ಯಶ್ ಹಾಗೂ ಆ ಚೆಲುವೆಯನ್ನು ಬಿಟ್ಹಾಕಿ; ರಾಯ ಎದುರು ಪತರಗುಟ್ಟಿದ ಈ ವಿಲನ್ ಯಾರು?
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಟೀಸರ್ ದರ್ಬಾರ್ ಜೋರಾಗಿದೆ. ಅಭಿಮಾನಿಗಳು ಪದೇ ಪದೆ ಟೀಸರ್ ನೋಡ್ತಿದ್ದಾರೆ. ಹಸಿಬಿಸಿ ದೃಶ್ಯ, ರಾಯ ಆಗಿ ಯಶ್ ಆರ್ಭಟ ಮಾತ್ರವಲ್ಲ ಪ್ರತಿ ಫ್ರೇಮ್ ಬಗ್ಗೆ ಮಾತನಾಡುತ್ತಿದ್ದಾರೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮೂಡಿ ಬಂದಿರುವುದು ಗೊತ್ತಾಗುತ್ತಿದೆ. ವಿದೇಶದ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಮಾರ್ಚ್ 19ಕ್ಕೆ ಬಾಕ್ಸಾಫೀಸ್ ಶೇಕ್ ಆಗಲಿದೆ. ಹಾಲಿವುಡ್ ತಂತ್ರಜ್ಞರು ಹಾಗೂ ಕಲಾವಿದರು ಕೂಡ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಟೀಸರ್‌ನಲ್ಲಿ ವಿದೇಶಿ ಕಲಾವಿದರನ್ನು ನೋಡಬಹುದು. ರಾಯನ ಜೊತೆ ಕಾರ್ ಒಳಗೆ ಕಾಣಿಸಿಕೊಂಡಿರುವುದು ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ಎನ್ನುವುದು ಖಚಿತವಾಗಿದೆ. ಇದೀಗ ವಿಲನ್ ಆಗಿ ಕಾಣಿಸಿಕೊಂಡಿರುವ ನಟ ಯಾರು ಎಂದು ಕೆಲವರು ಹುಡುಕಾಡುತ್ತಿದ್ದಾರೆ.

ಸ್ಮಶಾನದ ದೃಶ್ಯದಿಂದ 'ಟಾಕ್ಸಿಕ್' ಟೀಸರ್ ತೆರೆದುಕೊಳ್ಳುತ್ತದೆ. ವಿಲನ್ ತನ್ನ ಮಗನ ಪಾರ್ಥೀವ ಶರೀರದ ಅಂತ್ಯಕ್ರಿಯೆ ಮಾಡುತ್ತಾ ರಾಯನಿಗೆ ಸವಾಲು ಹಾಕುವಂತೆ ಸನ್ನಿವೇಶ ಇದೆ. ಹಾಲಿವುಡ್ ನಟ, ಯೂಟ್ಯೂಬರ್ ಕೈಲ್ ಪಾಲ್ ಆ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ಕನ್ನಡ ಕಲಿತು ನಟಿಸುತ್ತಿರುವುದಾಗಿ ಹಿಂದೆ ಕೈಲ್ ಪಾಲ್ ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ನಟಿಸಿದ್ದು ಅದ್ಭುತ ಅನುಭವ ಎಂದು ಸಂತಸ ವ್ಯಕ್ತಪಡಿಸಿದ್ದರು.
