45 ವರ್ಷಗಳ ದಾಂಪತ್ಯ ಅಂತ್ಯ ; 76ನೇ ವರ್ಷದಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದ ಖ್ಯಾತ ನಟಿ - ಫೋಟೊ ವೈರಲ್
ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಪ್ರೀತಿಗೆ ಯಾವುದೇ ಗಡಿ ಎನ್ನುವುದು ಕೂಡ ಇರುವುದಿಲ್ಲ. ಪ್ರೀತಿಗೆ ಭಾಷೆ, ಜಾತಿ ಮತಗಳ ಹಂಗಿಲ್ಲ. ಅದು ಯಾವತ್ತು ಬೇಕಾದರೂ ಯಾರ ಮೇಲಾದರೂ ಆಗಬಹುದು. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಬ್ಬರಲ್ಲೂ ಪ್ರೀತಿಯು ಆಳವಾಗಿ ಇದ್ದಾಗ ಅದನ್ನು ಪ್ರಶ್ನಿಸುವ ಕೆಲಸ ಮಾಡಬಾರದು. ಮೆರಿಲ್ ಸ್ಟ್ರೀಪ್ ಮತ್ತು ನಟ ಮಾರ್ಟಿನ್ ಶಾರ್ಟ್ ಅವರ ವೈರಲ್ ಫೋಟೊ ನೋಡಿ ಜನ ಮಾತನಾಡಿಕೊಳ್ಳುತ್ತಿರುವ ಮಾತುಗಳಿವು.
ಹೌದು, ಮೆರಿಲ್ ಸ್ಟ್ರೀಪ್ ಹಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ನಟಿಯರಲ್ಲಿ ಒಬ್ಬರು. ಹಾಲಿವುಡ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಆಸ್ಕರ್ ಗೆ ನಾಮಿನೇಷನ್ ಆದ ಹೆಗ್ಗಳಿಕೆ ಇವರದ್ದು. ಬರೋಬ್ಬರಿ 21 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯ ರೇಸ್‌ನಲ್ಲಿ ನಾಮಿನೇಟ್ ಆಗಿದ್ದ ಮೆರಿಲ್ ಸ್ಟ್ರೀಪ್ ಮೂರು ಬಾರಿ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೆರಿಲ್ ಸ್ಟ್ರೀಪ್‌ಗೆ ''ಆಸ್ಕರ್'' ತಂದು ಕೊಟ್ಟ 3 ಚಿತ್ರಗಳು
| ಚಿತ್ರದ ಹೆಸರು (Movie Name) | ವರ್ಷ (Year) | ಪ್ರಶಸ್ತಿ ವಿಭಾಗ (Award Category) |
|---|---|---|
| ಕ್ರಾಮರ್ ವರ್ಸಸ್ ಕ್ರಾಮರ್ (Kramer vs. Kramer) | 1979 | ಅತ್ಯುತ್ತಮ ಪೋಷಕ ನಟಿ (Best Supporting Actress) |
| ಸೋಫಿಸ್ ಚಾಯ್ಸ್ (Sophie's Choice) | 1982 | ಅತ್ಯುತ್ತಮ ಮುಖ್ಯ ನಟಿ (Best Actress) |
| ದಿ ಐರನ್ ಲೇಡಿ (The Iron Lady) | 2011 | ಅತ್ಯುತ್ತಮ ಮುಖ್ಯ ನಟಿ (Best Actress) |
''ದಿ ಡೀರ್ ಹಂಟರ್''.. ''ಔಟ್ ಆಫ್ ಆಫ್ರಿಕಾ''.. ''ಜೂಲಿ ಆಂಡ್ ಜೂಲಿಯಾ''.. ''ಲಿಟಲ್ ವುಮೆನ್''.. ''ಮಮ್ಮಾ ಮಿಯಾ''.. ಇವರ ಕೆಲ ಖ್ಯಾತ ಸಿನಿಮಾಗಳು. 76ರ ಹರೆಯದಲ್ಲಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮೆರಿಲ್ ಅಭಿನಯದ ''ದಿ ಡೆವಿಲ್ ವೇರ್ಸ್ ಪ್ರಾಡಾ-2'' ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದೆ. ಬಾಕ್ಸಾಫೀಸ್‌ನಲ್ಲಿ ಕೋಟ್ಯಂತರ ಹಣವನ್ನು ಕೂಡ ದೋಚಿದೆ.
