Oscars 2023: ಆಸ್ಕರ್ ಗೆದ್ದ ಭಾರತದ ಮಹಿಳೆ ಗುನೀತ್ ಮೊಂಗಾಗೆ ಅಕಾಡೆಮಿ ಅವಮಾನ? ನಿರ್ಮಾಪಕಿ ಬೇಸರ
95ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. 2 ವಿಭಾಗಗಳಲ್ಲಿ ಪ್ರಶಸ್ತಿ ಎತ್ತಿ ಹಿಡಿದಿದೆ. 'ನಾಟು ನಾಟು' ಗೀತೆಗೆ ಮಾತ್ರವಲ್ಲದೇ ' ದಿ ಎಲಿಫೆಂಟ್ ವಿಸ್ಪರರ್ಸ್' ಕಿರು ಸಾಕ್ಷ್ಯಚಿತ್ರಕ್ಕೂ ಪ್ರಶಸ್ತಿ ಲಭಿಸಿದೆ. ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಹಾಗೂ ನಿರ್ಮಾಪಕಿ ಗುನೀತ್ ಮೊಂಗಾ ಪ್ರಶಸ್ತಿ ಸ್ವೀಕರಿಸಿದ್ದರು. ಆದರೆ ವೇದಿಕೆಯಲ್ಲಿ ಗುನೀತ್ ಮೊಂಗಾ ಅವರಿಗೆ ಅವಮಾನವಾಗಿದೆ ಎನ್ನಲಾಗ್ತಿದೆ.
ಮದುಮಲೈ ಆನೆ ಶಿಬಿರದಲ್ಲಿರುವ ಮರಿ ಆನೆಯನ್ನು ಸಾಕುವ ದಂಪತಿ ಕಥೆಯನ್ನು 'ದಿ ಎಲಿಫೆಂಟ್ ವಿಸ್ಪರರ್ಸ್' ಕಿರು ಸಾಕ್ಷ್ಯಚಿತ್ರ ಹೊಂದಿದೆ. ಈ ಕಿರು ಸಾಕ್ಷ್ಯಚಿತ್ರ 'ಹಾಲೌಟ್', 'ಹೌ ಡು ಯು ಮೆಜರ್ ಅ ಇಯರ್', 'ದಿ ಮಾರ್ಥಾ ಮಿಚಲ್ ಎಫೆಕ್ಟ್' ಹಾಗೂ 'ಸ್ಟ್ರೆಂಜರ್ ಅಟ್ ದಿ ಗೇಟ್' ಸಾಕ್ಷ್ಯಚಿತ್ರದ ಜೊತೆ ಪೈಪೋಟಿ ನಡೆಸಿ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಸಾಕ್ಷ್ಯಚಿತ್ರ ಗೆದ್ದಿತ್ತು. ಆನೆ ಮರಿ ರಾಘೂ ಹಾಗೂ ಮಾವೂತ ದಂಪತಿ ನಡುವಿನ ಸಂಬಂಧವನ್ನು ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವಿಸ್ ಸೊಗಸಾಗಿ ಸೆರೆಹಿಡಿದಿದ್ದರು. ಇದು ಕಾರ್ತಿಕಿಯವರು ನಿರ್ದೇಶಿಸಿದ ಮೊದಲ ಸಾಕ್ಷ್ಯಚಿತ್ರ ಆಗಿತ್ತು.

ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುವುದು ಎಷ್ಟು ಪ್ರತಿಷ್ಠೆ ಎನ್ನುವುದು ಗೊತ್ತೇಯಿದೆ. ಮೊದಲ ಪ್ರಯತ್ನದಲ್ಲೇ 'ದಿ ಎಲಿಫೆಂಟ್ ವಿಸ್ಪರರ್ಸ್' ತಂಡ ಈ ಸಾಧನೆ ಮಾಡಿತ್ತು. ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ 45 ಸೆಕೆಂಡ್ ಪ್ರಶ್ತಿ ಸ್ವೀಕಾರ ಭಾಷಣಕ್ಕೆ ಅವಕಾಶ ಇದೆ. ಒಂದು ವೇಳೆ ಯಾರಾದರೂ ಅದಕ್ಕಿಂತ ಹೆಚ್ಚು ಮಾತನಾಡಿದರೆ ಕೂಡಲೇ ಅದನ್ನು ಕಟ್ ಮಾಡುತ್ತಾರೆ. ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವಿಸ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಆದರೆ ಅಷ್ಟರಲ್ಲಿ ಕಾಲಾವಕಾಶ ಮುಗಿದಿತ್ತು. ಆದರೆ ನಿರ್ಮಾಪಕಿ ಗುನೀತ್ ಮೊಂಗಾ ಮಾತನಾಡುವ ಮುನ್ನ ಜೋರಾಗಿ ಮ್ಯೂಸಿಕ್ ಪ್ಲೇ ಮಾಡಿದರು. ಇದರಿಂದ ಆಕೆ ಹೇಳಬೇಕು ಎಂದುಕೊಂಡಿದ್ದನ್ನು ಹೇಳದೇ ವಾಪಸ್ ಬರುವಂತಾಯಿತು.
ಆದರೆ ಎಲ್ಲರ ವಿಚಾರದಲ್ಲೂ ಅಕಾಡೆಮಿ ಇದೇ ರೀತಿ ವರ್ತಿಸಿತ್ತಾ? ಎಂದರೆ ಇಲ್ಲ ಎನ್ನಬಹುದು. ಇವರ ನಂತರ ಬೆಸ್ಟ್ ಆನಿಮೇಟೆಡ್ ಶಾರ್ಟ್ ಫಿಲಂ ವಿಭಾಗದಲ್ಲಿ ಪ್ರಶಸ್ತಿ ಪಡೆದ ಚಾರ್ಲೆಸ್ ಮಾಕ್ಸಿ, ಮ್ಯಾಥ್ಯೂ ಫ್ರೆಯೆಡ್ 45 ಸೆಕೆಂಡ್‌ಗಳಿಗಿಂತ ಹೆಚ್ಚು ಹೊತ್ತು ಮಾತನಾಡಲು ಯಾರು ಅಭ್ಯಂತರ ವ್ಯಕ್ತಪಡಿಸಲಿಲ್ಲ. ಯಾವುದೇ ಮ್ಯೂಸಿಕ್ ಪ್ಲೇ ಮಾಡಿ, ಸ್ಪೀಚ್ ಕಟ್ ಮಾಡಲಿಲ್ಲ. ಇದೇ ವಿಚಾರವಾಗಿ ಈಗ ಅಮೆರಿಕಾ ಮೀಡಿಯಾ ಸೇರಿದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ಸಮೇತ ಇದು ಸರೀನಾ ಎಂದು ಕೇಳುತ್ತಿದ್ದಾರೆ.

ಆಸ್ಕರ್ ವೇದಿಕೆಯಲ್ಲಿ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕಿ ಗುನೀತ್ ಮೊಂಗಾ "ಆಸ್ಕರ್ ವೇದಿಕೆಯಲ್ಲಿ ನನಗೆ ಮಾತನಾಡಲು ಬಿಡಲಿಲ್ಲ. ಅದು ನನಗೆ ಒಂದು ಕ್ಷಣ ಶಾಕ್ ತಂದಿತ್ತು. ಯಾಕಂದರೆ ಭಾರತದಲ್ಲಿ ನಿರ್ಮಾಣವಾದ ಒಂದು ಶಾರ್ಟ್ ಫಿಲ್ಮ್‌ಗೆ ಆಸ್ಕರ್ ಸಿಕ್ಕಿದ್ದು ಇದೇ ಮೊದಲು ಎಂದು ಗೌರವಪೂರ್ವಕವಾಗಿ ನಾನು ಹೇಳಬೇಕು ಎಂದುಕೊಂಡಿದ್ದೆ. ಆದರೆ ನನಗೆ ಮಾತನಾಡಲು ಬಿಡಲಿಲ್ಲ. ಇಷ್ಟು ದೂರ ಬಂದು ನನಗ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಬೇಸರವಾಯಿತು.
"ಜನರು ಕೂಡ ಈ ಬಗ್ಗೆ ಮಾತನಾಡುತ್ತಾರೆ. ಅದ್ಭುತ ಕ್ಷಣಗಳನ್ನು ನನಗೆ ಕೊಟ್ಟಂತೆ ಕೊಟ್ಟು ಕಿತ್ತುಕೊಂಡರು ಎನಿಸಿದೆ. ಭಾರತಕ್ಕೆ ಬಂದಮೇಲೆ ನನ್ನ ಅಭಿಪ್ರಾಯ, ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇನೆ. ನನಗೆ ಸಿಗುತ್ತಿರುವ ಪ್ರೀತಿ ನೋಡಿದರೆ ಬಹಳ ಸಂತೋಷವಾಗುತ್ತಿದೆ" ಎಂದಿದ್ದಾರೆ. ಇನ್ನು 'ದಿ ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್ ಸಿಗುತ್ತಿದ್ದಂತೆ ಎಲ್ಲರೂ ಈ ಸಾಕ್ಷ್ಯಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಎಲ್ಲರೂ ನೋಡಲು ಆರಂಭಿಸಿದ್ದಾರೆ. ಅನಾಥ ಆನೆ ರಘು ಹಾಗೂ ಅದರ ಮಾವುತ ದಂಪತಿ ಬೊಮ್ಮನ್ ಹಾಗೂ ಬೆಳ್ಳಿಯ ಸುಂದರವಾದ ಸಂಬಂಧದ ಕಥೆಯಲ್ಲಿ ಅಲ್ಲಲ್ಲಿ ಕನ್ನಡ ಡೈಲಾಗ್‌ಗಳು ಇವೆ.


Click it and Unblock the Notifications