"ಚಿತ್ರದಲ್ಲಿ ಬಹಳ ಭಾವನಾತ್ಮಕ ಸನ್ನಿವೇಶಗಳಿವೆ. ಭಾರತದ ಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಇಂತಹ ಸನ್ನಿವೇಶಗಳಲ್ಲಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ನಿರ್ದೇಶಕಿ ಬಹಳ ಸಹಕಾರ ಕೊಟ್ಟರು. ಬಹಳ ಸಮಯ ತಗೊಂಡು ನಟಿಸೋಕೆ ಹೇಳಿದರು, ಸದಾ ಹುರಿದುಂಬಿಸುತ್ತಿದ್ದರು" ಎಂದು ಹಾಲಿವುಡ್ ನಟ ಕೈಲ್ ಪಾಲ್ 'ಟಾಕ್ಸಿಕ್' ಸಿನಿಮಾ ಮೇಕಿಂಗ್ ಅನುಭವ ಬಿಚ್ಚಿಟ್ಟಿದ್ದರು. ಕೈಲ್ ಪಾಲ್ ಪಾತ್ರ ಹೇಗಿರುತ್ತದೆ ಎನ್ನುವುದು ಟೀಸರ್‌ನಲ್ಲಿ ರಿವೀಲ್ ಆಗಿದೆ.
ರಾಯ(ಯಶ್)ನ ಎದುರು ಹೋಗಿ ಕೊನೆಗೆ ಪತರಗುಟ್ಟಿ ಹೋಗುವ ಎದುರಾಳಿಯಾಗಿ ಕೈಲ್ ಪಾಲ್ ಅವರನ್ನು ಟೀಸರ್‌ನಲ್ಲಿ ನೋಡಬಹುದು. 'ಗೋಥಮ್' (2014), 'ಬ್ಲೂ ಬ್ಲಡ್ಸ್' (2010) ಮತ್ತು 'ಜಾನ್ ಕಾರ್ಟರ್' (2012) ರೀತಿಯ ಸಿನಿಮಾಗಳಲ್ಲಿ ಕೈಲ್ ಪಾಲ್ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ವರ್ಕ್‌ಔಟ್, ಸಿನಿಮಾ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
ಬೀಟ್ರಿಜ್ ಟೌಫೆನ್‌ಬಾಚ್, ಕೈಲ್ ಪಾಲ್ ಮಾತ್ರವಲ್ಲ ನಟಾಲಿಯಾ ಬರ್ನ್ ಸೇರಿ ಹಲವು ವಿದೇಶಿ ಕಲಾವಿದರು 'ಟಾಕ್ಸಿಕ್' ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಹಾಲಿವುಡ್ ಸಿನಿಮಾ ರೀತಿಯಲ್ಲೇ 'ಟಾಕ್ಸಿಕ್' ಇರಲಿದೆ. ಇದು ಚಂದನವನದಲ್ಲಿ ನಿರ್ಮಿಸಿರುವ ಹಾಲಿವುಡ್ ಸಿನಿಮಾ ಅಂದ್ರೆ ತಪ್ಪಾಗಲ್ಲ. ಸದ್ಯ ಬಂದಿರುವ ಟೀಸರ್ ಬರೀ ಸ್ಯಾಂಪಲ್ ಅಷ್ಟೇ.. ಇಂತಹ ಸಾಕಷ್ಟು ಸನ್ನಿವೇಶಗಳು ಚಿತ್ರದಲ್ಲಿ ಇರಲಿದೆ. ಸಂಪೂರ್ಣವಾಗಿ ಹಾಲಿವುಡ್ ಸಿನಿಮಾ ನೋಡಿದ ಅನುಭವ ನೀಡಲಿದೆ.
24 ಗಂಟೆಗಳಲ್ಲಿ ಟೀಸರ್ 200 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. 'ಟಾಕ್ಸಿಕ್' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಟೀಕೆಗಳ ನಡುವೆಯೂ ಟೀಸರ್ ಸದ್ದು ಮಾಡ್ತಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಎಲ್ಲಾ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಸಿನಿಮಾ ಮತ್ತಷ್ಟು ರೋಚಕವಾಗಿರುವ ಸುಳಿವು ಸಿಕ್ತಿದೆ. 'ಟಾಕ್ಸಿಕ್' ಜೊತೆಗೆ ಆದಿತ್ಯಧರ್ ನಿರ್ದೇಶನದ 'ಧುರಂಧರ್-2' ಸಿನಿಮಾ ತೆರೆಗೆ ಬರುವುದು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.


Click it and Unblock the Notifications