ಇನ್ನು ಮಾರ್ಟಿನ್ ಶಾರ್ಟ್ ಹಾಲಿವುಡ್‌ನ ಪ್ರಖ್ಯಾತ ಹಾಸ್ಯ ಕಲಾವಿದ. ''ತ್ರೀ ಅಮಿಗೋಸ್'' ಇವರ ವೃತ್ತಿ ಬದುಕಿನ ಅತ್ಯಂತ ಜನಪ್ರಿಯ ಕಾಮಿಡಿ ಸಿನಿಮಾ. ''ಫಾದರ್ ಆಫ್ ದಿ ಬ್ರೈಡ್''.. ''ಫಾದರ್ ಆಫ್ ದಿ ಬ್ರೈಡ್-2'' .. ''ಇನ್ನರ್‌ಸ್ಪೇಸ್''.. ''ಕ್ಲಿಫರ್ಡ್''.. ''ಮಾರ್ಸ್ ಅಟ್ಯಾಕ್ಸ್''.. ಇವರ ಕೆಲ ಜನಪ್ರಿಯ ಚಿತ್ರಗಳು. ಇವರಿಗೂ ಕೂಡ 76 ವರ್ಷ. ಇಂಥಾ ಮೆರಿಲ್ ಸ್ಟ್ರೀಪ್ ಮತ್ತು ನಟ ಮಾರ್ಟಿನ್ ಶಾರ್ಟ್ ಅವರ ನಡುವೆ ಇಳಿ ವಯಸ್ಸಿನಲ್ಲಿ ಪ್ರೇಮಾಂಕುರವಾಗಿದೆ ಎನ್ನುವುದೇ ಸದ್ಯದ ನ್ಯೂಸ್.
ಹೌದು, ಅಸಲಿಗೆ ಮೆರಿಲ್ ಸ್ಟ್ರೀಪ್ ಮತ್ತು ಮಾರ್ಟಿನ್ ಶಾರ್ಟ್ ಇಬ್ಬರು ''ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್'' ವೆಬ್ ಸರಣಿಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ವ್ಯಾಪಕವಾಗಿ ಜನಮನ್ನಣೆಗೆ ಪಾತ್ರವಾದ ಈ ಸರಣಿಯ ನಂತರ ಇವರಿಬ್ಬರ ನಡೆಯ ಮೇಲೆ ಹಲವರಿಗೆ ಅನುಮಾನ ಬಂದಿತ್ತು. ಬದುಕಿನ ಸಂಧ್ಯಾರಾಗದಲ್ಲಿರುವ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು.
ಇದಕ್ಕೆ ಪೂರಕವಾಗಿ ಇಬ್ಬರು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭ ಸೇರಿದಂತೆ ಹಲವು ಕಡೆ ಜೊತೆ ಜೊತೆಯಾಗಿ ಕಾಣಿಸಿಕೊಂಡರು. ಆದಾಗ್ಯೂ, ಈ ಹಿಂದೆ ಮಾರ್ಟಿನ್ ತಮ್ಮ ಮತ್ತು ಮೆರಿಲ್ ಕುರಿತು ಹಬ್ಬಿರುವ ಸುದ್ದಿ ಸುಳ್ಳು ಎಂದಿದ್ದರು. ಮೆರಿಲ್ ಕೂಡ ಮಾರ್ಟಿನ್ ನನ್ನ ಆಪ್ತ ಸ್ನೇಹಿತ ಎಂದು ಮಾತ್ರ ಹೇಳಿಕೊಂಡಿದ್ದರು.

