ಸಂಭಾವನೆಯ ಮುಕ್ಕಾಲು ಪಾಲು ಹಣ ಕ್ಯಾನ್ಸರ್ ಪೀಡಿತರ ಕಲ್ಯಾಣಕ್ಕೆ ನೀಡಿದ ನಟ!
ಸಿನಿಮಾ ನಟರು ಸಮಾಜ ಸೇವೆ ಮಾಡುವುದು ಹೊಸದೇನೂ ಅಲ್ಲ. ತಾವು ಗಳಿಸಿದ್ದರಲ್ಲಿ ಒಂದಿಷ್ಟು ಭಾಗವನ್ನು, ಅಥವಾ ಸಿನಿಮಾದ ಹೊರತಾಗಿ ಬರುವ ಇತರೆ ಸಂಭಾವನೆಯನ್ನು ಸಮಾಜ ಸೇವೆಗೆ ಮುಡಿಪಾಗಿಡುವುದು ಸಾಮಾನ್ಯ. ಆದರೆ ಹಾಲಿವುಡ್ ನಟನೊಬ್ಬ ಸಿನಿಮಾದ ಸಂಭಾವನೆಯ ಮುಕ್ಕಾಲು ಪಾಲು ಹಣವನ್ನು ಸಮಾಜ ಸೇವೆಗೆ ದೇಣಿಗೆ ನೀಡಿದ್ದಾರೆ.
ಇತ್ತಿಚೆಗೆ ಬಿಡುಗಡೆ ಆದ 'ಮೇಟ್ರಿಕ್ಸ್; ರಿಸರ್ಯಾಕ್ಷನ್' ಸಿನಿಮಾದ ನಾಯಕ ಕಿನು ರಿವೀಸ್, ತಮಗೆ 'ಮೇಟ್ರಿಕ್ಸ್; ರಿಸರ್ಯಾಕ್ಷನ್' ಸಿನಿಮಾಕ್ಕೆ ನೀಡಲಾದ ಸಂಭಾವನೆಯ ಶೇಕಡಾ 70ರಷ್ಟು ಭಾಗ ಹಣವನ್ನು ಕ್ಯಾನ್ಸರ್ ಸಂಶೋಧನೆಗಳಿಗೆ ದೇಣಿಗೆ ನೀಡಿದ್ದಾರೆ.
ಜನಪ್ರಿಯ 'ಮೇಟ್ರಿಕ್ಸ್' ಸಿನಿಮಾ ಸರಣಿಯ ಎಲ್ಲ ಸಿನಿಮಾಗಳಲ್ಲಿಯೂ ನಟಿಸಿರುವ ಕೀನು ರಿವೀಸ್, 'ಮೇಟ್ರಿಕ್ಸ್; ರಿಸರ್ಯಾಕ್ಷನ್' ಸಿನಿಮಾದಲ್ಲಿಯೂ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಸಲು ಕೀನು ರಿವೀಸ್‌ಗೆ 400 ಕೋಟಿಗೂ ಹೆಚ್ಚು ಮೊತ್ತವನ್ನು ಸಂಭಾವನೆ ರೂಪದಲ್ಲಿ ನೀಡಲಾಗಿತ್ತು. ಆ ಹಣದ ಮುಕ್ಕಾಲು ಪಾಲು ಅಂದರೆ ಸುಮಾರು 100 ಕೋಟಿ ಹಣವನ್ನು ಕೀನು ರಿವೀಸ್ ದೇಣಿಗೆ ನೀಡಿದ್ದಾರೆ.

ವಿಶೇಷವೆಂದರೆ ಇತ್ತೀಚೆಗೆ ಬಿಡುಗಡೆ ಆದ 'ಮೇಟ್ರಿಕ್ಸ್' ಸಿನಿಮಾಕ್ಕೆ ನೀಡಿದ ಸಂಭಾವನೆ ಮಾತ್ರವೇ ಅಲ್ಲ ಈ ಹಿಂದೆ ಬಿಡುಗಡೆ ಆದ 'ಮೇಟ್ರಿಕ್ಸ್' ಸಿನಿಮಾಗಳಿಗೆ ಕೀನು ಪಡೆದಿದ್ದ ಸಂಭಾವನೆಯ ಹಣದ ಮುಕ್ಕಾಲು ಪಾಲನ್ನು ಕ್ಯಾನ್ಸರ್ ಪೀಡಿತರ ಕಲ್ಯಾಣಕ್ಕೆ ದೇಣಿಗೆ ನೀಡಿದ್ದರು.
1999ರಲ್ಲಿ ಮೊದಲ ಬಾರಿಗೆ 'ಮೇಟ್ರಿಕ್ಸ್' ಸಿನಿಮಾ ಬಿಡುಗಡೆ ಆಗಿತ್ತು. ಕೀನು ಅದರಲ್ಲಿ ನಿಯೋ ಪಾತ್ರದಲ್ಲಿ ನಟಿಸಿದ್ದರು. ಆಗಿನಿಂದ ಈವರೆಗೆ ನಾಲ್ಕು 'ಮೇಟ್ರಿಕ್ಸ್' ಸಿನಿಮಾಗಳು ಬಿಡುಗಡೆ ಆಗಿದ್ದು ಈ ನಾಲ್ಕು ಸಿನಿಮಾಗಳಲ್ಲಿ ಕೀನುಗೆ ನೀಡಲಾಗಿದ್ದ ಸಂಭಾವನೆಯ ಮುಕ್ಕಾಲು ಪಾಲು ಹಣ ಕ್ಯಾನ್ಸರ್ ಕುರಿತ ಸಂಶೋಧನೆಗೆ ದೇಣಿಗೆ ನೀಡಿದ್ದಾರೆ ಈ ನಟ.
ಕೀನು ರಿವೀಸ್ ಅವರ ಸಹೋದರಿ 1991ರಿಂದಲೂ ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದಾರೆ. ಸತತವಾಗಿ ಒಂದು ದಶಕದ ಕಾಲ ಕ್ಯಾನ್ಸರ್ ಜೊತೆ ಹೋರಾಡಿದ ಬಳಿಕ 2001ರಲ್ಲಿ ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾದರು ಕೀನು ರಿವೀಸ್ ಸಹೋದರಿ.
ಕ್ಯಾನ್ಸರ್ ಪೀಡಿತರಿಗಾಗಿ ಸಂಭಾವನೆಯ ಮುಕ್ಕಾಲು ಪಾಲು ಹಣ ನೀಡುವುದು ಮಾತ್ರವೇ ಅಲ್ಲದೆ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಸಹಾಯ ಮಾಡಲೆಂದು ಆಸ್ಪತ್ರೆ ನಿರ್ಮಿಸಿದ್ದಾರೆ. ಎನ್‌ಜಿಓ ಸ್ಥಾಪಿಸಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನೂ ಕೀನು ಮಾಡುತ್ತಿದ್ದಾರೆ.
1986ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಕೀನು ರಿವೀಸ್ ಹಲವು ಸೂಪರ್-ಡೂಪರ್ ಹಿಟ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











