'ಮನಿ ಹೈಸ್ಟ್' ನಟಿಯ ಮನೆಯಲ್ಲಿ ವಿಘ್ನೇಶ್ವರ!
ವಿದೇಶಿಗರಿಗೆ ಹಿಂದು ಧರ್ಮದ ಬಗೆಗಿನ ಆಸಕ್ತಿ ಹೆಚ್ಚಾಗುತ್ತಲೇ ಸಾಗುತ್ತಿದೆ. ಹಲವು ವಿದೇಶಿಗರು, ಅನ್ಯಧರ್ಮೀಯರು ಹಿಂದು ಧರ್ಮವನ್ನು ಅನುರಿಸುವ ಅಥವಾ ಮೆಚ್ಚಿಕೊಳ್ಳುವ ಪರಿಪಾಟ ಬೆಳೆಸಿಕೊಂಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸ್ಪ್ಯಾನಿಷ್ ನಟಿ ಈಸ್ತರ್ ಅಸೆಬೊ.
Recommended Video
ಜನಪ್ರಿಯ 'ಮನಿ ಹೈಸ್ಟ್' ವೆಬ್ ಸರಣಿಯಲ್ಲಿ ಮೋನಿಕಾ ಗಾಸ್ತಾಂಬೀಡೆ ಪಾತ್ರದಲ್ಲಿ ನಟಿಸಿರುವ ಈಸ್ತರ್ ಅಸೆಬೊಗೆ ಹಿಂದು ದೇವರುಗಳ ಮೇಲೆ ಭಕ್ತಿ. ಅದರಲ್ಲಿಯೂ ವಿಘ್ನೇಶ್ವರನ ಮೇಲೆ ವಿಶೇಷ ಅಕ್ಕರೆ. ಹಾಗಾಗಿಯೇ ತನ್ನ ಮನೆಯಲ್ಲಿ ವಿಘ್ನ ವಿನಾಶಕನ ದೊಡ್ಡ ಚಿತ್ರವೊಂದನ್ನು ಇರಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ನಟಿ ಈಸ್ತರ್ ಅಸೆಬೊ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ತಮ್ಮ ನಂಬಿಕೆಗಳ ಬಗ್ಗೆ, ಧರ್ಮದ ಬಗ್ಗೆಗಿನ ಅವರ ಅಭಿಪ್ರಾಯ ಇತರೆ ವಿಷಯಗಳನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ನಟಿಯ ಹಿನ್ನೆಲಯಲ್ಲಿ ಗೋಡೆಯ ಮೇಲೆ ದೊಡ್ಡ ವಿನಾಯಕನ ಚಿತ್ರ ಗಮನ ಸೆಳೆಯಿತು.

ದೊಡ್ಡ ವಿನಾಯಕನ ಚಿತ್ರವನ್ನು ನಟಿ ಈಸ್ತರ್ ಅಸೆಬೊ ಗೋಡೆಗೆ ತೂಗು ಬಿಟ್ಟಿದ್ದಾರೆ. ಮೂಲತಃ ಕ್ರಿಶ್ಚಿಯನ್ ಧರ್ಮೀಯರಾದ ಈಸ್ತರ್‌ಗೆ ಭಾರತೀಯ ದೇವರುಗಳು, ಹಿಂದು ಧರ್ಮದ ಬಗ್ಗೆ ಆಸಕ್ತಿ ಇದೆ. ವಿನಾಯಕನ ಬಗ್ಗೆ ನಂಬಿಕೆಯನ್ನು ನಟಿ ಈಸ್ತರ್ ಹೊಂದಿದ್ದಾರೆ.
'ಮನಿಹೈಸ್ಟ್'ನ ಮತ್ತೊಬ್ಬ ಜನಪ್ರಿಯ ನಟ ಪೆಡ್ರೊ ಅಲಾನ್ಸೊ (ಬರ್ಲಿನ್ ಪಾತ್ರಧಾರಿ) ಸಹ ಹಿಂದು ಧರ್ಮದ ಬಗ್ಗೆ ಆಸಕ್ತಿ ಉಳ್ಳವರಾಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಪೆಡ್ರೊ ಅಲೆನ್ಸೊ ತಾನು 'ಭಗವದ್ಗೀತೆ' ಓದಿರುವುದಾಗಿ ಹೇಳಿದ್ದಲ್ಲದೆ ತಮ್ಮ ಬಳಿ ಇದ್ದ ಭಗವದ್ಗೀತೆಯ ಪುಸ್ತಕವನ್ನು ತೋರಿಸಿದ್ದರು. ಹಾಗೂ ತಮ್ಮ ಮನೆಯಲ್ಲಿ ವಿನಾಯಕನ ಚಿತ್ರ ಇರುವುದಾಗಿಯೂ ಹೇಳಿದ್ದರು.
''ನನ್ನ ಗರ್ಲ್‌ಫ್ರೆಂಡ್‌ಗೆ ಏಷ್ಯಾದ ಬಗ್ಗೆ ವಿಶೇಷ ಪ್ರೀತಿ. ಏಷ್ಯಾದ ಬಗ್ಗೆ ಏಷ್ಯಾದ ದೇಶಗಳ ಬಗ್ಗೆ ಸಾಕಷ್ಟು ಮಾಹಿತಿ ಆಕೆಗೆ ಇದೆ. ಆಕೆ ಕೆಲವು ಭಾರಿ ಭಾರತಕ್ಕೆ ಬಂದಿದ್ದಾಳೆ. ನನ್ನನ್ನೂ ಕರೆಯುತ್ತಿರುತ್ತಾಳೆ. ನೋಡೋಣ ಯಾವಾಗಲಾದರೂ ಒಂದು ದಿನ ನಾನು ಭಾರತಕ್ಕೆ ಬರುತ್ತೇನೆ'' ಎಂದಿದ್ದರು ಬರ್ಲಿನ್ ಖ್ಯಾತಿಯ ಪೆಡ್ರೊ ಅಲಾನ್ಸೊ.
ಹಾಲಿವುಡ್ ನಟರಾದ ಜೂಲಿಯಾ ರಾಬರ್ಟ್ಸ್, ರಸ್ಸೆಲ್ ಬ್ರ್ಯಾಂಡ್, ಜಾರ್ಜ್ ಹ್ಯಾರಿಸನ್, ಕಾಲ್ ಪೆನ್, ಜಾನ್ ಕಾಲ್ಟ್ರೇನ್, ಎಲಿಜಿಬೆತ್ ಗಿಲ್ಬರ್ಟ್, ಜೆರ್ರಿ ಗಾರ್ಸಿಯಾ, ಟೋನಿ ಕೆನೆಲ್ ಇನ್ನೂ ಹಲವರು ಹಿಂದು ಧರ್ಮದ ಬಗ್ಗೆ ಆಸಕ್ತಿಯುಳ್ಳವರಾಗಿದ್ದಾರೆ. ನಟ ವಿಲ್ ಸ್ಮಿತ್ ಸಹ ಹಿಂದು ಹಾಗೂ ಬೌದ್ಧ ಧರ್ಮದ ಬಗ್ಗೆ ಆಸಕ್ತಿಯುಳ್ಳವಾಗಿದ್ದಾರೆ.


Click it and Unblock the Notifications











