಕರ ಪ್ರತಿಷ್ಠೆಗೆ ತಮ್ಮ ವೃತ್ತಿ ಬಲಿ ಕೊಟ್ಟ ಮಹಿಳೆಯರ ಸಂಖ್ಯೆಯೂ ಕಮ್ಮಿಯಿಲ್ಲ. "ಶ್ರೇಷ್ಠತೆಯ ಗೀಳು" ಅತೀ ಅಭದ್ರತೆಯಿಂದ ಹುಟ್ಟಿಕೊಂಡು, ತನ್ನ ದೌರ್ಬಲ್ಯವನ್ನು ಮುಚ್ಚಿಡಲು ಮನುಷ್ಯ ತೊಡುವ ಸುರಕ್ಷಿತ ಮುಖವಾಡ ಎನ್ನುತ್ತದೆ ಮನಶ್ಶಾಸ್ತ್ರ. ಹೀಗಿಪ್ಪ ನಡಾವಳಿಗಳನ್ನು ವೃತ್ತಿ ಬದುಕಲ್ಲೂ ಮನುಷ್ಯ ತಿದ್ದುಕೊಳ್ಳದಿರುವುದಕ್ಕೆ ಏಶಿಯನ್ ರಾಷ್ಟ್ರಗಳು ಮಾನಸಿಕ ಸ್ವಾಸ್ಥ್ಯಕ್ಕೆ ಅಷ್ಟಾಗಿ ಒತ್ತುಕೊಡದಿರುವುದೂ ಒಂದು ಕಾರಣವಾಗಿರಬಹುದು .

    ಸ್ವೀಡೆನ್, ಡೆನ್ಮಾರ್ಕ್‌ಗಳಂತಹ ಸ್ಕ್ಯಾಂಡಿನೇವಿಯಾನ್ ರಾಷ್ಟ್ರಗಳು ಹೊಸ ಮಗುವಿಗೆ ತಾಯಿಯಾಗುವ ತಮ್ಮ ಮಹಿಳಾ ಸಿಬ್ಬಂದಿಗಳಿಗೆ ಎರಡು ವರ್ಷಗಳ ಭತ್ಯೆಸಹಿತ ರಜೆ ಘೋಷಿಸುತ್ತವೆ. ತಾಯಿ ಮತ್ತು ಮಗುವಿನ ಮಾನಸಿಕ ಆರೈಕೆ ಮತ್ತು ತನ್ನ ಮುಂದಿನ ಆರೋಗ್ಯಕರ ಪೀಳಿಗೆಗೆ ಹೀಗೊಂದು ಮುನ್ನೆಚ್ಚರಿಕಾ ಕ್ರಮ. ಮೊನ್ನೆ ಮೊನ್ನೆ ಯೋಗಿ ಆದಿತ್ಯನಾಥ್ ಸರ್ಕಾರ ಮಹಿಳೆಯರ ಸುರಕ್ಷತೆಗೆ ಮಹಿಳೆಯರ ಒಪ್ಪಿಗೆ ತೆಗೆದುಕೊಂಡ ನಂತರವೇ ಸಂಜೆ 7 ಗಂಟೆಯ ನಂತರ ಕೆಲಸ ಮಾಡಿಸಬಹುದು ಎಂಬ ಆದೇಶ ಹೊರಡಿಸುತ್ತಾರೆ. ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳುವುದಕ್ಕೆ ಮೀನಾ ಮೇಷ ಎಣಿಸುವ ಖಾಸಗಿ ಸಂಸ್ಥೆಗಳು ಮತ್ತೂ ಹಿಂದೇಟು ಹಾಕುವ ಸಾಧ್ಯತೆಗಳೇ ಹೆಚ್ಚು. ಹುಡ್ಗೀರಿಗಾದ್ರೆ ಕ್ಯಾಬ್ ಕೊಡ್ಬೇಕು, ನೈಟ್ ಶಿಫ್ಟ್ ಮಾಡಲ್ಲ ನಮ್ ಟೀಮ್‌ಗೆ ಸೂಟ್ ಆಗೋಲ್ಲ ಅಷ್ಟೇ. ಮಹಿಳಾ ಸುರಕ್ಷತೆ, ಸ್ವಾವಲಂಬನೆಗಳು ರಾತ್ರಿ ಬೆಳಗಾಗುವುದರೊಳಗೆ ಘಟಿಸುವ ಆಗು ಹೋಗುಗಳಲ್ಲವೇ ಅಲ್ಲ. ಒಂದು ಪೂರ್ತಿ ಪೀಳಿಗೆಯ ಯೋಚನಾ ಕ್ರಮ ಬದಲಾಗಬೇಕು.

