Miss World 2021: ಕರೋಲಿನಾ ವಿಶ್ವಸುಂದರಿ, ಭಾರತೀಯ ಮೂಲದ ಸೈನಿಗೆ ಎರಡನೇ ಸ್ಥಾನ
ಪೋಲಂಡ್‌ನ ಕರೋಲಿನಾ ಬಿಲಾವ್ಸ್ಕಾ 2021 ರ ವಿಶ್ವಸುಂದರಿಯಾಗಿ ಆಯ್ಕೆ ಆಗಿದ್ದಾರೆ. ಪೋರ್ಟೊ ರಿಕೊದ ಸ್ಯಾನ್ ಜಾನ್‌ನ ಕೋಕಾ ಕೋಲಾ ಮ್ಯೂಸಿಕ್ ಹಾಲ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಕರೋಲಿನಾ ಬಿಲಾವ್ಸ್ಕಾ ಅನ್ನು ವಿಶ್ವ ಸುಂದರಿಯನ್ನಾಗಿ ಆಯ್ಕೆ ಮಾಡಲಾಗಿದೆ.
2019 ರ ವಿಶ್ವ ಸುಂದರಿ ಟೋನಿ ಅನ್ನಾ ಸಿಂಗ್, ನೂತನ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾಗೆ ವಿಶ್ವ ಸುಂದರಿ ಕಿರೀಟ ತೊಡಿಸಿದರು. ಭಾರತ ಮೂಲದ ಅಮೆರಿಕದ ಸುಂದರಿ ಶ್ರೀ ಸೈನಿಗೆ ಎರಡನೇ ಸ್ಥಾನ ದೊರೆತಿತು. ಮೂರನೇ ಸ್ಥಾನಕ್ಕೆ ಒಲಿವಿಯಾ ಯಾಸೆ ಆಯ್ಕೆಯಾದರು. ಭಾರತದಿಂದ ಮಾನಸ ವಾರಣಾಸಿ ಭಾಗವಹಿಸಿದ್ದರು. ಆದರೆ ಅವರು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ವಿಶ್ವ ಸುಂದರಿ ಪಟ್ಟಕ್ಕೇರಿದ ಬಳಿಕ ಮಾತನಾಡಿರುವ ಕೊರೋಲಿನಾ, ''ನಾನು ನನ್ನ ಹೆಸರು ಘೋಷಣೆಯಾಗಿದ್ದನ್ನು ಕೇಳಿಸಿಕೊಂಡಾಗ ನನ್ನನ್ನು ನಾನೇ ನಂಬದಾಗಿಬಿಟ್ಟೆ. ಈಗಲೂ ಇದನ್ನು ನನಗೆ ನಂಬಲಾಗುತ್ತಿಲ್ಲ. ವಿಶ್ವ ಸುಂದರಿ ಕಿರೀಟವನ್ನು ತೊಟ್ಟಿರುವುದು ಬಹಳ ಹೆಮ್ಮೆ ಎನಿಸುತ್ತಿದೆ. ನಾನು ಮತ್ತೆ ನನ್ನ ಕೆಲಸಕ್ಕೆ ಮರಳಲು ಉತ್ಸುಕಳಾಗಿದ್ದೇನೆ. ಅಲ್ಲಿ ಹೇಗೆ ಪ್ರತಿಕ್ರಿಯೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ನನ್ನ ಜೀವನದಲ್ಲಿ ನಡೆದ ಪೋರ್ಟೊ ರಿಕೊದ ಈ ಅಧ್ಯಾಯವನ್ನು ಎಂದೂ ಮರೆಯುವುದಿಲ್ಲ'' ಎಂದಿದ್ದಾರೆ.

ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ಕರೋಲಿನಾ ಬಿಲಾವ್ಸ್ಕಾಗೆ ಮುಂದೊಂದು ದಿನ ಮೋಟಿವೇಶನಲ್ ಸ್ಪೀಕರ್ ಆಗುವಾಸೆಯಂತೆ. ಶಿಕ್ಷಣದ ಜೊತೆಗೆ ಟೆನ್ನಿಸ್ ಆಡುವುದು, ಈಜುವುದು ಆಕೆಯ ಅಚ್ಚು ಮೆಚ್ಚಿನ ಹವ್ಯಾಸ.
ಇನ್ನು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಶ್ರೀ ಸೈನಿ ಭಾರತ ಮೂಲದವರು ಆದರೆ ಅವರು ಸ್ಪರ್ಧೆ ಮಾಡಿದ್ದು ಅಮೆರಿಕ ದೇಶದ ಪರವಾಗಿ. ಪಂಜಾಬ್‌ನ ಲುಧಿಯಾನಾ ಮೂಲದವರಾದ ಶ್ರೀ ಸೈನಿ ಕೇವಲ 5 ವರ್ಷದವರಿದ್ದಾಗ ಅಮೆರಿಕಕ್ಕೆ ಅವರ ಪೋಷಕರೊಡನೆ ವಲಸೆ ಹೋಗಿದ್ದರು. ಒಂದು ಅಪಘಾತದಲ್ಲಿ ಅವರ ಮುಖವೆಲ್ಲ ಸುಟ್ಟು ಹೋಗಿತ್ತು. ಆದರೆ ಛಲ ಬಿಡದ ಶ್ರೀ ಸೈನಿ ಬಳಿಕ ಚೇತರಿಸಿಕೊಂಡು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದರು.


Click it and Unblock the Notifications