ಹೀಗಿರುವಾಗ ಈಗ ಇಬ್ಬರು ಲಂಡನ್‌ನ ರೆಸ್ಟೋರೆಂಟ್‌ವೊಂದರಲ್ಲಿ ರೊಮ್ಯಾಂಟಿಕ್ ಡಿನ್ನರ್ ಡೇಟ್‌ನಲ್ಲಿರುವ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಈ ಫೋಟೊ ವೈರಲ್ ಆಗಿದ್ದು, ವೈರಲ್ ಆದ ಫೋಟೊದಲ್ಲಿ ಮೆರಿಲ್ ಸ್ಟ್ರೀಪ್ ಮತ್ತು ಮಾರ್ಟಿನ್ ಶಾರ್ಟ್ ಪಕ್ಕಪಕ್ಕದಲ್ಲಿ ಕುಂತು ಕಾಲ ಕಳೆಯುತ್ತಿರುವುದು ಕಂಡು ಬಂದಿದೆ. ಮಾರ್ಟಿನ್ ಪಕ್ಕದಲ್ಲೇ ಕುಳಿತು ಅವರ ಭುಜಕ್ಕೆ ಒರಗಿಕೊಳ್ಳುವಂತೆ ಹತ್ತಿರವಾಗಿ ಮೆರಿಲ್ ಕುಂತಿದ್ದಾರೆ. ಇಬ್ಬರು ಮೊಬೈಲ್‌ನಲ್ಲಿ ಏನನ್ನೋ ನೋಡುತ್ತಿದ್ದಾರೆ.
ಸದ್ಯ ಈ ಫೋಟೊವನ್ನು ಕಂಡು ಇವರ ಇಬ್ಬರು ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ. ನಿಜವಾದ ಪ್ರೀತಿ ಅಂದ್ರೆ ಇಷ್ಟೇ ಸರಳವಾಗಿರುತ್ತೆ ಅನ್ಸುತ್ತೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಯಾವುದೇ ಆಡಂಬರವಿಲ್ಲದೆ ಇಬ್ಬರು ಒಟ್ಟಿಗೆ ಕೂತು ಊಟ ಮಾಡ್ತಿದ್ದಾರೆ.. ಲೈಫ್‌ನಲ್ಲಿ ನಮಗೆ ಬೇಕಾಗಿರೋದು ಇದನ್ನೇ ಅಂದಿದ್ದಾರೆ. ಮತ್ತೊಬ್ಬರು ಇಬ್ರೂ ಒಟ್ಟಿಗೆ ಸಕ್ಕತ್ ಕ್ಯೂಟ್ ಆಗಿ ಕಾಣ್ತಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಇಬ್ಬರ ನಡುವೆ ಪ್ರೇಮಾಂಕುರವಾಗಿರುವುದು ನೂರಕ್ಕೆ ನೂರು ಸತ್ಯ ಎನ್ನುತ್ತಿದ್ದಾರೆ.
ಅಭಿಮಾನಿಯ ಕೈಯಲ್ಲಿ ಸಿಕ್ಕಿ ಬಿದ್ದ ಮೆರಿಲ್
ಅಂದ್ಹಾಗೇ ಇಬ್ಬರು ಕುಳಿತುಕೊಂಡು ಊಟ ಮಾಡುತ್ತಿದ್ದ ಸಮಯದಲ್ಲಿ ಅದೇ ರೆಸ್ಟೋರೆಂಟ್‌ಗೆ ಅಭಿಮಾನಿಯೊಬ್ಬರು ಹೋಗಿದ್ದು, ಇಬ್ಬರ ಫೋಟೊವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಲಂಡನ್‌ನಲ್ಲಿ ಕೆಲವು ದಿನಗಳನ್ನು ಕಳೆಯುತ್ತಾ, ಆಕಸ್ಮಿಕವಾಗಿ ಒಂದು ರೆಸ್ಟೋರೆಂಟ್‌ಗೆ ಬಂದೆ. ಇಲ್ಲಿ ಮೆರಿಲ್ ಸ್ಟ್ರೀಪ್ ಮತ್ತು ಅವರ ಪತಿಯಿಂದ ಕೇವಲ ಕೆಲವು ಮೀಟರ್‌ಗಳಷ್ಟು ದೂರದಲ್ಲಿ ಕುಳಿತು ಊಟ ಮಾಡುವ ಭಾಗ್ಯ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ. ಆದರೆ ಮೆರಿಲ್ ಪಕ್ಕ ಇರುವುದು ಅವರ ಪತಿಯಲ್ಲ ಬದಲಿಗೆ ಮಾರ್ಟಿನ್ ಶಾರ್ಟ್ ಎನ್ನುವುದು ಇವರಿಗೆ ಗೊತ್ತಾಗಲಿಲ್ಲ.
