Oppenheimer Collection: ಕರ್ನಾಟಕದಲ್ಲಿ ಮೊದಲ 3 ದಿನಕ್ಕೆ ಆಪನ್‌ಹೈಮರ್ ಗಳಿಸಿದ್ದೆಷ್ಟು?
ಕಳೆದ ಶುಕ್ರವಾರ ( ಜುಲೈ 21 ) ವಿಶ್ವ ವಿಖ್ಯಾತ ನಿರ್ದೇಶಕ ಕ್ರಿಸ್ಟಫರ್ ನೋಲನ್ ನಿರ್ದೇಶನದ ಮಾಸ್ಟರ್‌ಪೀಸ್ ಸಿನಿಮಾ 'ಆಪನ್‌ಹೈಮರ್' ಬಿಡುಗಡೆಗೊಂಡಿತು. ಸಿನಿ ರಸಿಕರ ತಲೆಗೆ ತನ್ನ ಈವರೆಗಿನ ವಿಭಿನ್ನ ಜಾಣ್ಮೆಯ ಸ್ಕ್ರೀನ್‌ಪ್ಲೇನಿಂದ ಹುಳಬಿಟ್ಟು ದಿನಗಳಗಟ್ಟಲೆ ತನ್ನ ಚಿತ್ರಗಳ ಬಗ್ಗೆ ಮಾತನಾಡುವ ಹಾಗೆ ಮಾಡಿದ್ದ ಕ್ರಿಸ್ಟೊಫರ್ ನೋಲನ್ ಈ ಬಾರಿ ಆಟೋಮಿಕ್ ಬಾಂಬ್‌ನ ಜನಕ ಜೂನಿಯ್ ರಾಬರ್ಟ್ ಆಪನ್‌ಹೈಮರ್‌ನ ಭಾವನಾತ್ಮಕ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ.
ಹೌದು, ಜಪಾನಿನ ಹಿರೋಶಿಮಾ ಹಾಗೂ ನಾಗಸಾಕಿ ಮೇಲೆ ವಿಶ್ವದ ದೊಡ್ಡಣ್ಣ ಅಣು ಬಾಂಬ್ ದಾಳಿ ನಡೆಸಿದ್ದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವೇ. ಈ ಅಣು ಬಾಂಬ್ ಸ್ಪೋಟದ ಪರಿಣಾಮ ಇಂದಿಗೂ ಸಹ ಇದ್ದು ಈ ದಾಳಿ ನಡೆಸಲು ಕರೆ ನೀಡಿದವರು ಹಾಗೂ ಈ ಬಾಂಬ್ ತಯಾರಿಸಿದವರನ್ನು ಈ ಹಿಂದಿನಿಂದಲೂ ಜನರು ದ್ವೇಷಿಸುತ್ತಾ ಬಂದಿದ್ದಾರೆ. ಆದರೆ ಈ ಅಣುಬಾಂಬ್ ಜನಕ ಆಪನ್‌ಹೈಮರ್ ಕುರಿತ ಹಲವಾರು ಸಂಗತಿಗಳು ಆತನ ವಿರುದ್ಧ ಕಾಮೆಂಟ್ ಮಾಡುತ್ತಿದ್ದ ಹಲವರಿಗೆ ತಿಳಿದಿರಲಿಲ್ಲ.

ಹೀಗೆ ಹೆಚ್ಚಾಗಿ ಜನರಿಗೆ ತಿಳಿಯದೇ ಉಳಿದಿದ್ದ ಫಾದರ್ ಆಫ್ ಆಟೊಮಿಕ್ ಬಾಂಬ್‌ನ ಕುರಿತಾದ ಸಂಗತಿಗಳನ್ನು ನಿರ್ದೇಶಕ ಕ್ರಿಸ್ಟಫರ್ ನೋಲನ್ ಈ ಆಪನ್‌ಹೈಮರ್ ಮೂಲಕ ಬಿಚ್ಚಿಟ್ಟಿದ್ದಾರೆ. ರಾಬರ್ಟ್ ಆಪನ್‌ಹೈಮರ್‌ನ ಬಯೋಗ್ರಫಿಯನ್ನು ನೋಡಲು ಸಿನಿ ರಸಿಕರು ಮುಗಿಬಿದ್ದು ಟಿಕೆಟ್‌ಗಳನ್ನು ಖರೀದಿಸಿ ಚಿತ್ರಮಂದಿರಕ್ಕೆ ಬಂದಿದ್ದು ಚಿತ್ರ ವಿಶ್ವದಾದ್ಯಂತ ಭರ್ಜರಿ ಗಳಿಕೆ ಮಾಡಿದೆ.
ಹೀಗೆ ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಆಪನ್‌ಹೈಮರ್ ಕರ್ನಾಟಕದಲ್ಲಿಯೂ ಸಹ ಒಳ್ಳೆಯ ಗಳಿಕೆಯನ್ನು ಮಾಡುತ್ತಿದೆ. ಹೌದು, ಆಪನ್‌ಹೈಮರ್ ಬಿಡುಗಡೆಯಾದ ದಿನ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 3.04 ಕೋಟಿ ರೂಪಾಯಿಗಳನ್ನು ಗಳಿಸಿ ಭರ್ಜರಿ ಆರಂಭ ಪಡೆದುಕೊಂಡಿತ್ತು. ಬಳಿಕ ಎರಡನೇ ದಿನ 3.52 ಕೋಟಿ ಗಳಿಕೆ ಮಾಡಿದ ಆಪನ್‌ಹೈಮರ್ ಮೂರನೇ ದಿನ ( ಭಾನುವಾರ ) ಬರೋಬ್ಬರಿ 3.43 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಈ ಮೂಲಕ ಆಪನ್‌ಹೈಮರ್ ಬಿಡುಗಡೆಯಾದ ಮೊದಲ ಮೂರು ದಿನಕ್ಕೆ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದು, ಯಾವುದೇ ಪ್ರಾದೇಶಿಕ ಸಿನಿಮಾಗೂ ಕಡಿಮೆ ಇಲ್ಲ ಎಂಬಂತೆ ಗಳಿಕೆಯನ್ನು ಮಾಡಿ ಅಬ್ಬರಿಸುತ್ತಿದೆ.
ಈ ಮೂಲಕ ಈ ವಾರ ಬಿಡುಗಡೆಗೊಂಡ ಚಿತ್ರಗಳ ಪೈಕಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಸಾಧನೆಯನ್ನು ಆಪನ್‌ಹೈಮರ್ ಮಾಡಿದ್ದು ಉಳಿದ ಎಲ್ಲಾ ಚಿತ್ರಗಳಿಗೂ ತೀವ್ರ ಪೈಪೋಟಿ ನೀಡ್ತಿದೆ.


Click it and Unblock the Notifications











