'ಅವತಾರ್- 3' ಟ್ರೈಲರ್ ರಿಲೀಸ್; ಜೇಮ್ಸ್ ಕ್ಯಾಮರೂನ್ ಹೊಸ ಮ್ಯಾಜಿಕ್ ಹೇಗಿದೆ?
ಹಾಲಿವುಡ್ ಸೂಪರ್ ಹಿಟ್ ಸರಣಿ ಸಿನಿಮಾ 'ಅವತಾರ್' ಯಾರಿಗ್ ಗೊತ್ತಿಲ್ಲ ಹೇಳಿ. ಇದೇ ಸರಣಿಯ 3ನೇ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯ ಟ್ರೈಲರ್ ಬಂದು ಸದ್ದು ಮಾಡ್ತಿದೆ. ಈ ಬಾರಿ ಜೇಮ್ಸ್ ಕ್ಯಾಮರೂನ್ ಯಾವ ಮ್ಯಾಜಿಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ.
'ಅವತಾರ್: ಫೈರ್ ಅಂಡ್ ಆಷ್' ಹೆಸರಿನಲ್ಲಿ ಸರಣಿಯ 3ನೇ ಸಿನಿಮಾ ತೆರೆಗಪ್ಪಳಿಸಲಿದೆ. ಡಿಸೆಂಬರ್ 19ಕ್ಕೆ ಬಿಡುಗಡೆ ದಿನಾಂಕ ಕೂಡ ನಿಗದಿಯಾಗಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗಲಿದ್ದು ಕನ್ನಡ ವರ್ಷ ಟ್ರೈಲರ್ ಕೂಡ ಬಂದಿದೆ. ಐಮ್ಯಾಕ್ಸ್ 3D, ಡಾಲ್ಬಿ ಸಿನಿಮಾ, ರಿಯಲ್‌ಡಿ 3D, 4DX ಮತ್ತು ಸ್ಕ್ರೀನ್‌ಎಕ್ಸ್ ವರ್ಷನ್‌ಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

ಪಾರ್ಟ್-3 ಬಿಡುಗಡೆಗೂ ಮುನ್ನ 'ಅವತಾರ್: ದಿ ವೇ ಆಫ್ ವಾಟರ್' ಚಿತ್ರವನ್ನು ಅಕ್ಟೋಬರ್ 3ರಂದು ಕೆಲವೆಡೆ ಮರುಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾ ನೋಡಿ ಪ್ರೇಕ್ಷಕರು ಸರಣಿಯ 3ನೇ ಚಿತ್ರಕ್ಕೆ ಸಿದ್ಧರಾಗಬಹುದು. ಹಿಂದಿನ ಸಿನಿಮಾದಲ್ಲಿ ಸಮುದ್ರದ ಸುತ್ತಾ ಕಥೆ ಹೇಳಿದ್ದ ಕ್ಯಾಮರೂನ್ ಈ ಬಾರಿ ಆಷ್ ಪೀಪಲ್ ಎಂಬ ಭಯಾನಕ ಅಗ್ನಿ ಗಿರಿಜನರ ಕಥೆ ಹೇಳಲು ಬರ್ತಿದ್ದಾರೆ. ಪಂಡೋರಾಗೆ ಇವರೆಲ್ಲಾ ಕಂಟಕವಾಗುವ ಸುಳಿವು ಸಿಗುತ್ತಿದೆ.
"ಈ ಪ್ರಪಂಚದ ರಹಸ್ಯಗಳು ನಿನ್ನ ಊಹೆಗೂ ಮೀರಿದ್ದು" ಎನ್ನುವ ಡೈಲಾಗ್ ಟ್ರೈಲರ್‌ನಲ್ಲಿದೆ. ಆ ಮೂಲಕ ಸಿನಿಮಾ ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವುದು ಸ್ಪಷ್ಟವಾಗತ್ತಿದೆ. ಬೆಂಕಿ ಹಾಗೂ ನೀರಿನ ನಡುವಿನ ರೋಮಾಂಚಕಾರಿ ದೃಶ್ಯಗಳು, ಎರಡು ಜನಾಂಗಗಳ ನಡುವಿನ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿ ಹೈಲೆಟ್ ಆಗಿರುತ್ತದೆ ಎನ್ನುವುದು ಗೊತ್ತಾಗುತ್ತಿದೆ.