ಮೆರಿಲ್ ಮತ್ತು ಮಾರ್ಟಿನ್ ಮೊದಲ ಮದುವೆಯ ವಿವರ
ಇನ್ನುಳಿದಂತೆ ಈ ಹಿಂದೆ ಮೆರಿಲ್ ಸ್ಟ್ರೀಪ್ ಅಮೆರಿಕಾದ ಪ್ರಖ್ಯಾತ ಶಿಲ್ಪಿ ಡಾನ್ ಗಮ್ಮರ್ ಅವರನ್ನು 1978ರಲ್ಲಿ ಮದುವೆಯಾಗಿದ್ದರು. 45 ವರ್ಷ ಜೊತೆಯಾಗಿ ಸಂಸಾರದ ನೌಕೆ ಕೂಡ ನಡೆಸಿದರು. ಆದರೆ, 2017ರಲ್ಲಿ ಇವರ ಸಂಬಂಧದಲ್ಲಿ ಬಿರುಕು ಮೂಡಿತು. 2023ರಲ್ಲಿ ಮೆರಿಲ್‌ನ ಆಪ್ತ ಮೂಲ ಇಬ್ಬರು ದೂರವಾಗಿರುವ ಸುದ್ದಿಯನ್ನು ಖಚಿತ ಪಡಿಸಿತ್ತು.ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇವರಿಗೆ ನಾಲ್ಕು ಮಕ್ಕಳಿದ್ದಾರೆ.
ಇನ್ನು ಮಾರ್ಟಿನ್ ಶಾರ್ಟ್ ರಂಗಭೂಮಿ ಕಲಾವಿದೆ ಮತ್ತು ಗಾಯಕಿ ನ್ಯಾನ್ಸಿ ಡೋಲ್ಮನ್ ಅವರನ್ನು ಪ್ರೀತಿಸಿ 1980ರಲ್ಲಿ ಮದುವೆಯಾಗಿದ್ದರು.30 ವರ್ಷ ಯಾವ ಅಡೆ ತಡೆ ಯಾರ ದೃಷ್ಟಿಯೂ ಬೀಳದೇ ಇವರ ದಾಂಪತ್ಯ ಜೀವನ ಸುಖದಿಂದ ಕೂಡಿತ್ತು. ಆದರೆ ನ್ಯಾನ್ಸಿ ಡೋಲ್ಮನ್ ಅಂಡಾಶಯದ ಕ್ಯಾನ್ಸರ್ ಗೆ ತುತ್ತಾದರು. ಕ್ಯಾನ್ಸರ್ ವಿರುದ್ಧದ ತೀವ್ರ ಹೋರಾಟದಲ್ಲಿ ಸೋತ ನ್ಯಾನ್ಸಿ ಆಗಸ್ಟ್ 21, 2010ರಂದು ತಮ್ಮ 58ನೇ ವಯಸ್ಸಿನಲ್ಲಿ ನಿಧನರಾದರು. ಇವರು ಮೂವರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಸಾಕಿ ಬೆಳೆಸಿದ್ದಾರೆ.


Click it and Unblock the Notifications