4ನೇ ಪತಿಗೂ ಸೋಡಾ ಚೀಟಿ ಕೊಟ್ಟ ಜೆನ್ನಿಫರ್ ಲೋಪೆಜ್; ಡಿವೋರ್ಸ್ ಕೋರಿ ಅರ್ಜಿ
ಹಾಲಿವುಡ್ ನಟಿ, ಗಾಯಕಿ ಜೆನ್ನಿಫರ್ ಲೋಪೆಜ್ 4ನೇ ಮದುವೆಯಾದ 2 ವರ್ಷಕ್ಕೆ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಪತಿ ಬೆನ್ ಅಫ್ಲೆಕ್‌ನಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ವೆರೈಟಿ ನಿಯತಕಾಲಿಕದ ವರದಿಯ ಪ್ರಕಾರ ಲೋಪೆಜ್ ಮಂಗಳವಾರ(ಆಗಸ್ಟ್ 20) ಲಾಸ್ ಏಂಜಲೀಸ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಸಿದರು.
ಏಪ್ರಿಲ್ 26ಕ್ಕೆ ಅಧಿಕೃತವಾಗಿ ಜೆನ್ನಿಫರ್ ಲೋಪೆಜ್ ಹಾಗೂ ಬೆನ್ ಅಫ್ಲೆಕ್ ದೂರಾಗುತ್ತಾರೆ ಎನ್ನಲಾಗ್ತಿದೆ. 2022 ರಲ್ಲಿ ಇಬ್ಬರಯ ಮದುವೆ ಆಗಿದ್ದರು. 2000 ಇಸವಿಯಲ್ಲಿ ಬಂದ 'ಗಿಗ್ಲಿ' ಚಿತ್ರದ ವೇಳೆ ಇಬ್ಬರ ಪರಿಚಯವಾಗಿತ್ತು. ಆಗ ಪ್ರೀತಿ ಹುಟ್ಟಿತ್ತು. ಬಳಿಕ ಬ್ರೇಕ್ ಕೂಡ ಆಗಿತ್ತು. ಬಳಿಕ ದೂರಾಗಿದ್ದ ಇಬ್ಬರೂ 20 ವರ್ಷಗಳ ನಂತರ ಮತ್ತೆ ಪ್ರೀತಿಲಿ ಬಿದ್ದಿದ್ದರು. ಮದುವೆ ಕೂಡ ಆಗಿದ್ದರು.

ಇದೀಗ ಜೆನ್ನಿಫರ್ ಲೋಪೆಜ್ ತಮ್ಮ 4ನೇ ಪತಿಯಿಂದ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಇದಕ್ಕೂ ಮುನ್ನ ಮೂವರನ್ನು ಪ್ರೀತಿಸಿ ಮದುವೆ ಆಗಿ ದೂರಾಗಿದ್ದರು. ಅಧಿಕೃತವಾಗಿ ಜೆನ್ನಿಫರ್ ಹಾಗೂ ಬೆನ್ ಅಫ್ಲೆಕ್ ದೂರಾಗುತ್ತಿರುವ ಬಗ್ಗೆ ಇನ್ನು ಮಾಹಿತಿ ನೀಡಿಲ್ಲ.
55 ವರ್ಷದ ಲೋಪೆಜ್ ಈ ಹಿಂದೆ 3 ಬಾರಿ ವಿವಾಹವಾಗಿದ್ದರು. 1997ರಲ್ಲಿ ಓಜಾನಿ ನೋವಾ ಜೊತೆ ಮದುವೆ ಆಗಿ ಮರುವರ್ಷ ಡಿವೋರ್ಸ್ ಪಡೆದಿದ್ದರು. ಬಳಿಕ 2001ರಲ್ಲಿ ಕ್ರಿಸ್ ಜುಡ್ ಕೈ ಹಿಡಿದರು. ಅದು 2 ವರ್ಷಕ್ಕೆ ಮುರಿದುಬಿದ್ದಿತ್ತು. 2004ರಲ್ಲಿ ಗಾಯಕ ಮಾರ್ಕ್ ಆಂಥೋನಿ ಜೊತೆ ಮದುವೆಯಾಗಿ 10 ವರ್ಷಗಳ ಕಾಲ ದಾಂಪತ್ಯ ಜೀವನ ಸಾಗಿಸಿದ್ದರು. 2014ರಲ್ಲಿ ಇವರಿಬ್ಬರು ದೂರಾಗಿದ್ದರು. ಇನ್ನು 2017ರಲ್ಲಿ ಮಾಜಿ ಬೇಸ್‌ಬಾಲ್ ಆಟಗಾರ ಅಲೆಕ್ಸ್ ರೊಡ್ರಿಗಸ್ ಅವರೊಂದಿಗೆ ಲೋಪೆಜ್ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅದು ಬಹಳ ದಿನ ಉಳಿಯಲಿಲ್ಲ.
ಬೆನ್ ಅಫ್ಲೆಕ್ ಕೈ ಹಿಡಿಯುವಾಗ "ಪ್ರೀತಿ ಸುಂದರವಾದುದು. ಪ್ರೀತಿ ದಯೆಯಳ್ಳದ್ದು ಬಳಿಕ ಆ ಪ್ರೀತಿ ತಾಳ್ಮೆಯಾಗಿ ಬದಲಾಗುತ್ತದೆ. ಇಪ್ಪತ್ತು ವರ್ಷಗಳ ತಾಳ್ಮೆ" ಎಂದು ಜೆನ್ನಿಫರ್ ಲೋಪೆಜ್ ಬರೆದುಕೊಂಡಿದ್ದರು. ಎರಡು ವರ್ಷಗಳ ಹಿಂದೆ ಲಾಸ್ ವೇಗಾಸ್‌ನಲ್ಲಿ ಇಬ್ಬರೂ ಮದುವೆ ಆಗಿದ್ದರು. ತಿಂಗಳ ನಂತರ(ಆಗಸ್ಟ್ 20) ಜಾರ್ಜಿಯಾದ ಅಫ್ಲೆಕ್ ಅವರ ಮನೆಯಲ್ಲಿ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು.
2ನೇ ವಿವಾಹ ವಾರ್ಷಿಕೋತ್ಸವದ ದಿನವೇ ಡಿವೋರ್ಸ್ ಕೋರಿ ಜೆನ್ನಿಫರ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬೆನ್ ಅಫ್ಲೆಕ್ ಕೂಡ ಈ ಹಿಂದೆ ಜೆನ್ನಿಫರ್ ಕಾರ್ನರ್ ಎಂಬಾಕೆ ಜೊತೆ ಮದುವೆ ಆಗಿ ಡಿವೋರ್ಸ್ ಪಡೆದಿದ್ದರು. ಈ ಜೋಡಿಗೆ ಮೂವರು ಮಕ್ಕಳು ಇದ್ದಾರೆ.


Click it and Unblock the Notifications











