'ಕಾಂತಾರ- 1' ಇಂಗ್ಲೀಷ್ ಹಾಗೂ ಸ್ಪ್ಯಾನಿಷ್ ವರ್ಷನ್ ಎಲ್ಲೆಲ್ಲಿ ರಿಲೀಸ್ ಆಗಿದೆ? ಇಲ್ಲಿದೆ ಲಿಸ್ಟ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಕಂಡು ಗೆದ್ದ 'ಕಾಂತಾರ- 1' ಸಿನಿಮಾ ಈಗ ಮತ್ತಷ್ಟು ದೊಡ್ಡದಾಗಿ ಸದ್ದು ಮಾಡ್ತಿದೆ. ಸ್ಪ್ಯಾನಿಷ್ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಈ ಮೂಲಕ ಮತ್ತಷ್ಟು ದಾಖಲೆ ಬರೆಯಲು ಕನ್ನಡ ಮಣ್ಣಿನ ಸಿನಿಮಾ ಸಜ್ಜಾಗಿದೆ.
ಸ್ಪ್ಯಾನಿಷ್ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಡಬ್ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದು ಎನ್ನುವ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಸಿನಿಮಾ ಪಾತ್ರವಾಗಿದೆ. 3 ವರ್ಷಗಳ ಹಿಂದೆ 'ಕಾಂತಾರ' ಚಿತ್ರವನ್ನು ಇಟಲಿ ಹಾಗೂ ಸ್ಪ್ಯಾನಿಷ್ ಭಾಷೆಗಳಿಗೆ ಡಬ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಬಳಿಕ ಆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

ಮೊದಲ ಭಾಗಕ್ಕೆ ಕೂಡ ಡಬ್ ಮಾಡುವಂತೆ ಬೇಡಿಕೆ ಇತ್ತು. ಆದರೆ ಇದೀಗ ಪ್ರೀಕ್ವೆಲ್ ಡಬ್ ಆಗಿ ಇಂದಿನಿಂದ(ಅಕ್ಟೋಬರ್ 31) ಬಿಡುಗಡೆಯಾಗಿದೆ. ಯಾವೆಲ್ಲಾ ದೇಶಗಳಲ್ಲಿ 'ಕಾಂತಾರ- 1' ಇಂಗ್ಲೀಷ್ ಭಾಷೆಯಲ್ಲಿ ನೋಡಬಹುದು ಎನ್ನುವ ಥಿಯೇಟರ್ ಲಿಸ್ಟ್ ಕೂಡ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹಂಚಿಕೊಂಡಿದೆ.
ಅಮೇರಿಕಾದ ಅರ್ಕಾನ್ಸಾಸ್, ಪಿಯೋರಿಯಾ, ಫೀನಿಕ್ಸ್, ಟಕ್ಸನ್, ರಿಚ್ಮಂಡ್, ಸ್ಯಾನ್ ಬ್ರೂನೋ, ಬೌಲ್ಡರ್, ಆಲ್ಫರೆಟ್ಟಾ, ವೆಸ್ಟ್‌ಲ್ಯಾಂಡ್, ಸೇಂಟ್ ಚಾರ್ಲ್ಸ್ ಹೀಗೆ ಹಲವು ನಗರಗಳಲ್ಲಿ 'ಕಾಂತಾರ-1' ಸಿನಿಮಾ ಇಂಗ್ಲೀಷ್ ವರ್ಷನ್ ಬಿಡುಗಡೆ ಆಗಿದೆ. ಅಲ್ಲಿ ಸಿಗುವ ರೆಸ್ಪಾನ್ಸ್ ನೋಡಿ ಮತ್ತಷ್ಟು ಕಡೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಪ್ರತ್ಯಂಗಿರ ಸಿನಿಮಾಸ್ ಸಂಸ್ಥೆ ಚಿತ್ರವನ್ನು ಅಲ್ಲಿ ವಿತರಣೆ ಮಾಡುತ್ತಿದೆ. ಈ ಹಿಂದೆ ಹಲವು ದಕ್ಷಿಣ ಭಾರತದ ಸಿನಿಮಾಗಳನ್ನು ಈ ಸಂಸ್ಥೆ ಅಲ್ಲಿ ಬಿಡುಗಡೆ ಮಾಡಿದೆ.
