ಭಾವುಕ ಪತ್ರ ಬರೆದು ಅಂತಿಮ ವಿದಾಯ ಹೇಳಿ ಯುವ ನಟಿ ಆತ್ಮಹತ್ಯೆ
ಖ್ಯಾತ ಕೊರಿಯನ್ ಸಿನಿಮಾ, ಟಿವಿ ನಟಿ ಯೂ ಜು ಎನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು. ಅವರ ಆತ್ಮಹತ್ಯೆ ಪತ್ರವನ್ನು ಅವರ ಸಹೋದರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಟಿಯ ಅಂತಿಮ ವಿದಾಯದ ಪತ್ರ ಆಕೆಯ ಅಭಿಮಾನಿಗಳನ್ನು ಆರ್ದ್ರಗೊಳಿಸಿದೆ.
ನಟಿ ಬರೆದಿರುವ ಆತ್ಮಹತ್ಯಾ ಪತ್ರ ಹೀಗಿದೆ, ''ಮೊದಲು ಹೋಗುತ್ತಿರುವುದಕ್ಕೆ ಕ್ಷಮೆ ಇರಲಿ, ಅಪ್ಪ, ಅಮ್ಮ, ಅಜ್ಜಿ ಹಾಗೂ ಸಹೋದರನಿಗೆ ವಿಶೇಷವಾಗಿ ಕ್ಷಮೆ ಕೇಳುತ್ತೇನೆ. ನಾನು ಬದುಕಿರುವುದು ಬೇಡ ಎಂದು ನನ್ನ ಹೃದಯ ಚೀರಿ ಹೇಳುತ್ತಿದೆ. ನಾನಿಲ್ಲದೆ ಬದುಕು ನಿಮಗೆ ಖಾಲಿ ಎನಿಸಬಹುದು ಆದರೆ ದಯವಿಟ್ಟು ಧೈರ್ಯದಿಂದ ಜೀವಿಸಿ. ನಾನು ಮೇಲಿನಿಂದ ಎಲ್ಲವನ್ನೂ ನೋಡುತ್ತಿರುತ್ತೇನೆ. ದಯವಿಟ್ಟು ಅಳಬೇಡಿ, ಅದು ನಿಮಗೆ ನೋವು ತರುತ್ತದೆ''
''ನಾನು ಸ್ವಲ್ಪವೂ ನೋವಿನಲ್ಲಿಲ್ಲ, ಬದಲಿಗೆ ನಾನು ಹಿಂದೆಂದಿಗಿಂತಲೂ ಶಾಂತವಾಗಿದ್ದೇನೆ. ಇದಕ್ಕೆ ಕಾರಣ, ನಾನು ಹೀಗೆ ಮಾಡಬೇಕೆಂದು ಬಹಳ ದಿನಗಳಿಂದ ಯೋಚಿಸಿದ್ದೆ. ನಾನು ಬಹಳ ಸಂತುಷ್ಟವಾದ ಜೀವನ ನಡೆಸಿದ್ದೇನೆ. ನನ್ನ ಯೋಗ್ಯತೆಗಿಂತಲೂ ಒಳ್ಳೆಯ ಬದುಕು ನನಗೆ ಸಿಕ್ಕಿದೆ. ಹಾಗಾಗಿ ಈ ಜೀವನ ನನಗೆ ಸಾಕು ಎನಿಸಿದೆ. ಹಾಗಾಗಿ ನನ್ನ ಸಾವಿಗೆ ಬೇರೆ ಯಾರನ್ನೂ, ಯಾವುದನ್ನೂ ಹೊಣೆ ಮಾಡದೆ ಬದುಕಿರಿ''
''ನಾನು ಸತ್ತಿಲ್ಲ ಹಾಗಾಗಿ ದಯವಿಟ್ಟು ಎಲ್ಲರೂ ಧೈರ್ಯವಾಗಿ ಜೀವನ ಸಾಗಿಸಿ. ನನ್ನ ಅಂತಿಮಕಾರ್ಯಕ್ಕೆ ಹಲವರನ್ನು ಕರೆಯಲಾಗುತ್ತದೆ. ಅಲ್ಲಿಗೆ ಹಲವರು ಬರುತ್ತೀರಿ. ಅಲ್ಲಿ ನಾನು ಹಲವರನ್ನು ನೋಡುತ್ತೇನೆ. ಕೆಲವರನ್ನಂತೂ ಮೊದಲ ಬಾರಿಗೆ ನೋಡುತ್ತೇನೆ. ಯಾರು ಅಳುತ್ತಿದ್ದೀರಿ ಎಂಬುದನ್ನೂ ನೋಡುತ್ತೇನೆ. ಹಾಗಾಗಿ ಯಾರೂ ಅಳದಿರಿ''

''ನಟಿಸುವುದು ನನಗೆ ಬಹಳ ಇಷ್ಟ. ನಟನೆ ನನಗೆ ಎಲ್ಲವೂ ಆಗಿತ್ತು. ನಟನೆ ನನ್ನ ಜೀವನದ ಭಾಗವೇ ಆಗಿತ್ತು. ಆದರೆ ನಟಿಯಾಗಿ ಜೀವನ ನಡೆಸುವುದು ಸುಲಭವಾಗಿರಲಿಲ್ಲ. ನನಗೆ ನಟನೆ ಬಿಟ್ಟು ಬೇರೇನನ್ನೂ ಮಾಡುವುದು ಇಷ್ಟವಿರಲಿಲ್ಲ. ನೀವು ಇಷ್ಟಪಟ್ಟಿದ್ದನ್ನು ಮಾಡುವುದು ವರವಾದರೆ, ಅದನ್ನೊಂದನ್ನು ಬಿಟ್ಟು ಬೇರೇನನ್ನೂ ಮಾಡಲಾಗದೆ ಇರುವುದು ಶಾಪ''