ಜೇಕ್ ಸುಲ್ಲಿ ಮತ್ತು ನೆಯ್ಟಿರಿ ಅವರ ಕುಟುಂಬವು ತಮ್ಮ ಮಗ ನೆಟಿಯಮ್ ಅನ್ನು ಕಳೆದುಕೊಂಡಾಗ ಎದುರಿಸುವ ನೋವು, ಕೋಪ ಮತ್ತು ಸೇಡನ್ನು ಟ್ರೇಲರ್‌ನಲ್ಲಿ ನೋಡಬಹುದು. ಮೈ ಜುಮ್ ಎನಿಸುವ ಆಕ್ಷನ್, ಗ್ರಾಫಿಕ್ಸ್ ಜೊತೆಗೆ ಕೌಟುಂಬಿಕ ಬಂಧಗಳ ನಡುವೆ ಹೆಚ್ಚಿದ ಕುಟುಂಬ ಬಂಧಗಳ ನಡುವಿನ ಹೆಚ್ಚಿದ ಉದ್ವಿಗ್ನತೆ, ನಂಬಿಕೆ ಹಾಗೂ ತ್ಯಾಗ ಎಲ್ಲವೂ ಚಿತ್ರದಲ್ಲಿ ಹೈಲೆಟ್ ಆಗುವ ಸುಳಿವು ಸಿಗುತ್ತಿದೆ.
ಜೇಕ್ ಸುಲ್ಲಿ ಪಾತ್ರದಲ್ಲಿ ಸ್ಯಾಮ್ ವರ್ದಿಂಗ್ಟನ್, ನೆಯ್ಟಿರಿ ಆಗಿ ಜೊಯಿ ಸಲ್ಡಾನಾ, ಕಿರಿ ಪಾತ್ರದಲ್ಲಿ ಸಿಗೋರ್ನಿ ವೀವರ್, ಕರ್ನಲ್ ಮೈಲ್ಸ್ ಕ್ವಾರಿಚ್ ಆಗಿ ಸ್ಟೀಫನ್ ಲ್ಯಾಂಗ್, ವಾರಂಗ್ ಪಾತ್ರದಲ್ಲಿ ಊನಾ ಚಾಪ್ಲಿನ್ ಹೀಗೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. 250 ಮಿಲಿಯನ್ ಡಾಲರ್ ಬಜೆಟ್‌ನಲ್ಲಿ 'ಅವತಾರ್: ದಿ ವೇ ಆಫ್ ವಾಟರ್' ಸಿನಿಮಾ ತಯಾರಾಗಿದೆ.
ಸೈಮನ್ ಫ್ರಾಂಗ್ಲೆನ್ ಸಂಗೀತ, ರಸೆಲ್ ಕಾರ್ಪೆಂಟರ್ ಛಾಯಾಗ್ರಹಣ ಚಿತ್ರಕ್ಕಿದೆ. 20th ಸೆಂಚುರಿ ಸ್ಟುಡಿಯೋಸ್ ಹಾಗೂ ಲೈಟ್‌ಸ್ಟಾರ್ಮ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು 'ಅವತಾರ್- 3' ಸಿನಿಮಾ ನಿರ್ಮಾಣ ಮಾಡಿವೆ.
ವಿಷ್ಯುವಲ್ ಎಫೆಕ್ಟ್ ಜೇಮ್ಸ್ ಕ್ಯಾಮರೂನ್ ಸಿನಿಮಾಗಳಲ್ಲಿ ಹೈಲೆಟ್ ಆಗಿರುತ್ತದೆ. ಈ ಚಿತ್ರದಲ್ಲಿ ಕೂಡ ಮೈ ಜುಮ್ ಎನಿಸುವ ಅದ್ಭುತ ಪ್ರಪಂಚ ಕಣ್ತುಂದೆ ಬರಲಿದೆ. ಇನ್ನು ತ್ರಿಡೀ ಕನ್ನಡಕದಲ್ಲಿ ಅದು ಮತ್ತಷ್ಟು ಮಜಾ ಕೊಡಲಿದೆ. ಹಾಲಿವುಡ್ ಸಿನಿಮಾಗಳು ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ತರುವ ಪ್ರಯತ್ನಗಳು ನಡೆಯುತ್ತವೆ. ಈ ವರ್ಷ 'ಅವತಾರ್- 3' ವರ್ಷದ ಕೊನೆಗೆ ಬಂದು ರಂಜಿಸಲಿದೆ.


Click it and Unblock the Notifications