ಇತ್ತ ಓಟಿಟಿಗೆ ಬಂದರೂ ಭಾರತದಲ್ಲಿ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಸಿನಿಮಾ ನೋಡಲು ಮನಸ್ಸು ಮಾಡಿದ್ದಾರೆ. ಈ ವೀಕೆಂಡ್ ಕೂಡ ಚಿತ್ರಮಂದಿರಗಳಲ್ಲಿ 'ಕಾಂತಾರ-1' ಹವಾ ಮುಂದುವರೆದಿದೆ. ಸಾಮಾನ್ಯವಾಗಿ ಓಟಿಟಿಗೆ ಬಂದ ಮೇಲೆ ಜನ ಚಿತ್ರಮಂದಿರದಲ್ಲಿ ಹೋಗಿ ಹಣ ಕೊಟ್ಟು ಸಿನಿಮಾ ನೋಡಲ್ಲ. ಆದರೆ ಕೆಲ ಸಿನಿಮಾಗಳು ಈ ಮಾತನ್ನು ಸುಳ್ಳಾಗಿಸುತ್ತವೆ. ಅದೇ ಪಟ್ಟಿಗೆ ಈ ಸಿನಿಮಾ ಕೂಡ ಸೇರಿಕೊಂಡಿದೆ.
ಓಟಿಟಿಯಲ್ಲಿ ಕೂಡ 'ಕಾಂತಾರ- 1' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಹಿಂದಿ ವರ್ಷನ್ ಓಟಿಟಿಗೆ ಬಂದಿಲ್ಲ ಎಂದು ಕೆಲವರು ಬೇಸರಗೊಂಡಿದ್ದಾರೆ. ಇನ್ನು 4 ವಾರಗಳ ಬಳಿಕ ಹಿಂದಿ ವರ್ಷನ್ ಸ್ಟ್ರೀಮಿಂಗ್ ಆರಂಭಿಸಲಿದೆ. ಬಹುತೇಕ ಚಿತ್ರಮಂದಿರಗಳಿಂದ ಸಿನಿಮಾ ತೆಗೆದು ಬೇರೆ ಸಿನಿಮಾಗಳನ್ನು ಹಾಕಲಾಗಿದೆ. ಕೆಲ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಆಗುತ್ತಿರುವ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.
ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯದಲ್ಲಿ 'ಕಾಂತಾರ- 1' ಸಿನಿಮಾ ಟಿಕೆಟ್ ದರ ತಗ್ಗಿಸಲಾಗಿದೆ. ಹಾಗಾಗಿ ಮತ್ತಷ್ಟು ಜನ ಸಿನಿಮಾ ನೋಡಲು ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದಾರೆ. ಇದು ದೊಡ್ಡ ಪರದೆಗೆ ಮಾಡಿರುವ ಸಿನಿಮಾ. ಹಾಗಾಗಿ ಅಲ್ಲೇ ನೋಡಬೇಕು ಎಂದು ಕೆಲವರು ಭಾವಿಸುತ್ತಿದ್ದಾರೆ. ಅಕ್ಟೋಬರ್ 2ರಂದು ತೆರೆಕಂಡಿದ್ದ ಸಿನಿಮಾ 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.
ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ ಕೂಡ 'ಕಾಂತಾರ- 1' ಪಾಲಾಗಿದೆ. ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ನಟನೆಯ 'ಛಾವ' ಚಿತ್ರದ ದಾಖಲೆಯನ್ನು ಮುರಿದಿದೆ. ಕರ್ನಾಟಕದಲ್ಲಿ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. 'ಕೆಜಿಎಫ್-2' ಹಾಗೂ 'ಪುಷ್ಪ-2' ಚಿತ್ರ ಮಾಡದ ಕೆಲ ದಾಖಲೆಗಳು 'ಕಾಂತಾರ- 1' ಹೆಸರಿನಲ್ಲಿದೆ.


Click it and Unblock the Notifications











