ಜಾನಿ ಡೆಪ್ ಗೆಲುವು ಮಾಜಿ ಪತ್ನಿ ಅಂಬರ್‌ಗೆ 116 ಕೋಟಿ ದಂಡ!
ವಿಶ್ವದ ಗಮನ ಸೆಳೆದಿದ್ದ ನಟ ಜಾನಿ ಡೆಪ್ ಹಾಗೂ ಮಾಜಿ ಅಂಬರ್ ಹರ್ಡ್ ನಡುವಿನ ಮಾನನಷ್ಟ ಮೊಕದ್ದಮೆ ಪ್ರಕರಣ ಅಂತ್ಯ ಕಂಡಿದೆ. ಜಾನಿ ಡೆಪ್ ಪರವಾಗಿ ತೀರ್ಪು ಬಂದಿದ್ದು, ಮಾಜಿ ಪತ್ನಿ ಅಂಬರ್ ಹರ್ಡ್ 15 ಮಿಲಿಯನ್ ಡಾಲರ್ (116 ಕೋಟಿ) ಹಣವನ್ನು ಜಾನಿ ಡೆಪ್‌ಗೆ ನೀಡಬೇಕಿದೆ.
ವಿಚಾರಣೆ ಆಲಿಸಿದ ಏಳು ಜ್ಯೂರಿಗಳ ಬೆಂಚ್, ಮಾನ ನಷ್ಟ, ಆಸ್ತಿ ನಷ್ಟ ಹಾಗೂ ದೈಹಿಕ ಹಿಂಸೆ ಅನುಭವಿಸಿರುವ ಜಾನಿ ಡೆಪ್‌ಗೆ 15 ಮಿಲಿಯನ್ ಡಾಲರ್ ನೀಡುವಂತೆ ಅಂಬರ್‌ಗೆ ಸೂಚಿಸಿದೆ. ಜೊತೆಗೆ ಅಂಬರ್‌ಗೆ ಜಾನಿ ಡೆಪ್ 2 ಮಿಲಿಯನ್ ಡಾಲರ್ ಅನ್ನು ನೀಡುವಂತೆ ಸೂಚನೆ ನೀಡಿದೆ.
ವಿಚಾರಣೆ ನಡೆಸಿದ ಜ್ಯೂರಿ, ಅಂಬರ್ ಹರ್ಡ್ ಮೂರು ಪ್ರತ್ಯೇಕ ಹೇಳಿಕೆಗಳಲ್ಲಿ ಜಾನಿ ಡೆಪ್‌ಗೆ ಮಾನಹಾನಿ ಮಾಡಿರುವುದನ್ನು ಗುರುತಿಸಿದ್ದಾರೆ ಹಾಗೂ ಜಾನಿ ಡೆಪ್ ತಮ್ಮ ಅಟಾರ್ನಿ ಹೇಳಿಕೆಯಲ್ಲಿ ಒಮ್ಮೆ ಅಂಬರ್‌ಗೆ ಮಾನಹಾನಿ ಮಾಡಿದ್ದಾರೆ ಎಂದು ಗುರುತಿಸಿದೆ.

2016ರಲ್ಲಿಯೇ ಜಾನಿ ಡೆಪ್ ಹಾಗೂ ಅಂಬರ್ ಹರ್ಡ್ ವಿಚ್ಛೇಧನ ಪಡೆದುಕೊಂಡಿದ್ದರು. ಆದರೆ 2018 ರಲ್ಲಿ ಅಂಬರ್ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಬರೆದ ಲೇಖನವೊಂದರಲ್ಲಿ ತಾವು ಜಾನಿ ಡೆಪ್‌ನಿಂದ ಗೃಹ ಹಿಂಸೆಗೆ ಒಳಗಾಗಿರುವುದಾಗಿ ಬರೆದಿದ್ದರು. ಇದರ ವಿರುದ್ಧ ಮಾಜಿ ಪತಿ ಜಾನಿ ಡೆಪ್ 50 ಮಿಲಿಯನ್ ಡಾಲರ್ ಮೊತ್ತದ ಮಾನನಷ್ಟು ಮೊಕದ್ದಮೆ ದಾಖಲಿಸಿದರು.