''ದೇವರಿಗೆ ನಾನೆಂದರೆ ಪ್ರೀತಿ, ಆತ ಖಂಡಿತವಾಗಿ ನನ್ನನ್ನು ಸ್ವರ್ಗಕ್ಕೆ ಕಳಿಸುತ್ತಾನೆ, ನರಕಕ್ಕೆ ಕಳಿಸುವುದಿಲ್ಲ. ನನ್ನ ಮನಸ್ಸನ್ನು ಆತ ಅರ್ಥಮಾಡಿಕೊಳ್ಳುತ್ತಾನೆ. ಮುಂದೆಯೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಹಾಗಾಗಿ ಯಾರೂ ನನ್ನ ಬಗ್ಗೆ ನೋವು ಮಾಡಿಕೊಳ್ಳಬೇಡಿ. ನನ್ನನ್ನು ಮೆಚ್ಚಿದ್ದಕ್ಕಾಗಿ ಮತ್ತು ನನ್ನನ್ನು ಪ್ರೀತಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಿಮ್ಮ ಪ್ರೀತಿಯೇ ನನ್ನ ಶಕ್ತಿ ಮತ್ತು ನನ್ನ ನಗು. ಮರೆಯಲಾಗದ ನೆನಪುಗಳೊಂದಿಗೆ ನಾನು ಕೊನೆಯವರೆಗೆ ಬದುಕಿದ್ದೇನೆ, ನಾನು ಯಶಸ್ವಿ ಜೀವನವನ್ನು ನಡೆಸಿದ್ದೇನೆ ಎಂದು ಭಾವಿಸುತ್ತೇನೆ. ವ್ಯಕ್ತಿತ್ವದಲ್ಲಿ ಕೊರತೆಯಿದ್ದ ಮತ್ತು ತಾಳ್ಮೆಯಿಲ್ಲದ ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ ಮತ್ತು ಅಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು. ನನ್ನ ಭಾವನೆಗಳನ್ನು ನಾನು ಚೆನ್ನಾಗಿ ವ್ಯಕ್ತಪಡಿಸಲು ಸಾಧ್ಯವಾಗಿಲ್ಲ ಕ್ಷಮಿಸಿ. ಆದರೆ ನಾನು ಏನು ಹೇಳಬೇಕು ಎಂದುಕೊಂಡಿದ್ದೇನೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ ಅಲ್ಲವೆ?''
''ನನ್ನೊಂದಿಗೆ ಬಾಂಧವ್ಯ ಹೊಂದಿದ್ದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ನನ್ನ ಶಿಕ್ಷಕರಿಗೆ. ನಾನು ನಿಮಗೆ ಆಭಾರಿಯಾಗಿದ್ದೇನೆ. ನಿಮ್ಮನ್ನು ಬಹಳ ಗೌರವಿಸುತ್ತೇನೆ. ಜೀವನದಲ್ಲಿ ಸಾಕಷ್ಟು ವಿಷಯಗಳನ್ನು ನೀವು ಕಲಿಸಿದ್ದೀರಿ. ಅಮ್ಮ-ಅಮ್ಮ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ದಯವಿಟ್ಟು ಅಳಬೇಡಿ'' ಎಂದಿದ್ದಾರೆ ನಟಿ ಯೂ ಜು ಎನು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
for India
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]


Click it and Unblock the Notifications











