ಜೇಮ್ಸ್ ಬಾಂಡ್ ಮತ್ತೆ ಬರುತ್ತಿದ್ದಾರೆ! ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ
ಹಾಲಿವುಡ್ ನ 'ಜೇಮ್ಸ್ ಬಾಂಡ್' ಸೀರೀಸ್ ಚಿತ್ರಗಳಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ. ಈ ಚಿತ್ರಗಳ ಸಿನಿಪ್ರಿಯರಿಗೆ ಎರಡು ವರ್ಷಗಳಿಂದ ಯಾವುದೇ ಹೊಸ ಸಿನಿಮಾದ ಬಗ್ಗೆ ಸದ್ದು ಸುದ್ದಿ ಎರಡು ಇರಲಿಲ್ಲ. ಈಗ ಒಂದು ಸಿಹಿ ಸುದ್ದಿ ಕೇಳಿಬಂದಿದೆ.
ಜೇಮ್ಸ್ ಬಾಂಡ್ ಈಗ ಮತ್ತೆ ಬರುತ್ತಿದ್ದಾರೆ ಎಂಬುದನ್ನು ಮೆಟ್ರೊ-ಗೋಲ್ಡ್‌ವಿನ್-ಮೇಯರ್ ಮತ್ತು Eon ಪ್ರೊಡಕ್ಷನ್ ಕಂಪನಿಗಳು ಖಚಿತ ಪಡಿಸಿವೆ. ಅಲ್ಲದೇ ಜೇಮ್ಸ್ ಬಾಂಡ್ ಅಫೀಶಿಯಲ್ ಟ್ಟಿಟ್ಟರ್ ಪೇಜ್ ನಲ್ಲೂ ಜೇಮ್ಸ್ ಬಾಂಡ್ ನವೆಂಬರ್ 8, 2019ಕ್ಕೆ ಯುಎಸ್ ಸಿನಿಮಾಸ್ ಮೂಲಕ ಹಿಂದಿರುಗಲಿದ್ದಾರೆ. ನಂತರ ಎಂದಿನಂತೆ ಬ್ರಿಟನ್ ನಂತರ ಪ್ರಪಂಚದ ಉಳಿದ ಭಾಗಗಳಲ್ಲಿ ರಿಲೀಸ್ ಮಾಡಲಾಗುತ್ತದೆ ಎಂದು ಟ್ವೀಟ್ ಮಾಡಲಾಗಿದೆ.

2019ಕ್ಕೆ ತೆರೆಕಾಣಲಿರುವ ಸಿನಿಮಾ ಲೆಜೆಂಡರಿ ಸೂಪರ್ ಸ್ಪೈ ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರವಾಗಿದ್ದು, ಟೈಟಲ್ ಏನು ಎಂಬುದು ತಿಳಿದುಬಂದಿಲ್ಲ. ಅಲ್ಲದೇ ಈ ಚಿತ್ರದಲ್ಲಿ ಜೇಮ್ಸ್ ಬಾಂಡ್ ಸೀರೀಸ್ ನ 24 ನೇ ಚಿತ್ರ 'ಸ್ಪೆಕ್ಟ್ರೆ'ದಲ್ಲಿ ಅಭಿನಯಿಸಿದ್ದ ಡೇನಿಯಲ್ ಕ್ರೇಗ್ ನಟಿಸುತ್ತಾರಾ ಅಥವಾ ಇತರೆ ಯಾರಾದರು ಬಣ್ಣ ಹಚ್ಚಲಿದ್ದಾರಾ ಎಂಬುದು ತಿಳಿದಿಲ್ಲ.

ಜೇಮ್ಸ್ ಬಾಂಡ್ ಸಿನಿಮಾಗಳನ್ನು ನಿರ್ಮಾಣ ಮಾಡುವ ಕಂಪನಿಗಳು 25ನೇ ಚಿತ್ರಕ್ಕೆ ಸಂಬಂಧಪಟ್ಟ ಸಿನಿಮಾ ವಿತರಣೆ, ಅಂತರರಾಷ್ಟ್ರೀಯ ಮಟ್ಟದ ಬಿಡುಗಡೆ ದಿನಾಂಕ, ತಾರಾಬಳಗ ಮತ್ತು ನಿರ್ದೇಶಕರ ಕುರಿತು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿರುವುದು ಮೂಲಗಳಿಂದ ತಿಳಿದಿದೆ. ಅಲ್ಲದೇ ಡೇನಿಯಲ್ ಕ್ರೇಗ್ ರವರೇ ಮತ್ತೊಮ್ಮೆ 007 ಸೂಪರ್ ಸ್ಪೈ ಏಜೆಂಟ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆಯಂತೆ.


Click it and Unblock the Notifications