ನಂತರ ಅಂಬರ್ ಹರ್ಡ್, ಜಾನಿ ಡೆಪ್‌ನ ವಕೀಲ ಅಡಮ್ ವಾಕ್‌ಮನ್ ಜಾನಿ ಡೆಪ್ ಪರವಾಗಿ ತಮ್ಮ ವಿರುದ್ಧ ಮಾಡಿದ್ದ ಹೇಳಿಕೆಗಳ ವಿರುದ್ಧ 100 ಮಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇಬ್ಬರ ಪ್ರಕರಣದ ವಿಚಾರಣೆಯೂ ಸುದೀರ್ಘವಾಗಿ ನಡೆದು, ಈ ಇಬ್ಬರೂ ಸ್ಟಾರ್‌ಗಳು ಪರಸ್ಪರರ ಮೇಲೆ ನೀಚಾತಿ ನೀಚ ಆರೋಪ-ಪ್ರತ್ಯೋಪಗಳನ್ನು ಮಾಡಿದರು.
''ಜಾನಿ ಡೆಪ್, ಮದ್ಯದ ಬಾಟಲಿಯನ್ನು ನನ್ನ ಜನನಾಂಗದಲ್ಲಿ ತುರುಕಿದ್ದ'' ಎಂದು ಅಂಬರ್ ಹರ್ಡ್ ಆರೋಪಿಸಿದರೆ, ಜಾನಿ ಡೆಪ್, 'ಅಂಬರ್ ನಾನು ಮಲಗುವ ಹಾಸಿಗೆಯ ಮೇಲೆ ಮಲ ವಿಸರ್ಜನೆ ಮಾಡಿದ್ದಳು'' ಎಂದಿದ್ದರು. ಸುದೀರ್ಘವಾಗಿ ನಡೆದ ಈ ವಿಚಾರಣೆಯಲ್ಲಿ ಹಲವರು ಸಾಕ್ಷ್ಯಗಳನ್ನು ನುಡಿದರು. ಆದರೆ ಆರಂಭದಿಂದಲೂ ಜಾನಿ ಡೆಪ್ ಪರವಾಗಿಯೇ ಪ್ರಕರಣ ಸಾಗುತ್ತಿತ್ತು, ಬಹುತೇಕ ಸಾಕ್ಷಿಗಳು ಜಾನಿ ಪರವಾಗಿತ್ತು, ಅಂಬರ್ ಕೆಲವು ಸುಳ್ಳು ಸಾಕ್ಷಿಗಳನ್ನು ಸಲ್ಲಿಸಿದ್ದು ಸಹ ಸಾಬೀತಾಯಿತು. ಕೊನೆಗೆ ಅಂತಿಮ ತೀರ್ಪು ಜಾನಿ ಡೆಪ್ ಪರವಾಗಿಯೇ ಬಂದಿದೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಜಾನಿ ಡೆಪ್, 'ಜ್ಯೂರಿಗಳು ನನ್ನ ಬದುಕನ್ನು ನನಗೆ ವಾಪಸ್ ನೀಡಿದ್ದಾರೆ. ಇಂದಿನಿಂದ ನನ್ನ ಇನ್ನೊಂದು ಜೀವನ ಆರಂಭವಾಗಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಜಾನಿ ಪರ ವಕೀಲರು ಸಹ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಂಬರ್ ಹರ್ಡ್, 'ಈ ತೀರ್ಪು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಲಿದೆ. ದೌರ್ಜನ್ಯದ ವಿರುದ್ಧ ಹೋರಾಡ ಬೇಕಿರುವ ಮಹಿಳೆಯರ ಆತ್ಮಬಲ ಕುಗ್ಗಿಸುತ್ತದೆ'' ಎಂದಿದ್ದಾರೆ.


Click it and Unblock the Notifications