    ಅಧ್ಯಯನದ ಪ್ರಕಾರ 2017 ರಿಂದ 2022 ರ ಅವಧಿಯಲ್ಲಿ 21 ಮಿಲಿಯನ್ ಮಹಿಳೆಯರು ಕಾರ್ಪೊರೇಟ್ ಕಾರ್ಯಕ್ಷೇತ್ರದಿಂದ ಕಣ್ಮರೆಯಾಗಿದ್ದಾರೆ. 9% ಅನುಭವಿ ಮಹಿಳೆಯರು ಮಾತ್ರವೇ ವೃತ್ತಿಯಲ್ಲಿ ಸ್ಥಿರವಾಗಿ ನೆಲೆ ನಿಂತಿರುವುದು. ಭಾರತವೊಂದರಲ್ಲೇ ವರ್ಷಕ್ಕೆ 250 ರಿಂದ 300 ಆಸಿಡ್ ಅಟ್ಯಾಕ್‌ಗಳು ವರದಿಯಾಗುತ್ತದೆ. ಪ್ರತಿ 16 ನಿಮಿಷಕ್ಕೊಂದರಂತೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತವೆ. ಭಾರತದಲ್ಲಿ 15 ವರ್ಷ ಮೇಲ್ಪಟ್ಟ 27% ಮಹಿಳೆಯರು ದೈಹಿಕ ದೌರ್ಜನ್ಯ ಅನುಭವಿಸಿರುತ್ತಾರೆ. 2017 ರಿಂದ 2022 ರ ಅವಧಿಯಲ್ಲಿ 200ಕ್ಕೂ ಹೆಚ್ಚು ಮರ್ಯಾದಾ ಹತ್ಯೆ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬಂದಿವೆ. 15 ರಿಂದ 16 ವರ್ಷದೊಳಗಿನ 13.5% ಹುಡುಗಿಯರು ಪ್ರತಿ ವರ್ಷ ಶಾಲೆ ತೊರೆಯುತ್ತಿದ್ದಾರೆ. ಭ್ರೂಣ ಹತ್ಯೆ ಶಿಶು ಹತ್ಯೆ, domestic violence ಹೀಗೆ ಹತ್ತು ಹಲವು ವರದಿಯಾದ ಪ್ರಕರಣಗಳ ನಿಖರ ಲೆಕ್ಕಾಚಾರ ನಿಮ್ಮ ಮುಂದಿಡಬಹುದು. ಬೆಳಕಿಗೆ ಬಾರದ ಅದೆಷ್ಟೋ ಪ್ರಕರಣಗಳು ಮುಚ್ಚಿಹೋಗಿರಬಹುದು.

    ಮುಂದಿನ ಪೀಳಿಗೆಗೆ ತಾಯಿ - ಆಕೆಯ ಸುತ್ತಲಿನ ಜಗತ್ತು ಹೀಗೀಗೆ ನಡೆಯಲೇ ಬೇಕು ಅನ್ನೋ ನಿಖರ ಯೋಜನೆಯೊಂದಿಲ್ಲದೆ ಯಾವ ಸರ್ಕಾರಿ ಯೋಜನೆಗಳೂ, ರೆಡ್ ಕಾರ್ಪೆಟ್ ಪ್ರತಿಭಟನೆಗಳೂ ಅಪ್ರಯೋಜಕಗಳೇ. ಹಾಗೊಂದು ಪೀಳಿಗೆ ಬದಲಿಸುವ ಸಕಾರ್ಯಕ್ಕೆ ರೆಡ್ ಕಾರ್ಪೆಟ್ಅಲ್ಲೊಂದಿಷ್ಟು ಚಾಲನೆ ಸಿಗಬಹುದಷ್ಟೆ.

    English summary
    Is Male Ego showed On Cannes Film Festival 2022 What Is The Reality, Know More.
    Sunday, June 12, 2022, 16:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X