Miss Universe 2023: ಭಾರತದ ಶ್ವೇತಾಗೆ ತಪ್ಪಿದ ಪಟ್ಟ, ಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ ಬರೆದ ನಿಕರಾಗುವಾ ದೇಶದ ಮಾಡೆಲ್
ಈ ಬಾರಿಯ ಭುವನ ಸುಂದರಿ ಕೀರಿಟದ ಮೇಲಿದ್ದ ಭಾರತದ ಆಸೆ ನಿರಾಸೆಯಾಗಿದ್ದು, ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್ ಅವರು 2023 ರ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಈ ದೇಶ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ ಗೆಲುವನ್ನು ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆದಿದೆ.
ಮಿಸ್ ಯೂನಿವರ್ಸ್ ಸ್ಪರ್ಧೆಯ 72 ನೇ ಆವೃತ್ತಿಯು ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ನವೆಂಬರ್ 19 ರ ರಾತ್ರಿ ನಡೆದಿದೆ. ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಥೈಲ್ಯಾಂಡ್ ಆಂಟೋನಿಯಾ ಪೋರ್ಸಿಲ್ಡ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯಾ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಆಗಿ ಗೆಲುವು ಪಡೆದಿದ್ದಾರೆ.

ಭುವನ ಸುಂದರಿಯಾದ ಶೆನ್ನಿಸ್ ಪಲಾಸಿಯೋಸ್
ಎಲ್ ಸಾಲ್ವಡಾರ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 23 ವರ್ಷದ ಶೆನ್ನಿಸ್ ಪಲಾಸಿಯೋಸ್ ಅವರಿಗೆ ಮಿಸ್ ಯೂನಿವರ್ಸ್ 2022ರ ಸುಂದರಿ ಆರ್'ಬೋನಿ ಗ್ರಾಬ್ರಿಯಲ್ ಅವರು ಕಿರೀಟ ತೊಡಿಸಿದ್ದಾರೆ. ಅದ್ಭುತವಾಗಿ ಅಲಂಕೃತವಾದ ಸಿಲ್ವರ್ ಸಿಂಗಲ್ ಪೀಸ್‌ನಲ್ಲಿ ಅದ್ಭುತವಾಗಿ ಕಾಣುತ್ತಿದ್ದ ಈ ಸುಂದರಿಯ ಸೌಂದರ್ಯಕ್ಕೆ ಭುವನ ಸುಂದರಿ ಕಿರೀಟ ಮತ್ತಷ್ಟು ಮೆರುಗು ನೀಡಿದೆ.
2000 ರಲ್ಲಿ ಜನಿಸಿದ ಶೆನ್ನಿಸ್ ಪಲಾಸಿಯೋಸ್, ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ. ಉತ್ತಮ ಕ್ರೀಡಾ ಉತ್ಸಾಹಿಯೂ ಆಗಿರುವ ಅವರು, ತಮ್ಮ ವಿಶ್ವವಿದ್ಯಾಲಯಕ್ಕಾಗಿ ವಾರ್ಸಿಟಿ ವಾಲಿಬಾಲ್ ಆಟವಾಡಿದ್ದಾರೆ. 2022 ರಲ್ಲಿ ನಡೆದ ವಿಶ್ವ ಸುಂದರಿ 2021 ರಲ್ಲಿ ಶೆನ್ನಿಸ್ ಪಲಾಸಿಯೊಸ್ ನಿಕರಾಗುವಾವನ್ನು ಪ್ರತಿನಿಧಿಸಿದರು.
2016 ರಲ್ಲಿ ಮಿಸ್ ಟೀನ್ ನಿಕರಾಗುವಾ ಪ್ರಶಸ್ತಿಯನ್ನು ಗೆದ್ದು ಸೌಂದರ್ಯ ಸ್ಪರ್ಧೆಗೆ ಪಾದಾರ್ಪಣೆ ಮಾಡಿದರು. ಅವರು ಮಿಸ್ ವರ್ಲ್ಡ್ ನಿಕರಾಗುವಾ 2020 ಅನ್ನು ಗೆದ್ದರು ಮತ್ತು 2022 ರಲ್ಲಿ ಸ್ಯಾನ್ ಜುವಾನ್, ಪೋರ್ಟೊ ರಿಕೊದಲ್ಲಿ ನಡೆದ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದರು. ಅವರು ಅಗ್ರ 40 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು.

ಭಾರತದ ಶ್ವೇತಾ ಶಾರದಾಗೆ ಕೈ ತಪ್ಪಿದ ಭುವನ ಸುಂದರಿ ಕಿರೀಟ
ಇನ್ನು, ಈ ಭಾರಿ ಹೆಚ್ಚು ಸುದ್ದಿಯಾಗಿದ್ದ ಭಾರತದ ಶ್ವೇತಾ ಶಾರದಾ ಭುವನ ಸುಂದರಿಯಾಗಿ ದೇಶಕ್ಕೆ ಕೀರಿಟ ಹೊತ್ತು ತರುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಶ್ವೇತಾ ಶಾರದಾ ಸೆಮಿಫೈನಲ್ ತಲುಪಿದ್ದರೂ, ಟಾಪ್ 10 ಸ್ಪರ್ಧಿಗಳ ಪಟ್ಟಿಗೆ ಬರಲಿಲ್ಲ. ಹೀಗಾಗಿ ದೇಶದ ಬಹುಜನರ ಆಸೆ ನಿರಾಸೆಯಾಗಿದೆ.
ಚಂಡೀಗಢದಲ್ಲಿ ಜನಿಸಿದ 22 ವರ್ಷದ ಮಾಡೆಲ್ ಮತ್ತು ನೃತ್ಯಗಾರ್ತಿ ಶ್ವೇತಾ ಶಾರದಾ, ಸ್ವಿಮ್ಮಿಂಗ್ ಸೂಟ್ ಸುತ್ತಿನ ನಂತರ, ಸಂಜೆಯ ಗೌನ್ ರೌಂಡ್‌ಗೆ ಆಯ್ಕೆಯಾಗಿರಲಿಲ್ಲ. ಸೆಮಿ ಫೈನಲ್ ಸುತ್ತಿನವರೆಗೂ ಶ್ವೇತಾ ಟಾಪ್ ಸ್ಪರ್ಧಿಗಳಲ್ಲಿ ಮುಂಚೂಣಿಯಲ್ಲಿದ್ದರು, ಆದರೆ ಟಾಪ್ 10 ಲೈನ್‌ಅಪ್‌ನಲ್ಲಿ ಸ್ಥಾನ ಕಳೆದುಕೊಂಡರು.
ಮಿಸ್ ಯೂನಿವರ್ಸ್ 2023 ರ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಮಿಸ್ ಪೋರ್ಟೊ ರಿಕೊ, ಥೈಲ್ಯಾಂಡ್, ಪೆರು, ಕೊಲಂಬಿಯಾ, ನಿಕರಾಗುವಾ, ಫಿಲಿಪೈನ್ಸ್, ಎಲ್ ಸಾಲ್ವಡಾರ್, ವೆನೆಜುವೆಲಾ, ಆಸ್ಟ್ರೇಲಿಯಾ ಮತ್ತು ಸ್ಪೇನ್ ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅದರಲ್ಲಿ ನಿಕರಾಗುವಾದ ಶೆನ್ನಿಸ್ ಪಲಾಸಿಯೋಸ್ ಭುವನ ಸುಂದರಿಯಾಗಿದ್ದಾರೆ.


Click it and Unblock the Notifications











